ಉತ್ತಮ ಚೇತರಿಕೆಯಲ್ಲಿ ನೇಮಾರ್
ಟೆರೆಸೊಪೊಲಿಸ್: ಬ್ರೆಜಿಲ್ ತಂಡದ ಸ್ಟಾರ್ ಪ್ರತಿಭೆ ಹಾಗೂ ತವರು ಅಭಿಮಾನಿಗಳ ಹೀರೊ ನೇಮಾರ್ ತೊಡೆ ಮತ್ತು ಮಂಡಿ ನೋವಿನಿಂದ ಉತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಹೆಚ್ಚಳವಾಗಿದೆ.
ಭಾರತೀಯ ಕಾಲಮಾನದಂತೆ ಬರುವ ಶನಿವಾರ ನಸುಕಿನಲ್ಲಿ ನಡೆಯಲಿರುವ ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ಆಟಗಾರರು ಕೊಲಂಬಿಯಾ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯಕ್ಕಾಗಿ ನೇಮಾರ್ ಅತ್ಯುತ್ತಮ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬ್ರೆಜಿಲ್ ತಂಡದ ವೈದ್ಯರು ತಿಳಿಸಿದ್ದಾರೆ. ಚಿಲಿ ವಿರುದ್ಧ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತೊಡೆ ಹಾಗೂ ಮಂಡಿ ನೋವಿಗೆ ಗುರಿಯಾಗಿದ್ದ ಮುನ್ಪಡೆ ಆಟಗಾರ ನೇಮಾರ್, ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ಬಾರ್ಸಿಲೋನಾ ಕ್ಲಬ್ ಆಟಗಾರ ನೇಮಾರ್, ಬ್ರೆಜಿಲ್ನ ಟೆರೆಸೊಪೊಲಿಸ್ ತರಬೇತಿ ಕೇಂದ್ರದಲ್ಲಿ ತಮ್ಮ ನೋವಿಗೆ ಸೂಕ್ತ ಚಿಕಿತ್ಸೆ ಪಡೆದಿದ್ದು, ಸಕಾರಾತ್ಮಕವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಂಡದ ವೈದ್ಯ ಡೋಸ್ ಲೂಯಿಜ್ ರುಂಕೊ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸದ್ಯ ಬ್ರೆಜಿಲ್ ತಂಡದ ಇತರೆ ಆಟಗಾರರು ಕ್ವಾರ್ಟರ್ಫೈನಲ್ ಪಂದ್ಯಕ್ಕಾಗಿ ಒಳಾಂಗಣ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸಕ್ಕೆ ಅಣಿಯಾಗಿದ್ದಾರೆ. ಆದರೆ, ಆತಿಥೇಯ ತಂಡದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿಲ್ಲ ಎಂದು ಬ್ರೆಜಿಲ್ನ ಮಾಧ್ಯಮಗಳು ಟೀಕಿಸಿವೆ. ಈ ವರದಿಗಳನ್ನು ರುಂಕೊ ಅಲ್ಲಗಳೆದಿದ್ದಾರೆ.