ದೇಶದಲ್ಲಿ ಏಕ ಪಕ್ಷಕ್ಕೆ ಬೆಂಬಲ ಎಂಬುದು ಚುನಾವಣೆಯಿಂದ ಚುನಾವಣೆಗೆ ಮರೀಚಿಕೆಯಾಗುತ್ತಾ ಬಂದಿತು. 1984ರಲ್ಲಿ ನಡೆದ ಎಂಟನೇ ಲೋಕಸಭೆಯಲ್ಲಿ ಕಾಂಗ್ರೆಸ್ ಏಕ ಪಕ್ಷವಾಗಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದು ಬಿಟ್ಟರೆ, ನಂತರ ಎಲ್ಲ ಚುನಾವಣೆಗಳಲ್ಲೂ ಸಮ್ಮಿಶ್ರ ಅಥವಾ ಮೈತ್ರಿಕೂಟದ ಸರ್ಕಾರಗಳೇ ಅಸ್ತಿತ್ವಕ್ಕೆ ಬಂದವು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಹೊರತಾಗಿ ಬಿಜೆಪಿ ಮೈತ್ರಿಕೂಟ ಪ್ರಥಮ ಬಾರಿಗೆ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿತ್ತು. 13ನೇ ಲೋಕಸಭೆ ಚುನಾವಣೆಯ ಅವಧಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಆದರೆ, ನಂತರದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ.
14ನೇ ಲೋಕಸಭೆಗೆ 2004ರ ಏಪ್ರಿಲ್ 20, 26, ಮೇ 5 ಮತ್ತು 10ರಂದು ಚುನಾವಣೆ ನಡೆಯಿತು. 34,94,90,864 ಪುರುಷರು, 32,19,97,066 ಮಹಿಳೆಯರು ಸೇರಿದಂತೆ 67, 14,87,930 ಮತದಾರರಿದ್ದರು. 38,93,42,364 ಮತದಾರರು ಹಕ್ಕು ಚಲಾಯಿಸಿದ್ದರು. ಇದಲ್ಲದೆ 6,05,434 ಮತಗಳು ಅಂಚೆ ಮೂಲಕ ಸೇರಿದಂತೆ ಶೇ.58.07 ರಷ್ಟು ಮತ ದಾಖಲಿಸಿದ್ದರು.
ಬಿಜೆಪಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಸಿಪಿಐ, ಸಿಪಿಎಂ, ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮಾತ್ರ ರಾಷ್ಟ್ರೀಯ ಪಕ್ಷಗಳಾಗಿದ್ದವು. 51 ರಾಜ್ಯ ಪಕ್ಷಗಳು, 173 ಮಾನ್ಯತೆರಹಿತ ಪಕ್ಷಗಳು ಕಣದಲ್ಲಿದ್ದವು. 543 ಸ್ಥಾನಗಳಲ್ಲಿ ಎಸ್‌ಸಿಗೆ 79, ಎಸ್‌ಟಿಗೆ 41 ಸ್ಥಾನ ಮೀಸಲಾಗಿದ್ದವು. ರಾಷ್ಟ್ರೀಯ ಪಕ್ಷಗಳ 1351, ರಾಜ್ಯ ಪಕ್ಷಗಳ 801, ಮಾನ್ಯತೆರಹಿತ ಪಕ್ಷಗಳ 898 ಹಾಗೂ 2385 ಪಕ್ಷೇತರರು ಸೇರಿದಂತೆ 5435 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷಗಳ 541, ರಾಜ್ಯ ಪಕ್ಷಗಳ 440, ಮಾನ್ಯತೆರಹಿತ ಪಕ್ಷಗಳ 867 ಹಾಗೂ 2370 ಪಕ್ಷೇತರರು ಸೇರಿದಂತೆ 4,218 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 355 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿ, 45 ಮಂದಿ ಗೆಲವು ಸಾಧಿಸಿದರೆ 239 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.
ಕಾಂಗ್ರೆಸ್ 417 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 145ರಲ್ಲಿ ಗೆಲವು ಸಾಧಿಸಿತ್ತು. 82ರಲ್ಲಿ ಠೇವಣಿ ಇಲ್ಲದಂತಾಗಿದ್ದರೂ, ಶೇ. 26.53 ಮತ ಗಳಿಸಿತ್ತು. ಕಳೆದ ಬಾರಿಗಿಂತ 31 ಹೆಚ್ಚು ಸ್ಥಾನ ಗಳಿಸಿತ್ತು. ಬಿಜೆಪಿ 364ರಲ್ಲಿ ಸ್ಪರ್ಧಿಸಿ 138 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತ್ತು. 57 ಕ್ಷೇತ್ರಗಳಲ್ಲಿ ಠೇವಣಿ ನಷ್ಟ ಮಾಡಿಕೊಂಡರೂ ಶೇ. 22.16ರಷ್ಟು ಮತ ಗಳಿಸಿತ್ತು. ಕಳೆದ ಬಾರಿಗಿಂತ 44 ಸ್ಥಾನ ಬಿಜೆಪಿ ಕೈತಪ್ಪಿದ್ದವು. ಬಿಎಸ್‌ಪಿ 435 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 19ರಲ್ಲಿ ಗೆಲವು ಸಾಧಿಸಿ 358ರಲ್ಲಿ ಠೇವಣಿ ಕಳೆದುಕೊಂಡು ದಾಖಲೆ ನಿರ್ಮಿಸಿತು. ಸಿಪಿಐ 34ರಲ್ಲಿ 10, ಸಿಪಿಎಂ69ರಲ್ಲಿ 43, ಎನ್‌ಸಿಪಿ 32ರಲ್ಲಿ 9 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ರಾಜ್ಯಪಕ್ಷಗಳು 801 ಸ್ಥಾನಗಳಲ್ಲಿ ಸ್ಪರ್ಧಿಸಿ 159ರಲ್ಲಿ ಜಯ ಸಾಧಿಸಿದ್ದರೆ, ಮಾನ್ಯತೆರಹಿತ ಪಕ್ಷಗಳ 15 ಅಭ್ಯರ್ಥಿಗಳು ಮಾತ್ರ ಗೆಲವು ಕಂಡಿದ್ದರು. ಪಕ್ಷೇತರರಲ್ಲಿ 5 ಮಂದಿ ಮಾತ್ರ ವಿಜಯಮಾಲೆ ಧರಿಸಿದ್ದರು. ಕಾಂಗ್ರೆಸ್‌ಗೆ ಅತಿಹೆಚ್ಚು ಸ್ಥಾನಗಳು ಆಂಧ್ರಪ್ರದೇಶದಿಂದ ಲಭ್ಯವಾದವು. ಇಲ್ಲಿ 29 ಸ್ಥಾನಗಳು ಬಂದರೆ, ಮಹಾರಾಷ್ಟ್ರ 13 ಸ್ಥಾನ ನೀಡಿತು. ಗುಜರಾತ್ 12, ತಮಿಳುನಾಡು 10 ಸ್ಥಾನ ನೀಡಿದರೆ, ಉಳಿದವು ಒಂದಂಕಿ ಲೆಕ್ಕಾಚಾರವಾಯಿತು. ಬಿಜೆಪಿಗೆ ಮಧ್ಯಪ್ರದೇಶದಲ್ಲಿ 25 ಸ್ಥಾನ ಲಭ್ಯವಾಯಿತು. ರಾಜಸ್ಥಾನದಲ್ಲಿ 21, ಕರ್ನಾಟಕದಲ್ಲಿ 18, ಗುಜರಾತ್‌ನಲ್ಲಿ 14, ಮಹಾರಾಷ್ಟ್ರದಲ್ಲಿ 13, ಉತ್ತರಪ್ರದೇಶ-ಛತ್ತೀಸ್‌ಗಢದಲ್ಲಿ ತಲಾ 10 ಸ್ಥಾನ ಲಭ್ಯವಾಗಿದ್ದವು.
ಕಾಂಗ್ರೆಸ್ ಬಹುಮತ ಸಾಬೀತಿಗೆ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ) ರಚಿಸಿತು. ಎಡಪಕ್ಷಗಳು, ಸಮಾಜವಾದಿ ಪಕ್ಷ, ಬಿಎಸ್‌ಪಿ, ಕೇರಳ ಕಾಂಗ್ರೆಸ್, ಇಂಡಿಯನ್ ಫೆಡರಲ್ ಡೆಮಾಕ್ರಟಿಕ್ ಪಾರ್ಟಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಬೆಂಬಲ ನೀಡಿದ್ದರಿಂದ 335 ಸ್ಥಾನಗಳ ಬಹುಮತದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಚಿಸಿತು. ವಿದೇಶಿ ಮೂಲದ ವಿಷಯದಿಂದ ಸೋನಿಯಾಗಾಂಧಿ ಪ್ರಧಾನಿಪಟ್ಟದಿಂದ ಹಿಂದೆ ಸರಿದರು. ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸದಿರುವ ಮನಮೋಹನ್‌ಸಿಂಗ್ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಅವರನ್ನು ಪ್ರಧಾನ ಮಂತ್ರಿಯನ್ನಾಗಿ ನೇಮಿಸಿದರು. 2004ರ ಮೇ 22ರಂದು ಪ್ರಮಾಣವಚನ ಸ್ವೀಕರಿಸಿದರು.
-ಕೆರೆ ಮಂಜು