ಅಮ್ಮಾ, ಹೇಗಿದ್ದೀಯಮ್ಮ? ಏನ್ ಮಾಡ್ತಿದ್ದಾರೆ? ಏನ್ ಸಮಾಚಾರ? ಎಂದು ಹೀಗೆ ಕರೆ ಮಾಡಿದಾಗ, ಒಂದೇ ಸಮನೆ ನನ್ನದು ಪ್ರಶ್ನೆ ಕೇಳುವುದು ನನ್ನ ವಾಡಿಕೆ.
ನಾವೆಲ್ಲ ಚೆನ್ನಾಗಿದ್ದೀವಪ್ಪಾ, ನೀನು ಹೆಂಗಿದ್ದೀಯಾ? ಯಾರನ್ನ ಕೇಳಿದೆ ನಿಮ್ಮ ಅಪ್ಪನ್ನ? ಅಯ್ಯೋ ಅವರದು ಇನ್ನೇನು ಕೆಲಸ ಹೇಳು..!! ಪೇಪರಿನಲ್ಲಿ ಇರುವ ಒಂದು ಅಕ್ಷರವೂ ಬಿಡದಂತೆ ಓದುವುದೇ ಕೆಲಸ. ಬೆಳಗ್ಗೆ ಸ್ನಾನ ಪೂಜೆ, ತಿಂಡಿ ಮುಗಸ್ಸಿ ಆ ದಿವಾನ್ ಮೇಲೆ ಕೂತರೆ ಕೈನಲ್ಲಿ ಪೇಪರ್ ಹಿಡಿದುಕೊಂಡು ಅಂತ್ತಿಂದಿತ್ತ ಅಲುಗಾಡದೆ ಪೇಪರ್ ಓದೋದೇ ಕೆಲಸ.
ಓದಲಿ ಬಿಡಮ್ಮ ಇನ್ನೇನು ಮಾಡ್ತಾರೆ ದಿನವೆಲ್ಲಾ? ಹೂ ಓದಲಿ ಬೇಡ ಅಂದೋರು ಯಾರು? ನಿಮ್ಮ ಅಪ್ಪ ಎಷ್ಟು ಪೇಪರ್ ಓದಿದ್ರೇನು ಒಂದು ವಿಷಯನೂ ತಿಳ್ಸೋಲ್ಲ? ಮೊನ್ನೆ ಅದೇನೋ ಆಧಾರ್ ಕಾರ್ಡ್ ಮಾಡಿಸೋಕ್ಕೆ ಕೊನೆ ದಿನಾಂಕ ಕೊಟ್ಟಿದ್ದ್ರಂತೆ. ಮತ್ತೆ ಕಾವೇರಿ ನೀರು ಇವತ್ತು ಬರೋಲ್ಲ ಅಂತಾ ಪೇಪರ್ ನಲ್ಲಿ ಕೊಟ್ಟಿದ್ರಂತೆ. ಇಂತಾ ವಿಷಯಗಳನ್ನ ಓದಿದೋರು ಸ್ವಲ್ಪ ತಿಳಿಸಬಾರದಾ. ಏನು ಓದಿದ್ರೇನು ಬಂತು ಹೇಳು. ಕೊಡ್ತೀನಿ ನಿಮ್ಮ ಅಣ್ಣನಾ ಹತ್ರ ಒಂದುಚೂರು ಮಾತಾಡು, ನಮ್ಮಗಳ ಮಾತು ಏನು ಕೇಳೋಲ್ಲ ನೀನೇ ಸರಿ ಇವರಿಗೆ ಎಂದು ಪೋನ್ ಕೊಟ್ಟರು.
ಈಗ ನೋಡಿ ನನ್ನ ಸರದಿ.
ಹೇ!!? ಏನಣ್ಣ ನೀವು ಹೀಗಾದ್ರೆ ಹೆಂಗೆ? ಎಂದರೆ, ಏಹ್..!! ಸುಮ್ಮನಿರಮ್ಮಾ, ನಿಮ್ಮ ಅಮ್ಮನಿಗೂ ಮಾಡೋಕ್ಕೆ ಕೆಲ್ಸ ಇಲ್ಲ, ಇಲ್ಲಸಲ್ಲದ್ದು ಹೇಳ್ತಾಳೆ.
ನಮ್ಗೇನು ಗೊತ್ತಿಲ್ಲವೇನಣ್ಣ ಏನ್ ಮಾಡ್ತೀರಿ ನೀವು ಅಂತಾ...!? ಪೇಪರ್ ಓದಿದ್ರೆ ಸ್ವಲ್ಪ ವಿಷಯ ಹಂಚಿಕೊಳ್ಳಬೇಕಲ್ವಾ? ಬರಿ ಓದೋದೆ ಅಲ್ಲಾ ಅದರಲ್ಲಿನ ವಿಷಯಗಳನ್ನ ಚರ್ಚಿಸಬೇಕು, ನಮಗೆ ಗೊತ್ತಿಲ್ಲದ್ದು ಹಂಚಿಕೊಳ್ಳಬೇಕು ಅಲ್ವಾ? ಎಂದರೆ ಆಯ್ತು ಆಮೇಲೆ ಮುಂದಕ್ಕೆ ಏನಿದೆ ಹೇಳು, ನಿಮ್ಮ ಅಮ್ಮ ಏನೇನು ಹೇಳಿದ್ಲೋ ಅದೆಲ್ಲ ಪಾಠ ಮಾಡು ಎಂದು ಕಿವಿಕೊಡುವುದೇ ಅವರ ಕೆಲಸ.
ಹೂ, ಮತ್ತಿನ್ನೇನು ಹೇಳೋದು ಪೇಪರ್ ಓದುತ್ತಿದ್ದರೆ ನಿಮಗೆ ಮೈ ಮೇಲೆ ಪ್ರಜ್ಞೆಯೇ ಇರುವುದಿಲ್ಲ, ಸೊಸೆ ಎಲ್ಲೋ ಒಳಗೆ ಕೆಲಸ ಮಾಡುತ್ತಿರುತ್ತಾಳೆ, ಅಮ್ಮಾ ಎಲ್ಲೋ ಆಚೆ ಹೋಗಿರ್ತಾರೆ. ಯಾರದ್ರು ಮನೆಗೆ ಬಂದ್ರೆ ನಿಮ್ಗೆ ಗೊತ್ತೇ ಆಗೋಲ್ಲ, ಹೋಗ್ಲಿ ಮನೆಗೆ ನೆಂಟರು, ಪರಿಚಯಸ್ತರು ಬಂದು ಕೂತಿದ್ದರೂ ಒಂದೂ ಮಾತನಾಡದೆ ಇದ್ದರೆ ಹೇಗೆ. ಪೇಪರ್ ಒಳಗೆ ಹೋಗಿಬಿಟ್ಟಿರ್ತೀರಿ.
ಅಯ್ಯೋ ಕಥೆ ಬಂತು, ಇದೆಲ್ಲಾ ಏನಿಲ್ಲ, ಯಾರ ಬಂದ್ರು ಮಾತಾಡ್ತೀನಿ ಹಾಗೇನು ಮಾಡಿಲ್ಲ ಸುಮ್ಮನಿರಮ್ಮಾ ನೀನು. ಮತ್ತೆ ಇನ್ನೇನು ಸಮಾಚಾರ ಹೇಗಿದೆ ಅಲ್ಲಿ ಬಿಸಿಲು?
ಬಿಸಿಲು ಅದು ಹೇಗಿರ್ಬೇಕೋ ಹಾಗಿದೆ, ನಿಮ್ಮ ಕಥೆ ಹೇಳಿ ಈಗ. ಕೂತ ಜಾಗದಲ್ಲೇ ಬೆಳಗಿಂದ ಸಂಜೆವರೆಗೂ ಕೂತಿರ್ತೀರಿ, ಎದ್ದು ಓಡಾಡೋಲ್ಲ. ಈಗಾಗಲೇ ಸೊಂಟದ ಮೂಳೆ ತೊಂದರೆ ಇದೆ, ಇದ್ದ ಬದ್ದ ಡಾಕ್ಟರ್ ಎಲ್ಲರನ್ನ ವಿಚಾರ್ಸಿದ್ರೆ ಆಪರೇಷನ್ ಮಾಡ್ಲೇ ಬೇಕು ಅಂತಾರೆ, ಸ್ವಲ್ಪ ಬೆಳಗೆದ್ದು ವಾಕ್ ಹೋಗಿ ಅಂತಾ ಆಗ ಹೇಳಿದ್ದಕ್ಕೆ ಏನೋ ಒಂದೆರಡು ದಿನ ವಾಕ್ ಮಾಡ್ತಿದ್ದರಂತೆ. ಆಮೇಲೆ ಆ ಪಾರ್ಕ್ ನಲ್ಲೂ ಯಾರ ಜೊತೆ ಮಾತಾಡೋಲ್ಲವಂತಲ್ಲಾ ಅಣ್ಣಾ? ಅದ್ಯಾಕೆ ಮನೆನಲ್ಲಿ ಏನ್ ಬಿಟ್ಟಿರ್ತೀರಿ, ೪-೫ ರೌಂಡ್ ಪಾರ್ಕ್ ಸುತ್ತಿ ಓಡೋಡಿ ಬರೋದೆನಾ ಕೆಲಸಾ? ಮತ್ತೆ ಮೊನ್ನೆ ಏನೋ ಎಡವಿ ಬಿದ್ದರಂಟೆ ಪಾರ್ಕನಲ್ಲಿ ಯಾಕೆ ನೋಡ್ಕೊಂಡು ನಿಧಾನಕ್ಕೆ ಹೋಗಬಾರ್ದಾ.
ಸರಿ ಬಿಡು ಎಲ್ಲಾ ವಿಷಯ ನಿನ್ಗೆ ಎಲ್ಲಿಂದ ಗೊತ್ತಾಗುತ್ತೆ. ಈ ಚಿನ್ನಿ ನನ್ನ ಮೊಮ್ಮಗಳು ಇದಾಳಲ್ಲಾ? ಅದೇನೋ ಕಂಪ್ಯೂಟರ್, ವಾಟ್ಸಪ್ ಅಂತಾ ಘಂಟೆಗಂಟೆಗೂ ನಡೆಯೋ ವಿಷ್ಯಾ ತಲುಪುಸ್ತಾಳಾ? ಏನ್ ಕಥೆ.
ಅವಳೇ ಹೇಳ್ಬೇಕಾ ನಮ್ಮ ಅಪ್ಪನ ಗುಣ ನಮಗೆ ಗೊತ್ತಿಲ್ವಾ ಹೇಳಿ? ನಿಮಗೆ ಟಿವಿ, ಮನೆ, ಪೇಪರ್ ಇಷ್ಟು ಬಿಟ್ಟು ಬೇರೇನು ಗೊತ್ತಿಲ್ಲ ಅನ್ಸುತ್ತೆ. ಎಲ್ಲಾ ಟಿವಿ ಸೀರಿಯಲ್ ನೋಡ್ತಿದ್ದೀರಾ? ಮೊಮ್ಮಕ್ಕಳು ಕಾರ್ಟೂನ್ ನೋಡೋಕ್ಕೂ ಬಿಡ್ಲ್ವಂತೆ.
ಸರಿಹೋಯ್ತು ನೀನೊಬ್ಬಳು ಬಾಕಿ ಇದ್ದೆ. ಮಕ್ಕಳು ಓದೋದು ಇರುತ್ತೆ ಅದು ಮಾಡ್ಲಿ. ಟಿವಿ ನೇ ನೋಡ್ಕೊಂಡು ಕೂತ್ರೆ ಆಗುತ್ತಾ. ಸರಿ ಇನ್ನೇನು ಸಮಾಚಾರ ಯಜಮಾನ್ರು ಹೇಗಿದಾರೆ ಅದು ಹೇಳು ಮೊದ್ಲು. ಮಗರಾಯ ಹೇಗಿದಾನೆ ಹೇಗೆ ಓದುತಿದ್ದಾನೆ.
ನಾವೆಲ್ಲ ಚೆನ್ನಾಗಿದ್ದೀವಿ, ನಿಮ್ಮದೇ ನನಗೆ ಯೋಚನೆ ಆರೋಗ್ಯ ನೋಡಿಕೊಳ್ಳೋಲ್ಲ ಸರಿಯಾಗಿ, ತೀರ ಮಲಗಿಬಿಟ್ರೆ ಕಷ್ಟಾ ಅಣ್ಣಾ, ಇನ್ನೊಬ್ಬರು ಎತ್ತಿಇಳಿಸುವ ಹಾಗೆ ಮಾಡಿಕೊಳ್ಳಬೇಡಿ ಆದಷ್ಟು ನಿಮ್ಮ ಕೈನಲ್ಲಿ ಇರುವಾಗ ಆರೋಗ್ಯ ನೋಡಿಕೊಳ್ಳಿ. ಹೋಗಿ ಆಯುರ್ವೇದ ಚಿಕಿತ್ಸೆ ಮಾಡ್ಸಿ, ಅದೇ ಧರ್ಮಸ್ಥಳದ್ದು ಪ್ರಕೃತಿ ಚಿಕಿತ್ಸಾಲಯ ಇದೆಯಲ್ಲಾ, ಅಲ್ಲಿ ಒಂದು ಹತ್ತು ದಿನ ಇದ್ದು ಬನ್ನಿ ಎಲ್ಲಾ ಸರಿ ಹೋಗುತ್ತೆ. ನನ್ನ ಮಾತು ಕೇಳ್ತೀರೋ ಇಲ್ವೋ? ನಾನು ಊರಿಗೆ ಬರೋಷ್ಟರಲ್ಲಿ ನೀವು ಗೆಲುವಾಗಿರ್ಬೇಕು ಆಯ್ತಾ ಏನು?
ಆಯ್ತು ಬಿಡಮ್ಮ, ಹೋಗಿ ಬರ್ತೀನಿ ಮುಂದಿನವಾರ ಹೋಗಿ ಅಡ್ಮಿಟ್ ಆಗ್ತೀನಿ ಸರಿನಾ?
ಹೂ ಸರಿ ಅಮ್ಮನಿಗೆ ಕೊಡಿ ಪೋನ್....
ಏನಂದ್ರಮ್ಮ ನಿಮ್ಮ ಅಪ್ಪಾ...
ಏನಿಲ್ಲಮ್ಮ ನಾ ಹೇಳಿದ್ದೀನಿ ಈಗೆಲ್ಲಾ, ಮೊನ್ನೆ ನೀ ಹೇಳಿದ್ದಲ್ಲ ಪ್ರಕೃತಿ ಚಿಕಿತ್ಸಾಲಯಕ್ಕೆ ಮುಂದಿನವಾರ ಹೋಗ್ತೀನಿ ಅಂದಿದಾರೆ.
ಏನೋ ತಾಯಿ ನಿನ್ ಮಾತಿಂದ ಆದ್ರು ನಿಮ್ಮ ಚಿಕಿತ್ಸೆ ತಗೊಂಡು ಬಂದ್ರೆ ಸಾಕು....
ನಾನು ಹೇಳಿದ್ದೀನಿ ಸರಿಯಾಗಿ ಅವ್ರು ಹೋಗಿ ಬಂದೇ ಬರ್ತಾರೆ ಬಿಡಮ್ಮಾ..!! ಕರೆ ಕಟ್ ಮಾಡಿದೆ ಅದೇ ಮುಂದಿನ ವಾರ ೧೦ದಿನಗಳ ಟ್ರೀಟ್ಮೆಂಟ್ ಕೂಡ ಆಯ್ತು.
-ಸುಗುಣಾ ಮಹೇಶ್