ರಾಜ್ಯದಲ್ಲಿ ಬಿಜೆಪಿ 18 ಸ್ಥಾನಗಳನ್ನು ಪಡೆದು ಹಿಂದಿನ ಚುನಾವಣೆಯಲ್ಲಷ್ಟೇ ಹೊಸ ದಾಖಲೆ ಬರೆದಿತ್ತು. ಆದರೆ, ಅದನ್ನೂ ಮೀರಿಸದ ಸಾಧನೆ 15ನೇ ಲೋಕಸಭೆ ಚುನಾವಣೆಯಲ್ಲಾಯಿತು. ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರವಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಲೆಯಿಂದಾಗಿ ಬಿಜೆಪಿ 19 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ನಂತರ ಅತಿಹೆಚ್ಚು ಸ್ಥಾನ ಗಳಿಸಿರುವ ಪಕ್ಷದ ಹೆಗ್ಗಳಿಕೆ ಸಾಧಿಸಿತು. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತೀವ್ರ ಪ್ರತಿಸ್ಪರ್ಧೆಯಲ್ಲೂ ಬಿಜೆಪಿಯ ಈ ಸಾಧನೆ ಗಮನಾರ್ಹವಾಗಿತ್ತು. ಅದಕ್ಕೇ ಒಂದು ಲಕ್ಷದ ಅಂತರದ ಗೆಲವು ನಾಲ್ಕು ಕ್ಷೇತ್ರದಲ್ಲಿ ಮಾತ್ರ ದಾಖಲಾಗಿತ್ತು. ಇದಲ್ಲದೆ, ರಾಜ್ಯದ ಮತದಾರರ ಸಂಖ್ಯೆ ಪ್ರಥಮ ಬಾರಿಗೆ ನಾಲ್ಕುಕೋಟಿ ದಾಟಿತ್ತು.
2009ರಲ್ಲಿ ನಡೆದ 15ನೇ ಲೋಕಸಭೆ ಚುನಾವಣೆಯಲ್ಲಿ 2,13,16,482 ಪುರುಷರು, 2,04,74,457 ಮಹಿಳೆಯರು ಸೇರಿ 4,17,90,939 ಮತದಾರರಿದ್ದರು. ಇವರಲ್ಲಿ 2,45,67,178 ಮತದಾರರು ಹಕ್ಕು ಚಲಾಯಿಸಿ, ಶೇ.58.81ರಷ್ಟು ಮತ ದಾಖಲಿಸಿದ್ದರು. 2001ರ ಜನಗಣತಿಯಂತೆ ಕ್ಷೇತ್ರಗಳ ಮರುವಿಂಗಡಣೆಯಾಯಿತು. 28 ಕ್ಷೇತ್ರಗಳಷ್ಟೇ ಉಳಿದರೂ, ಹೆಸರು ಬದಲಾವಣೆಯಾಯಿತು. ಅತಿದೊಡ್ಡ ಕ್ಷೇತ್ರ ಕನಕಪುರ ಇಲ್ಲವಾಯಿತು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ ಉದಯವಾಯಿತು. ಧಾರವಾಡ ಒಂದೇ ಆಯಿತು. ಬೇರೆ ಕ್ಷೇತ್ರಗಳ ಪ್ರದೇಶಗಳು ಸೇರಿಕೊಂಡು ಹಾವೇರಿ ಕ್ಷೇತ್ರವಾಯಿತು. ಕೆನರಾ ಹೋಗಿ ಉತ್ತರ ಕನ್ನಡವಾಯಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಒಂದೇ ಕ್ಷೇತ್ರವಾಯಿತು. ಹೀಗೆ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆಯಾಯಿತು. ಹೆಸರು ಅದೇ ಆದರೂ ಪ್ರದೇಶಗಳು ಬೇರೆಬೇರೆಯಾಗಿ ಅಭ್ಯರ್ಥಿಗಳು ಹೊಸ ಅನುಭವದಲ್ಲಿ, ಕ್ಷೇತ್ರ ಆಯ್ಕೆಯಲ್ಲಿ ಕೆಲವು ಹೊಸ ತಂತ್ರವನ್ನೂ ಅನುಸರಿಸಿದ್ದರು. 28 ಕ್ಷೇತ್ರಗಳಲ್ಲಿ 5 ಎಸ್‌ಸಿಗೆ ಹಾಗೂ 2 ಎಸ್‌ಟಿಗೆ ಮೀಸಲಾಗಿತ್ತು.
28 ಕ್ಷೇತ್ರಗಳಿಗೆ 615 ಪುರುಷರು, 25 ಮಂದಿ ಮಹಿಳೆಯರು ಸೇರಿದಂತೆ 640 ಮಂದಿ ನಾಮಪತ್ರ ಸಲ್ಲಿಸಿದರು. ಇದರಲ್ಲಿ 76 ಪುರುಷರು ಹಾಗೂ ನಾಲ್ವರು ಮಹಿಳೆಯರ ನಾಮಪತ್ರ ತಿರಸ್ಕೃತವಾಯಿತು. 131 ಪುರುಷರು, ಇಬ್ಬರು ಮಹಿಳೆಯರು ಸೇರಿದಂತೆ 133 ಮಂದಿ ನಾಮಪತ್ರ ವಾಪಸ್ ಪಡೆದರು. ಹೀಗಾಗಿ, ರಾಷ್ಟ್ರೀಯ ಪಕ್ಷಗಳಿಂದ 91, ರಾಜ್ಯ ಪಕ್ಷಗಳಿಂದ 21, ಮಾನ್ಯತೆರಹಿತ ಪಕ್ಷಗಳಿಂದ 55 ಹಾಗೂ 260 ಪಕ್ಷೇತರರು ಸೇರಿ 427 ಅಭ್ಯರ್ಥಿಗಳು ಕಣದಲ್ಲಿದ್ದರು. ರಾಷ್ಟ್ರೀಯ ಪಕ್ಷಗಳ 36, ರಾಜ್ಯ ಪಕ್ಷಗಳ 11, ಮಾನ್ಯತೆರಹಿತ ಪಕ್ಷಗಳ 55 ಹಾಗೂ 260 ಪಕ್ಷೇತರರು ಸೇರಿದಂತೆ 362 ಮಂದಿ ಠೇವಣಿ ಕಳೆದುಕೊಂಡಿದ್ದರು. 19 ಮಹಿಳೆಯರು ಕಣಕ್ಕಿಳಿದರೂ ಒಬ್ಬರು ಮಾತ್ರ ಜಯ ಸಾಧಿಸಿ 16 ಮಂದಿ ಠೇವಣಿ ಕಳೆದುಕೊಂಡರು. ರಾಜ್ಯದಲ್ಲಿ ಬಿಜೆಪಿ ಹಿಂದಿನ ಚುನಾವಣೆಗಿಂತ ಒಂದು ಹೆಚ್ಚಿನ ಸ್ಥಾನ ಗೆದ್ದುಕೊಂಡಿತ್ತು. 28 ಕ್ಷೇತ್ರಗಳಲ್ಲಿ 19 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ ಬರೆಯಿತು. ಕಾಂಗ್ರೆಸ್ ಪ್ರಥಮ ಬಾರಿಗೆ ರಾಜ್ಯದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಕೇವಲ ಆರು ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶ ಸಾಧಿಸಿತ್ತು. ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಮಾತ್ರ ಜೆಡಿಎಸ್ ಅಸ್ತಿತ್ವ ಉಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು.
ಚಿಕ್ಕೋಡಿಯಿಂದ ರಮೇಶ್ ಕತ್ತಿ, ಬೆಳಗಾವಿಯಿಂದ ಸುರೇಶ್ ಅಂಗಡಿ, ಬಾಗಲಕೋಟೆಯಿಂದ ಪಿ.ಸಿ. ಗದ್ದಿಗೌಡರ್, ಬಿಜಾಪುರದಿಂದ ರಮೇಶ್ ಜಿಗಜಿಣಗಿ, ರಾಯಚೂರಿನಿಂದ ಎಸ್. ಫಕೀರಪ್ಪ, ಕೊಪ್ಪಳದಿಂದ ಶಿವನಗೌಡ, ಬಳ್ಳಾರಿಯಿಂದ ಜೆ. ಶಾಂತಾ, ಹಾವೇರಿಯಿಂದ ಶಿವಕುಮಾರ್ ಉದಾಸಿ, ಧಾರವಾಡದಿಂದ ಪ್ರಹ್ಲಾದ್ ಜೋಶಿ, ಉತ್ತರಕನ್ನಡದಿಂದ ಅನಂತಕುಮಾರ್ ಹೆಗ್ಡೆ, ದಾವಣಗೆರೆಯಿಂದ ಜಿ.ಎಂ. ಸಿದ್ದೇಶ್ವರ, ಶಿವಮೊಗ್ಗದಿಂದ ಬಿ.ವೈ. ರಾಘವೇಂದ್ರ, ಉಡುಪಿ-ಚಿಕ್ಕಮಗಳೂರಿನಿಂದ ಡಿ.ವಿ. ಸದಾನಂದಗೌಡ, ದಕ್ಷಿಣ ಕನ್ನಡದಿಂದ ನಳೀನ್‌ಕುಮಾರ್ ಕಟೀಲು, ಚಿತ್ರದುರ್ಗದಿಂದ ಜನಾರ್ದನ ಸ್ವಾಮಿ, ತುಮಕೂರಿನಿಂದ ಜಿ.ಎಸ್. ಬಸವರಾಜ್, ಬೆಂಗಳೂರು ಉತ್ತರದಿಂದ ಡಿ.ಬಿ. ಚಂದ್ರೇಗೌಡ, ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರು.
ಗುಲ್ಬರ್ಗದಿಂದ ಮಲ್ಲಿಕಾರ್ಜುನ ಖರ್ಗೆ, ಬೀದರ್‌ನಿಂದ ಎನ್. ಧರಂಸಿಂಗ್, ಮೈಸೂರಿನಿಂದ ಎಚ್. ವಿಶ್ವನಾಥ್, ಚಾಮರಾಜನಗರದಿಂದ ಆರ್. ಧ್ರುವನಾರಾಯಣ್, ಚಿಕ್ಕಬಳ್ಳಾಪುರದಿಂದ ಎಂ. ವೀರಪ್ಪಮೊಯ್ಲಿ, ಕೋಲಾರದಿಂದ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್‌ನಿಂದ ಗೆಲವು ಸಾಧಿಸಿದ್ದರು. ಹಾಸನದಿಂದ ಎಚ್.ಡಿ. ದೇವೇಗೌಡ, ಮಂಡ್ಯದಿಂದ ಚಲುವರಾಯಸ್ವಾಮಿ, ಬೆಂಗಳೂರು ಗ್ರಾಮಾಂತರದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಧಾರವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್‌ನ ಕುನ್ನೂರು ಮಂಜುನಾಥ್ ಅವರನ್ನು 1,37,663 ಮತಗಳಿಂದ ಸೋಲಿಸಿದ್ದರು. ಚಿತ್ರದುರ್ಗದಲ್ಲಿ ಬಿಜೆಪಿಯ ಜನಾರ್ದನಸ್ವಾಮಿ ಅವರು ಕಾಂಗ್ರೆಸ್‌ನ ಡಾ.ಬಿ. ತಿಪ್ಪೇಸ್ವಾಮಿ ಅವರನ್ನು 1,35,571 ಮತಗಳಿಂದ ಮಣಿಸಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ. ಯೋಗೇಶ್ವರ ಅವರನ್ನು 1,30,235 ಮತಗಳಿಂದ ಸೋಲಿಸಿದ್ದರು.
ಹಾಸನದಲ್ಲಿ ಜೆಡಿಎಸ್‌ನ ಎಚ್.ಡಿ. ದೇವೇಗೌಡ ಅವರು ಬಿಜೆಪಿಯ ಕೆ.ಎಚ್. ಹನುಮೇಗೌಡ ಅವರನ್ನು 2,91,113 ಮತಗಳಿಂದ ಭಾರೀ ಅಂತರದಿಂದ ಸೋಲಿಸಿ ಹೊಸ ದಾಖಲೆ ಬರೆದರು. 1989ರ ಒಂಬತ್ತನೇ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ಅವರು ಜನತಾದಳದ ಸಿ. ನಾರಾಯಣಸ್ವಾಮಿ ಅವರನ್ನು 2,55,221 ಮತಗಳ ಅಂತರದಿಂದ ಮಣಿಸಿದ್ದು ಈವರೆಗೆಗಿನ ಭಾರೀ ಅಂತರದ ಜಯವಾಗಿತ್ತು. ದೇವೇಗೌಡರು ಈ ದಾಖಲೆಯನ್ನು ಅಳಿಸಿ, ತಮ್ಮ ಹೆಸರು ಬರೆದರು.
-ಕೆರೆ ಮಂಜು