ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಬ್ರೆಜಿಲ್ಗೆ ನೇಮಾರ್ನದ್ದೇ ಚಿಂತೆ; ಲಾಭದ ಲೆಕ್ಕಾಚಾರದಲ್ಲಿ ಜರ್ಮನಿ

ವಿಶ್ವಕಪ್ ಫುಟ್ಬಾಲ್ ಇತಿಹಾಸದ ಎರಡು ಪ್ರಬಲ ತಂಡಗಳಾದ ಬ್ರೆಜಿಲ್ ಮತ್ತು ಜರ್ಮನಿ ಪಂದ್ಯಾವಳಿಯ...

Rashmi Kasaragodu
Updated On : 8 Jul 2014, 2:33 am

ಬೆಲೊ ಹಾರಿಜಾಂಟ್: ವಿಶ್ವಕಪ್ ಫುಟ್ಬಾಲ್ ಇತಿಹಾಸದ ಎರಡು ಪ್ರಬಲ ತಂಡಗಳಾದ ಬ್ರೆಜಿಲ್ ಮತ್ತು ಜರ್ಮನಿ ಪಂದ್ಯಾವಳಿಯ 20ನೇ ಆವೃತ್ತಿಯ ಮೊದಲ ಸೆಮಿಫೈನಲ್ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಎಸ್ಟಾಡಿಯೊ ಮಿನೇರಾವ್ ಕ್ರೀಡಾಂಗಣದಲ್ಲಿ ಬುಧವಾರ ನಸುಕಿನಲ್ಲಿ ನಡೆಯಲಿರುವ 2014ರ ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಎದುರಾಗಲಿರುವ ಈ ಎರಡೂ ತಂಡಗಳು ಜಾಗತಿಕ ಫುಟ್ಬಾಲ್ನಲ್ಲಿ ತಮ್ಮ ಸಾಮ್ರಾಜ್ಯ ಕಟ್ಟುವ ಆಸೆ ಉಳಿಸಿಕೊಳ್ಳಲು ಭರ್ಜರಿ ಕಾಳಗಕ್ಕೆ ಸಿದ್ಧವಾಗಿ ನಿಂತಿವೆ.
ಈ ಮುನ್ನ 2002ರ ವಿಶ್ವಕಪ್ ಫೈನಲ್ನಲ್ಲಿ ಉಭಯ ತಂಡಗಳು ಸೆಣಸಿದ್ದವು. ಇಲ್ಲಿ ಬ್ರೆಜಿಲ್ ತಂಡ 2-0 ಗೋಲುಗಳಿಂದ ಜರ್ಮನಿಯನ್ನು ಮಣಿಸಿ ಒಟ್ಟಾರೆ 5ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿತ್ತು. ವಿಶ್ವಖ್ಯಾತ ಗೋಲ್ಕೀಪರ್ ಜರ್ಮನಿಯ ಓಲಿವರ್ ಖಾನ್ ಮಾಡಿದ ತಪ್ಪಿನಿಂದಾಗಿ ಲೂಯಿಜ್ ಫೆಲಿಪ್ ಸ್ಕೊಲಾರಿ ಗರಡಿಯಲ್ಲಿ ಪಳಗಿದ್ದ ಬ್ರೆಜಿಲ್ಗೆ ಪ್ರಶಸ್ತಿ ಒಲಿದುಬಂದಿತ್ತು. ತದನಂತರ ಈಗ ಮತ್ತೊಮ್ಮೆ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವ ಈ ತಂಡಗಳು ಗೆಲ್ಲುವ ಛಲ ಹೊಂದಿವೆ. ಆದರೆ, ಈ ಬಾರಿ ಯಾವುದೇ ರೀತಿಯ ತಪ್ಪು ಆಗದಂತೆ ಜರ್ಮನಿ ತಂಡ ಹೆಚ್ಚು ಎಚ್ಚರವಹಿಸಿದೆ.
ಆದರೆ, ಆತಿಥೇಯ ಬ್ರೆಜಿಲ್ ತಂಡಕ್ಕೆ ಈಗ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದರ ಸ್ಟಾರ್ ಆಟಗಾರ ನೇಮಾರ್ ಗಾಯಗೊಂಡು ಹೊರಗುಳಿದಿರುವುದು ಕೊಲಂಬಿಯಾ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದ ವೇಳೆ ಎದುರಾಳಿ ಆಟಗಾರ ಮೈಮೇಲೆ ಬಿದ್ದ ಪರಿಣಾಮ ಬೆನ್ನಿನ ಕೆಳಭಾಗದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿರುವ ನೇಮಾರ್ ವಿಶ್ವಕಪ್ನ ಮುಂದಿನ ಪಂದ್ಯಗಳಿಂದ ಹೊರಗುಳಿದಿರುವುದು ಬ್ರೆಜಿಲ್ ಪಾಲಿಗೆ ತುಂಬಲಾರದ ನಷ್ಟ ಎಂಬಂತಾಗಿದೆ.
ಆದರೂ, ಸ್ಕೊಲಾರಿಯಂತಹ ತಜ್ಞ ಕೋಚ್ ಇರುವುದರಿಂದ ಬ್ರೆಜಿಲ್ ಭಯ ಪಡುವ ಅಗತ್ಯವಿಲ್ಲ. ಅದೇ ರೀತಿ ತಂಡದ ಉಳಿದ ಆಟಗಾರರೂ ಸಹ ಉತ್ತಮ ಕಾಲ್ಚಳಕ ತೋರುತ್ತಿರುವುದು ಆತಿಥೇಯ ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣ. ಹಾಗಾಗಿ ಈಗಾಗಲೇ ಐದು ಬಾರಿ (1958, 1962, 1970, 1994, 2002) ಪ್ರಶಸ್ತಿ ಸಂಪಾದಿಸಿರುವ ಬ್ರೆಜಿಲ್, ದಾಖಲೆಯ ಆರನೇ ಬಾರಿಯೂ ಈ ಸಾಧನೆ ಮಾಡುವ ಉತ್ತಮ ಅವಕಾಶವನ್ನು ಹೊಂದಿದೆ. ಇದಕ್ಕೆ ಸ್ಫೂರ್ತಿ ಎಂಬಂತೆ ತವರು ಅಂಗಣ, ವಾತಾವರಣದ ಲಾಭ ಕೂಡ ಅದಕ್ಕಿದೆ.  
ಮತ್ತೊಂದೆಡೆ ಸತತ ನಾಲ್ಕು ಬಾರಿ ಸೆಮಿಫೈನಲ್ ಪ್ರವೇಶಿಸಿದ ದಾಖಲೆ ಹೊಂದಿರುವ ಜರ್ಮನಿ ತಂಡದ ಆಟಗಾರರು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಜರ್ಮನಿ ಪಡೆ ಗೋಲು ಗಳಿಸುವಲ್ಲಿ ಎತ್ತಿದ ಕೈ. ಕಳೆದ ಮೂರು ವಿಶ್ವಕಪ್ಗಳಿಂದ ಜರ್ಮನಿ ತಂಡ ಒಟ್ಟು 40 ಗೋಲುಗಳನ್ನು ಸಂಪಾದಿಸಿದ್ದು ಇದಕ್ಕೆ ಸಾಕ್ಷಿ.
ಮೂರು ಬಾರಿ ವಿಶ್ವಕಪ್ ಟ್ರೋಫಿ (1954, 1974, 1990ರಲ್ಲಿ) ತನ್ನದಾಗಿಸಿಕೊಂಡಿರುವ ಜರ್ಮನಿ, ಕಳೆದ ಮೂರು ವಿಶ್ವಕಪ್ಗಳಲ್ಲಿನ ಕಹಿ ಮರೆತು ಮತ್ತೆ ಫೈನಲ್ ತಲುಪಿ ಪ್ರಶಸ್ತಿ ಗೆದ್ದುಕೊಳ್ಳುವ ಅದೃಷ್ಟ ತನ್ನದಾಗಿಸಿಕೊಳ್ಳಲು ಹೊಂಚು ಹಾಕಿದೆ. ಹಾಗಾಗಿ, ಜಾಗತಿಕ ಫುಟ್ಬಾಲ್ನ ಈ ಎರಡು ಶಕ್ತಿಶಾಲಿ ತಂಡಗಳ ನಡುವಿನ ಕದನ ಹೆಚ್ಚು ಕುತೂಹಲ ಕೆರಳಿಸಿದೆ ಎಂತಲೇ ಹೇಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement