ಮಗನೊಂದಿಗೆ ಸಿ ಜಿ ಸುಬ್ರಮಣ್ಯ 
ಅಪ್ಪನ ಖುಷಿ

ನಾ ಅಪ್ಪನಾದ ಆ ದಿನ

ಬಸ್ಸು ಆಸ್ಪತ್ರೆಯ ಬಳಿಯೇ ಇಳಿದು ಓಡೋಡುತ್ತಾ ಹೋದೆ ನನಗೆ ಮೊದಲು ಪತ್ನಿಯನ್ನು ನೋಡಿ ಒಂದು ಸಾರೀ ಮತ್ತು ಒಂದು ಥ್ಯಾಂಕ್ಸ್ ಹೇಳುವುದಿತ್ತು...

ಸುಮಾರು ಐದು ವರುಷದ ಕೆಳಗೆ...
ಅಂದು 2010 ಸೆಪ್ಟೆಂಬರ್ ಹದಿನೇಳನೆ ತಾರೀಖು ಗುರುವಾರ, ಬೆಳಿಗ್ಗೆ ಎಂದಿನಂತೆ ರೆಡಿ  ಆಗಿ ಆಫೀಸ್ ಗೆ ಹೋಗಿ ಕೆಲಸ ಮಾಡುತ್ತ ಕುಳಿತ್ತಿದ್ದೆ. ಹತ್ತು ಗಂಟೆಯ ಸಮಯ ಮೊಬೈಲ್  ರಿಂಗಾಗ ತೊಡಗಿತು, ತೆಗೆದು ನೋಡಿದೆ ನನ್ನ ಪತ್ನಿಯ ಕರೆ. ಆಕೆ ಶೃಂಗೇರಿ ಆಸ್ಪತ್ರೆಗೆ ಚೆಕ್ ಅಪ್ ಮಾಡಿಸಿಕೊಳ್ಳಲು ಹೊಗುವುದು ತಿಳಿದಿದ್ದರೂ ಸ್ವಲ್ಪ ಆತಂಕದಿಂದಲೇ ಫೋನ್ ಎತ್ತಿದೆ. ಅತ್ತಲಿಂದ ಆಕೆ ಡಾಕ್ಟರ್ ಈಗಲೇ ಅಡ್ಮಿಟ್ ಆಗೋಕೆ ಹೇಳಿದ್ದಾರೆ, ನೀವು ಕೂಡಲೇ ಹೊರಟು ಬರಬೇಕಂತೆ. ನನಗೆ ಒಂದು ರೀತಿಯ ಆತಂಕ, ಹೆರಿಗೆಗೆ ಅವರೇ ಹಿಂದೆ ಹೇಳಿದಂತೆ ಇನ್ನೂ ಸುಮಾರು ಹದಿನೈದು ದಿನಗಳ ಸಮಯವಿತ್ತು. ಆದರೂ ನೀನು ಜೋಕ್ ಮಾಡ್ತಾ ಇದೀಯಾ ಅಂದೇ. ನನ್ನಾಕೆ ಇಲ್ಲ ನಿಜ ಬೇಕಾದರೆ ಅಮ್ಮನನ್ನ ಕೇಳಿ ಎಂದು ಅವರ ಅಮ್ಮನಿಗೆ ಮೊಬೈಲ್ ಕೊಟ್ಟಳು. ಅವರು, ಪೈನ್ ಸ್ಟಾರ್ಟ್ ಆಗ್ತಿದೆ ಇವಾಗ, ಇವತ್ತೇ ಹೆರಿಗೆ ಆಗಬಹುದು ಅಂದಿದ್ದಾರೆ ಅಂದರು. ನನ್ನಾಕೆಗೆ ನಾನು ಈ ಕೂಡಲೇ ಹೊರಟು ಬರುತ್ತೇನೆ ಎಂದು, ಕೂಡಲೇ ಬಾಸ್ ಕೊಟಡಿಗೆ ಗಡಿಬಿಡಿಯಿಂದ ಹೋಗಿ ಹೇಳಿ ಮನೆಗೆ ಗಾಡಿಯಲ್ಲಿ ಹೊರಟೆ. ಆಕೆ ಇದ್ದದ್ದು ಶೃಂಗೇರಿ ಅವರ ತಾಯಿ ಮನೆಯಲ್ಲಿ, ನಾನು ಇಲ್ಲಿ ಬೆಂಗಳೂರಿನಲ್ಲಿ.

ಮನೆಗೆ ಹೋಗಿ ಸೇರಿದವನೇ ಗಡಿಬಿಡಿಯಲ್ಲಿ ಬಟ್ಟೆ ಪ್ಯಾಕ್ ಮಾಡಿಕೊಂಡು ಊರಿಗೆ ಹೊರಟೆ. ಗೊತ್ತಿದ್ದ ಒಂದೆರಡು ಕ್ಯಾಬ್ ಸರ್ವಿಸ್ ಗೆ  ಫೋನ್ ಮಾಡಿದರೆ ಎಲ್ಲ ಎರಡು ಮೂರೂ ಗಂಟೆ ನಂತರ ಕ್ಯಾಬ್ ಸಿಗುವುದಾಗಿ ಹೇಳಿದರು. ನಾನು ಹೇಗೂ ಡಾಕ್ಟರ್ ಈದಿನ ಆದರೂ ಆಗಬಹುದು ಅಂದಿರುವುದನ್ನು ನಂಬಿ ಹೇಗೂ ಸದ್ಯಕ್ಕೆ ಕಾರ್ ಸಿಗುವುದಿಲ್ಲ, ಬಸ್ಸಿನಲ್ಲಿಯೇ  ಹೋಗುವುದು ಎಂದು ತೀರ್ಮಾನಿಸಿ ಹೊರಟೆ. ಪ್ರತಿ ಹತ್ತು ನಿಮಿಶಕ್ಕೊಂದು ಕರೆ ಹೆಂಡತಿಯ ಮೊಬೈಲಿಗೆ ನಾನು ಮಾಡುತ್ತಿದ್ದರೆ ಅತ್ತ ನಮ್ಮ ಮಾವ ಮಾತನಾಡುತ್ತಿದ್ದರು. ಒಮ್ಮೆ ಡಾಕ್ಟರ್ ಸಂಜೆ ಏಳು ಗಂಟೆ ಮೇಲೆ ಆಗಬಹುದು ಎಂದು ಹೇಳಿದ್ದಾರೆ ಎಂದು ಹೇಳಿದರು. ಸಧ್ಯಕ್ಕೆ ಮನಸ್ಸಿಗೆ ನಿರಾಳವಾದರೂ ಏನೋ ಒಂದು ರೀತಿಯ ಕಸಿವಿಸಿ.

ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋದ ನನಗೆ ಸಿಕ್ಕಿದ್ದು ಹಾಸನದ ಬಸ್ಸು. ಯಾವುದಾದರು ಸರಿ ಹಾಸನದಿಂದ ಮತ್ತೊಂದು ಬಸ್ಸು ಹಿಡಿದು ಹೋದರಾಯಿತು ಎಂದು ಹತ್ತಿದೆ. ಹಾಗೆ ಹೊರಟ  ಬಸ್ಸು ಒಂದೊಂದು ಕಿಲೋಮೀಟರ್ ಹೋಗಲೂ ಒಂದೊಂದು ಗಂಟೆ ತೆಗೆದು ಕೊಳ್ಳುತ್ತಿದೆಯೇನೋ ಅನ್ನಿಸುತ್ತಿತ್ತು. ಮಧ್ಯೆ ಮಧ್ಯೆ ಅವರಿವರ ಕರೆ ಬೇರೆ, ಏನಾಯಿತು? ಮಗು ಹುಟ್ಟಿತಾ? ಎಂದು ಕೇಳಿಕೊಂಡು. ತಲೆ ಒಂದೇ ಸಮ ಕೆಡುತ್ತಿತ್ತು. ಜೊತೆಯಲ್ಲಿ ಇನ್ನೊಂದು ತಲೆಬಿಸಿ ಶುರುವಾಯಿತು. ಹಾಸನಕ್ಕೆ ನಾನು ಹೋಗುತ್ತಿರುವ ಬಸ್ಸು 3.30 ಒಳಗೆ ಹೋಗದಿದ್ದರೆ ಅಲ್ಲಿಂದ ಮುಂದೆ ಶೃಂಗೇರಿಗೆ ಡೈರೆಕ್ಟ್ ಬಸ್ಸು ಸಿಗುವುದಿಲ್ಲ. ಈ ಡ್ರೈವರ್ ನೋಡಿದರೆ ನಿಧಾನಕ್ಕೆ ಬಸ್ಸನ್ನ ಚಲಾಯಿಸಿ ಕೊಂಡು ಹೋಗುತ್ತಿದ್ದಾನೆ. ಅಂತ್ತೂ ಕೊನೆಗೆ 3.45ಕ್ಕೆ ಹಾಸನ ನಿಲ್ದಾಣ ತಲುಪಿತು ನನ್ನ ಬಸ್ಸು. ಅಲ್ಲಿ ಬೆಂಗಳೂರು ಬಸ್ಸು ಇಳಿಯುತ್ತಿದ್ದ ಹಾಗೆ ಯಾಕೋ ನನ್ನ ಅದೃಷ್ಟ ಎಂಬಂತೆ ಶೃಂಗೇರಿ ಮೈಸೂರು ಬಸ್ಸು ಸಿಕ್ಕಿತು. ಒಂದು ರೀತಿಯಲ್ಲಿ ಜೀವವೇ ಸಿಕ್ಕಂತಾಯಿತು. ಅಷ್ಟು ಹೊತ್ತಿಗೆ ನನ್ನ ಹೆಂಡತಿಯ ಮೊಬೈಲ್ ಗೆ ಕಡಿಮೆ ಎಂದರೂ ಇಪ್ಪತ್ತೈದು ಕರೆ ಮಾಡಿದ್ದೆ. ಇನ್ನು ಮಗು ಹುಟ್ಟಿಲ್ಲ ಟೈಮ್ ಬೇಕು, ಸಂಜೆಮೇಲೆ ಹೆರಿಗೆ ಆಗುವುದು ಎಂದಿದ್ದಾರೆ ಡಾಕ್ಟರ್ ಎಂದು ಮಾವ ಪ್ರತಿಬಾರಿಯೂ ಹೇಳುತಿದ್ದರು.  

ಅದೋ ಸ್ಕೂಲ್ ಟೈಮ್ ಆಗಿದ್ದರಿಂದ ಪ್ರತಿ ಊರಿನಲ್ಲೂ ನಿಲ್ಲಿಸಿ ಮಕ್ಕಳನ್ನು ಹತ್ತಿಸಿ ಇಳಿಸಿ ಹೋಗುತ್ತಿತ್ತು. ಬೇಲೂರು ದಾಟಿ ಮುಂದೆ ಹೋಗಿ ಇನ್ನೇನು ಚಿಕ್ಕಮಗಳೂರು ತಲುಪಲು ಹತ್ತು ನಿಮಿಷವಿತ್ತು. ಗಂಟೆ ಸುಮಾರು ಆರು ಹದಿನೈದು ಅಷ್ಟರಲ್ಲಿ ಮಾವನವರಿಂದ ಫೋನ್ ಬಂತು. ಎತ್ತುತ್ತಿದ್ದಂತೆ ಅತ್ತಲಿಂದ ಅವರು ಮಗು ಹುಟ್ಟಿದೆ ಈಗಷ್ಟೇ ಆದರೆ ಯಾವ ಮಗು ಎಂದೂ ಹೇಳಿಲ್ಲ. ಗಡಿಬಿಡಿಯಲ್ಲಿ ಕರೆದುಕೊಂಡು ಹೋದರು ಮಗುವನ್ನ ಎಂದು ಹೇಳಿದರು. ಅಷ್ಟೊತ್ತಿಗೆ ಸಿಗ್ನಲ್ ಡ್ರಾಪ್ ಆಗಿ ಫೋನ್ ಡಿಸ್ಕನೆಕ್ಟ್ ಆಯಿತು. ತಲೆಕೆಟ್ಟು ಹುಚ್ಚು ಹಿಡಿಯುವುದೊಂದು ಬಾಕಿ. ಮನಸ್ಸಿನೊಳಗೆ ನಾನು ಅಳುತ್ತಿದ್ದೆ ಏನು ಮಾಡಬೇಕೆಂದು ತೋಚದೆ. ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದೆ ಫೋನ್ ಮಾಡಲು. ಕೊನೆಗೂ ಐದು ನಿಮಿಷಗಳ ನಂತರ ಸಿಗ್ನಲ್ ಸಿಕ್ಕಿತು, ಅತ್ತಲಿಂದ ಮಾವ ಗಂಡು ಮಗುವಂತೆ ಏನೂ ಉರಿರಾಡಲು ಸ್ವಲ್ಪ ತೊಂದರೆಯಾಗಿದ್ದಕ್ಕೆ ಕರೆದುಕೊಂಡು ಹೋಗಿದ್ದಾರೆ ಈಗ ಪರವಾಗಿಲ್ಲವಂತೆ, ನಾರ್ಮಲ್ ಡೆಲಿವರಿ ನನ್ನ ಪತ್ನಿಯೂ ಪರವಾಗಿಲ್ಲವಂತೆ ಎಂದು ಹೇಳಿದರು. ಮನಸ್ಸಿಗೆ ಒಂದು ರೀತಿಯಲ್ಲಿ ನಿರಾಳವಾದರರೂ ಇಂತಹ ಕ್ಷಣದಲ್ಲಿ ನನ್ನಾಕೆಯೊಂದಿಗೆ ಇರಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗು ಒಂದು ಕಡೆ. ಮತ್ತೊಂದು ಕಡೆ ಮಗು ಆರೋಗ್ಯ ಹೇಗಿದೆಯೋ ಎಂಬ ಚಿಂತೆ. ಮತ್ತೊಂದು ಹದಿನೈದು ನಿಮಿಷ ಬಿಟ್ಟು ನನ್ನ ಪತ್ನಿಯೇ ಫೋನ್ ಮಾಡಿ ರೀ ಗಂಡು ಮಗು ಕಣ್ರೀ ನೋಡಿದೆ ಈಗಷ್ಟೇ ಎಂದಳು. ನಾನು ನೀನು ಹೇಗಿದಿಯಾ ಎಂದೇ ಆರಾಮಾಗಿ ಇದ್ದೇನೆ ಎಂದಳು. ಹಾಗೂ ಹೀಗೂ ಬಸ್ಸು ಶೃಂಗೇರಿ ತಲುಪುವ ಹೊತ್ತಿಗೆ ಎಂಟುಗಂಟೆ. ಬಸ್ಸು ಆಸ್ಪತ್ರೆಯ ಬಳಿಯೇ ಇಳಿದು ಓಡೋಡುತ್ತಾ ಹೋದೆ ನನಗೆ ಮೊದಲು ಪತ್ನಿಯನ್ನು ನೋಡಿ ಒಂದು ಸಾರೀ ಮತ್ತು ಒಂದು ಥ್ಯಾಂಕ್ಸ್ ಹೇಳುವುದಿತ್ತು. ಆಕೆಯನ್ನು ನೋಡುತ್ತಿದ್ದಂತೆ ಹತ್ತಿರ ಹೋಗಿ ಕೈ ಹಿಡಿದು ಕುಳಿತುಬಿಟ್ಟೆ ಮಾತು ಬಾರದೆ. ನಮ್ಮಿಬ್ಬರ ಮನಸ್ಸುಗಳು ಮಾತನಾಡುತ್ತಿದ್ದವು. ಮಗು ಆಕೆಯ ಪಕ್ಕದಲ್ಲಿ ಇರಲಿಲ್ಲ, ಮಾವನವರ ಕಡೆ ತಿರುಗಿ ಕೇಳಬೇಕು ಎನ್ನುವಷ್ಟರಲ್ಲಿ ಬಾಗಿಲ ಬಳಿ ನರ್ಸ್ ಮಗು ಎತ್ತಿಕೊಂಡು ಹಾಲು ಕುಡಿಸಲು ಬರುತ್ತಿದ್ದರು. ಈಕೆ ಅಂದಳು ನೋಡಿ ನಿಮ್ಮ ಮಗ ಬರುತ್ತಿದ್ದಾನೆ ಎಂದು. ಓಹ್ ಜೀವನದಲ್ಲಿಯೇ ಮರೆಯಲಾಗದ ಕ್ಷಣವದು. ಪಿಳಿ ಪಿಳಿ ಕಣ್ಣು ಬಿಡುತಾ ನರ್ಸ್ ಕೈಯಲಿ ಇದ್ದ ನನ್ನ ಮಗ. ಮನಸ್ಸು ಒಂದು ರೀತಿ ತುಂಬಿ ಕಣ್ಣಿನಿಂದ ನೀರು ಜಿನುಗಲಾರಮ್ಬಿಸಿತ್ತು. ನಾನು ತಂದೆಯಾಗಿದ್ದೆ. ಎಂದೂ ಒಂದು ವರ್ಷಕ್ಕಿಂತ ಚಿಕ್ಕಮಕ್ಕಳನ್ನು ಎತ್ತಿಕೊಳ್ಳದ ನಾನು ನನ್ನ ಮಗುವನ್ನು ಎತ್ತಿಕೊಂಡಿದ್ದೆ. ಎಲ್ಲಾ ಸುಸೂತ್ರವಾಗಿ ನಡೆಸಿಕೊಟ್ಟ ಅ ದೇವರಿಗೆ ಒಂದು ನಮನ ಮನಸ್ಸಿನಲ್ಲಿಯೇ ಸಲ್ಲಿಸಿದ್ದೆ.  


-ಸಿ ಜಿ ಸುಬ್ರಮಣ್ಯ
೬೭/೪ ಎ ಪಿ ಕೆ ರೋಡ್
ತ್ಯಾಗರಾಜನಗರ ಎರಡನೇ ಬ್ಲಾಕ್
ಬೆಂಗಳೂರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT