ಮೆಸ್ಸಿ ತಂತ್ರ ವಿಫಲಕ್ಕೆ ಡಚ್ ಹೊಸ ಸ್ಕೆಚ್
ಈಗ ಎಲ್ಲರ ಚಿತ್ತ ಲಯೊನೆಲ್ ಮೆಸ್ಸಿ ಮೇಲೆ ನೆಟ್ಟಿದೆ. ಹಾಗೆಯೇ, ಹಾಲೆಂಡ್ ಆಟಗಾರರು ಮೆಸ್ಸಿ...
ಸಾವೊ ಪೌಲೊ: ಈಗ ಎಲ್ಲರ ಚಿತ್ತ ಲಯೊನೆಲ್ ಮೆಸ್ಸಿ ಮೇಲೆ ನೆಟ್ಟಿದೆ. ಹಾಗೆಯೇ, ಹಾಲೆಂಡ್ ಆಟಗಾರರು ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಫೈನಲ್ ತಲುಪುವುದಕ್ಕೆ ಅಡ್ಡಗಾಲು ಹಾಕುವರೇ ಎಂಬ ವಿಶ್ಲೇಷಣೆಯಲ್ಲಿ ಫುಟ್ಬಾಲ್ ಪಂಡಿತರು ತೊಡಗಿದ್ದಾರೆ.
ಎರೆನಾ ಡಿ ಸಾವೊ ಪೌಲೊ ಕ್ರೀಡಾಂಗಣದಲ್ಲಿ ಗುರುವಾರ ನಸುಕಿನಲ್ಲಿ ನಡೆಯಲಿರುವ 2014ರ ಫಿಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ಶಿಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಹಾಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಅರ್ಜೆಂಟೀನಾ 1990ರಲ್ಲಿ ಫೈನಲ್ ತಲುಪಿತ್ತು. ತದನಂತರ ಮತ್ತೆ ಆ ಸಾಧನೆ ಮಾಡಲು ವಿಫಲವಾಗಿದೆ. ಆದರೆ, ಈ ಬಾರಿ ಮತ್ತೆ ಆ ಆಸೆ ಹೆಚ್ಚಿಸಿಕೊಂಡಿರುವ ಅರ್ಜೆಂಟೀನಾ ಆಟಗಾರರು ಹಾಲೆಂಡ್ಗೆ ಸೋಲುಣಿಸಿ ಪ್ರಶಸ್ತಿಯ ಸನಿಹ ಸಾಗುವ ವಿಶ್ವಾಸದಲ್ಲಿದ್ದಾರೆ.
ಆದರೆ, ಒಂದು ರೀತಿಯಲ್ಲಿ ಹಾಲೆಂಡ್ ತಂಡ ವಿಶ್ವಕಪ್ ಪುಟ್ಬಾಲ್ ಇತಿಹಾಸದಲ್ಲಿ ನತದೃಷ್ಟ ಎಂತಲೇ ಹೇಳಬಹುದು. ಏಕೆಂದರೆ, 1974, 1978 ಮತ್ತು 2010ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಸಹ ಈ ಮೂರು ಬಾರಿ ರನ್ನರ್ ಅಪ್ ಪ್ರಶಸ್ತಿಗಷ್ಟೇ ತೃಪ್ತಿ ಹೊಂದಬೇಕಾಗಿತ್ತು. ಕಳೆದ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಪ್ರಶಸ್ತಿ ಸುತ್ತಿನ ಮುಖಾಬಲದಲ್ಲಿ ಸ್ಪೇನ್ ವಿರುದ್ಧ ಗೆದ್ದು ಚಾಂಪಿಯನ್ಪಟ್ಟ ಅಲಂಕರಿಸುವ ಉತ್ತಮ ಅವಕಾಶವನ್ನು ಹಾಲೆಂಡ್ ಹೊಂದಿತ್ತು. ಆದರೆ, ಮೊದಲೇ ಹೇಳಿದಂತೆ ಅದೃಷ್ಟ ಡಚ್ ಆಟಗಾರರಿಗೆ ಸಾಥ್ ನೀಡಲಿಲ್ಲ. ಅರ್ಜೆಂಟೀನಾ ತಂಡದ ಕೋಚ್ ಅಲೆಜಾಂಡ್ರೊ ಸಬೆಲ್ಲಾ ತಮ್ಮ ಆಟಗಾರರನ್ನು ಸೆಮಿಫೈನಲ್ ಹೋರಾಟಕ್ಕಾಗಿ ಉತ್ತಮ ರೀತಿಯಲ್ಲಿಯೇ ಪಳಗಿಸಿದ್ದಾರೆ. ಮುನ್ಪಡೆ ವಿಭಾಗದಲ್ಲಿ ನಾಯಕ ಮೆಸ್ಸಿ ಹೊರತಾಗಿ ಗೋಂಜಾಲೊ ಹಿಗ್ವೆನ್ ಮತ್ತು ರೋಡ್ರಿಗೊ ಪಲಾಸಿಯೊ ಪ್ರಮುಖರಾಗಿದ್ದಾರೆ.
ಉಳಿದಂತೆ, ಗೋಲ್ಕೀಪರ್ ಸೆರ್ಗಿಯೊ ರೊಮೇರೊ ಅನುಭವ ತಂಡಕ್ಕೆ ಹೆಚ್ಚು ನೆರವಾಗಲಿದೆ. ರಕ್ಷಣಾ ವಿಭಾಗದಲ್ಲಿ ಪಬ್ಲೊ ಜಾಬಲೆಟಾ, ಮಾರ್ಕೋಸ್ ರೊಜೊ, ಸಂಪರ್ಕ ವಿಭಾಗದಲ್ಲಿ ಮ್ಯಾಕ್ಸಿ ರೋಡ್ರಿಗ್, ಜಾವಿಯರ್ ಮಾಸ್ಕರನೊ ಅರ್ಜೆಂಟೀನಾ ಪಡೆಯ ದೊಡ್ಡ ಶಕ್ತಿಯಾಗಿದ್ದಾರೆ. ಆದರೆ, ಅರ್ಜೆಂಟೀನಾ ಪಾಲಿಗೆ ಒಂದು ಹಿನ್ನಡೆಯಂದರೆ ಮತ್ತೊಬ್ಬ ಪ್ರಮುಖ ಆಟಗಾರ ಸಂಪರ್ಕ ವಿಭಾಗದ ಅನುಭವಿ ಪ್ರತಿಭೆ ಆ್ಯಂಗೆಲ್ ಡಿ ಮಾರಿಯಾ ಗಾಯಗೊಂಡು ಹೊರಗುಳಿದಿರುವುದು. ಆದರೂ ಇವರ ಸ್ಥಾನವನ್ನು ಮಾರ್ಕೊಸ್ ರೋಜೊ ತುಂಬುವ ಭರವಸೆಯಿಂದಾಗಿ ಕೋಚ್ ಸಬೆಲ್ಲಾರ ಚಿಂತೆ ಕಡಿಮೆಯಾಗಿದೆ. ಅರ್ಜೆಂಟೀನಾ ಈವರೆಗೆ ಆಡಿದ ಎಲ್ಲ ಪಂದ್ಯಗಳಲ್ಲೂ ಗೆಲವಿನ ನಗೆ ಬೀರಿದೆ. ಗುಂಪು ಸೆಣಸಿನಲ್ಲಿ ಮೂರು ಪಂದ್ಯಗಳು ಹಾಗೂ ಪ್ರಿಕ್ವಾರ್ಟರ್ಫೈನಲ್ ಮತ್ತು ಕ್ವಾರ್ಟರ್ಫೈನಲ್ಗಳಲ್ಲಿ ರೋಚಕ ಗೆಲವು ದಾಖಲಿಸಿದ್ದ ಅರ್ಜೆಂಟೀನಾ ಈ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಇನ್ನು ಹಾಲೆಂಡ್ ಕೂಡ ಅರ್ಜೆಂಟೀನಾಗೆ ಸಡ್ಡುಹೊಡೆದು ನಿಲ್ಲುವಷ್ಟು ಸಾಮರ್ಥ್ಯ ಹೊಂದಿದೆ. ಮುನ್ಪಡೆ ಆಟಗಾರರಾದ ಆರ್ಜೆನ್ ರಾಬೆನ್, ರಾಬಿನ್ ವ್ಯಾನ್ ಪರ್ಸಿ ಮತ್ತು ಡರ್ಕ್ ಕ್ಯುಟ್ ದಾಳಿಯನ್ನು ತಡೆಯುವುದು ಮೆಸ್ಸಿ ಪಡೆಗೆ ಸುಲಭವಲ್ಲ. ಹಾಗೆಯೇ ಸಂಪರ್ಕ ಆಟಗಾರರಾದ ನಿಗೆಲ್ ಡಿ ಜಾಂಗ್ ಮತ್ತು ವೆಸ್ಲೆ ಸ್ನೈಡರ್ ಅವರಿಂದ ಚೆಂಡನ್ನು ಕಸಿದುಕೊಳ್ಳುವುದು ಮತ್ತು ರಕ್ಷಣಾ ಆಟಗಾರರಾದ ಬ್ರೂನೊ ಮಾರ್ಟಿನ್ಸ್, ಜೋಲ್ ವೆಲ್ಟ್ಮನ್ ಮತ್ತು ಸ್ಟೆಫಾನ್ ಡಿ ರಿಜ್ರನ್ನು ವಂಚಿಸಿ ಗುರಿಯೆಡೆಗೆ ಸಾಗುವುದು ಮೆಸ್ಸಿ ಬಳಗಕ್ಕೆ ಕಠಿಣವೇ ಆಗಿದೆ. ಒಂದು ವೇಳೆ ಈ ಎಲ್ಲ ಅಡೆತಡೆಗಳನ್ನು ದಾಟಿ ಬಂದರೂ ಸಹ ಗೋಲ್ಕೀಪರ್ಗಳಾದ ಜಾಸ್ಪರ್ ಸಿಲೆಸೆನ್ ಮತ್ತು ಟಿಮ್ ಕ್ರೂಲ್ ಅವರು ಮತ್ತೊಂದು ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಹಾಲೆಂಡ್ ಕೂಡ ಟೂರ್ನಿಯಲ್ಲಿ ಈವರೆಗೆ ಒಂದರಲ್ಲೂ ಸೋಲಿನ ಕಹಿ ಅನುಭವಿಸಿಲ್ಲ. ಗುಂಪಿನ ತನ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ 5-1 ಗೋಲುಗಳಿಂದ ಭಾರಿ ಅಂತರದಲ್ಲಿ ಗೆದ್ದು ಭರ್ಜರಿ ಆರಂಭ ಪಡೆದಿದ್ದ ಹಾಲೆಂಡ್ ತನ್ನ ಲೆಕ್ಕಾಚಾರದಂತೆ ಫಲಿತಾಂಶ ಕಾಣುತ್ತ ಬಂದಿದೆ. ಈಗ ಅರ್ಜೆಂಟೀನಾ ವಿರುದ್ಧವೂ ಸಫಲತೆ ಪಡೆಯುವ ದೊರೆಯುವ ವಿಶ್ವಾಸದಲ್ಲಿ ಡಚ್ ಆಟಗಾರರಿದ್ದಾರೆ. ಹಾಗಾಗಿ, ಅರ್ಜೆಂಟೀನಾ ಮತ್ತು ಹಾಲೆಂಡ್ ನಡುವಿನ ಈ ಕದನ ಹೆಚ್ಚು ಕುತೂಹಲ ಕೆರಳಿಸಿದೆ.
ರಾಬೆನ್ ಮತ್ತು ಮೆಸ್ಸಿ ಈ ಪಂದ್ಯದ ಕೇಂದ್ರಬಿಂದು. ಹಾಗಾಗಿ ಈ ಇಬ್ಬರ ನಡುವಿನ ಶಕ್ತಿ-ಸಾಮರ್ಥ್ಯದ ತುಲನೆ ಇಲ್ಲಿದೆ.
ಅರ್ಜೆನ್ ರಾಬೆನ್ v/s ಲಯೊನಲ್ ಮೆಸ್ಸಿ
ಗರಿಷ್ಠ ವೇಗ 31.6 ಕಿ.ಮಿ/ಗಂ 29.6 ಕಿ.ಮಿ
ಡ್ರಿಬಲ್ಸ್ 25 29
ಪಾಸ್ಗಳು 195 453
ಅವಕಾಶ ಗಳಿಕೆ 15 19
ನೆರವು 01 01
ಗುರಿಯತ್ತ 17 18
ಗೋಲುಗಳಿಕೆ 3 4
ಗೋಲು ಸರಾಸರಿ ಶೇ. 33.3 ಶೇ. 62.5
ಅರ್ಜೆಂಟೀನಾ V/s ಹಾಲೆಂಡ್
ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೊಸ್ಟ ರಿಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಹಾಲೆಂಡ್ ಗೋಲ್ ಕೀಪರ್ ಟಿಮ್ ಕ್ರೂಲ್ ಹಲವಾರು ಪೆನಾಲ್ಟಿಗಳಲ್ಲಿ ಎದುರಾಳಿ ತಂಡ ಗೋಲು ಗಳಿಸಿದಂತೆ ತಡೆದಿದ್ದಾರೆ.
ಹಾಲೆಂಡ್ನ ಎಸ್ಲೇ ಸ್ನೇಡರ್ ಇದುವರೆಗೂ 16 ವಿಶ್ವಕಪ್ ಪಂದ್ಯಗಳನ್ನಾಡಿದ್ದು, ಹಾಲೆಂಡ್ ತಂಡದಲ್ಲಿ ಅತಿ ಹೆಚ್ಚು ವಿಶ್ವಕಪ್ ಆಡಿದ ಆಟಗಾರ ಎನಿಸಿದ್ದಾರೆ.
ಕಳೆದ ವಾರ ಬೆಲ್ಜಿಯಂ ವಿರುದ್ಧ ವಿಶ್ವಕಪ್ನಲ್ಲಿ ತಮ್ಮ 5ನೇ ಗೋಲು ದಾಖಲಿಸಿದ ಗೊಂಜಾಲೊ ಹಿಗ್ಯೂಯನ್ ಅವರು, ಲಯೋನೆಲ್ ಮೆಸ್ಸಿ ದಾಖಲೆ ಸರಿಗಟ್ಟಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲೆಂಡ್ ಮತ್ತು ಅರ್ಜೆಂಟೀನಾ ಸೆಮಿಫೈನಲ್ನಲ್ಲಿ ಪರಸ್ಪರ ಎದುರಾಗಿವೆ.
ಇನ್ನು ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿ ಅವರು 91ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಮೂಲಕ ಡೀಗೊ ಮರಡೋನಾ ದಾಖಲೆ ಸರಿಗಟ್ಟಿದ್ದಾರೆ. ಮೆಸ್ಸಿ ವಿಶ್ವಕಪ್ನಲ್ಲಿ ಇನ್ನು 8 ಗೋಲು ದಾಖಲಿಸಿದರೆ, ಮರಡೋನಾ ದಾಖಲೆ ಸರಿಗಟ್ಟಲಿದ್ದಾರೆ.