ಸ್ವಾರಸ್ಯ

ಏನ್ ಜನಾರೀ!

ಚಾಮರಾಜಪೇಟೆ ಹತ್ತಿರದ ಸ್ಲಮ್ಮಿನಲ್ಲಿ ವಾಸಿಸುವ ಸುಧೀರ್‌ಗೆ ಎಲ್ಲ ಪಕ್ಷಗಳಲ್ಲೂ ಬೇಕಾದವರಿದ್ದಾರೆ. ರ್ಯಾಲಿ ಅಥವಾ ಸಾರ್ವಜನಿಕ ಸಭೆ ನಡೆಯುವುದಿದ್ದರೆ, ಹಿಂದಿನ ದಿನ ಅದರ ಪ್ರಾಯೋಜಕರು ಆತನನ್ನು ಭೇಟಿಯಾಗುತ್ತಾರೆ. ತಮಗೆಷ್ಟು ಜನ ಒದಗಿಸಬೇಕು ಎಂಬುದನ್ನೂ ಹೇಳುತ್ತಾರೆ. ಸಾಮಾನ್ಯವಾಗಿ ಆತನ ಡಿಮ್ಯಾಂಡ್- ತಲಾ 500 ರುಪಾಯಿ, ಹೆಂಗಸರಿಗೆ ಸೀರೆ, ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ನೀರಿನ ಬಾಟಲಿ, ಐದು ಮಂದಿಗೊಂದು ಬಾಟಲಿ ರಮ್, ಮೇಲಿಷ್ಟು ಭಕ್ಷೀಸು. ಪಾರ್ಟಿಯ ಬಜೆಟ್ ನೋಡಿಕೊಂಡು ಇದರಲ್ಲಿ ತುಸು ಹೆಚ್ಚು ಕಮ್ಮಿಯಾಗುತ್ತದೆ. ಹೇಳಿದ ಸಮಯಕ್ಕೆ ವಾಹನಗಳು ಬರುತ್ತದೆ. ಹೇಳಿದ ತಲೆ ಲೆಕ್ಕಕ್ಕೆ ಸರಿಯಾಗಿ ಜನ ತುಂಬಿಸಿ ಕಳುಹಿಸುವ ಜವಾಬ್ದಾರಿ ಆತನದು.
ಸುಧೀರ್ ಒಬ್ಬನೇ ಅಲ್ಲ, ಆತನ ಸ್ಲಮ್ಮಿನಲ್ಲಿ ಇನ್ನೂ ಇಬ್ಬರು ಇದೇ ಕೆಲಸ ಮಾಡುತ್ತಾರೆ. ಬೆಂಗಳೂರಿನ ಉದ್ದಕ್ಕೆ ಹಬ್ಬಿರುವ ಹತ್ತಾರು ಸ್ಲಮ್ಮುಗಳಲ್ಲಿ ಇಂಥ ನೂರಾರು ಮಂದಿ ಇದ್ದಾರೆ. ಪಕ್ಷಗಳ ಪ್ರಚಾರ ಸಭೆಗಳಿಗೆ ಜನ ಕೊಂಡೊಯ್ಯುವುದೇ ಇವರ ಕೆಲಸ. ಇಂದು ಬಿಜೆಪಿಯ ಸಭೆಗೆ ಹೋಗಿ ಕುಳಿತು ಜೈಕಾರ ಕೂಗಿ ಬಂದ ವ್ಯಕ್ತಿಯನ್ನೇ ನಾಳೆ ಕಾಂಗ್ರೆಸ್ ರ್ಯಾಲಿಯಲ್ಲಿ ನೋಡಿದರೆ ನೀವು ಅಚ್ಚರಿ ಪಡಬೇಕಾಗಿಲ್ಲ. ಯಾವುದೋ ಪಕ್ಷದ ರ್ಯಾಲಿಯಲ್ಲಿ ಸೇರಿದ ಅಭೂತಪೂರ್ವ ಜನಸಂದಣಿ ನೋಡಿದರೂ ಆಶ್ಚರ್ಯ ಬೇಡ. ಅವರೆಲ್ಲ ಎಲ್ಲೋ ನಮ್ಮ ನಿಮ್ಮ ಅಕ್ಕಪಕ್ಕದ ಏರಿಯಾಗಳಲ್ಲೇ ವಾಸಿಸುವವರು.
ರ್ಯಾಲಿಗಳಿಗೆ ನಿಜವಾದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬರುವುದಿಲ್ಲವೆಂದಲ್ಲ. ಆದರೆ ಅಲ್ಲಿ 'ಅಭೂತಪೂರ್ವ ಜನಸಂದೋಹ' ಕಾಣಿಸದೆ ಹೋದರೆ ಪಕ್ಷದ ಹುರಿಯಾಳುಗಳಿಗೆ ಮುಜುಗರವಾಗುತ್ತದೆ. ದೆಹಲಿಯಿಂದಲೋ ಗುಜರಾತಿನಿಂದಲೋ ಬರುವ ಮಹಾನಾಯಕರಿಗೆ ಇರುಸುಮುರುಸಾಗುತ್ತದೆ. ಅದಕ್ಕಾಗಿಯೇ ಈ ಎಲ್ಲ ಏರ್ಪಾಡು.
ಸಾಮಾನ್ಯವಾಗಿ ಹೀಗೆ ಹೋಗಲು ಸಿದ್ಧರಾಗಿರುವ ಜನತೆ, ಕೆಳವರ್ಗದವರು. ಕಟ್ಟಡ ಕೆಲಸಗಾರರು, ಮನೆ ಕೆಲಸದವರು, ಗಾರ್ಮೆಂಟ್ ದುಡಿಮೆಯವರು, ಸಫಾಯಿ ಕರ್ಮಚಾರಿಗಳು ಇತ್ಯಾದಿ. ಇವರ ದಿನದ ದುಡಿಮೆ 100- 200 ರು. ದಾಟುವುದಿಲ್ಲ. ಆದರೆ ರಾಜಕೀಯ ಸಭೆಗಳಿಗೆ ಹೋದರೆ ಅನಾಮತ್ತಾಗಿ ತಿಂಡಿ, ಊಟ, ಕೈಗೆ 300- 400 ರು. ದಕ್ಕಿಬಿಡುತ್ತದೆ. ತಲಾ 500 ರು. ಪಡೆದ ಏಜೆಂಟ್ ಅದರಲ್ಲಿ ನೂರು ಮುರಿದುಕೊಂಡೇ ಕೊಡುತ್ತಾನೆ. ಬೈಕ್ ರ್ಯಾಲಿಗಳಲ್ಲಿ ಭಾಗವಹಿಸುವ ತರುಣರಿಗೆ ಪೆಟ್ರೋಲ್ ಭತ್ಯೆ ಕೂಡ ಇರುತ್ತದೆ. ಮಜಾ ಅಂದರೆ, ಇಂದು ಒಂದು ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಿ ಬಂದವನೇ ನಾಳೆ ಇನ್ನೊಂದು ಪಕ್ಷಕ್ಕೆ ವೋಟ್ ಮಾಡಬಹುದು. ಇವರಿಗೆ ಪಕ್ಷಕ್ಕೆ ಸಂಬಂಧಿಸಿದ ಬದ್ಧತೆ ಇರುವುದಿಲ್ಲ. ಲೀಡರ್ ಹೇಳಿದ ಸ್ಲೋಗನ್‌ಗೆ ಕೋರಸ್ ಕೂಗುವುದಷ್ಟೇ ಇವರ ಕೆಲಸ. ಇದು ಇವರ ಹೊಟ್ಟೆಪಾಡು ಅಷ್ಟೇ.

-ಹರಿಶಂಕರ ಕರ್ಕೇರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT