ಸ್ವಾರಸ್ಯ

ತೆರೆಯಿತೇಕೆ ಈ ಪ್ರಿಯ ಅಂಕ?

ಮಹಾಯುದ್ಧದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಪ್ರಿಯಾಂಕಾ ಗಾಂಧಿ ಹಲವು ವದಂತಿಗಳಿಗೆ ಕಾರಣರಾಗಿ ಸುದ್ದಿ ಮಾಡಿದ್ದಕ್ಕೆ ಕಾರಣವೇನು?

ಮಹಾಯುದ್ಧದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಪ್ರಿಯಾಂಕಾ ಗಾಂಧಿ ಹಲವು ವದಂತಿಗಳಿಗೆ ಕಾರಣರಾಗಿ ಸುದ್ದಿ ಮಾಡಿದ್ದಕ್ಕೆ ಕಾರಣವೇನು? ಅವರು ರಾಜಕೀಯದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲಿದ್ದಾರೆ ಎಂಬರ್ಥದ ವದಂತಿಗಳು ಕಾಂಗ್ರೆಸ್‌ನಿಂದಲೇ ಹೊರಟಿರಬೇಕಷ್ಟೆ. ನರೇಂದ್ರ ಮೋದಿ ಅವರ
ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವವರಿದ್ದರು ಎಂಬ ಸುದ್ದಿಯೊಂದನ್ನು ತೇಲಿಬಿಟ್ಟು ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡಿದ್ದೂ ಇವರೇ ಆಗಿರಬೇಕು.
ಕಾಂಗ್ರೆಸ್ ತನ್ನ ಮರು ಅವತಾರಕ್ಕೆ ಆಗಲೇ ಸಿದ್ಧತೆ ನಡೆಸಿದೆಯೇ ಎಂಬ ಸುಳಿಹೊಂದು ಇಲ್ಲಿ ಸಿಗುತ್ತಿದೆ. ರಾಹುಲ್ ಗಾಂಧಿಯವರನ್ನು ಪ್ರಮುಖವಾಗಿ ಬಿಂಬಿಸುವುದರ ಮೂಲಕ ಯುಪಿಎ ಸರ್ಕಾರದ ವೈಫಲ್ಯಗಳ ಬಿಸಿಯನ್ನು ಸ್ವಲ್ಪಮಟ್ಟಿಗೆ ಎದುರಿಸಬಹುದು  ಅಂತ ಪ್ರಾರಂಭದಲ್ಲಿ ಕಾಂಗ್ರೆಸ್ ಯೋಚಿಸಿತು. ಯುಪಿಎ ಸರ್ಕಾರದಲ್ಲಿ ಸಂಸದರಾಗಿ ಮಾತ್ರವೇ ಕಾರ್ಯನಿರ್ವಹಿಸಿದ್ದ ರಾಹುಲ್ ಗಾಂಧಿ, ಯಾವ ಮಂತ್ರಿ ಪದವಿಗಳನ್ನೂ ನಿಭಾಯಿಸದೇ ಇರುವುದರಿಂದ, 'ಅವರ ವ್ಯಾಪ್ತಿಯಲ್ಲಿ ಪ್ರಯತ್ನಿಸಿದ್ದರು. ಆದರೆ ಸರ್ಕಾರದ ತಪ್ಪು ನಡೆಗಳಿಗೆ ಅವರು ಬಾಧ್ಯಸ್ಥರಲ್ಲ' ಎಂದು ಬಿಂಬಸುವುದು ಸುಲಭವಾಗುತ್ತದೆ ಎಂದು ಅದು ಭಾವಿಸಿತ್ತು. ಆದರೆ ಮೋದಿ ಅಬ್ಬರದ ಮುಂದೆ ರಾಹುಲ್ ಮೆದುವಾಗಿದ್ದು ಸ್ವಲ್ಪ ಆತಂಕ ತಂದಿರಬಹುದು. ರಾಹುಲ್ 'ಅಗ್ರೆಸ್ಸಿವ್‌' ಲಯವನ್ನು ಕಂಡುಕೊಳ್ಳುವಷ್ಟರಲ್ಲಿ ಅರ್ಧ ಚುನಾವಣೆ ಮುಗಿದುಹೋಗಿದೆ.
ಇದೀಗ ಕಾಂಗ್ರೆಸ್ ಪ್ರತಿಪಕ್ಷದಲ್ಲೇ ಕೂರುವ ಪ್ರಮೇಯ ಬಂದರೂ ಅಲ್ಲೂ ಅದನ್ನು ನಿಭಾಯಿಸುವುದಕ್ಕೆ ರಾಹುಲ್ ಮಾತ್ರವೇ ಸಾಕಾಗುವುದಿಲ್ಲ. ರಾಹುಲ್ ಲೋಕಸಭೆಯ ಪ್ರತಿಪಕ್ಷ ನಾಯಕನ ಜಾಗದಲ್ಲಿ ಕುಳಿತರೆ, ಇತ್ತ ಕಾಂಗ್ರೆಸ್‌ನ ಸಂಘಟನೆಯ ಶಕ್ತಿಯನ್ನು ಕಾಪಾಡಿಕೊಳ್ಳುವುದಕ್ಕೆ ಇನ್ನೊಬ್ಬರು ಬೇಕಾಗುತ್ತದೆ. ಒಬ್ಬರೇ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕೆ ಹೋದರೆ ಅಲ್ಲೂ ಇಲ್ಲ- ಇಲ್ಲೂ ಇಲ್ಲ ಅಂತಾಗಿಬಿಡಬಹುದು. ಈ ಎಲ್ಲ ಹಿನ್ನೆಲೆಗಳನ್ನು ಗಮನದಲ್ಲಿ ಇರಿಸಿಕೊಂಡು. 'ಪ್ರಿಯಾಂಕಾ ಲಾವೋ, ಕಾಂಗ್ರೆಸ್ ಬಚಾವೋ' ಎಂಬ ಧ್ವನಿಯನ್ನು ಪಕ್ಷದಲ್ಲೇ ಹಲವರು ಮೊಳಗಿಸುತ್ತಿದ್ದಾರೆ ಎನ್ನುತ್ತದೆ ರಾಜಧಾನಿಯ ಗುಸುಗುಸು.
ಬಾರು, ಇತರರಿಗೂ ತಕರಾರು
'ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌' ಕೃತಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ದೌರ್ಬಲ್ಯಗಳನ್ನು ಟೀಕಿಸುವ ಮೂಲಕ ಪ್ರಧಾನಿಯವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಹಲವರಿಗೆ ಟೀಕಾಸ್ತ್ರವನ್ನು ಒದಗಿಸಿರುವುದು ಸರಿಯಷ್ಟೆ. 'ನಾವು ಹೇಳಿರಲಿಲ್ಲವಾ, ದುರ್ಬಲ ಪ್ರಧಾನಿ ಮನಮೋಹನ್ ಅಂತ? ಸಂಪುಟದಲ್ಲಿ ಅವರ ಮಾತೇ ನಡೆಯುತ್ತಿರಲಿಲ್ಲ ಅಂತ ವಿವರಿಸುವ ಮೂಲಕ ಬಾರು ನಮ್ಮ ನಿಲವನ್ನು ಎತ್ತಿಹಿಡಿದಿದ್ದಾರೆ' ಎಂಬರ್ಥದಲ್ಲಿ ಬಿಜೆಪಿಗರು ಕಾಲರ್ ಜಗ್ಗಿಕೊಂಡರು. ಸಂಜಯ್ ಬಾರು ಅವರ ಪುಸ್ತಕವೇ ರಮ್ಯಕಲ್ಪನೆಗಳ ಕಂತೆ ಅಂತ ಕಾಂಗ್ರೆಸ್ ನಿವಾಳಿಸಿಬಿಟ್ಟಿತು.
 ಆದರೆ, ತೀರ ಒಳಹೊಕ್ಕು ನೋಡಿದರೆ ಪ್ರತಿಪಕ್ಷಗಳೂ ಸಂಜಯ್ ಬಾರು ಅವರನ್ನು ತಲೆ ಮೇಲೆ ಕೂರಿಸಿಕೊಂಡು ಭೇಷ್ ಅನ್ನುವ ಸ್ಥಿತಿಯಲ್ಲಿ ಇಲ್ಲ. 'ನಾನು ಅವತ್ತೇ ಹೇಳಿರಲಿಲ್ಲವೇ' ಅಂತ ಸಂಜಯ್ ಪುಸ್ತಕವನ್ನು ಉಲ್ಲೇಖಿಸಿ ಅದಾಗಲೇ ಆಡ್ವಾಣಿಯವರು ಬ್ಲಾಗ್ ಬರೆದುಬಿಡಬೇಕಿತ್ತು. ಏಕೋ ನಿಧಾನಿಸಿದಂತಿದೆ. ಏಕೆಂದರೆ ಪ್ರಧಾನಿ ಹಾಗೂ ಕಾಂಗ್ರೆಸ್‌ಗೆ ಮಾತ್ರವಲ್ಲದೇ ಇತರರಿಗೂ ಕಿರಿಕಿರಿ ಎನ್ನಿಸಬಹುದಾದ ಹಲವು 'ವದಂತಿ' ರೂಪದ ಸಂಗತಿಗಳನ್ನು ಬಾರು ಬರೆದುಬಿಟ್ಟಿದ್ದಾರೆ. ಮನಮೋಹನ್‌ರನ್ನು ಪದಚ್ಯುತಗೊಳಿಸುವುದಕ್ಕೆ ಆಡ್ವಾಣಿ ಆಗಾಗ ಹೋಮ-ಹವನಗಳನ್ನು ಕೈಗೊಳ್ಳುತ್ತಿದ್ದರು ಎಂಬುದು ಬಾರು ದಾಖಲಿಸಿರುವ ವದಂತಿಗಳಲ್ಲೊಂದು.
ಇನ್ನೊಂದು ಪ್ರಕರಣದಲ್ಲಿ, ವಿತ್ತಮಂತ್ರಿ ಚಿದಂಬರಂ ಅವರ ಬಜೆಟ್ ಪ್ರಸ್ತಾವಗಳಿಗೆ ಆಗ ಸರ್ಕಾರದ ಭಾಗವಾಗಿದ್ದ ಎಡಪಕ್ಷದ ವಿರೋಧ ತೀವ್ರವಾಗಿದೆಯೇ ಎಂದು ಪರೀಕ್ಷಿಸಲು ಸಿಪಿಎಮ್‌ನ ಸೀತಾರಾಮ ಯೆಚೂರಿ ಅವರನ್ನು ಅವರ ಪಕ್ಷದ ಪ್ರಧಾನ ಕಚೇರಿಗೆ ಮನಮೋಹನಸಿಂಗ್ ಅವರೇ ಕಳುಹಿಸಿಕೊಟ್ಟಿದ್ದರಂತೆ. ಈ ಹಂತದಲ್ಲಿ ಬಾರು ಅವರೊಂದಿಗೆ ಹರಟುತ್ತ, ಯೆಚೂರಿ ಒಂದು ಮಾತು ಹೇಳಿದ್ದರಂತೆ. 'ನಾವು ಎಡಪಕ್ಷದವರು ಬೊಗಳುತ್ತೇವೆಯೇ ವಿನಃ ಕಚ್ಚುವುದಿಲ್ಲ. ಹೀಗಾಗಿ ಬಜೆಟ್ ವಿಷಯ ಮುಂದಿಟ್ಟುಕೊಂಡು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನೇ ವಾಪಸು ತೆಗೆದುಕೊಳ್ಳುವ ಪ್ರಶ್ನೆ ಉದ್ಭವವಾಗದು.' ಬಾರು ಬರೆಯುತ್ತಾರೆ- 'ಆಗ ಅಲ್ಲೇ ಇದ್ದ ಚಿದಂಬರಂ ಅವರು ಯೆಚೂರಿ ಅವರ ಎದುರಿನಲ್ಲೇ- ಅಂತೂ ನೀವು ನಾಯಿ ಅಂತ ಒಪ್ಪಿಕೊಂಡಿರಿ ಎಂದು ಕುಟುಕಿದರು!'
ಗುಜರಾತ್ ಗಲಭೆಯಲ್ಲಿ ಊರು ಬಿಟ್ಟವ ಈಗ ಆಪ್ ಅಭ್ಯರ್ಥಿ
2002ರಲ್ಲಿ ಗುಜರಾತ್‌ನಲ್ಲಿ ಗೋಧ್ರೋತ್ತರ ಹಿಂಸೆ ಭುಗಿಲೆದ್ದಾಗ, ಅಹಮದಾಬಾದ್‌ನ ನಿವಾಸಿ ಮಶೂಕ್ ಶೇಕ್ ಇಸ್ಮಾನಿಗೆ 15 ವರ್ಷ ವಯಸ್ಸು. ದೊಡ್ಡವನಾದ ಮೇಲೆ ತಂದೆಯ ಪ್ಲಾಸ್ಟರ್ ಆಫ್ ಪ್ಯಾರಿಸ್ ಬ್ಯುಸಿನೆಸ್ ಅನ್ನು ಮುನ್ನಡೆಸಬೇಕೆಂಬ ಇಸ್ಮಾನ್ ಕನಸಿಗೆ ಅಂದೇ ಬೆಂಕಿ ಬಿದ್ದಿತ್ತು. ಗಲಭೆ ತೀವ್ರ ಸ್ವರೂಪ ಪಡೆದು ಇಡೀ ಅಹಮದಾಬಾದ್ ಹೊತ್ತಿಉರಿಯುತ್ತಿದ್ದಂತೆಯೇ, ಜೀವಭಯದಿಂದ ಮಶೂಕ್‌ನ ಕುಟುಂಬ, ಉಟ್ಟಬಟ್ಟೆಯಲ್ಲೇ ಉತ್ತರ ಪ್ರದೇಶದ ಟ್ರೇನ್ ಹತ್ತಿ ಬದುಕುಳಿಯಿತು.
12 ವರ್ಷಗಳ ನಂತರ ಮಶೂಕ್ ಮತ್ತೆ ತನ್ನ ಊರಿಗೆ ಮರಳಿದ್ದಾನೆ. ಆದರೆ ಬೇರೆಯದ್ದೇ ಕನಸು ಹೊತ್ತು. ಈಗ ಮಶೂಕ್ ಅಹಮದಾಬಾದ್‌ನ ಗೊಂಡಾ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ! ಗೊಂಡಾದಲ್ಲಿ ಮಶೂಕ್‌ನ ಪ್ರಬಲ ಪ್ರತಿಸ್ಪರ್ಧಿಯಾಗಿರುವವರು ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮ. ಈಗ ಆ ಇಡೀ ಕುಟುಂಬ ಆಪ್ ಸೇರಿ, ಮಶೂಕ್‌ನ ಪರವಾಗಿ ಪ್ರಚಾರ ಮಾಡುತ್ತಿದೆ.
ಕ್ಯಾಥೋಲಿಕ್ಕರ ಕೋಟೆಯಲ್ಲಿ ಮೋದಿ ಮಂತ್ರ ಮ್ಯೂಟ್!
ಬಿಜೆಪಿಯ ಯಶಸ್ವಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೇ ಸಿಗಬೇಕು ಎನ್ನುವವರ ಸಂಖ್ಯೆಯೂ ದೊಡ್ಡದಿದೆ. ಮೋದಿಯವರಂತೆಯೇ ಪರಿಕ್ಕರ್ ಕೂಡ ಅಭಿವೃದ್ಧಿಯ ಮಂತ್ರದಂಡದಿಂದ ತಮ್ಮ ರಾಜ್ಯದಲ್ಲಿ ಮಾಯೆ ಮಾಡಿದವರು. ಆದರೆ ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ ವ್ಯಕ್ತಿ ಎಂದು ಮೊದಲು ಬೆಂಬಲ ನೀಡಿದ ಬಿಜೆಪಿ ನಾಯಕರಲ್ಲಿ ಪರಿಕ್ಕರ್ ಮುಂಚೂಣಿಯಲ್ಲಿದ್ದವರು.
ನಮೋ ಅಲೆ ಈಗ ಗೋವಾದಲ್ಲೂ ಜೋರಾಗಿ ಬೀಸುತ್ತಿದೆ. ಪರಿಕ್ಕರ್ ಕೂಡ ಆ ಅಲೆಯ ಮೇಲೆ ಸವಾರಿ ಮಾಡುತ್ತಿದ್ದಾರಾದರೂ, ದಕ್ಷಿಣ ಗೋವಾದಲ್ಲಿ ಮಾತ್ರ ಅವರು ಮೋದಿ ಹೆಸರನ್ನು ಉಚ್ಚರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.  
ಇದಕ್ಕೆ ಕಾರಣಗಳೂ ಇಲ್ಲವೆಂದಲ್ಲ, ಸುಮಾರು 10. 59 ಲಕ್ಷ ಮತದಾರರಿರುವ ಗೋವಾದಲ್ಲಿ, ಎರಡು ಲೋಕಸಭಾ ಕ್ಷೇತ್ರಗಳಿವೆ (ಹಿಂದು ಬಾಹುಳ್ಯವಿರುವ ಉತ್ತರ ಗೋವಾ ಮತ್ತು ಕ್ಯಾಥೋಲಿಕ್ ಕ್ರಿಶ್ಚಿಯನ್ನರು ತುಂಬಿರುವ ದಕ್ಷಿಣ ಗೋವಾ). ಗೋವಾದ ಮುಕ್ಕಾಲು ಜನಸಂಖ್ಯೆ ಕ್ಯಾಥೋಲಿಕ್ ಸಮುದಾಯದ್ದೇ ಆಗಿದೆ. ಹಾಗಾಗಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವವರೂ ಅವರೇ. ಕಳೆದ ತಿಂಗಳು, ಸಾಲ್‌ಸೆಟ್ ಕ್ಷೇತ್ರದ(ದಕ್ಷಿಣ ಗೋವಾ) ಚರ್ಚೊಂದು "ಕೋಮುವಾದಿ ಶಕ್ತಿಗಳಿಗೆ ಮತದಾನ ಮಾಡಬೇಡಿ" ಎಂದು ತಮ್ಮ ಧರ್ಮದವರಿಗೆ ಕರೆಕೊಟ್ಟಿದೆ. ಇದಾದ ಮೇಲೆ ಗೋವಾದ ಆರ್ಚ್ ಬಿಷಪ್ ನೆರ್ರೀ ಫೆರ್ರ್ಯಾರೋ 'ಜಾತ್ಯತೀತ ಮಾರ್ಗವನ್ನು ಅನುಸರಿಸುವವರನ್ನಷ್ಟೇ ಬೆಂಬಲಿಸಿ' ಎಂದು ಹೇಳಿದ್ದಾರೆ.
ಈ ಕಾರಣಕ್ಕಾಗಿಯೇ ದಕ್ಷಿಣ ಗೋವಾದಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಹೆಚ್ಚು ಬಳಸದ ಪರಿಕ್ಕರ್ ಕೇವಲ ತಮ್ಮ ಜನಪರ ಆಡಳಿತವನ್ನು ಚುನಾವಣಾ ಅಸ್ತ್ರವಾಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT