ಹಾಲೆಂಡ್ ಗೆದ್ದರೆ ಗಗನಯಾತ್ರೆ ಭಾಗ್ಯ!
ದಿ ಹೇಗ್ (ಹಾಲೆಂಡ್): ಲೀಗ್ ಹಂತದಿಂದಲೇ ಅದ್ಭುತ ಪ್ರದರ್ಶನ ನೀಡುತ್ತಿರುವ ರನ್ನರ್ ಅಪ್ ಹಾಲೆಂಡ್ ತಂಡ ಈ ಬಾರಿ ವಿಶ್ವಕಪ್ ಗೆದ್ದರೆ, ಇಡೀ ತಂಡಕ್ಕೆ ಗಗನಯಾತ್ರೆ ಮಾಡುವ ಭಾಗ್ಯ ದೊರಕಲಿದೆ.
ಹಾಲೆಂಡ್‌ನ ಬಾಹ್ಯಾಕಾಶಯಾನ ಎಂಜಿನಿಯರಿಂಗ್ ಕಂಪನಿಯೊಂದು ಈ ಕುರಿತು ಭರವಸೆ ನೀಡಿದೆ. ಕಳೆದ ಮೂರು ಆವೃತ್ತಿಗಳಲ್ಲಿ ರನ್ನರ್ ಅಫ್ ಆಗಿದ್ದ ಹಾಲೆಂಡ್ ತಂಡ ಈ ಬಾರಿಯ ಪಂದ್ಯಾವಳಿಯಲ್ಲಿ ವಿಶ್ವಕಪ್ ಗೆಲ್ಲದೇ ತವರಿಗೆ ಮರಳುವುದಿಲ್ಲ ಎಂಬ ಹಠದಲ್ಲಿರುವಂತೆ ಪ್ರದರ್ಶನ ನೀಡತೊಡಗಿದೆ. ವಿಶ್ವದ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಟಗಾರರನ್ನು ಹುರಿದುಂಬಿಸಲು ಇಂತಹ ಭರವಸೆಯನ್ನು ನೀಡಲಾಗಿದೆ. ವಿಶ್ವಕಪ್ ಗೆಲ್ಲಲು ಆಟಗಾರರಿಗೆ ಇದಕ್ಕಿಂತ ದೊಡ್ಡ ಪ್ರೊತ್ಸಾಹದ ಭರವಸೆ ಇನ್ನೊಂದಿಲ್ಲ ಎನಿಸುತ್ತಿದೆ.
ಹಾಲೆಂಡ್ ಬಾಹ್ಯಾಕಾಶಯಾನ ಎಂಜಿನಿಯರಿಂಗ್ ಕಂಪನಿಯಾದ 'ರುಮ್ಟೆವಾರ್ಟಬೆಡ್ರಿಜಿ ಎಸ್‌ಎಕ್ಸ್‌ಸಿ' ಈ ಭರವಸೆಯನ್ನು ನೀಡಿದೆ. ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟರೆ, ಪಂದ್ಯಾವಳಿಯಲ್ಲಿ ಭಾಗವಹಿಸಿರುವ ತಂಡದ 23 ಸದಸ್ಯರನ್ನೂ ಗಗನಕ್ಕೆ ಕರೆದೊಯ್ಯುದಾಗಿ ಕಂಪನಿ ತಿಳಿಸಿದೆ. ಪಂದ್ಯಾವಳಿಯಿಂದ ಹೊರಬಿದ್ದ ಸ್ಪೇನ್ ವಿರುದ್ಧ ಹಾಲೆಂಡ್‌ನ ರಾಬಿನ್ ವ್ಯಾನ್ ಪರ್ಸಿ ಅವರು ಗೋಲು ದಾಖಲಿಸಿದ ಸ್ಫೂರ್ತಿಯ ಹಿನ್ನೆಲೆಯಲ್ಲಿ ಈ ಭರವಸೆಯನ್ನು ನೀಡಲಾಗಿದೆ. 'ಹಾಲೆಂಡ್ ಮೂಲದ ಕಂಪನಿಯಾಗಿ, ಬ್ರೆಜಿಲ್‌ನಲ್ಲಿ ನಮ್ಮ ತಂಡ ನೀಡುತ್ತಿರುವ ಪ್ರದರ್ಶನ ನಮಗೆ ಹೆಮ್ಮೆ ತಂದಿದೆ. ಇಂತಹ ಪ್ರದರ್ಶನ ನೀಡುತ್ತಿರುವ ನಮ್ಮ ತಂಡ ಪ್ರಶಸ್ತಿ ಗೆಲ್ಲಲು ಅರ್ಹವಾಗಿದೆ. ಹೀಗಾಗಿ ನಾವು ನಮ್ಮ ತಂಡ ವಿಶ್ವಕಪ್ ಗೆದ್ದರೆ ಬಾಹ್ಯಾಕಾಶದಲ್ಲಿ 130 ಕಿ.ಮೀ! ಎತ್ತರಕ್ಕೆ ಕರೆದುಕೊಂಡು ಹೋಗಲು ಯತ್ನಿಸುತ್ತೇವೆ' ಎಂದು ಎಸ್‌ಎಕ್ಸ್‌ಸಿ ಕಂಪಿನಿ ಸಹ ಮಾಲೀಕ ಮೈಖೆಲ್ ಮೋಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.