ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಯುಎಸ್‌ಗೆ ಬೆಲ್ಜಿಯಂ ಬಾಸ್

ಗೋಲ್ ಕೀಪರ್ ಟಿಮ್ ಹೊವರ್ಡ್ ಅವರ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ, ಅಮೆರಿಕಾ ಫಿಫಾ...

Rashmi Kasaragodu
Updated On : 3 Jul 2014, 12:48 pm

ಸಲ್ವಾಡೊರ್: ಗೋಲ್ ಕೀಪರ್ ಟಿಮ್ ಹೊವರ್ಡ್ ಅವರ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ, ಅಮೆರಿಕಾ ಫಿಫಾ ವಿಶ್ವಕಪ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸೋಲನುಭವಿಸಿದೆ.
ಬುಧವಾರ ನಸುಕಿನ ಸಮಯದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡ ಅಮೆರಿಕ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿದೆ. ಈ ಮೂಲಕ ಅಮೆರಿಕ ವಿಶ್ವಕಪ್‌ನಲ್ಲಿ ತಮ್ಮ ಹೋರಾಟಕ್ಕೆ ತೆರೆ ಎಳೆದಿದೆ.
ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೊನೆ ಕ್ಷಣದ ನಾಟಕೀಯ ತಿರುವು ಮುಂದುವರಿದಿದ್ದು, ಈ ಪಂದ್ಯವು ಸಹ ಹೆಚ್ಚುವರಿ ಸಮಯದಲ್ಲಿ ಫಲಿತಾಂಶ ಪಡೆದಿದೆ. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಪ್ರಬಲ ಪೈಪೋಟಿ ನಡೆಸಿದರೂ ಗೋಲು ದಾಖಲಾಗಲಿಲ್ಲ. ಹಾಗಾಗಿ ಪಂದ್ಯ ಹೆಚ್ಚುವರಿ ಸಮಯ ಪಡೆಯಬೇಕಾಯಿತು. ಈ ವೇಳೆ ಅಮೆರಿಕ ವಿರುದ್ಧ ಪ್ರಭುತ್ವ ಸಾಧಿಸುವಲ್ಲಿ ಯಶಸ್ವಿಯಾದ ಬೆಲ್ಜಿಯಂ ತಂಡ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ, ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಿತು. ಈಗ ಬೆಲ್ಜಿಯಂ ತಂಡ, ಅಂತಿಮ ಎಂಟರ ಘಟ್ಟದ ಹಣಾಹಣಿಯಲ್ಲಿ ಅರ್ಜೆಂಟೀನಾ ವಿರುದ್ಧ ಕಾದಾಟ ನಡೆಸಲಿದೆ.
ಬೆಲ್ಜಿಯಂ ತಂಡದ ಪರ ಕೆವಿನ್ ಡೆ ಬ್ರ್ಯೂನೆ 93ನೇ ನಿಮಿಷದಲ್ಲಿ ದಾಖಲಿಸಿದ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಇದಾದ ಕೆಲವೇ ಹೊತ್ತಿನಲ್ಲಿ 105ನೇ ನಿಮಿಷದಲ್ಲಿ ರೊಮೆಲು ಲುಕಾಕು ಅವರು ಗೋಲು ದಾಖಲಿಸುವ ಮೂಲಕ ಬೆಲ್ಜಿಯಂ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿತು. ನಂತರ ಹೆಚ್ಚುವರಿ ಸಮಯದ ಎರಡನೇ ಅವಧಿಯಲ್ಲಿ ಹೋರಾಟದ ಪ್ರದರ್ಶನ ನೀಡಲು ಅಮೆರಿಕ ಪ್ರಯತ್ನಿಸಿತು. 107ನೇ ನಿಮಿಷದಲ್ಲಿ ಅಮೆರಿಕದ ಜೂಲಿಯನ್ ಗ್ರೀನ್ ಗೋಲು ದಾಖಲಿಸುವ ಮೂಲಕ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಆದರೆ ನಂತರ ಬೆಲ್ಜಿಯಂ ತಂಡ ಎಚ್ಚೆತ್ತ ಪರಿಣಾಮ ಮತ್ತೊಂದು ಗೋಲು ದಾಖಲಿಸಲು ಅಮೆರಿಕಾಕ್ಕೆ ಸಾಧ್ಯವಾಗದೇ ಸೋಲೊಪ್ಪಿಕೊಳ್ಳುವಂತಾಯಿತು.
ವ್ಯರ್ಥವಾದ ಟಿಮ್ ವಿಶ್ವದಾಖಲೆ: ಈ ಪಂದ್ಯದಲ್ಲಿ ಅಮೆರಿಕ ಸೋತು, ಬೆಲ್ಜಿಯಂ ತಂಡ ಗೆಲವು ಸಾಧಿಸಿತಾದರೂ ಪಂದ್ಯದಲ್ಲಿ ಹೀರೋ ಆಗಿ ಮೆರೆದಿದ್ದು ಮಾತ್ರ ಅಮೆರಿಕಾದ ಗೋಲ್‌ಕೀಪರ್ ಟಿಮ್ ಹೊವರ್ಡ್.
ಕಾರಣ ಟಿಮ್ ಈ ಪಂದ್ಯದಲ್ಲಿ ಒಟ್ಟು 15 ಗೋಲುಗಳನ್ನು ತಡೆಯುವ ಮೂಲಕ ಅಮೆರಿಕ ತಂಡಕ್ಕೆ ಆಸೆರೆಯಾಗಿ ನಿಂತರು.
ಟಿಮ್ ಅಮೆರಿಕ ತಂಡವನ್ನು ಸೋಲಿನಿಂದ ಪಾರು ಮಾಡಲು ಅತ್ಯದ್ಭುತ ರೀತಿಯಲ್ಲಿ ಪ್ರದರ್ಶನ ನೀಡಿದರು, ತಂಡದ ರಕ್ಷಣಾತ್ಮಕ ವಿಭಾಗದಲ್ಲಿ ನೀರಸ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು.
ಅಮೆರಿಕ ತಂಡದ ಸೋಲಿಗೆ ವ್ಯಾಪಕ ಟೀಕೆಗಳು ವ್ಯಕ್ತವಾದರೂ, ಟಿಮ್ ಹೊವರ್ಡ್ ಅವರನ್ನು ಅಮೆರಿಕಾ ತಂಡದಲ್ಲಿ ಹೊಂದಲು ಹೆಮ್ಮೆಯಾಗುತ್ತಿದೆ ಎಂದು ತಂಡದ ಮ್ಯಾನೇಜರ್ ಜುರ್ಗನ್ ಕ್ಲಿನ್ಸ್‌ಮನ್ ಪ್ರಶಂಶಿಸಿದ್ದಾರೆ.
ಪಂದ್ಯದ ಬಹುತೇಕ ಸಮಯದಲ್ಲಿ ಚೆಂಡು ಅಮೆರಿಕದ 'ಡಿ' ಆವರಣದಲ್ಲೇ ಸಾಗಿತು.     ಆದರೆ, ಟಿಮ್ ಹೊವರ್ಡ್ ಅವರ ಅತ್ಯದ್ಭುತ ಪ್ರದರ್ಶನದ ನೆರವಿನಿಂದ ಅಮೆರಿಕ ಕೇವಲ 2 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟು, ಹೀನಾಯ ಸೋಲಿನಿಂದ ಪಾರಾಯಿತು.


ಕ್ವಾರ್ಟರ್‌ಫೈನಲ್ ಸುತ್ತು




ಜುಲೈ 4    ಫ್ರಾನ್ಸ್-ಜರ್ಮನಿ       ರಿಯೋ ಡಿ ಜನೈರೊ       ಸಮಯ-ರಾತ್ರಿ 9.30
ಜುಲೈ 5    ಬ್ರೆಜಿಲ್-ಕೊಲಂಬಿಯಾ        ಫೋರ್ಟಲೆಜಾ       ಸಮಯ-ನಸುಕಿನ 1.30
    ಅರ್ಜೆಂಟೀನಾ-ಬೆಲ್ಜಿಯಂ        ಬ್ರೆಸಿಲಿಯಾ       ಸಮಯ-ರಾತ್ರಿ 9.30
ಜುಲೈ 6      ಹಾಲೆಂಡ್-ಕೋಸ್ಟ ರಿಕಾ         ಸಲ್ವಾಡೊರ್       ಸಮಯ-ನಸುಕಿನ 1.30

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement