ಜೀವನದಲ್ಲಿ ಸಂಸಾರದ ನೊಗವ ಹೊತ್ತು ಸಾಗುವ ಅಪ್ಪ-ಅಮ್ಮಂದಿರು, ತಾವು ಹೆತ್ತ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಿಡುತ್ತಾರೆ. ಜನ್ಮ ನೀಡುವುದರ ಜೊತೆಗೆ ಜೀವನಕ್ಕೆ ಒಂದು ಭದ್ರ ಬುನಾದಿಯನ್ನೂ ಕೊಡುವ ಇವರಿಗಾಗಿ ವರ್ಷದಲ್ಲಿ ಒಂದು ದಿನ ನೀಡುವ ಇಂತಹ ‘ಸಾಂಕೇತಿಕ’ ಕಾರ್ಯಕ್ರಮಗಳು, ಸಂಭ್ರಮಕ್ಕಿಂತ ನಮ್ಮ ಇಂದಿನ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದೇ ನನ್ನ ನಂಬಿಕೆ. ಕಾಲದ ವೇಗದೊಂದಿಗೆ ರೇಸಿಗೆ ಬಿದ್ದಂತೆ ಬದುಕುತ್ತಿರುವ ಇಂದಿನ ಪೀಳಿಗೆಯು, ಜೀವನದ ಸಾರ್ಥಕತೆಯನ್ನು ಮತ್ತೆಲ್ಲೋ ಹುಡುಕುತ್ತಿದ್ದೇವೆಯೇನೋ ಎಂಬ ಅನುಮಾನ ಸದಾ ಕಾಡುತ್ತಲೇ ಇರುತ್ತದೆ. ಈ ಕಾಡುವಿಕೆಯೇ ನಮಗೆ, ನಮ್ಮ ಸುತ್ತಲೂ ನಾವು ಬೆಸೆದುಕೊಂಡಿರುವ ಸಂಬಂಧಗಳಲ್ಲಿ ಸಾರ್ಥಕತೆಯನ್ನು ಹುಡುಕಲು ಅಂಜಿಕೆ ಮೂಡಿಸುತ್ತದೆ. ಈ ಸಂಬಂಧವೆಂಬ ಸುಳಿಗಳ ನಡುವೆ ಕಳೆದುಹೋಗುತ್ತಾ, ಕಟ್ಟಿಕೊಳ್ಳ ಬಯಸುತ್ತಿರುವ ಜೀವನವೆಂಬ ಅಮೂರ್ತ ರೂಪಕ್ಕಾಗಿ ಓಡುತ್ತಿರುವ ಓಟದಲ್ಲಿ ಇತರರಿಗಿಂತ ಎಲ್ಲಿ ಹಿಂದೆ ಉಳಿದುಬಿಡುತ್ತೇವೋ ಎಂಬ ಭಯದ ಪ್ರಭೆಯನ್ನು ನಮ್ಮ ಸುತ್ತಲೂ ಕಟ್ಟಿಕೊಂಡಿರುವುದೇ ಇದಕ್ಕೆ ಕಾರಣವೆನ್ನಬಹುದು. ಯಾಕೆಂದರೆ ನಮ್ಮನ್ನು, ನಮ್ಮ ಜೀವನ, ಸಾಧನೆ, ಆರ್ಥಿಕ ಸ್ವಾವಲಂಬನೆಯಲ್ಲಿ ನಾವೆಲ್ಲಿದ್ದೇವೆಂದು ನಿರ್ಧರಿಸಲು ನಾವು ನಮ್ಮ ಮುಂದಿರಿಸಿಕೊಂಡಿರುವ ಮಾನದಂಡ ಈ ‘ಇತರರು’.
ಈ ‘ಇತರರ’ ಮೂಲಕ ನಮ್ಮ ಜೀವನದ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನಮಗೆ, ನಮ್ಮ ಜೀವನಕ್ಕೊಂದು ಅರ್ಥವನ್ನು ಕಲ್ಪಿಸಿಕೊಟ್ಟ ಹೆತ್ತವರು ಹಾಗೂ ಅವರ ಚಿಂತನೆಗಳು ಯಾವಾಗಲೂ ಔಟ್‌ಡೇಟೆಡ್ ಎಂದನಿಸುತ್ತಿರುತ್ತವೆ. ಒಂದು ಕಾಲದಲ್ಲಿ ಗಾಢವಾಗಿ ಹಾಗೂ ಕೆಲವೊಂದು ವಿಷಯಗಳಲ್ಲಿ ಈಗಲೂ ನನ್ನಲ್ಲಿ ಆ ಭಾವನೆಯ ತೆಳು ಪದರ ಹಾಗೇ ಉಳಿದುಕೊಂಡಿದೆ. ಈ ರೀತಿಯ ಭಾವನೆ ನನ್ನಲ್ಲಿ ಮೂಡಲು ಕಾರಣ ನಾನು ಅವರಿಗಿಂತ ಹೆಚ್ಚು ತಿಳಿದವನು, ಹೆಚ್ಚು ಓದಿಕೊಂಡಿರುವವನು ಎಂಬ ಅಹಮ್ಮು ಕಾರಣವೆಂದೇ ಹೇಳುತ್ತೇನೆ. ಈ ‘ಗಾಢ’ತೆಯಿಂದ ‘ತೆಳು’ಪದರದೆಡೆಗೆ ಬದಲಾವಣೆ ಏಕಾಏಕಿ ಆದದ್ದಲ್ಲಾ. ಅಥವಾ ಯಾವುದೋ ಪುಸ್ತಕ ಕಲಿಸಿಕೊಟ್ಟಿದ್ದೂ ಅಲ್ಲ. ನಮ್ಮ ಸಮಾಜದಲ್ಲಿ ಒಂದು ಹೇಳಿಕೆ ಇದೆ, ಬೆಳೆದ ಮಗ ತನ್ನ ಜವಾಬ್ದಾರಿ ಅರಿಯುವುದು, ಎರಡು ಕಾರಣಗಳಿಂದಂತೆ. ಒಂದು ಅಪ್ಪ ತೀರಿಕೊಂಡಾಗ ಅಥವಾ ಅಪ್ಪನಾದವನು ತನ್ನ ಜವಾಬ್ದಾರಿ ಮರೆತಾಗ. ನನ್ನ ವಿಷಯದಲ್ಲಿ ಮೊದಲನೆಯದು ಘಟಿಸಿತು. ನನ್ನಪ್ಪ ನನ್ನನ್ನು ಬಿಟ್ಟು ಹೋದಾಗ ನಾನು ಕಣ್ಣ ತುಂಬ ಕನಸುಗಳನ್ನು ತುಂಬಿಕೊಂಡು ಎಲ್ಲೂ ನೆಲೆ ನಿಲ್ಲದೆ ಅಲೆಯುತ್ತಿದ್ದ ದಿನಗಳವು. ಹೀಗೆ ಅಲೆಯಲು ಬೇಕಾದ ಎಲ್ಲಾ ಸ್ವಾತಂತ್ರ್ಯವನ್ನೂ ಅವರು ನನಗೆ ನೀಡಿದ್ದರು. ಈ ಸ್ವಾತಂತ್ರ್ಯಕ್ಕೆ ಬುನಾದಿ ಚಿತ್ರಕಲೆಗೆ ಸೇರಿದ ಮೊದಲನೆಯ ವರ್ಷಕ್ಕೇ ದೊರೆತಿದ್ದರೂ ಸಹ, ಆ ಸ್ವಾತಂತ್ರ್ಯದ ರುಚಿ ಹತ್ತಿದ್ದು ವ್ಯಾಸಂಗದ ಅವಧಿ ಮುಗಿದ ನಂತರವೇ.
ಕಾಲೇಜು ದಿನಗಳಿಂದಲೇ ನನ್ನ ಖರ್ಚಿಗೆ ನಾನು ದುಡಿದು ಕೊಳ್ಳುವುದು ಕಲಿತಿದ್ದೆನಾದ್ದರಿಂದ, ಕಾಲೇಜು ಮುಗಿದ ನಂತರ ದುಡಿಮೆ ಎನ್ನುವುದು ನನಗೆ ಒಂದು ಸಮಸ್ಯೆಯಾಗಿ ಕಾಣಲೇ ಇಲ್ಲ. ತಿಂಗಳ ಸಂಬಳ ಎಂಬ ಕಾನ್ಸೆಪ್ಟೇ ನನಗೆ ಇರುಸು-ಮುರುಸು ತರಿಸುತ್ತಿತ್ತು. ಕಾರಣ ನನ್ನೆದುರಿಗೆ ನನ್ನಪ್ಪ ಉದಾಹರಣೆಯಾಗಿ ನಿಂತಿದ್ದರು. ತಿಂಗಳ ಪೂರ್ತಿ ಪರಿಚಯದ ಚಿಲ್ಲರೆ ಅಂಗಡಿಯಲ್ಲಿ ರೇಷನ್‌ಗೆ ಲೆಕ್ಕ ಇರಿಸುವುದು, ಮನೆ ನಿರ್ವಹಣೆಗೆ ವಾರಕ್ಕೆ ಇಂತಿಷ್ಟು, ಚೀಟಿ ಕಟ್ಟಲು, ಸಾಲಗಾರರಿಗೆ, ಅತ್ಯವಸರಕ್ಕೆ ಮಕ್ಕಳ ಓದಿಗೆ, ಹಬ್ಬ ಹರಿದಿನಗಳಿಗೆ ಹೀಗೆ ಮಾಸಾರಂಭದಲ್ಲಿ ಬರುವ ಸಂಬಳ ಹರಿದು ಹಂಚಿ ಹೋಗುತ್ತಿತ್ತು. ಈ ಲೆಕ್ಕಾಚಾರ ಸ್ವಲ್ಪ ತಪ್ಪಿದರೂ ಮತ್ತೆ ಸಾಲ. ಮುಂದಿನ ತಿಂಗಳಿನ ಸಂಬಳದಲ್ಲಿ ಅದನ್ನು ಸರಿದೂಗಿಸಲು ಮತ್ತಷ್ಟು ಲೆಕ್ಕಾಚಾರ. ಇಂತಹ ಮಧ್ಯಮ ವರ್ಗದ ಫಾರ್ಮೆಟ್ ನನಗೆ ಆಗುವುದಿಲ್ಲ. ಫ್ರೀಲಾನ್ಸ್‌ರಾಗಿ ದುಡಿಯುತ್ತಾ ಕನಸುಗಳನ್ನು ಪೂರೈಸಿಕೊಳ್ಳುವುದೆ ನನಗೆ ಸರಿ ಹೊಂದುತ್ತೆ ಎಂಬ ಲೆಕ್ಕಾಚಾರ ಹಾಕಿಕೊಂಡು ಬದುಕುತ್ತಿದ್ದೆ ಅದಕ್ಕಾಗಿ ರಾತ್ರಿಯೆನ್ನದೇ ಹಗಲೆನ್ನದೇ ಕೆಲಸ ಮಾಡುತ್ತಿದ್ದೆ. ಆದರೆ ಅಪ್ಪ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದ ಶಿಸ್ತಿನಲ್ಲಿ ಒಂದು ಪರ್ಸೆಂಟ್ ಕೂಡ ನನಗೆ ನನ್ನ ಜೀವನ ನಿರ್ವಹಿಸಿಕೊಳ್ಳಲಾಗಲಿಲ್ಲ. ಇಂದಿಗೂ ಸಹ. ನನಗೆ ಅಪ್ಪ ಯಾವ ಜವಾಬ್ದಾರಿಯನ್ನೂ ಕೊಡದೆ ನಿನಗೆ ಏನು ಸರಿ ಅನ್ನಿಸುತ್ತದೆಯೋ ಅದನ್ನು ಮಾಡು. ಮನೆಯ ಬಗ್ಗೆ ಯೋಚಿಸ ಬೇಡ ಎಂಬ ಮಾತನ್ನು ನಾನು ಎದೆಗುಂದುತ್ತಿದ್ದ ಪ್ರತಿ ಹಂತದಲ್ಲೂ ಹೇಳುತ್ತಿದ್ದರು. ಅವರು ಎಂದಿಗೂ ಮನೆ ಜವಾಬ್ದಾರಿ ತಗೋ, ಹಣ ಸಂಪಾದಿಸಿ ಕೊಡು ಎಂದು ಯಾವತ್ತೂ ಹೇಳಿದ್ದಿಲ್ಲ. ಅದರ ಬದಲಿಗೆ ಬೆಳೆದ ಮಗ ಮಧ್ಯಾಹ್ನ ೧೨ ಘಂಟೆಯಾದರೂ ಮಲಗೇ ಇದ್ದರೆ, ಕಾಲ್ ಮಾಡಿ ಎಬ್ಬಿಸಿ, ಊಟ ಮಾಡಿ ಬಂದು ಮಲಗು ಎಂದು ಹೇಳುತ್ತಿದ್ದರು. ನಾನು ನನ್ನ ಕನಸುಗಳ ಬಗ್ಗೆ ಅಂದರೆ ಹಣ ಮಾಡುವುದು, ಸಿನೆಮಾ ಮಾಡುವುದು, ಊರಲ್ಲಿ ಮನೆ ಕಟ್ಟುವುದರ ಬಗ್ಗೆ ಹೇಳಿದಾಗಲೆಲ್ಲಾ ಉಡಾಫೆಯಾಗಿ ತಳ್ಳಿ ಹಾಕುತ್ತಿದ್ದರು. ಹೇಳಿದ್ದನ್ನೆಲ್ಲಾ ಪೂರ್ತಿಯಾಗಿ ಕೇಳಿಸಿಕೊಂಡು, ನಾನಿರೋವಾಗ ಯಾಕೋ ಇಷ್ಟು ಕಷ್ಟ ಪಡಬೇಕು, ಆರಾಮಾಗಿ ನನ್ನ ಕಣ್ಣೆದುರಿಗೆ ಬಂದು ಇದ್ದುಬಿಡು. ಇದ್ದಷ್ಟು ದಿನ ನಾನೇ ನಿನ್ನ ಚೆನ್ನಾಗಿ ನೋಡ್ಕೋತೀನಿ ಅಂತ ಹೇಳೋರು. ಆಗೆಲ್ಲಾ ಹರೆಯದ ಆವೇಶ ಉಕ್ಕಿ, ನನಗೆ ನೀನು ಕೊಡೋದೇನು ಬೇಡ ನನ್ನ ನೋಡ್ಕೊಳ್ಳೊದು ನನಗೆ ಗೊತ್ತು ಎಂದು ರೇಗುತ್ತಿದ್ದೆ. ಆಗ ಅಪ್ಪ ನನ್ನ ಮಾತುಗಳನ್ನು ಉಡಾಫೆಯಾಗಿ ಸ್ವೀಕರಿಸುತ್ತಿದ್ದಾರೆ ಎಂಬ ಆವೇಶ ಬರುತ್ತಿದ್ದಿದ್ದು ಎಷ್ಟು ನಿಜವೋ.. ಅವರು ನನ್ನ ಬಿಟ್ಟು ಹೋದ ನಂತರ ಆ ಉಡಾಫೆಯ ಹಿಂದಿದ್ದ ಪ್ರೀತಿ, ಕಾಳಜಿ ಅರ್ಥವಾಗಿ ಮನಸ್ಸು ಅವರಿಗಾಗಿ ಪರಿತಪಿಸಿದ್ದು ನಿಜ.
ನಾನು ಆಯ್ದುಕೊಂಡಿದ್ದ ಹಾದಿಯಲ್ಲಿ ಎದುರಾಗುವ ತೊಡರುಗಳ ಬಗ್ಗೆ ನನಗೇ ಇಲ್ಲದ ಸ್ಪಷ್ಟತೆ ಅಪ್ಪನಿಗಿತ್ತು ಎಂದು ಈಗೀಗ ಅನುಭವಕ್ಕೆ ಬರುತ್ತಿದ್ದೆ. ಕನಸಿನ ಹಿಂದೆ ಬಿದ್ದು ರಾತ್ರಿ ಹಗಲೆನ್ನದೆ, ವೇಳೆಗೆ ಸರಿಯಾಗಿ ಊಟ ಮಾಡದೆ, ಊರಿಂದೂರಿಗೆ ಅಲೆದಾಡುತ್ತಿದ್ದ ನನಗೆ, ನಾಲ್ಕು ಜನರ ಮುಂದೆ ಅಪ್ಪ ನನ್ನ ಬಗ್ಗೆ ಹೆಮ್ಮೆಯಾಗಿ ಹೇಳಿಕೊಳ್ಳುವಂತ ಕೆಲಸ ಮಾಡಬೇಕೆನ್ನುವ ಹಟ ಮಾತ್ರ ತಲೆತುಂಬ ತುಂಬಿಕೊಂಡಿತ್ತು, ಆ ಹ್ಯಾಂಗೋವರ್ ಅಲ್ಲಿ ಅಪ್ಪನ ಕಾಳಜಿ, ಅಪ್ಪನ ಫೋನ್ ಕಾಲ್ ಎರಡನ್ನೂ ಅವಾಯ್ಡ್ ಮಾಡಿದೆ. ತೀರಾ ದುರ್ಬಲನಾದಾಗ ಮಾತ್ರ ಅಪ್ಪನ ಬಳಿ ಹೇಳಿಕೊಳ್ಳುತ್ತಿದ್ದೆ. ಆಗ ಅಪ್ಪನದೂ ಅದೇ ಮಾತು ಇದೆಲ್ಲಾ ಬಿಟ್ಟು ಬಂದ್ಬಿಡೋ, ನಾನು ನಿನ್ನ ನೋಡ್ಕೋತೀನಿ. ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡಿ ಕಣ್ಮುಂದೆ ಚೆನ್ನಾಗಿದ್ದರೆ ಅಷ್ಟೇ ಸಾಕು ನನಗೆ ಎಂದು ಬಹು ಅಕ್ಕರೆಯಿಂದ ಅಪ್ಪನಿಗಿಂತ ಹೆಚ್ಚಾಗಿ ಒಬ್ಬ ಜೀವದ ಗೆಳೆಯನಂತೆ ಹೇಳುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ನನಗೆ ಅಪ್ಪಾನೆ ಹೀರೋ, ಅಪ್ಪಾನೇ ಆದರ್ಶ, ಅಪ್ಪನಂತೆ ಗತ್ತಿನಲ್ಲಿರಬೇಕು, ಅಪ್ಪನಂತೆ ದೊಡ್ಡ ಧ್ವನಿಯಲ್ಲಿ ಎಲ್ಲರ ಮೇಲೂ ಹಿಡಿತ ಸಾಧಿಸಬೇಕು, ಅಪ್ಪನನ್ನು ಕಂಡರೆ ಉಳಿದವರು ಹೆದರಿದಂತೆ ನಾನೂ ಹೆದರಿಸಬೇಕು ನಮ್ಮಪ್ಪನ ಮುಂದೆ ಯಾರೂ ಏನಿಲ್ಲ, ನಮ್ಮಪ್ಪಜೀನೇ ಗ್ರೇಟ್ ಎಂಬ ಭಾವನೆ ಇತ್ತು. ಆದರೆ ಬೆಳೆದಂತಲ್ಲಾ ಅಪ್ಪ ಬೇರೆಯವರಿಗಿಂತ ತೀರಾ ಸಾಮಾನ್ಯ, ಸಾಮಾನ್ಯನಿಗಿಂತ ಕಡಿಮೆ, ಅಪ್ಪ ತುಂಬಾ ದುರ್ಬಲ, ಅಪ್ಪ ತನ್ನ ಮೇಲಾಧಿಕಾರಿಗಳಿಗೆ ಹೆದರುತ್ತಾರೆ, ಛೇ.. ಇವರಂತೆ ಮಾತ್ರ ಆಗಬಾರದು ಎಂಬ ಹಂತಕ್ಕೆ ನನ್ನ ಆದರ್ಶಗಳು ಛಿದ್ರವಾಗಿ ಹೋಗಿದ್ದವು.
ಆದರೆ ನಾನು ಚಿತ್ರಕಲೆ ಕಲಿಯಲು ಬೆಂಗಳೂರಿಗೆ ಬಂದ ನಂತರ ಅಂದರೆ ಅಪ್ಪನಿಂದ ದೂರವಾಗಿ ಸ್ವಂತ ಬದುಕು ರೂಪಿಸಿಕೊಳ್ಳುವ ಹಾದಿಯಲ್ಲಿ ಅಂಬೆಗಾಲಿಡುವಾಗ ನನಗೆ ಮತ್ತೆ ಆದರ್ಶವಾಗಿ ಮುನ್ನಡೆಸಿದ್ದು ಇದೇ ಅಪ್ಪನ ಬದುಕು. ಊರಲ್ಲಿ ಪಟೇಲು ಮನೆತನ, ರೆಡ್ಡಿಗಿರಿ, ಅಧಿಕಾರ ಎಲ್ಲವೂ ಇದ್ದರೂ ತಾನು ಯಾರ ಹಂಗಲ್ಲೂ ಬದುಕಬಾರದೆಂಬ ಛಲ ತೊಟ್ಟು ಹದಿನಾರನೆಯ ವಯಸ್ಸಿಗೆ ಮನೆ ಬಿಟ್ಟ ಅಪ್ಪ, ತಮ್ಮ ಇಡೀ ಜೀವನ ಸಂಸಾರ ತಾವಾಗೇ ರೂಪಿಸಿಕೊಂಡವರು, ತೀರಾ ಸಾಮಾನ್ಯವಾದ ದಿನಗೂಲಿ ನೌಕರನಾಗಿ ಪ್ರಾರಂಭಿಸಿದ ಬದುಕು, ನಾನಾ ಹಂತದ ಕಷ್ಟಗಳನ್ನು ಎದುರಿಸಿ ಜೀವನಕ್ಕೊಂದು ಆಧಾರವಾಗಿ ಸರ್ಕಾರಿ ಇಲಾಖೆಯಲ್ಲಿ ಅಟೆಂಡರ್ ಕೆಲಸವನ್ನು ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಒಬ್ಬ ಅಟೆಂಡರಾಗಿ ಮೂರು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯ ನಿರ್ವಹಣೆ ಅಷ್ಟು ಸುಲುಭವಲ್ಲಾ. ಅದಕ್ಕಾಗಿ ಅವರು ಅಡುಗೆ ಭಟ್ಟನಾಗಿ ತಮ್ಮ ಜೀವನದ ಬಹು ಪಾಲು ರಾತ್ರಿಗಳನ್ನು ಮದುವೆ ಸಮಾರಂಭಗಳಲ್ಲಿ ಕಳೆದುಬಿಟ್ಟರು.
ಹೀಗೆ ಕಷ್ಟ ಪಟ್ಟು ತಾವು ರೂಪಿಸಿಕೊಂಡ ಜೀವನದಲ್ಲಿ ವಿಶ್ರಾಂತಿಯ ಬದುಕನ್ನು ತನ್ನ ಹುಟ್ಟೂರಿನಲ್ಲಿ, ಆರಾಮಾಗಿ ಕಳೆಯಬೇಕೆಂದು ಬಯಸುತ್ತಾ, ಆ ದಿನಗಳಿಗಾಗಿ ಎದುರು ನೋಡುತ್ತಿರುವಾಗಲೇ, ಕಾಲ ತನ್ನಾಟವನ್ನು ಬದಲಿಸಿ ಬಿಟ್ಟ. ವಿಶ್ರಾಂತಿ ಪಡೆಯುವ ಮುನ್ನವೇ ಚಿರಶಾಂತಿಯೆಡೆಗೆ ಕಳಿಸಿಬಿಟ್ಟ. ಇಂತಹ ಅಪ್ಪನಂತೆ ತನ್ನ ಬದುಕನ್ನು ರೂಪಿಸಿಕೊಳ್ಳಲು ಹೊರಟ ನನಗೆ ಅಪ್ಪ ಬಿಟ್ಟು ಹೋದನಂತರ ಒಂದು ಮುಖ್ಯವಾದ ವಿಷಯದ ಬಗ್ಗೆ ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು. ಅದು ತಾನು ತನ್ನ ಕುಟುಂಬ. ಅಪ್ಪ ಎಷ್ಟೇ ಕಷ್ಟ ಪಡುತ್ತಿದ್ದರೂ ಅದನ್ನು ಆ ಒತ್ತಡವನ್ನು ಎಂದಿಗೂ ಮನೆಯವರ ಮೇಲೆ ಹೇರಲೇ ಇಲ್ಲ. ಅದನ್ನು ತನ್ನೊಳಗೆ ತಾನೇ ಅನುಭವಿಸಿದ. ಕುಟುಂಬದ ಜೊತೆಗೆ ಕಳೆಯಲು ಸಿಗುತ್ತಿದ್ದ ಸಮಯವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳಲೇ ಇಲ್ಲ. ಸಾಧ್ಯವಾದಷ್ಟೂ ನಾವೆಲ್ಲರೂ ಕೂಡುತ್ತಿದ್ದ ದಿನವನ್ನು ವಿಶೇಷ ದಿನವನ್ನಾಗಿ ಸಂಭ್ರಮಿಸುತ್ತಿದ್ದ. ಈಗಿನ ಜಂಜಡದ ಬದುಕಿನಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಇರಿಟೇಟ್ ಆಗುವ, ಕೋಪಗೊಳ್ಳುವ ನನ್ನ ಸ್ವಭಾವವನ್ನು ಸಾಧ್ಯವಾದಷ್ಟೂ ಹತೋಟಿಗೆ ತಂದುಕೊಳ್ಳಲು ನನಗೆ ಅಪ್ಪನೇ ಆದರ್ಶವಾಗುತ್ತಾನೆ. ಆ ಐದು ವರ್ಷಗಳಿಗೂ ಮೊದಲು ನಾನು ಮೊಬೈಲ್ ತೆಗೆದುಕೊಂಡಾಗಿನಿಂದ ಅಂದರೆ ೨೦೦೪ರಿಂದ ಪ್ರತಿ ದಿನವೂ ಮೂರು ಬಾರಿ ಕರೆ ಮಾಡಿ ಮಾತಾಡುವ, ಆ ಮೂಲಕ ನನ್ನ ಬಗ್ಗೆ ವಿಚಾರಿಸಿಕೊಳ್ಳುವುದನ್ನು ಯಾವತ್ತೂ ತಪ್ಪಿಸದೇ ಮಾಡುತ್ತಿದ್ದರು. ಈ ಐದು ವರ್ಷಗಳ ನಂತರ ಅವರು ನಮ್ಮನ್ನು ಭೌತಿಕವಾಗಿ ಅಗಲಿದರೂ ಮಾನಸಿಕವಾಗಿ ಒಂದಲ್ಲ ಒಂದು ರೂಪದಲ್ಲಿ, ಪ್ರತಿ ದಿನವೂ ಜೊತೆಯಾಗಿ ಮುನ್ನಡೆಸುತ್ತಲೇ ಬಂದಿರುವುದಕ್ಕೇ ಸಾಕ್ಷಿ ನನ್ನ ಈಗಿನ ಸಾಧನೆ ಈ ಪ್ರಶಸ್ತಿ. ಅವರಿಲ್ಲದೇ ನನಗೆ ಅಸ್ತಿತ್ವವೇ ಇಲ್ಲ. ಹಾಗಾಗಿ ಪ್ರತಿ ದಿನವೂ ನನಗೆ ಅಪ್ಪನ ದಿನವೇ.
-ಮಂಸೋರೆ ( ಮಂಜುನಾಥ ಸೋಮಕೇಶವ ರೆಡ್ಡಿ)
ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಪ್ರಾದೇಶಿಕ ಚಿತ್ರ 'ಹರಿವು' ನಿರ್ದೇಶಕರು.