ಕಾಂಗ್ರೆಸ್ ನೇತೃತ್ವದ ಯುಪಿಎಗೆ ಹಿಂದಿಗಿಂತ ಹೆಚ್ಚಿನ ಸ್ಥಾನಗಳು ಲಭ್ಯವಾದವು. ಬಹುಮತದೊಂದಿಗೆ ಸರ್ಕಾರ ರಚಿಸಿತು. ಮನಮೋಹನ್‌ಸಿಂಗ್ ಅವರು ರಾಜ್ಯಸಭೆ ಸದಸ್ಯರಾಗಿ ಮತ್ತೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದರು. 2009ರ ಮೇ 22ರಂದು ಪ್ರಮಾಣವಚನ ಸ್ವೀಕರಿಸಿದರು. ಜವಾಹರಲಾಲ್ ನೆಹರೂ ನಂತರ ಐದು ವರ್ಷದ ಅವಧಿ ಪೂರ್ಣಗೊಂಡ ನಂತರ ಮತ್ತೈದು ವರ್ಷದ ಅವಧಿಗೆ ಪ್ರಧಾನಿಯಾಗಿ ಮುಂದುವರಿದ ಎರಡನೇ ವ್ಯಕ್ತಿ ಮನಮೋಹನ್‌ಸಿಂಗ್.
ದೇಶದಲ್ಲಿ 14ನೇ ಲೋಕಸಭೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 2009ರಲ್ಲಿ 15ನೇ ಲೋಕಸಭೆಗೆ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾರರ ಸಂಖ್ಯೆ 71 ಕೋಟಿ ದಾಟಿತ್ತು. ಇದು ಅಮೆರಿಕ ಹಾಗೂ ಬ್ರಿಟನ್ ಅನ್ನೂ ಮೀರಿಸಿದ್ದರಿಂದ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
15ನೇ ಲೋಕಸಭೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಿತು. 2009ರ ಏಪ್ರಿಲ್ 16, 23, 30 ಮೇ 7 ಮತ್ತು 13ರಂದು ಚುನಾವಣೆ ನಡೆಯಿತು. 37,47,58,801 ಪುರುಷರು, 34,22,26,300 ಮಹಿಳೆಯರು ಸೇರಿದಂತೆ 71,69,85,101 ಮತದಾರರಿದ್ದರು. 41,71,59,281 ಮತದಾರರು ಹಕ್ಕು ಚಲಾಯಿಸಿ ಶೇ.58.13ರಷ್ಟು ಮತ ದಾಖಲಿಸಿದ್ದರು. ಬಿಜೆಪಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಸಿಪಿಐ, ಸಿಪಿಎಂ, ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್‌ಸಿಪಿ), ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಪಕ್ಷಗಳಾಗಿದ್ದವು. 34 ರಾಜ್ಯ ಪಕ್ಷಗಳು, 322 ಮಾನ್ಯತೆರಹಿತ ಪಕ್ಷಗಳು ಕಣದಲ್ಲಿದ್ದವು. 543 ಸ್ಥಾನಗಳಲ್ಲಿ ಎಸ್‌ಸಿಗೆ 84, ಎಸ್‌ಟಿಗೆ 47 ಸ್ಥಾನ ಮೀಸಲಾಗಿದ್ದವು. 10425 ಪುರುಷರು, 827 ಮಹಿಳೆಯರು ಸೇರಿದಂತೆ 11,252 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 1752 ಪುರುಷರು, 174 ಮಹಿಳೆಯರ ನಾಮಪತ್ರ ತಿರಸ್ಕೃತಗೊಂಡಿತ್ತು. 1159 ಪುರುಷರು, 97 ಮಹಿಳೆಯರು ನಾಮಪತ್ರ ವಾಪಸ್ ಪಡೆದರು. 7514 ಪುರುಷರು, 556 ಮಹಿಳೆಯರು ಸೇರಿದಂತೆ 8070 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 6388 ಪುರುಷರು, 441 ಮಹಿಳೆಯರು ಠೇವಣಿ ಕಳೆದುಕೊಂಡರು.
ಕಾಂಗ್ರೆಸ್ 440 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 206ರಲ್ಲಿ ಗೆಲವು ಸಾಧಿಸಿತ್ತು. 71ರಲ್ಲಿ ಠೇವಣಿ ಇಲ್ಲದಂತಾಗಿದ್ದರೂ, ಶೇ. 28.55 ಮತ ಗಳಿಸಿತ್ತು. ಕಳೆದಬಾರಿಗಿಂತ 71 ಹೆಚ್ಚು ಸ್ಥಾನ ಗಳಿಸಿತ್ತು. ಬಿಜೆಪಿ 433ರಲ್ಲಿ ಸ್ಪರ್ಧಿಸಿ 116 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತ್ತು. 170 ಕ್ಷೇತ್ರಗಳಲ್ಲಿ ಠೇವಣಿ ನಷ್ಟ ಮಾಡಿಕೊಂಡು ಹಿನ್ನಡೆ ಕಂಡು ಶೇ. 18.80ರಷ್ಟು ಮತ ಗಳಿಸಿತ್ತು. ಬಿಎಸ್‌ಪಿ 500 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 21ರಲ್ಲಿ ಗೆಲವು ಸಾಧಿಸಿ 410ರಲ್ಲಿ ಠೇವಣಿ ಕಳೆದುಕೊಂಡು ಹೊಸ ದಾಖಲೆ ನಿರ್ಮಿಸಿತು. ಸಿಪಿಐ 56ರಲ್ಲಿ 4, ಸಿಪಿಎಂ 82ರಲ್ಲಿ 16, ಎನ್‌ಸಿಪಿ 68ರಲ್ಲಿ 9, ರಾಷ್ಟ್ರೀಯ ಜನತಾದಳ 44ರಲ್ಲಿ 4 ಸ್ಥಾನದಲ್ಲಿ ಜಯ ಸಾಧಿಸಿತ್ತು. ರಾಜ್ಯಪಕ್ಷಗಳು 309 ಸ್ಥಾನಗಳಲ್ಲಿ ಸ್ಪರ್ಧಿಸಿ 146ರಲ್ಲಿ ಜಯ ಸಾಧಿಸಿದ್ದರೆ, ಮಾನ್ಯತೆರಹಿತ ಪಕ್ಷಗಳ 2222 ಅಭ್ಯರ್ಥಿಗಳಲ್ಲಿ 12 ಮಂದಿ ಮಾತ್ರ ಗೆಲವು ಕಂಡು, 2164 ಮಂದಿ ಠೇವಣಿ ಕಳೆದುಕೊಂಡಿದ್ದರು. 3831 ಪಕ್ಷೇತರರಲ್ಲಿ 9 ಮಂದಿ ಗೆದ್ದು, 3806 ಮಂದಿ ಠೇವಣಿ ವಾಪಸ್ ಪಡೆಯಲಿಲ್ಲ.
ಕಾಂಗ್ರೆಸ್ ನೇತೃತ್ವದ ಯುಪಿಎಗೆ ಹಿಂದಿಗಿಂತ ಹೆಚ್ಚಿನ ಸ್ಥಾನಗಳು ಲಭ್ಯವಾದವು. ಬಹುಮತದೊಂದಿಗೆ ಸರ್ಕಾರ ರಚಿಸಿತು. ಮನಮೋಹನ್‌ಸಿಂಗ್ ಅವರು ರಾಜ್ಯಸಭೆ ಸದಸ್ಯರಾಗಿ ಮತ್ತೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದರು. 2009ರ ಮೇ 22ರಂದು ಪ್ರಮಾಣವಚನ ಸ್ವೀಕರಿಸಿದರು. ಜವಾಹರಲಾಲ್ ನೆಹರೂ ನಂತರ ಐದು ವರ್ಷದ ಅವಧಿ ಪೂರ್ಣಗೊಂಡ ನಂತರ ಮತ್ತೈದು ವರ್ಷದ ಅವಧಿಗೆ ಪ್ರಧಾನಿಯಾಗಿ ಮುಂದುವರಿದ ಎರಡನೇ ವ್ಯಕ್ತಿ ಮನಮೋಹನ್‌ಸಿಂಗ್.
ಚೆನ್ನೈ ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ 43 ಅಭ್ಯರ್ಥಿಗಳು ಕಣದಲ್ಲಿದ್ದರು. ಅಸ್ಸಾಂ ಮತ್ತು ನಾಗಾಲ್ಯಾಂಡ್ ಕ್ಷೇತ್ರದಲ್ಲಿ ತಲಾ ಮೂವರು ಅಭ್ಯರ್ಥಿಗಳಿದ್ದರು. ಉತ್ತರ ಪ್ರದೇಶದಲ್ಲಿ ಅತ್ಯಧಿಕ ಅಂದರೆ 11,60,06,374 ಮತದಾರರಿದ್ದರು. ಲಕ್ಷದ್ವೀಪದಲ್ಲಿ ಕನಿಷ್ಠ ಅಂದರೆ 45,983 ಮತದಾರರಿದ್ದರು. ಪಶ್ಚಿಮ ಬಂಗಾಳದ ತಮ್ಲೂಕ್‌ನಲ್ಲಿ ಗರಿಷ್ಠ ಶೇ.90.32ರಷ್ಟು ಮತದಾನವಾಗಿದ್ದರೆ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕನಿಷ್ಠ ಶೇ.25.55ರಷ್ಟು ಮಾತ್ರ ಮತದಾನವಾಗಿತ್ತು. ನಾಗಾಲ್ಯಾಂಡ್‌ನ ಸಿ.ಎಂ. ಚಾಂಗ್ ಅವರು 8,32,224 ಮತಗಳನ್ನು ಪಡೆದು ಅತ್ಯಂತ ಹೆಚ್ಚು ಮತ ಪಡೆದ ದಾಖಲೆ ಮಾಡಿದರು. ಚೆನ್ನೈ ದಕ್ಷಿಣದಲ್ಲಿ ಎಲ್.ಡಿ. ರಾಜಾ 118 ಮತ ಪಡೆದಿದ್ದು ಅತ್ಯಂತ ಕನಿಷ್ಠವಾಗಿತ್ತು. ಈ ಚುನಾವಣೆಗಾಗಿ 8,34,919 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 46,90,575 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರು. 15ನೇ ಚುನಾವಣೆಗಾಗಿ 1,120 ಕೋಟಿ ವೆಚ್ಚವನ್ನು ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು.
-ಕೆರೆ ಮಂಜು