ಮೆಸ್ಸಿ ಬಣದ ಮ್ಯಾಜಿಕ್ಗೆ ತಲೆದೂಗಿದ ಡಾರ್ಕ್ ಹಾರ್ಸ್
ಬ್ರೆಸಿಲಿಯಾ: ಆರಂಭದಲ್ಲೇ ದೊರೆತ ಯಶಸ್ಸಿನ ಸ್ಫೂರ್ತಿಯೊಂದಿಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದೆ ಸಾಗಿದ ಅರ್ಜೆಂಟೀನಾ ಆಟಗಾರರು ಅಂತಿಮವಾಗಿ ನಿರೀಕ್ಷಿತ ಗುರಿ ಸೇರುವುದರೊಂದಿಗೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸ ಇಮ್ಮುಡಿಗೊಳಿಸಿಕೊಂಡಿದ್ದಾರೆ.
ಎಸ್ಟಾಡಿಯೊ ನ್ಯಾಸಿಯೊನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಏಕೈಕ ಗೋಲಿನಿಂದ ಬೆಲ್ಜಿಯಂ ತಂಡದ ವಿರುದ್ಧ ಜಯಭೇರಿ ಬಾರಿಸಿ ಅಂತಿಮ ಎಂಟರಘಟ್ಟಕ್ಕೆ ಪ್ರವೇಶ ಪಡೆಯಿತು. ಇದರೊಂದಿಗೆ ಅರ್ಜೆಂಟೀನಾ 1990ರ ನಂತರ ಮತ್ತೊಮ್ಮೆ ಸೆಮಿಫೈನಲ್ ತಲುಪಿತು. ಅರ್ಜೆಂಟೀನಾ ತಂಡಕ್ಕೆ ಆರಂಭದಲ್ಲೇ ಅದೃಷ್ಟ ಕೈಹಿಡಿಯಿತು. ಆಟ ಪ್ರಾರಂಭವಾಗಿ 8 ನಿಮಿಷಗಳು ಕಳೆಯುವಷ್ಟರಲ್ಲಿ ಮುನ್ನಡೆಯ ಭಾಗ್ಯ ಕಂಡುಕೊಂಡಿತು. ಸಂಪರ್ಕ ಆಟಗಾರ ಆ್ಯಂಗೆಲ್ ಡಿ ಮಾರಿಯಾ ನೀಡಿದ ಪಾಸ್ನಲ್ಲಿ ಮುನ್ಪಡೆ ಆಟಗಾರ ಗೋಂಜಾಲೊ ಹಿಗ್ವೆನ್ ಅವರು ತುಂಬ ಬುದ್ಧಿವಂತಿಕೆಯಿಂದ ಬೆಲ್ಜಿಯಂ ತಂಡದ ಗೋಲ್ಕೀಪರ್ ಥಿಬೌಟ್ ಕೊರ್ಟೊಯಿಸ್ ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸಿ ಅರ್ಜೆಂಟೀನಾಕ್ಕೆ ಸಫಲತೆ ತಂದುಕೊಟ್ಟರು.
ಇದರಿಂದ ಸ್ಫೂರ್ತಿಗೊಂಡ ಅರ್ಜೆಂಟೀನಾ ಆಟಗಾರರು ಕೊನೆಯವರೆಗೂ ಎಚ್ಚರಿಕೆಯಿಂದ ಮುನ್ನಡೆಯುವ ಮೂಲಕ ಯಾವುದೇ ಅಪಾಯ ತಂದುಕೊಳ್ಳದೇ ಗೆಲವಿನ ಕೇಕೆ ಹಾಕಿದರು.
ಪಂದ್ಯದಲ್ಲಿ ಪ್ರತಿಶತ 48 ರಷ್ಟು ಹಿಡಿತ ಹೊಂದಿದ್ದ ಅರ್ಜೆಂಟೀನಾ ಉತ್ತಮ ಪ್ರದರ್ಶನ ನೀಡಿ ಗೆಲವು ದಾಖಲಿಸಿದರೂ ಸಹ ಗೋಲುಗಳಿಕೆಯ ಸುಮಾರು ಮೂರು ಸುಲಭವಾಗಿದ್ದ ಅವಕಾಶಗಳಲ್ಲಿ ವೈಫಲ್ಯ ಅನುಭವಿಸಿ ಕೊಂಚ ನಿರಾಸೆಗೂ ಒಳಗಾಯಿತು. ಪಂದ್ಯದ 27ನೇ ಮತ್ತು 55ನೇ ನಿಮಿಷದಲ್ಲಿ ಹಿಗ್ವೆನ್ ಹಾಗೂ ಕೊನೆಯ ಘಟ್ಟದಲ್ಲಿ ನಾಯಕ ಲಯೋನೆಲ್ ಮೆಸ್ಸಿ ಗೋಲುಗಳಿಸುವ ಹಾದಿಯಲ್ಲಿದ್ದರು. ಒಂದು ಹಂತದಲ್ಲಿ ಇದು ಸಾಧ್ಯವೇ ಎನಿಸಿತ್ತು. ಆದರೆ, ಚೆಂಡು ಗೋಲುಬಲೆಯ ಸ್ವಲ್ಪದರಲ್ಲಿಯೇ ಹಾದು ಹೋಗಿ ಅರ್ಜೆಂಟೀನಾಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು. ಮತ್ತೊಂದೆಡೆ ಡಾರ್ಕ್ ಹಾರ್ಸ್ ಆಗಿ ಕಣಕ್ಕಿಳಿದಿದ್ದ ಬೆಲ್ಜಿಯಂ ತಂಡಕ್ಕೂ ಅವಕಾಶಗಳು ದೊರೆತಿದ್ದು, ಯಶಸ್ಸು ಕಾಣಲಿಲ್ಲ.
ಅರ್ಜೆಂಟೀನಾ -1
ಗೋಂಜಾಲೊ ಹಿಗ್ವೆನ್ (8ನೇ ನಿಮಿಷ)
ಬೆಲ್ಜಿಯಂ -0