ಮೂರು ಬಣ್ಣಗಳ ಬಾವುಟದ ಕೆಳಗೀಗ ಮಹಾ ಚುನಾವಣೆ ರಂಗೇರಿದೆ. ಈ ಚುನಾವಣೆಯಲ್ಲಿ ಮೂರರ ಪ್ರಭಾವವನ್ನು ಮರೆತು ನೀವು ಮುಂದೆ ಹೋಗಲು ಸಾಧ್ಯವೇ ಇಲ್ಲ. ಮೂರು ಎಳೆಯ ದಾರ ಒಂದಲ್ಲಾ ಒಂದು ವಿಷಯಗಳನ್ನು ಬಂಧಿಸುತ್ತಲೇ ಇದೆ. ಆ ಮೂರರ ಮ್ಯಾಜಿಕ್ ಏನು ಎಂಬುದನ್ನು ನೀವೇ ನೋಡಿ...
ಮೂರು ಮುತ್ತುಗಳು
1. ರಂಗೇರಿದ ರಾಹುಲ್ ಕೆನ್ನೆ
ರಾಹುಲ್ ಗಾಂಧಿಯ ಕೆನ್ನೆಯ ಗುಳಿ ಕಂಡೊಡನೆ ಯಾವ ಹುಡುಗಿದಾರೂ ಅದರೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಷ್ಟು ಪ್ರೀತಿ ಉಕ್ಕುತ್ತೆ. ಗುವಾಹಟಿಯಲ್ಲೊಬ್ಬಳು ಈ ಯುವರಾಜನ ಕೆನ್ನೆಯ ಆಕರ್ಷಣೆಗೆ 'ಬಲಿ'ಯಾಗಿಯೇ ಬಿಟ್ಟಳು. 'ಬಾಂಟಿ' ಎಂಬ ಹೆಸರಿನ ಆಕೆ, ರಾಹುಲ್‌ಗೆ ಮುತ್ತುಕೊಟ್ಟು ಮನೆಗೆ ಹೋದ ಕೂಡಲೇ ಗಂಡ ಜೋರು ಗಲಾಟೆಯನ್ನೇ ಮಾಡಿಬಿಟ್ಟ. ಆ ಪಾಪಿ ಅವಳ ಸಾವಿಗೂ ಕಾರಣನಾಗಿಬಿಟ್ಟ.
2. ನಗ್ಮಾಗೆ ಬಹುಮಾನ
ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಗ್ಮಾ ಚುನಾವಣಾ ಕಣಗಳಿಗೆ ಹೋದಲ್ಲೆಲ್ಲ ಸುದ್ದಿಯೇ. ಅದೂ ಮುತ್ತಿನ ಕಾರಣಕ್ಕಾಗಿಯೇ. ಮೀರತ್‌ನ ಕಾಂಗ್ರೆಸ್ ಶಾಸಕ ಗಜರಾಜನಂತೂ ಪಬ್ಲಿಕ್‌ನಲ್ಲೇ ಆಕೆಗೆ ಮುತ್ತುಕೊಟ್ಟ. ಕೊನೆಗೆ ನಗ್ಮಾ, 'ಹೀಗೆಲ್ಲ ಕಿಸ್ ಮಾಡಿದ್ರೆ, ಇನ್ನು ನಾನು ಮೀರತ್‌ಗೇ ಬರೋದಿಲ್ಲ' ಅಂತಲೇ ಹೇಳಬೇಕಾಯಿತು.
3. ಸೋನಿಯಾ ಕೆನ್ನೆಗೆ...
ನಮ್ಮ ಸೋನಿಯಾ ಮೇಡಂ ಕೂಡ ಗ್ಲ್ಯಾಮರ್‌ನಲ್ಲಿ ಕಮ್ಮಿಯಿಲ್ಲ. ಅದರಲ್ಲೂ ಕರ್ನಾಟಕದ ಹುಡುಗಿಯರು ಸೋನಿಯಾ ಅವರ ಸ್ಟೈಲಿಗೆ, ಸ್ಮೈಲಿಗೆ ಫುಲ್ ಅಟ್ರ್ಯಾಕ್ಟ್ ಆಗಿದ್ದಾರೆ. ಈ ಕಾರಣಕ್ಕಾಗಿಯೇ ಮೊನ್ನೆಯೊಬ್ಬಳು ಕನ್ನಡತಿ ಸೋನಿಯಾ ಗಾಂಧಿಯ ಕೆನ್ನೆಗೆ ಕಿಸ್ ಕೊಟ್ಟು ಸುದ್ದಿಯಾದಳು. ಅಂದಹಾಗೆ, ಈ ಫೋಟೋವನ್ನು ಕ್ಲಿಕ್ಕಿಸಿದ್ದು ಸ್ವತಃ ದಿಗ್ವಿಜಯ್ ಸಿಂಗ್! ಮಜಾ ಎಂದರೆ, ಸಿಂಗ್ ಟ್ವಿಟ್ಟರ್‌ನಲ್ಲೂ ಪೋಸ್ಟ್ ಮಾಡಿಬಿಟ್ಟರು!
ಮೂರು ದಾಹಗಳು
1. ಮೋದಿಯ ಗುಟುಕು
ಇಡೀ ಮೋಟು ಬಾಟಲಿಯನ್ನು ಒಂದೇ ಸಿಪ್ಪಿನಲ್ಲಿ ಹೀರಿ ದಾಹ ತಣಿಸಿಕೊಂಡರು ನರೇಂದ್ರ ಮೋದಿ. ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ಬಿಜೆಪಿಯ ಮಹತ್ವದ ಸಭೆಯಲ್ಲಿ ಮೋದಿ ನೀರು ಕುಡಿದಿದ್ದು ಹೀಗೆ. ಯಾರ್ಯಾರಿಗೆ ನೀರು ಕುಡಿಸುವ ಐಡಿಯಾ ಅವರ ತಲೆಯೊಳಗಿದೆಯೋ ಗೊತ್ತಿಲ್ಲ.
2. ಜಲ 'ಮಾಲಿನಿ'
ಅದು ಮಥುರಾ ಕ್ಷೇತ್ರದ ಒಂದು ಹಳ್ಳಿ. ನಾಲ್ಕು ಮನೆ ದಾಟಿಬಿಟ್ಟರೆ ಮುಂದಿನ ಹಳ್ಳಿಗೆ ಇನ್ನೂ ಅರ್ಧ ಕಿ.ಮೀ. ನಡೆಯಬೇಕು. ಮಧ್ಯ ಒಂದು ಬೋರ್‌ವೆಲ್. ಜೋರು ಬಾಯಾರಿದ ಹೇಮಾ ಮಾಲಿನಿ ತಡಮಾಡಲಿಲ್ಲ. ತಾವೇ ಪಂಪ್ ಹೊಡೆದು, ನೀರಿಗೆ ಬಾಯಿ ಕೊಟ್ಟರು.
3. ಬಾಯಾರಿದ 'ಜಯ'
ಕಳೆದೆರಡು ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯ ದಾಖಲಿಸಿರುವ ಜಯಪ್ರದಾ, ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ. ಈ ಬಾರಿ ಅವರು ರಾಷ್ಟ್ರೀಯ ಲೋಕದಳ ಪಕ್ಷದಿಂದ ಸ್ಫರ್ಧಿಸುತ್ತಿದ್ದಾರೆ. ಪ್ರಚಾರದ ವೇಳೆ ದಣಿವಾದಾಗ ರಾಂಪುರದ ಹಳ್ಳಿಯ ಬೋರ್‌ವೆಲ್‌ಗೆ ಜಯಾ ಬಾಯಿಕೊಟ್ಟರು.
ಮೂರು ಸ್ಫೋಟಗಳು
1. 'ಮುತಾಲಿಕ್' ಅಗ್ನಿಪರ್ವತ
ಕಟ್ಟಾ ಹಿಂದುತ್ವವಾದಿ ಪ್ರಮೋದ್ ಮುತಾಲಿಕ್, ಬಿಜೆಪಿಯನ್ನು ಸೇರಿ ಐದು ತಾಸೊಳಗೆ ಹೊರಬಿದ್ದರು. ಅವರೀಗ ಉರಿಯುತ್ತಿರುವ ಅಗ್ನಿಯುಂಡೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸ್ಫೋಟಿಸುವ ಸಂಚಿನಲ್ಲೇ ಇದ್ದಂತಿದೆ. ಹೀಗಾಗಿ, ಧಾರವಾಡ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.
2. ಜಸ್ವಂತ್ ಔಟ್
'ನಾನೇಕೆ ಬಿಜೆಪಿಯಿಂದ ಹೊರಹೋಗಬೇಕು. ಬೇಕಾದರೆ ಅವರೇ ಹೋಗಲಿ' ಅಂತ ಗುಡುಗಿದ ಜಸ್ವಂತ್ ಸಿಂಗ್ ಪಕ್ಷದಿಂದಲೇ ಉಚ್ಚಾಟನೆಗೊಂಡರು. ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಅವರೂ ಬಿಜೆಪಿ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಖುದ್ದಾಗಿ ಪ್ರಣಾಳಿಕೆ ಸಿದ್ಧಪಡಿಸಿ, ಬಿಜೆಪಿ ಮುಖಂಡರ ಬಣ್ಣ ಬಯಲು ಮಾಡುತ್ತಿದ್ದಾರೆ.
3. 'ಹೃದಯ ಸಮುದ್ರ'ದ ಸುನಾಮಿ
ಕುಮಾರ ಬಂಗಾರಪ್ಪ. ಈ ಸುನಾಮಿ ಈಗಾಗಲೇ ತಣ್ಣಗಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಇವರಿಗೆ ಟಿಕೆಟ್ ಕೊಡದೆ ನಿರ್ಲಕ್ಷ್ಯ ತೋರಿದ್ದೇ ಇವರ ಸಿಟ್ಟಿಗೆ ಕಾರಣ. ಕೊನೆಗೆ ನಾಯಕರ ಮನವೊಲಿಕೆ ಇವರನ್ನು ತಣ್ಣಗಾಗಿಸಿತು. ಆದರೆ, ಇದೇನು ಶಾಶ್ವತ ಶಮನವಲ್ಲ.
ಮೂರು ಮೌನಗಳು
1. ಎಲ್.ಕೆ. ಅಡ್ವಾಣಿ
ಕಳೆದ ಸಲದ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಅಡ್ವಾಣಿಗೆ ಈ ಬಾರಿಯೂ ಮುಂದಾಳು ಆಗುವ ಆಕಾಂಕ್ಷೆಯಿತ್ತು. ಆದರೆ, ಮೋದಿ ಅಲೆಯಲ್ಲಿ ಇವರ ಆಕಾಂಕ್ಷೆಯೇ ಮರೆಗೆ ಸರಿಯಿತು. ಈಗ ಅಡ್ವಾಣಿ ಅಷ್ಟೇನು ಸಾರ್ವಜನಿಕ ದರ್ಶನ ಕೊಡುತ್ತಿಲ್ಲ. ಮೌನದ ಗುಹೆಯೊಳಗೆ ಕುಳಿತಿದ್ದಾರೆ.
2. ಪಿ. ಚಿದಂಬರಂ
ಚುನಾವಣೆ ಇಡೀ ದೇಶದ ತಾಪಮಾನವನ್ನೇರಿಸಿದ್ದರೂ, ಕೇಂದ್ರದ ಫೈನಾನ್ಸ್ ಮಿನಿಸ್ಟರ್ ಮಾತ್ರ ತಣ್ಣಗಾಗಿದ್ದಾರೆ. 'ಟಿಕೆಟ್ ಬೇಡವೇ ಬೇಡ' ಅಂತ ಶಿವಗಂಗಾ ಕ್ಷೇತ್ರದಿಂದ ದೂರ ಸರಿದು, ಕೊನೇ ಕ್ಷಣದಲ್ಲಿ ಮಗನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಈ ಬಾರಿ ಪಿ. ಚಿದಂಬರಂ ತುಟಿಯನ್ನೇ ಬಿಚ್ಚುತ್ತಿಲ್ಲ.
3. ಜಾಫರ್ ಷರೀಫ್
ಇವರೂ ಈ ಬಾರಿ ಮೌನಮಹಾರಾಜ. ಹಾಗೂ ಮನಸ್ಸಲ್ಲಿದ್ದಿದ್ದನ್ನು ಹೇಳಬೇಕಂತಿದ್ದರೆ ಡೀಟೈಲಾಗಿ ಪತ್ರ ಬರೀತಾರಷ್ಟೇ. ಕಾಂಗ್ರೆಸ್‌ನಲ್ಲಿ ನ್ಯೂಟ್ರಲ್ಲಾಗಿದ್ದ ಇವರು, ಅಂತೂ ಪಕ್ಷಕ್ಕೆ ರಾಜೀನಾಮೆ ಕೊಟ್ಟರು. ಜೆಡಿಎಸ್ ಸೇರುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಮೀಡಿಯಾಗಳಂತೂ ಇವರು ಬಾಯಿ ತೆರೆಯುವುದನ್ನೇ ಕಾಯುತ್ತಿದ್ದಾರೆ.
ಮೂರು ಮರೀಚಿಕೆಗಳು
1. ಬಾರದ ನಮಿತಾ
ಸಿನಿಮಾ ಸೆಲೆಬ್ರಿಟಿಗಳೆಲ್ಲ ರಾಜಕೀಯದ ಬುಟ್ಟಿಗೆ ಬೀಳುತ್ತಿರುವ ಹೊತ್ತಲ್ಲಿ ಸೆಕ್ಸಿ ಬಾಂಬ್ ನಮಿತಾ ಕೂಡ ಒಂದು ಕೈ ನೋಡುವ ಮನಸ್ಸು ಮಾಡಿದ್ದರು. ತಮಿಳುನಾಡಿನ ಯಾವುದಾದರೂ ಕ್ಷೇತ್ರದಿಂದ, ಯಾವುದಾದರೂ ಪಾರ್ಟಿಯಿಂದ ನಮಿತಾ ಅಭ್ಯರ್ಥಿಯಾಗಿ ನಿಲ್ಲುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ಅದು ಠುಸ್ಸಾಯಿತು.
2. ಪವನ್ ಕಲ್ಯಾಣ್
ಇನ್ನು ತಮಿಳು ಸ್ಟಾರ್ ಪವನ್ ಕಲ್ಯಾಣ್ ಕಥೆಯೂ ಅಷ್ಟೇ. ಸೋದರ ಚಿರಂಜೀವಿಗೆ ದಿಢೀರನೆ ಸಡ್ಡು ಹೊಡೆದು 'ಜನಸೇನಾ' ಪಕ್ಷ ಕಟ್ಟಿದ ಪವನ್, ತಮಿಳುನಾಡಿನ ಬಹುತೇಕ ಕಡೆ ಅಭ್ಯರ್ಥಿಗಳನ್ನು ನಿಲ್ಲಿಸುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಮೋದಿಯನ್ನು ಭೇಟಿಯಾಗಿದ್ದೇ ಆಗಿದ್ದು... ಪವನ್ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷದವರ್ಯಾರೂ ಸ್ಪರ್ಧಿಸುತ್ತಿಲ್ಲ ಅಂತ ಸ್ಟೇಟ್‌ಮೆಂಟ್ ಕೊಟ್ಟರು.
3. ರಕ್ಷಿತಾ ಪ್ರೇಮ್
ಮಂಡ್ಯದ 'ಹೆಣ್ಣು' ರಮ್ಯಾಳನ್ನು ಸೋಲಿಸಲು ಬಿಜೆಪಿಯಿಂದ ಬಳಕೆಯಾಗಬೇಕಿದ್ದ ಅಸ್ತ್ರಗಳಲ್ಲಿ ರಕ್ಷಿತಾ ಕೂಡ ಒಬ್ಬರು. ಒಂದೊಮ್ಮೆ ರಮ್ಯಾ, ರಕ್ಷಿತಾ ಸಮಕಾಲೀನ ತಾರೆಗಳು. ಹಲವು ಪಾರ್ಟಿಗಳಲ್ಲಿ ನಾಲ್ಕು ದಿನ ಇದ್ದು, 'ಬಿಜೆಪಿ ನನ್ನ ಕೊನೆಯ ಪಾರ್ಟಿ' ಅಂತ ಬಾಂಡ್ ಪೇಪರ್ ಮೇಲೆ ಸಹಿಮಾಡಿದಂತೆ ಹೇಳಿರುವ ರಕ್ಷಿತಾಳಿಗೆ ಮಂಡ್ಯದಿಂದ ಟಿಕೆಟ್ ಸಿಗಲೇ ಇಲ್ಲ. ಬಿ. ಶಿವಲಿಂಗಯ್ಯ ಕೈಗೆ ಟಿಕೆಟ್ ಸಿಕ್ಕಿತು.
ಮೂವರು ರಾಜರು
1. ನರೇಂದ್ರ ಮೋದಿ
ಗುಜರಾತ್‌ನ ಈ ಸೋಲಿಲ್ಲದ ಸರದಾರ ಈಗ ದಿಲ್ಲಿಯ ದರಬಾರ್‌ಗೆ ಅಣಿಯಾಗುತ್ತಿದ್ದಾರೆ. ಕಳೆದ ಸಲ ಜಸ್ಟ್‌ಪಾಸ್ ಹಂತಕ್ಕೆ ಹೋಗಿದ್ದ ಬಿಜೆಪಿಯನ್ನು ಈ ಬಾರಿ ಡಿಸ್ಟಿಂಕ್ಷನ್ ಲೆವೆಲ್ಲಿಗೆ ತಂದು ನಿಲ್ಲಿಸುವ ಭರವಸೆ ಹುಟ್ಟಿಸಿದ್ದಾರೆ. ಸದ್ಯ ಬಿಜೆಪಿಗಂತೂ ಇವರೇ ರಾಜ. ಮುಂದಿನ ಪ್ರಧಾನಿ ಅಂತಲೇ ಬಿಂಬಿತರು.
2. ರಾಹುಲ್ ಗಾಂಧಿ
ಇದೇ ಮೊದಲ ಬಾರಿಗೆ ಚುನಾವಣೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವ ರಾಹುಲ್, ಕಾಂಗ್ರೆಸ್‌ನ ಯುವರಾಜ. ಗಾಂಧಿ ಕುಟುಂಬದ ಕುಡಿ. ಸೋನಿಯಾ ಗಾಂಧಿ ಅವರ ಆರೋಗ್ಯ ಅಷ್ಟು ಸರಿಯಿಲ್ಲದ ಕಾರಣ, ಕಾಂಗ್ರೆಸ್‌ನಲ್ಲಿ ಇವರು ಹೇಳಿದ್ದೇ ವೇದವಾಕ್ಯ. ಕಾಂಗ್ರೆಸ್‌ನ ಸಾಮ್ರಾಜ್ಯಕ್ಕೆ ಇವರೇ ಅಧಿಪತಿ.
3. ಅರವಿಂದ ಕೇಜ್ರಿವಾಲ್
ಬಿಜೆಪಿ, ಕಾಂಗ್ರೆಸ್ ಬಿಟ್ಟರೆ ಮೂರನೇ ಸ್ಥಾನದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಆಮ್ ಆದ್ಮಿ ಪಕ್ಷ. ಈ ಪಕ್ಷಕ್ಕೆ ಅರವಿಂದ ಕೇಜ್ರಿವಾಲರೇ ಕಿಂಗ್. 49 ದಿನ ದಿಲ್ಲಿಯನ್ನು ಆಳಿ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನೇ ಮುಖ್ಯ ಅಸ್ತ್ರ ಮಾಡಿಕೊಂಡಿರುವ ಕೇಜ್ರಿವಾಲ್ ಇನ್ನಾದರೂ ಅಧಿಕಾರದ ಕುದುರೆ ಏರಿ, ಮುನ್ನಡೆಸುತ್ತಾರಾ... ಗೊತ್ತಿಲ್ಲ.