"ಈ ಪುಸ್ತಕ ಕಟ್ಟಿಕೊಡುವ ಅನುಭವಲೋಕಕ್ಕೂ ನನಗೂ ಒಂದು ವಿಶೇಷ ನಂಟಿದೆ... ಇದು ಓದಿ, ಅನುಭವಿಸಿ, ಸುಖಿಸಬಹುದಾದ ಒಂದು ವಿಶಿಷ್ಟ ಕೃತಿ...'' ಎನ್ನುತ್ತಾರೆ ಹಿರಿಯ ಕಾದಂಬರಿಕಾರ ಶ್ರೀನಿವಾಸ ವೈದ್ಯ ಅವರು (ಕೃತಿಯ ಮುನ್ನುಡಿಯಲ್ಲಿ)...
''ನೌಕರಿ, ಉಪಜೀವನದ ಕುರಿತ ಎಂಥ ಅಭದ್ರತೆಯಲ್ಲೂ, ಮತ್ತೆ ಮತ್ತೆ, ಪಾಲಿಗೆ ಬಂದ ವಿವಿಧ ರಂಗ ಬರವಣಿಗೆಯಲ್ಲಿ ಸಂಪೂರ್ಣ ತಲ್ಲೀನರಾಗಿ ಎಲ್ಲವನ್ನೂ ಮೀರುತ್ತ ಬಂದ ಗೋಪಾಲ ಆ ಕ್ಷಣಗಳಲ್ಲಿ, ತಾಯಿಯ ಎದೆಗಂಟಿದ್ದೇ ಲೋಕವನ್ನೇ ಮರೆತು ಸುಮ್ಮನಾಗುವ ಕೂಸಿನಂತೆ ಕಾಣುತ್ತಾರೆ..." ಎಂಬುದು ಕವಿ ಜಯಂತ ಕಾಯ್ಕಿಣಿಯವರ ಅಂಬೋಣ (ಕೃತಿಯ ಬೆನ್ನುಡಿಯಲ್ಲಿ)...
ಇದೇ ಭಾನುವಾರ ದಿ. 23ರಂದು ಬಿಡುಗಡೆಯಾಗಲಿರುವ ಹಿರಿಯ ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿಯವರ 'ರಂಗದ ಒಳ-ಹೊರಗೆ' ಕೃತಿಯ ಎರಡು ಇಣುಕು ನೋಟಗಳಿವು.
ಬೆಂಗಳೂರಿನ ‘ಅಂಬಾ ಪ್ರಕಾಶನ’ ಪ್ರಕಟಿಸಿರುವ 'ರಂಗದ ಒಳ-ಹೊರಗೆ' ಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡುವರು.
ಹಿರಿಯ ಮಾಧ್ಯಮ ತಜ್ಞ ಜಿ. ಎನ್. ಮೋಹನ್ ಈ ಸಮಾರಂಭದ ಮುಖ್ಯ ಅತಿಥಿ.
ಹಿರಿಯ ರಂಗ ಕಲಾವಿದೆ ಶ್ರೀಮತಿ ಯಮುನಾ ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಅನನ್ಯ ರಂಗ ಕರ್ಮಿ ಧನಂಜಯ ಕುಲಕರ್ಣಿ ಕೃತಿಯ ಪರಿಚಯ ಮಾಡುವರು.
ಬೆಂಗಳೂರಿನ ಬನಶಂಕರಿ 2ನೆ ಹಂತದ ಪೋಲಿಸ್ ಸ್ಟೇಶನ್ ಸಮೀಪದ ಶ್ರೀವಿದ್ಯಾ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಈ ಕಾರ್ಯಕ್ರಮ.