ಅಮೆರಿಕದಲ್ಲಿ 1970ರಲ್ಲಿ ಹುಟ್ಟಿಕೊಂಡ ವಿಶ್ವ ಭೂಮಿ ದಿನ ಇಂದು ವಿಶ್ವದಾದ್ಯಂತ ಪಸರಿಸಿಕೊಂಡಿದೆ. ಅಮೆರಿಕದಲ್ಲಿನ ಕೈಗಾರಿಕೆಗಳ ಮಾಲಿನ್ಯದ ವಿರುದ್ಧ ಅಲ್ಲಿನ ಜನರು ಧ್ವನಿ ಎತ್ತಿ, ಸರ್ಕಾರದ ಗಮನಸೆಳೆದು ಸ್ವಚ್ಛ ಪರಿಸರ ಕಾಪಾಡಲು, ಹಸಿರು ಉಳಿಸಿಕೊಳ್ಳಲು ಮಾಡಿದ ಚಳವಳಿ. ಈ ಚಳವಳಿಗೆ ಸರ್ಕಾರ ಮನ್ನಣೆ ನೀಡಿ ಪರಿಸರ ರಕ್ಷಣೆ, ಭೂಮಿ ಸಂರಕ್ಷಣೆಗೆ ಒತ್ತು ನೀಡುವ ಭರವಸೆ ನೀಡಿದ ಸೂಚಕವಾಗಿ ಪ್ರತಿವರ್ಷ ಏಪ್ರಿಲ್ 22ರಂದು ವಿಶ್ವಭೂಮಿ ದಿನ.
ಭಾರತ, ಕರ್ನಾಟಕ ಅಥವಾ ಬೆಂಗಳೂರಿಗೆ ಇದು ಹೇಗೆ ಹೊಂದಿಕೊಳ್ಳುತ್ತದೆ? ನಿಜ, ವಿಶ್ವದಲ್ಲಿ ಆಚರಿಸಲಾಗುವ ಬಹುತೇಕ ದಿನಾಚರಣೆಗಳ ನಮ್ಮ ಸಂಸ್ಕೃತಿ ಅಥವಾ ಸ್ಥಳೀಯ ಹವಾಗುಣಕ್ಕೆ ಒಗ್ಗಿಕೊಳ್ಳುವುದೇ ಇಲ್ಲ. ಆದರೂ ಅದನ್ನು ನಮ್ಮ ಅವಿಭಾಜ್ಯ ಅಂಗವಾಗಿ ಪ್ರತಿವರ್ಷವೂ ಆಚರಿಸಿದ್ದೇವೆ, ಆಚರಿಸಿಕೊಂಡು ಬರುತ್ತಲೂ ಇದ್ದೇವೆ. ವ್ಯಾಲೆಂಟೈನ್ಸ್ ಡೇ, ಫಾದರ್ಸ್ ಡೇ, ಮದರ್ಸ್ ಡೇ ಇವೆಲ್ಲವನ್ನೂ ಪ್ರತಿಷ್ಠೆಗಾದರೂ ಆಚರಿಸುತ್ತೇವೆ. ಅದರ ಮೂಲೋದ್ದೇಶ ಅಥವಾ ಅದನ್ನು ನಾವು ಏಕೆ ಆಚರಿಸಬೇಕು ಎಂಬುದರ ಪರಿವೇ ಇಲ್ಲದ್ದಿದರೂ ನಮ್ಮದೆ ದಿನ ಎಂದು ಸಂಭ್ರಮಿಸುತ್ತೇವೆ. ಆದರೆ, ಪರಿಸರ ಸಂಬಂಧಿಸಿದ ದಿನಗಳು ಬಂದರೆ ಅದರ ಬಗ್ಗೆ ಚಕಾರವೂ ಇರುವುದಿಲ್ಲ. ಅದಕ್ಕೂ ನಮಗೂ ಸಂಬಂಧವೇ ಇರುವುದಿಲ್ಲ ಎಂದು ನಮ್ಮ ಪಾಡಿಗೆ ನಾವಿದ್ದುಬಿಡುತ್ತೇವೆ.
ಪರಿಸರ ದಿನ, ಜಲದಿನ, ಮಾಲಿನ್ಯ ನಿಯಂತ್ರಣ ದಿನ. ಉಹೂಂ.. ಇವೆಲ್ಲ ಬಂದುಹೋಗಿದ್ದು, ನಡೆದುಹೋಗಿದ್ದು ಗೊತ್ತೇ ಆಗುವುದಿಲ್ಲ. ಜನಸಾಮಾನ್ಯರಿಗೆ ಇದರ ಬಗ್ಗೆ ಅರಿವೂ ಇರುವುದಿಲ್ಲ. ಏಕೆ ಗೊತ್ತೆ, ಇಂತಹ ದಿನಗಳು ವಾಣಿಜ್ಯೀಕರಣಗೊಂಡಿಲ್ಲ. ವ್ಯಾಲೆಂಟೈನ್ಸ್ ಡೇ, ಫಾದರ್ಸ್ ಡೇ, ಮದರ್ಸ್ ಡೇಗಳೆಂದರೆ ಗ್ರೀಟಿಂಗ್ಸ್, ಗಿಫ್ಟ್ ಹಾಗೂ ಆ ದಿನದಲ್ಲಿ ಇದು ಮಾಡಿ, ಅದು ಮಾಡಿ ಎಂಬ ಜಾಹೀರಾತುಗಳ ಸುರಿಮಳೆ ತಿಂಗಳ ಹಿಂದಿನಿಂದಲೇ ಶುರುವಾಗುತ್ತದೆ. ವ್ಯಾಪಾರ ದೃಷ್ಟಿಯಲ್ಲಿ ಅವರು ಮಾಡುವುದು ಸರಿಯೇ ಇರಬಹುದು. ಆದರೆ, ಅಂತಹದ್ದೇ ಕಾಳಜಿಯನ್ನು ನಮ್ಮ ಪರಿಸರ, ನಾವು ಬದುಕುತ್ತಿರುವ ಭೂಮಿ ಮೇಲೇಕೆ ತೋರುವುದಿಲ್ಲ?
ಭೂಮಿ, ಪರಿಸರಕ್ಕೆ ಸಂಬಂಧಿಸಿದ ಒಂದು ದಿನ ಅಥವಾ ಆಚರಣೆ ಇದ್ದರೆ ಅದು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತ. ಪರಿಸರ ಪ್ರೇಮಿಗಳಿಗೇ ಅದನ್ನು ಬಿಟ್ಟುಕೊಡಲಾಗಿದೆ. ಅದು ಅವರದ್ದೇ ಸ್ವತ್ತು. ಇನ್ನಾರೂ ಅದಕ್ಕೆ ಲಗ್ಗೆ ಹಾಕುವುದಿಲ್ಲ. ಏಕೆಂದರೆ ಅಲ್ಲಿ ಏನೂ ಹುಟ್ಟುವುದಿಲ್ಲ. ರಾಜಕೀಯದಂತೆ ಪ್ರಚಾರ ಸಿಗುವುದಿಲ್ಲ, ಸಿನಿಮಾದಂತೆ ಗ್ಲಾಮರ್ ಇರುವುದಿಲ್ಲ, ಪ್ರಸಿದ್ಧರಿಗೆ (ಸೆಲೆಬ್ರಿಟಿ) ಅದರಿಂದ ಆಗಬೇಕಾದ್ದು ಏನೂ ಇರುವುದಿಲ್ಲ. ಅದಕ್ಕೇ ಇಂತಹ ದಿನಗಳಲ್ಲಿ ಎಲ್ಲೋ ಒಂದೆರಡು ವಿಚಾರ ಸಂಕಿರಣಗಳು, ಗೋಷ್ಠಿಗಳು ನಡೆಯುತ್ತವೆ. ಪರಿಸರ ಸಂಸ್ಥೆಗಳೇ ಇಲ್ಲೂ ಆಸಕ್ತಿ ವಹಿಸಿ ಇವುಗಳನ್ನು ಆಯೋಜಿಸಿರುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳೂ ಬರುವುದಿಲ್ಲ. ಬಂದರೂ ಯಾವುದೋ ಒಂದು ಆಶ್ವಾಸನೆ ಕೊಟ್ಟು ಅಲ್ಲಿ ಕೈತೊಳೆದುಕೊಂಡು ಹೋಗುತ್ತಾರೆ. ಆ ಭರವಸೆ ನೀಡಿದ ಸಮಯವೇ ಅದನ್ನು ಮರೆತಿರುತ್ತಾರೆ. ಸರ್ಕಾರದಲ್ಲಿರುವವರದ್ದೂ ಇದೇ ಸ್ಥಿತಿ. ಹೀಗಾಗಿ, ಪ್ರತಿವರ್ಷವೂ ಪರಿಸರಕ್ಕೆ ಸಂಬಂಧಿಸಿದ ದಿನಗಳಲ್ಲಿ ನಿಯಮ ಜಾರಿಗೊಳಿಸುತ್ತೇವೆ ಎಂದು ಸರ್ಕಾರದ ಪ್ರತಿನಿಧಿಗಳು ನೀಡುವ ಭರವಸೆ ಜಾರಿ ಆಗುವುದೇ ಇಲ್ಲ.
ಇಂದು ಭೂಮಿ ದಿನ. ಅಂದರೆ, ನಾವೆಲ್ಲರೂ ಬದುಕುತ್ತಿರುವ ಭೂತಾಯಿಯ ದಿನ. ಯಾವ ಉದ್ದೇಶದಿಂದ ದಿನ ಆರಂಭವಾಯಿತು, ಅದು ಹೇಗೆ ವಿಸ್ತಾರಗೊಂಡಿತು, ಅದು ಹೇಗೆ ನಮಗೆ ಅನ್ವಯಿಸುತ್ತದೆ ಎಂಬುದನ್ನೂ ತಿಳಿದುಕೊಳ್ಳುವ ಕನಿಷ್ಠ ಕರ್ತವ್ಯ ನಮ್ಮದಾಗಿರಬೇಕು. ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ 1970ರಲ್ಲಿ ಪರಿಸರಪ್ರೇಮಿಗಳ ಚಳವಳಿ ನಡೆಯಿತು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪವನ್ನೂ ಪಡೆಯಿತು. ಪರಿಸರ ಪ್ರೇಮಿಗಳು ಅಷ್ಟೇ ಅಲ್ಲ, ನಾಗರಿಕರೆಲ್ಲ ಎಚ್ಚೆತ್ತುಕೊಂಡು ಈ ಮಾಲಿನ್ಯ ಹೋಗದಿದ್ದರೆ ಉಳಿಗಾಲವಿಲ್ಲ ಎಂದರಿತುಕೊಂಡರು. ಆಗ ಸರ್ಕಾರದ ಕಣ್ಣು ತೆರೆದು, ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಿ, ಜಾರಿಗೂ ತಂದಿತು. ಈ ಹೋರಾಟದ ಫಲವೇ ಭೂಮಿ ದಿನ.
ಈ ಭೂಮಿ ದಿನ ನಂತರದ ದಿನಗಳಲ್ಲಿ, ವರ್ಷಗಳಲ್ಲಿ ವಿಶ್ವದಾದ್ಯಂತ ವಿಸ್ತಾರವಾಯಿತು. ಭೂಮಿ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಬಗ್ಗೆ ಅರಿವು ಮೂಡಿಸುವ ವೇದಿಕೆಗಳು ಸೃಷ್ಟಿಯಾದವು. ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಕೈಜೋಡಿಸಿದವು. ಕೆಲವು ಕಂಪನಿಗಳು ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯ (ಸಿಎಸ್‌ಆರ್) ಮೂಲಕವೂ ಕಾರ್ಯಕ್ರಮಗಳನ್ನು ಆಯೋಜಿಸಿದವು. ಪ್ರತಿಯೊಂದು ವರ್ಷಕ್ಕೂ ಒಂದು ಥೀಮ್ ನೀಡಲಾಯಿತು. ಅದರಂತೆ ಭೂಮಿ ರಕ್ಷಣೆಯಲ್ಲಿ, ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು, ಪರಿಸರ ಕಾಪಾಡಲು, ಹಸಿರು ಉಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ ಈ ವರ್ಷದ ಥೀಮ್- ಗ್ರೀನ್ ಸಿಟೀಸ್.
ಭೂಮಿಯನ್ನು ಭೂತಾಯಿಗೆ ಹೋಲಿಸಿ, ಪೂಜಿಸುವ ದೇಶ ನಮ್ಮದು. ಮಾತೃಭೂಮಿ ಎಂದೇ ದೇಶವನ್ನು ಸಂಬೋಧಿಸುತ್ತೇವೆ. ಅಂದರೆ, ಆಕೆಯನ್ನು ಕಾಪಾಡುವ ಜವಾಬ್ದಾರಿಯೂ ನಮ್ಮದೇ ಅಲ್ಲವೆ? ಇಂದಿನ ದಿನದಲ್ಲಿ ಭೂಮಿಯ ಮೇಲೆ ನಡೆಯುತ್ತಿರುವ ಆಕ್ರಮಣಗಳು ಹೇಗಿವೆ? ಅದರಿಂದ ಏನಾಗುತ್ತಿದೆ ಎಂಬುದು ಸಹಜವಾಗಿಯೇ ತಿಳಿಯಬಹುದಾಗಿದೆ. ಇದಕ್ಕೆ ಮಹಾನ್ ಪಾಂಡಿತ್ಯದ ಅಗತ್ಯವೇನೂ ಇಲ್ಲ. ಇಂದು ಮಳೆ ಕಡಿಮೆಯಾಗುತ್ತಿದೆ. ತಾಪಮಾನ ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಾಗುತ್ತಿದೆ. ಅದೇನು ಬೇಸಿಗೆಯೋ ನಾನಂತೂ ಜೀವಮಾನದಲ್ಲಿ ಕಂಡಿಲ್ಲ ಎಂದು ಹಿರಿಯರೂ ಹೇಳುತ್ತಿದ್ದಾರೆ. ನಾವು ನೋಡಿದಷ್ಟು ಅರಣ್ಯವೂ ಇಲ್ಲ. ಮರಗಳಂತೂ ಇಲ್ಲವೇ ಇಲ್ಲ ಬಿಡಿ. ಹದಿನೈದು ಇಪ್ಪತ್ತು ವರ್ಷದಿಂದೀಚೆಗೆ ಇದೆಲ್ಲ ಕಡಿಮೆ ಆಗುತ್ತಲೇ ಇದೆ. ಅಂದರೆ, ನಾವೆತ್ತುವ ಪ್ರಶ್ನೆಗಳಿಗೆ ಉತ್ತರವೂ ನಮ್ಮಲ್ಲೇ ಇದೆ ಅಲ್ಲವೆ?
ನಿಜ, ಎಲ್ಲರಿಗೂ ಗೊತ್ತು. ಪರಿಸರ ಎಂದರೆ ಭೂತಾಯಿಯ ಒಡಲು. ಆ ಒಡಲು ಬರಿದಾದರೆ, ಮಡಿಲು ಕಾವೇರುತ್ತದೆ. ಒಡಲಿಗೆ ಬೆಂಕಿ ಇಟ್ಟರೆ, ಮಡಿಲು ಸುಡುತ್ತದೆ. ಇದು ಕನಿಷ್ಠ ಪ್ರಜ್ಞೆ. ಮಾತಿನಲ್ಲಿ ಏನನ್ನಾದರೂ ಕಟ್ಟಬಹುದು. ಆದರೆ, ಕಾರ್ಯಸಾಧನೆಗೆ ಇಳಿಯುವುದು ಅಷ್ಟು ಸುಲಭವಲ್ಲ. ಭೂಮಿ ದಿನ ಎಂದು ಆಚರಿಸಿಬಿಟ್ಟರೆ, ಅಂದರೆ ನಾಲ್ಕಾರು ಸಸಿಗಳನ್ನು ನೆಟ್ಟುಬಿಟ್ಟರೆ, ಒಂದೆರಡು ಹೋರಾಟದ ಆಕ್ರೋಶಭರಿತ ಮಾತುಗಳನ್ನಾಡಿಬಿಟ್ಟರೆ ಎಲ್ಲವೂ ಮುಗಿದುಹೋಗುವುದಿಲ್ಲ. ಜವಾಬ್ದಾರಿ ನಿರ್ವಹಿಸಿದಂತೆಯೂ ಆಗುವುದಿಲ್ಲ. ಆ ಪರಿಸರ ಪ್ರೇಮಿಗಳಿಗೇನ್ರಿ ಕೆಲಸ ಇಲ್ಲ. ಅದು ಕಡಿಯಬೇಡಿ, ಆ ಹೊಗೆ ಬರುತ್ತದೆ, ಈ ಮಾಲಿನ್ಯ ಆಗುತ್ತೆ ಎಂದು ಹೇಳುತ್ತಲೇ ಇರುತ್ತಾರೆ. ಅದೆಲ್ಲವನ್ನೂ ಮಾಡದಿದ್ದರೆ ಅಭಿವೃದ್ಧಿ ಹೇಗೆ ಮಾಡೋದು? ಹೈಟೆಕ್ ನಗರಿ ಬೇಕು ಎನ್ನುತ್ತಾರೆ, ಹಾಗೇ ಮಾಡೋಕಾಗುತ್ತಾ ಎಂಬ ಪ್ರಶ್ನೆಗಳಿಗೂ ನಾಗರಿಕರು ಸೇರಿದಂತೆ ಪರಿಸರಪ್ರೇಮಿಗಳು ಉತ್ತರಿಸಲೇಬೇಕು.
ಅಭಿವೃದ್ಧಿ ಯಾರಿಗೆ ಬೇಡ ಹೇಳಿ. ಇಂದು ಎಲ್ಲವೂ ನಿಂತಿರುವುದೇ ಅಭಿವೃದ್ಧಿ ಮೇಲೆ. ಹಳ್ಳಿಯಲ್ಲಿ ಕೃಷಿ ನಂಬಿಕೊಂಡಿರುವ ರೈತ ತನ್ನ ಮಗ ಪಟ್ಟಣದಲ್ಲಿ ರಾಜನಂತೆ ಬದುಕಬೇಕು ಎಂದು ಬಯಸುತ್ತಾನೆ. ನಾನು ಪಟ್ಟ ಕಷ್ಟ ಅವನಿಗೇಕೆ ಎಂಬ ಕಾಳಜಿಯುಕ್ತ ಪ್ರೀತಿ ತಪ್ಪಲ್ಲ. ಇಂತಹ ವಿಭಿನ್ನ ಪರಿಸ್ಥಿತಿಯ ಪ್ರಕರಣಗಳು ಅಸಂಖ್ಯ. ಇವರಿಗೆಲ್ಲ ನಗರ ಬೇಕೇಬೇಕಲ್ಲವೇ? ಹೌದು, ನಗರ ನಿರ್ಮಾಣ ತಪ್ಪೇನಲ್ಲ. ಪೂರ್ವಜರೂ ನಗರಗಳನ್ನು ನಿರ್ಮಾಣ ಮಾಡಿದ್ದರು. ಆದರೆ ಅವರಿಗೊಂದು ದೂರದೃಷ್ಟಿ ಇತ್ತು. ಒಂದು ಪಟ್ಟಣ-ಹಳ್ಳಿ ನಿರ್ಮಿಸುವ ಮುನ್ನ ಅದಕ್ಕೆ ಅಗತ್ಯವಾದ ವಾಯು, ಜಲ, ಪರಿಸರದ ನಿರ್ಮಾಣ ಮೊದಲಾಗುತ್ತಿತ್ತು. ಅದಕ್ಕೇ ಕೆರೆಗಳಿರುವಲ್ಲಿಯೇ ಊರುಗಳಿರುತ್ತಿದ್ದವು. ಸುತ್ತಲೂ ಹಸಿರುಯುಕ್ತ ವಾತಾವರಣ. ಅದನ್ನೆಲ್ಲ ಉಳಿಸಿಕೊಂಡೇ ಜನರ ವಾಸ್ತವ್ಯ. ಆದರೆ, ಇಂದಿನ ನಗರಗಳೆಲ್ಲ ಕಾಂಕ್ರೀಟ್ ಕಾಡು. ದೂರದೃಷ್ಟಿಯ ಅಂಶವೇ ಇಲ್ಲ. ಭೂತಾಯಿಯನ್ನು ಎಷ್ಟು ದುರ್ಬಳಕೆ ಮಾಡಿಕೊಂಡು, ಸತ್ವ ಹೀರುವ ಕೆಲಸ ನಗರ ನಿರ್ಮಾಣ ಮೇಲುಗೈ.
ಭೂಮಿ ದಿನ ಎಂದರೆ, ತಾಯಿದಿನ. ಮಾತೃ ಸಂರಕ್ಷಣೆಯ ಜವಾಬ್ದಾರಿ ನಿರ್ವಹಿಸುವ ದಿನವಾಗಬೇಕು. ಕೇವಲ ಹೇಳಿಕೆಗಳಿಗೆ ಮೀಸಲಾಗದೆ, ಅನುಷ್ಠಾನವಾಗುವ ಕೆಲಸವಾದಾಗ ಮಾತ್ರ, ಕೋಟ್ಯಂತರ ಜೀವಿಗಳ ತಾಯಿಯ ಒಡಲು ತಣ್ಣಗಾದೀತು. ಆಗ ಆಕೆಯ ಮಡಿಲಲ್ಲಿರುವ ಮಾನವರ ಬಾಳಿಗೂ ತಂಪು.
- ಕೆರೆ ಮಂಜುನಾಥ್
ಕನ್ನಡಪ್ರಭ