ಫ್ರಾನ್ಸ್ ಗೂಳಿ ತಿವಿತಕ್ಕೆ ನೈಜೀರಿಯಾ ನಜ್ಜುಗುಜ್ಜು
ತಮ್ಮೆಲ್ಲ ಅನುಭವ ಪಣಕ್ಕಿಟ್ಟು ಎದುರಾಳಿ ಕೋಟೆಯ ಮೇಲೆ ನಿರಂತರ ದಂಡೆತ್ತಿ ಹೋಗುವ ಮೂಲಕ...
ಬ್ರೆಸಿಲಿಯಾ: ತಮ್ಮೆಲ್ಲ ಅನುಭವ ಪಣಕ್ಕಿಟ್ಟು ಎದುರಾಳಿ ಕೋಟೆಯ ಮೇಲೆ ನಿರಂತರ ದಂಡೆತ್ತಿ ಹೋಗುವ ಮೂಲಕ ಒಂದರ ಮೇಲೊಂದರಂತೆ ಅವಕಾಶಗಳನ್ನು ಹುಡುಕಿಕೊಂಡ ಫ್ರಾನ್ಸ್ ಆಟಗಾರರು ಅಂತಿಮವಾಗಿ ತಕ್ಕ ಫಲವನ್ನೇ ದಕ್ಕಿಸಿಕೊಂಡಿದ್ದಾರೆ. ಎಸ್ಟಾಡಿಯೊ ನ್ಯಾಸಿಯೋನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ 2-0 ಗೋಲುಗಳಿಂದ ನೈಜೀರಿಯಾ ತಂಡದ ವಿರುದ್ಧ ರೋಚಕ ಗೆಲವು ದಾಖಲಿಸಿತು.
ಪಂದ್ಯದ 79ನೇ ನಿಮಿಷದಲ್ಲಿ ಸಂಪರ್ಕ ಆಟಗಾರ ಪಾಲ್ ಪೋಗ್ಬಾ ಹಾಗೂ ಕೊನೆಯ ಘಟ್ಟದಲ್ಲಿ ಗಾಯದ ಹೆಚ್ಚುವರಿ ಸಮಯದ ಆಟದಲ್ಲಿ ನೈಜೀರಿಯಾ ಆಟಗಾರ ಜೋಸೆಫ್ ಯೋಬೊ ಅವರ ಸ್ವಯಂಕೃತ ಅಪರಾಧದಿಂದ ಫ್ರಾನ್ಸ್ ತಂಡಕ್ಕೆ ಎರಡನೇ ಗೋಲು ಲಭಿಸಿತು.
ಪಂದ್ಯ ರೋಚಕವಾಗಿಯೇ ಆರಂಭವಾಯಿತು. ಮೊದಲ ಅವಧಿಯ ಆಟದಲ್ಲಿ ನೈಜೀರಿಯಾ ಆಟಗಾರರು ಫ್ರಾನ್ಸ್ ಮುಂದೆ ಕಠಿಣ ಸವಾಲುಗಳನ್ನು ನಿಲ್ಲಿಸಿ ಚಿಂತೆಗೆ ಗುರಿಪಡಿಸಿದ್ದರು. ಆದರೆ, ಉತ್ತರಾರ್ಧದ ಆಟದಲ್ಲಿ ಮಾತ್ರ ಫ್ರಾನ್ಸ್ ತನ್ನ ಶಕ್ತಿ ಮೆರೆಯತೊಡಗಿತು. ಅದರಲ್ಲೂ ಕೊನೆಯ ಅರ್ಧಗಂಟೆ ಆಟದಲ್ಲಂತೂ ಫ್ರಾನ್ಸ್ ಚೆಂಡನ್ನು ಬಹುತೇಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಎದುರಾಳಿ ಮೇಲೆ ಸತತ ದಾಳಿಗೆ ಮುಂದಾಯಿತು.
ಅತ್ಯುತ್ತಮ ಸಂಘಟಿತ ಆಟ ಪ್ರದರ್ಶಿಸಲಾರಂಭಿಸಿದ ಫ್ರಾನ್ಸ್ ಪಾಲಿಗೆ ಇನ್ನು 11 ನಿಮಿಷಗಳ ಆಟ ಉಳಿದಿರುವಂತೆ ಅದೃಷ್ಟದ ಬಾಗಿಲು ತೆರೆಯಿತು. ತಂಡಕ್ಕೆ ದೊರೆತ ಒಟ್ಟಾರೆ 8ನೇ ಕಾರ್ನರ್ ಅವಕಾಶದಲ್ಲಿ ಮ್ಯಾಥ್ಯೂ ವಲ್ಬುಯೆನಾ ಬಾರಿಸಿದ ಚೆಂಡು ನೈಜೀರಿಯಾ ಗೋಲ್ಕೀಪರ್ ವಿನ್ಸೆಂಟ್ ಎನ್ಯೇಮಾ ಕೈಗೆ ಬಡಿದು ಮೇಲಕ್ಕೆ ಚಿಮ್ಮಿತು. ಆಗ ಗೋಲು ಬಲೆಯ ಸಮೀಪ ಚೆಂಡಿಗಾಗಿ ಹೊಂಚು ಹಾಕುತ್ತಿದ್ದ ಪಾಲ್ ಪೋಗ್ಬಾ ಆಕರ್ಷಕವಾಗಿ ಹೆಡ್ ಮಾಡುವ ಮೂಲಕ ಅದನ್ನು ಬಲೆಯೊಳಕ್ಕೆ ಬಾರಿಸಿ ಫ್ರಾನ್ಸ್ಗೆ ಮೊದಲ ಸಫಲತೆ ದೊರಕಿಸಿಕೊಟ್ಟರು.
ಇನ್ನು ಗಾಯದ ಹೆಚ್ಚುವರಿ ಸಮಯದ ಆಟದಲ್ಲಿ ಕಾರ್ನರ್ ಕಿಕ್ ಅವಕಾಶದಲ್ಲಿ ವಲ್ಬುಯೇನಾ ಅವರು ಚೆಂಡನ್ನು ಕರೀಂ ಬೆಂಜೆಮಾ ಅವರತ್ತ ನೂಕಿದರು. ಆಗ ಬೆಂಜೆಮಾ ಗೋಲಿನ ಬಲೆಯ ಸಮೀಪವಿದ್ದ ತಮ್ಮ ಆಟಗಾರನ್ನು ರಭಸವಾಗಿ ಬಾರಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನೈಜೀರಿಯಾ ಗೋಲ್ಕೀಪರ್ ನಿನ್ಸೆಂಟ್ ಹಾಗೂ ಜೋಸೆಫ್ ಯೋಬೊ ಎದುರಾಳಿ ತಂಡದ ಗೋಲು ಗಳಿಕೆಯ ಪ್ರಯತ್ನವನ್ನು ವಿಫಲಗೊಳಿಸಲು ಯತ್ನಿಸಿದರು. ಆದರೆ, ಚೆಂಡು ಯೋಬೊ ಕಾಲಿಗೆ ಬಡಿದು ಗುರಿ ಸೇರುವ ಮೂಲಕ ಫ್ರಾನ್ಸ್ ಆಟಗಾರರ ಸಂಭ್ರಮಕ್ಕೆ ಪಾರವೇ ಇಲ್ಲದಾಯಿತು. ಮತ್ತೊಂದೆಡೆ ನೈಜೀರಿಯಾ 2014ರ ವಿಶ್ವಕಪ್ ಫುಟ್ಬಾಲ್ಗೆ ಗುಡ್ಬೈ ಹೇಳುವಂತಾಯಿತು.
ಪಂದ್ಯದಲ್ಲಿ ಫ್ರಾನ್ಸ್ ಆಟಗಾರರು ಪ್ರತಿಶತ 54ರಷ್ಟು ಹಿಡಿತ ಸಾಧಿಸಿದ್ದರು. ಇನ್ನು ನೈಜೀರಿಯಾ ಆಟಗಾರರು ಮೊದಲ ಅವಧಿಯಲ್ಲಿ ಎದುರಾಳಿಗೆ ಉತ್ತಮ ರೀತಿಯಲ್ಲಿ ಸಡ್ಡು ಹೊಡೆದು ನಿಂತಿದ್ದರಾದರೂ, ಎರಡನೇ ಅವಧಿಯಲ್ಲಿ ಮಾತ್ರ ಫ್ರಾನ್ಸ್ ಆಟಗಾರರ ನಿರಂತರ ದಾಳಿಯನ್ನು ತಡೆಯುವಲ್ಲಿಯೇ ತಮ್ಮೆಲ್ಲ ಶ್ರಮ ವಿನಿಯೋಗಿಸುವಂತಾಯಿತು. ಹಾಗೆ ನೋಡಿದರೆ, ಫ್ರಾನ್ಸ್ ತಂಡ ಇನ್ನೂ ಎರಡು ಗೋಲುಗಳನ್ನು ಸಂಪಾದಿಸಬಹುದಾಗಿತ್ತು. ಆದರೆ, ಚೆಂಡು ಗೋಲು ಪೆಟ್ಟಿಗೆಗೆ ಬಡಿದು ಹೊರನುಸುಳುವುದರೊಂದಿಗೆ ಕೂದಲೆಳೆ ಅಂತರದಲ್ಲಿ ಗೋಲುಗಳು ಕೈತಪ್ಪಿ ಹೋಗುವಂತಾಯಿತು.