ಸ್ವಾರಸ್ಯ

14ನೇ ಚುನಾವಣೆ- ದೇಶದಲ್ಲಿ ಯುಪಿಎ, ರಾಜ್ಯದಲ್ಲಿ ಬಿಜೆಪಿ

14ನೇ ಚುನಾವಣೆ- ದೇಶದಲ್ಲಿ ಯುಪಿಎ, ರಾಜ್ಯದಲ್ಲಿ ಬಿಜೆಪಿ

ದೇಶದಲ್ಲಿ ಯುಪಿಎಗೆ ಅತಿಹೆಚ್ಚು ಬೆಂಬಲ ದೊರೆತರೆ, ರಾಜ್ಯ ಮತ್ತೆ ತನ್ನ ಹಳೆಯ ಚಾಳಿ ಎಂಬಂತೆ ಅದಕ್ಕೆ ವಿರೋಧವಾಗಿ ತೀರ್ಪು ನೀಡಿತು. ರಾಜ್ಯದಲ್ಲಿ ಬಿಜೆಪಿ ಹಿಂದೆಂದೂ ಕಾಣದ ಅತ್ಯಂತ ಯಶಸ್ಸು 14ನೇ ಚುನಾವಣೆಯಲ್ಲಿ ದೊರೆತಿತ್ತು. ಬಿಜೆಪಿ ರಾಜ್ಯದಲ್ಲಿ 18 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹೊಸ ದಾಖಲೆ ಬರೆಯಿತು. ಕಾಂಗ್ರೆಸ್ 8 ಹಾಗೂ ಜೆಡಿಎಸ್ 2 ಸ್ಥಾನಗಳಿಗೇ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಿಜೆಪಿಯ ಮೂವರು ಅಭ್ಯರ್ಥಿಗಳು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸಿದ್ದರು.
2004ರಲ್ಲಿ ನಡೆದ 14ನೇ ಲೋಕಸಭೆ ಚುನಾವಣೆಯಲ್ಲಿ 1,96,05,257 ಪುರುಷರು, 1,89,86,838 ಮಹಿಳೆಯರು ಸೇರಿ 3,85,92,095 ಮತದಾರರಿದ್ದರು. ಇವರಲ್ಲಿ 2,51,39,122 ಮತದಾರರು ಹಕ್ಕು ಚಲಾಯಿಸಿ, ಶೇ.65.14ರಷ್ಟು ಮತ ದಾಖಲಿಸಿದ್ದರು. 28 ಕ್ಷೇತ್ರಗಳಿಗೆ ರಾಷ್ಟ್ರೀಯ ಪಕ್ಷಗಳಿಂದ 61, ರಾಜ್ಯ ಪಕ್ಷಗಳಿಂದ 40, ಮಾನ್ಯತೆರಹಿತ ಪಕ್ಷಗಳಿಂದ 31 ಹಾಗೂ 40 ಪಕ್ಷೇತರರು ಸೇರಿ 172 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷಗಳ 9, ರಾಜ್ಯ ಪಕ್ಷಗಳ 22, ಮಾನ್ಯತೆರಹಿತ ಪಕ್ಷಗಳ 31 ಹಾಗೂ 40 ಪಕ್ಷೇತರರು ಸೇರಿದಂತೆ 102 ಮಂದಿ ಠೇವಣಿ ಕಳೆದುಕೊಂಡಿದ್ದರು. 10 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಇಬ್ಬರು ಗೆದ್ದು, 6 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.
ರಾಜ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಮತ್ತೆ ಚಿಗುರಿಕೊಂಡು 24 ಕ್ಷೇತ್ರಗಳಲ್ಲಿ ಸ್ಪರ್ಧಿ 18 ಸ್ಥಾನಗಳನ್ನು ಗೆದ್ದಿದ್ದಲ್ಲದೆ, ಉಳಿದ ಆರು ಕ್ಷೇತ್ರಗಳಲ್ಲೂ ಠೇವಣಿ ಉಳಿಸಿಕೊಂಡಿತ್ತು. ಶೇ. 34.77 ರಷ್ಟು ಮತಗಳು ಬಿಜೆಪಿ ಪಾಲಾಗಿದ್ದವು. ಕಾಂಗ್ರೆಸ್ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಿ 8 ಕ್ಷೇತ್ರದಲ್ಲಿ ಮಾತ್ರ ಗೆಲವು ಕಂಡಿತ್ತು. ಶೇ.36.82ರಷ್ಟು ಮತ ಗಳಿಸಿತ್ತು. ಜೆಡಿಎಸ್ 28ರಲ್ಲಿ ಸ್ಪರ್ಧಿಸಿ ಕೇವಲ ಎರಡರಲ್ಲಿ ಗೆಲವು ಕಂಡಿತ್ತು. ಶೇ.20.45ರಷ್ಟು ಮತ ಪಡೆದಿತ್ತು. ಜೆಡಿಯು 4 ಸ್ಥಾನಗಳಲ್ಲಿ ಸ್ಪರ್ಧಿಸಿ, ಗೆಲವು ಕಾಣದೆ ಮೂರು ಕ್ಷೇತ್ರಗಳಲ್ಲಿ ಠೇವಣಿ ನಷ್ಟ ಮಾಡಿಕೊಂಡಿತ್ತು. ಶೇ. 1.87ರಷ್ಟು ಮಾತ್ರ ಮತಪಡೆದಿತ್ತು. ಕನ್ನಡನಾಡು ಪಕ್ಷ 21ರಲ್ಲಿ ಸ್ಪರ್ಧಿಸಿ 21ರಲ್ಲೂ ಠೇವಣಿ ಕಳೆದುಕೊಂಡಿತ್ತು. 40 ಪಕ್ಷೇತರರ ಸ್ಥಿತಿಯೂ ಇದೇ ಆಗಿತ್ತು.
ಬೀದರ್‌ನಿಂದ (ಎಸ್‌ಸಿ) ರಾಮಚಂದ್ರ ವೀರಪ್ಪ, ಬಳ್ಳಾರಿಯಿಂದ ಜಿ. ಕರುಣಾಕರ ರೆಡ್ಡಿ, ದಾವಣಗೆರೆಯಿಂದ ಜಿ.ಎಂ. ಸಿದ್ದೇಶ್ವರ, ತುಮಕೂರಿನಿಂದ ಎಸ್. ಮಲ್ಲಿಕಾರ್ಜುನಯ್ಯ, ಬೆಂಗಳೂರು ಉತ್ತರದಿಂದ ಎಚ್.ಟಿ. ಸಾಂಗ್ಲಿಯಾನಾ, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್, ಮೈಸೂರಿನಿಂದ ಸಿ.ಎಚ್. ವಿಜಯಶಂಕರ್, ಮಂಗಳೂರಿನಿಂದ ಡಿ.ವಿ. ಸದಾನಂದಗೌಡ, ಉಡುಪಿಯಿಂದ ಮನೋರಮ ಮಧ್ವರಾಜ್, ಚಿಕ್ಕಮಗಳೂರಿನಿಂದ ಡಿ.ಸಿ. ಶ್ರೀಕಂಠಪ್ಪ, ಶಿವಮೊಗ್ಗದಿಂದ ಎಸ್. ಬಂಗಾರಪ್ಪ, ಕೆನರಾದಿಂದ ಅನಂತಕುಮಾರ್ ಹೆಗ್ಡೆ, ಧಾರವಾಡ ದಕ್ಷಿಣದಿಂದ ಕುನ್ನೂರು ಮಂಜುನಾಥ್, ಧಾರವಾಡ ಉತ್ತರದಿಂದ ಪ್ರಹ್ಲಾದ್ ಜೋಶಿ, ಬೆಳಗಾವಿಯಿಂದ ಸುರೇಶ್ ಅಂಗಡಿ, ಚಿಕ್ಕೋಡಿಯಿಂದ (ಎಸ್‌ಸಿ) ರಮೇಶ್ ಜಿಗಜಿಣಗಿ, ಬಾಗಲಕೋಟೆಯಿಂದ ಗದ್ದಿಗೌಡರ್, ಬಿಜಾಪುರದಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯಿಂದ ವಿಜಯ ಸಾಧಿಸಿದ್ದರು.
ಗುಲ್ಬರ್ಗದಿಂದ ಇಕ್ಬಾಲ್ ಅಹಮದ್, ರಾಯಚೂರಿನಿಂದ ಎ. ವೆಂಕಟೇಶ್ ನಾಯ್ಕ್, ಕೊಪ್ಪಳದಿಂದ ಕೆ. ವಿರೂಪಾಕ್ಷಪ್ಪ, ಚಿತ್ರದುರ್ಗದಿಂದ ಎನ್.ವೈ. ಹನುಮಂತಪ್ಪ, ಚಿಕ್ಕಬಳ್ಳಾಪುರದಿಂದ ಆರ್.ಎಲ್. ಜಾಲಪ್ಪ, ಕೋಲಾರದಿಂದ (ಎಸ್‌ಸಿ) ಕೆ.ಎಚ್. ಮುನಿಯಪ್ಪ, ಕನಕಪುರದಿಂದ ತೇಜಸ್ವಿನಿ ಶ್ರೀರಮೇಶ್, ಮಂಡ್ಯದಿಂದ ಅಂಬರೀಷ್ ಅವರು ಕಾಂಗ್ರೆಸ್‌ನಿಂದ ಗೆಲವು ಪಡೆದಿದ್ದರು. ಚಾಮರಾಜನಗರದಿಂದ (ಎಸ್‌ಸಿ) ಎಂ. ಶಿವಣ್ಣ, ಹಾಸನದಿಂದ ಎಚ್.ಡಿ. ದೇವೇಗೌಡ ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು.
ಕನಕಪುರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತೇಜಸ್ವಿನಿ ಶ್ರೀರಮೇಶ್ ಅವರು ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಸೋಲಿಸುವುದಷ್ಟೇ ಅಲ್ಲ, ಮೂರನೇ ಸ್ಥಾನಕ್ಕೆ ದೂಡುವಲ್ಲಿ ಯಶಕಂಡರು. ಬಿಜೆಪಿಯ ರಾಮಚಂದ್ರಗೌಡ ಅವರನ್ನು 1,16,663 ಮತಗಳಿಂದ ಮಣಿಸಿದರು. ಅಷ್ಟೇ ಅಲ್ಲ, ತೇಜಸ್ವಿನಿ ಅವರು 5,83,920 ಮತಗಳನ್ನು ಪಡೆದರು. ಈವರೆಗೆ ಗರಿಷ್ಠ ಮತಗಳನ್ನು ಪಡೆದಿರುವ ದಾಖಲೆ ಇಂದಿಗೂ ಇವರ ಹೆಸರಿನಲ್ಲೇ ಇದೆ. ಇದೇ ಕ್ಷೇತ್ರದಿಂದ ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ಅವರು 1999ರ 13ನೇ ಲೋಕಸಭೆ ಚುನಾವಣೆಯಲ್ಲಿ 5,32,910 ಮತಗಳನ್ನು ಪಡೆದಿದ್ದರು. ಈವರೆಗಿನ ಆ ದಾಖಲೆ ಬದಿಗೆ ಸರಿಯಿತು. ಮಂಡ್ಯದಲ್ಲಿ ಕಾಂಗ್ರೆಸ್‌ನ ಅಂಬರೀಶ್ ಅವರು ಜೆಡಿಎಸ್‌ನ ಡಾ. ಎಸ್.ಆರ್. ರಾಮೇಗೌಡ ಅವರನ್ನು 1,24,438 ಮತಗಳಿಂದ ಸೋಲಿಸಿದ್ದರು. ಹಾಸನದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್‌ನ ಎಚ್.ಸಿ. ಶ್ರೀಕಂಠಯ್ಯ ಅವರನ್ನು 1,90,305 ಮತಗಳಿಂದ ಮಣಿಸಿದ್ದು, ಈ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಅಂತರದ ಗೆಲವಾಗಿತ್ತು.
ಕೆನರಾದಲ್ಲಿ ಬಿಜೆಪಿಯ ಅನಂತಕುಮಾರ್ ಹೆಗ್ಡೆ ಅವರು 1,72,226 ಮತಗಳಿಂದ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವಾ ಅವರನ್ನು ಮಣಿಸಿದ್ದರು. ಬಾಗಲಕೋಟೆಯಿಂದ ಬಿಜೆಪಿಯ ಗದ್ದಿಗೌಡರ್ ಅವರು ಕಾಂಗ್ರೆಸ್‌ನ ಆರ್.ಎಸ್. ಪಾಟೀಲ್ ಅವರನ್ನು 1,67,383 ಮತಗಳಿಂದ ಸೋಲಿಸಿದರೆ, ಧಾರವಾಡ ದಕ್ಷಿಣದಲ್ಲಿ ಬಿಜೆಪಿಯ ಕುನ್ನೂರು ಮಂಜುನಾಥ್ ಅವರು ಕಾಂಗ್ರೆಸ್‌ನ ಪ್ರೊ. ಐ.ಜಿ. ಸನದಿ ಅವರ ವಿರುದ್ಧ 1,45,112 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ರಾಯಚೂರಿನಲ್ಲಿ ಕಾಂಗ್ರೆಸ್‌ನ ವೆಂಕಟೇಶ್ ನಾಯಕ್ ಅವರು ಜೆಡಿಎಸ್‌ನ ರಾಜಾ ಮದನ್‌ಗೋಪಾಲ್ ನಾಯಕ್ ಅವರ ವಿರುದ್ಧ 508 ಮತಗಳಿಂದ ಗೆಲವು ಸಾಧಿಸಿದ್ದು, ಅತ್ಯಂತ ಕಡಿಮೆ ಅಂತರದ ಜಯವಾಗಿತ್ತು.

-ಕೆರೆ ಮಂಜು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT