ಚಿತ್ರ: ನಾಯಕ್ (ಹಿಂದಿ) ಭಾಷೆ: ಹಿಂದಿ
ತಾರಾಗಣ: ಅನಿಲ್ ಕಪೂರ್, ರಾಣಿ ಮುಖರ್ಜಿ, ಅಮರೀಶ್ ಪುರಿ
ನಿರ್ದೇಶನ: ಶಂಕರ್
ಜಂಟಲ್‌ಮ್ಯಾನ್, ಕಾದಲನ್‌ನಂಥ ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದ ನಿರ್ದೇಶಕ ಶಂಕರ್ ಅವರು ಭಾರತೀಯ ಸಾಮಾಜಿಕ- ರಾಜಕೀಯ ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲುವಂತೆ ಮಾಡಿದ ಮತ್ತೊಂದು ಚಿತ್ರ -ನಾಯಕ್.
ಚಿತ್ರದ ನಾಯಕ ಒಬ್ಬ ಟಿವಿ ಕ್ಯಾಮೆರಾಮನ್. ಅದೊಂದು ದಿನ ನಗರದಲ್ಲಿ ನಡೆಯುವ ವಿದ್ಯಾರ್ಥಿಗಳ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆ ಬಸ್ ಸಿಬ್ಬಂದಿಗಳ ನಡುವಿನ ಮಾರಾಮಾರಿ ದಿನವಿಡಿಯ ಬಂದ್‌ಗೆ ನಾಂದಿ ಹಾಡುತ್ತದೆ. ಆ ಸಂದರ್ಭದಲ್ಲಿ, ಇಡೀ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವಲ್ಲಿ ನಿರತನಾಗಿದ್ದ ನಾಯಕನಿಗೆ, ಗಲಭೆಯ ಜಾಗದಿಂದ ಕಮೀಷನರ್ ಹಾಗೂ ಮುಖ್ಯಮಂತ್ರಿ ನಡುವಿನ ಮಾತುಕತೆ ನಡೆಯುತ್ತದೆ. ಮುಖ್ಯಮಂತ್ರಿ ಗಲಭೆ ನಡೆಯಲು ಪರೋಕ್ಷವಾಗಿ ಕುಮ್ಮಕ್ಕು ನೀಡುವುದಲ್ಲದೇ, ಗಲಭೆ ನಿಯಂತ್ರಣಕ್ಕಾಗಿ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ಬಂಧ ವಿಧಿಸುತ್ತಾನೆ. ಇದೆಲ್ಲವೂ ನಾಯಕನ ಕ್ಯಾಮೆರಾದಲ್ಲಿ ದಾಖಲಾಗುತ್ತದೆ.
ಮುಂದೊಂದು ದಿನ, ನಾಯಕನಿಗೆ ತನ್ನ ಟಿವಿ ವಾಹಿನಿಯಲ್ಲಿ ಅದೇ ಮುಖ್ಯಮಂತ್ರಿಯ ಸಂದರ್ಶನ ಮಾಡುವ ಅವಕಾಶ ಸಿಗುತ್ತದೆ. ಆಗ, ಆತ ಮುಖ್ಯಮಂತ್ರಿಯ ಎಲ್ಲಾ ದುರುಳತನವನ್ನು ನೇರಪ್ರಸಾರದಲ್ಲೇ ಬಯಲಿಗಿಡುತ್ತಾನೆ. ಇದರಿಂದ ಕುದ್ದುಹೋದ ಮುಖ್ಯಮಂತ್ರಿ ಒಂದು ದಿನಕ್ಕಾಗಿ ನಾಯಕನನ್ನು ಸಿಎಂ ಆಗಲು ಆಹ್ವಾನ ನೀಡುತ್ತಾನೆ. ಅದರ ಹಿಂದಿನ ಉದ್ದೇಶ ಮುಖ್ಯಮಂತ್ರಿಯ ಗಾದಿ ಮುಳ್ಳಿನದ್ದು ಎಂಬುದನ್ನು ನಿರೂಪಿಸುವುದೇ ಆಗಿರುತ್ತದೆ. ಆದರೆ, ಸಿಎಂನ ಆಹ್ವಾನ ಸ್ವೀಕರಿಸುವ ನಾಯಕ, ಒಂದು ದಿನದ ಮಟ್ಟಿಗೆ ಸಿಎಂ ಆಗುತ್ತಾನೆ. ಮುಂದೇನಾಗುತ್ತದೆ? ಎನ್ನುವುದೇ ಚಿತ್ರದ ಅಸಲೀ ಮಜಾ. ಚಿತ್ರದ ಸಬ್ಜೆಕ್ಟೇ ವಿಭಿನ್ನವಾಗಿರುವುದರಿಂದ ಇಡೀ ಚಿತ್ರದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಈ ಉತ್ತಮ ಚಿತ್ರದ ಕೆಡಿಟ್ಸ್ ಚಿತ್ರಕಥೆ ಬರೆದ ಶಂಕರ್, ಸುಜಾತ ಅವರಿಗೆ ಸಲ್ಲುತ್ತದೆ. ಅನಿಲ್ ಕಪೂರ್ ಮತ್ತು ಅಮರೀಶ್‌ಪುರಿ ಅವರ ಪೈಪೋಟಿಯ ಅಭಿನಯವೂ ಚಿತ್ರದ ಹೈಲೈಟು. ಮೂಲಚಿತ್ರ ತಮಿಳಿನ ಮುದಲ್‌ವನ್‌ನಲ್ಲಿ ಕೂಡಾ ಅರ್ಜುನ್ ಸರ್ಜಾ ಹಾಗೂ ರಘುವರನ್ ನೆನಪಲ್ಲುಳಿಯುವ ಅಭಿನಯ ನೀಡಿದ್ದರು.