ಸಾವೊ ಪೌಲೊ: ಗೋಲ್ ಕೀಪರ್ ಸೆರ್ಗಿಯೊ ರೋಮೆರೊ ಅವರ ಅದ್ಭುತ ತಡೆಗೋಡೆಯ ಆಸರೆಯೊಂದಿಗೆ ಅರ್ಜೆಂಟೀನಾ ಆಟಗಾರರು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಗದೊಮ್ಮೆ ಫೈನಲ್‌ಗೆ ದಾಪುಗಾಲಿಟ್ಟಿದ್ದಾರೆ. ಮತ್ತೊಂದೆಡೆ ಈ ಬಾರಿ ಪ್ರಶಸ್ತಿ ಗೆದ್ದೇ ತೀರುವ ಭಾರಿ ನಿರೀಕ್ಷೆಯಲ್ಲಿದ್ದ ಹಾಲೆಂಡ್ ಆಟಗಾರರು ಮತ್ತೊಮ್ಮೆ ದೊಡ್ಡ ಕಹಿ ಅನುಭವಿಸಬೇಕಾಗಿದೆ.
ಸಾವೊ ಪೌಲೊದ ಎರೆನಾ ಕೊರಿಂಥಿಯನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಸುಕಿನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್ ಸುತ್ತಿನಲ್ಲಿ ಹಾಲೆಂಡ್ ವಿರುದ್ಧ 4-2 ಗೋಲುಗಳಿಂದ ಗೆಲವು ದಾಖಲಿಸಿದೆ.
ನಿಗದಿತ 90 ನಿಮಿಷಗಳ ಆಟದಲ್ಲಿ ಎರಡೂ ತಂಡಗಳಿಗೆ ಗೋಲುಗಳಿಸಲು ಸಾಧ್ಯವಾಗಲಿಲ್ಲ. ನಂತರ 30 ನಿಮಿಷಗಳ ಹೆಚ್ಚುವರಿ ಸಮಯದ ಆಟದಲ್ಲೂ ಸಹ ಉಭಯ ಆಟಗಾರರಿಗೆ ಗೋಲು ಸಂಪಾದಿಸುವಲ್ಲಿ ವಿಫಲರಾದರು. ಬಳಿಕ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್ ಅವಕಾಶ ಕಲ್ಪಿಸಿದಾಗ ಅರ್ಜೆಂಟೀನಾ ತನ್ನ ಪ್ರಭುತ್ವ ಸ್ಥಾಪಿಸಿತು.
ಅರ್ಜೆಂಟೀನಾ ಪರ ನಾಯಕ ಲಯೊನೆಲ್ ಮೆಸ್ಸಿ, ಎಜೆಕ್ವೆಲ್ ಗ್ಯಾರೆ, ಸೆರ್ಗಿಯೊ ಅಗ್ವೆರೊ, ಮತ್ತು ಮ್ಯಾಕ್ಸಿ ರೋಡ್ರಿಗ್ ಗೋಲು ದಾಖಲಿಸಿದರು. ಹಾಲೆಂಡ್ ತಂಡಕ್ಕೆ ಆರ್ಜೆನ್ ರಾಬೆನ್ ಮತ್ತು ಡರ್ಕ್ ಕ್ಯೂಟ್ ಮಾತ್ರ ಗೋಲು ಗಳಿಸಿದರು. ಮೊದಲ ಪೆನಾಲ್ಟಿ ಶೂಟೌಟ್‌ನಲ್ಲಿ ರಾನ್ ವ್ಲಾರ್ ಹಾಗೂ ಮೂರನೇ ಶೂಟೌಟ್‌ನಲ್ಲಿ ವೆಸ್ಲೆ ಸ್ನೈಡರ್ ಗೋಲು ಬಾರಿಸುವಲ್ಲಿ ವಿಫಲರಾಗಿದ್ದು ಹಾಲೆಂಡ್ ಸೋಲಿಗೆ ಕಾರಣವಾಯಿತು. ಪ್ರಮುಖವಾಗಿ ಎದುರಾಳಿಯ ಈ ಎರಡೂ ಪ್ರಯತ್ನಗಳನ್ನು ವಿಫಲಗೊಳಿಸಿದ ಗೋಲ್ ಕೀಪರ್ ಸೆರ್ಗಿಯೊ ರೋಮೆರೊ ಅರ್ಜೆಂಟೀನಾ ತಂಡದ ಗೆಲವಿನ ರೂವಾರಿಯಾದರು. ಈ ಗೆಲವಿನೊಂದಿಗೆ ಮೆಸ್ಸಿ ಸಾರಥ್ಯದ ಪಡೆ ಒಟ್ಟಾರೆ ಐದನೇ ಬಾರಿಗೆ ಹಾಗೂ 24 ವಷಗಳ ನಂತರ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಅರ್ಹತೆ ಪಡೆದುಕೊಂಡಿತು. ಈ ಮುನ್ನ 1990ರಲ್ಲಿ ಡೀಗೊ ಮರಡೋನಾ ನಾಯಕತ್ವದಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡ, ಎದುರಾಳಿ ಜರ್ಮನಿ ವಿರುದ್ಧ ಸೋತು ಚಾಂಪಿಯನ್ ಹಾದಿಯಿಂದ ಜಾರಿಬಿದ್ದಿತ್ತು. ಈ ಬಾರಿ ಮತ್ತೆ ಜರ್ಮನಿ ತಂಡವೇ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾಗೆ ಸವಾಲು ಒಡ್ಡುತ್ತಿದೆ. ಬರುವ ಭಾನುವಾರ ನಡೆಯಲಿರುವ 2014ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಚಾಂಪಿಯನ್‌ಪಟ್ಟಕ್ಕಾಗಿ ಸೆಣಸಲಿರುವ ಅರ್ಜೆಂಟೀನಾ ತಂಡಕ್ಕೆ ಹಿಂದಿನ ಕಹಿ ಮರೆಯಲು ಇದು ಉತ್ತಮ ಅವಕಾಶ ಎನಿಸಿದೆ.
ನಾಲ್ಕನೇ ಪೆನಾಲ್ಟಿ ಶೂಟೌಟ್‌ನಲ್ಲಿ ಮ್ಯಾಕ್ಸಿ ರೋಡ್ರಿಗ್ ಗೋಲು ಗಳಿಸುತ್ತಿದ್ದಂತೆಯೇ ಅರ್ಜೆಂಟೀನಾ ಸಂಭ್ರಮ ಮುಗಿಲುಮುಟ್ಟಿತು. ಹಾಲೆಂಡ್‌ನ ರಾನ್ ವ್ಲಾರ್ ಮತ್ತು ವೆಸ್ಲೆ ಸ್ನೈಡರ್ ಅವರ ಪೆನಾಲ್ಟಿ ಶೂಟೌಟ್ ಒದೆತಗಳನ್ನು ಸಮರ್ಥವಾಗಿ ತಡೆದಿದ್ದ ತಮ್ಮ ಗೋಲ್ ಕೀಪರ್ ರೋಮೆರೊ ಅವರನ್ನು ಹೊತ್ತು ಅರ್ಜೆಂಟೀನಾ ಆಟಗಾರರು ಕುಣಿದು ಕುಪ್ಪಳಿಸಿದರು.
ಇನ್ನೊಂದೆಡೆ ಸೋತ ಹಾಲೆಂಡ್ ಆಟಗಾರರು ಭಾರಿ ನಿರಾಸೆಗೊಂಡರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ 2010ರ ಟೂರ್ನಿಯಲ್ಲಿ ಫೈನಲ್ ಕದನದಲ್ಲಿ ಸ್ಪೇನ್ ಎದುರು ಆಘಾತಗೊಂಡು ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಅವಕಾಶದಿಂದ ವಂಚಿತಗೊಂಡಿದ್ದ ಹಾಲೆಂಡ್ ಆಟಗಾರರು ಈ ಬಾರಿ ಪ್ರಶಸ್ತಿ ಗೆದ್ದುಕೊಳ್ಳಲು ಅರ್ಹರೇ ಆಗಿದ್ದರು. ಆದರೆ, ನಾಲ್ಕರಘಟ್ಟದ ಸೆಣಸಿನಲ್ಲಿ ಅರ್ಜೆಂಟೀನಾ ಎದುರು ನಿಗದಿತ ಅವಧಿ ಮತ್ತು ಹೆಚ್ಚುವರಿ ಸಮಯದ ಆಟದಲ್ಲಿ ದೊರೆತ ಗೋಲು ಗಳಿಕೆಯ ಅವಕಾಶಗಳನ್ನು ಕೈಚೆಲ್ಲಿದ್ದು ಡಚ್ ಪಡೆಗೆ ದುಬಾರಿಯಾಯಿತು.
ಮೆಸ್ಸಿ ಅಪಾಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿದ್ದ ಹಾಲೆಂಡ್ ಆಟಗಾರರು ಆತನನ್ನು ಸಂಪೂರ್ಣ ಸುತ್ತುವರಿದು ಗೋಲು ಗಳಿಕೆಗೆ ಅವಕಾಶವನ್ನೇ ನೀಡಲಿಲ್ಲ. ನಾಲ್ಕು ಬಾರಿ ವಿಶ್ವದ ವರ್ಷದ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಅರ್ಜೆಂಟೀನಾ ನಾಯಕ ಎಷ್ಟೇ ಪ್ರಯತ್ನ ಮಾಡಿದರೂ ಸಹ ತಮ್ಮನ್ನು ಬಂದಿಸಿಟ್ಟಿದ್ದ ಹಾಲೆಂಡ್ ಆಟಗಾರರ ಕಣ್ತಪ್ಪಿಸಿ ಗುರಿಯೆಡೆಗೆ ಸಾಗಲು ಅವಕಾಶವೇ ಸಿಗದಂತಾಯಿತು. ಹೆಚ್ಚುವರಿ ಸಮಯದ ಆಟ ಮುಗಿಯಲು ಕೇವಲ ಐದು ನಿಮಿಷಗಳಿದ್ದಾಗ ಅರ್ಜೆಂಟೀನಾದ ರೋಡ್ರಿಗೊ ಪಲಾಸಿಯೊ ಅವರಿಗೆ ಗೋಲು ಗಳಿಸುವ ಅತ್ಯುತ್ತಮ ಅವಕಾಶವೊಂದು ಒದಗಿಬಂದಿತ್ತು. ಆದರೆ, ಅವರು ಹೆಡ್ ಮಾಡುವ ಮೂಲಕ ಬಾರಿಸಿದ ಚೆಂಡು ನೇರವಾಗಿ ಹಾಲೆಂಡ್ ಗೋಲ್‌ಕೀಪರ್ ಜಾಸ್ಪರ್ ಸಿಲೆಸೆನ್ ಅವರ ಕೈಸೇರುವುದರೊಂದಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು.
ಗೋಲು ವಿವರ
ನಿಗದಿತ ಮತ್ತು ಹೆಚ್ಚುವರಿ ಸಮಯದಲ್ಲಿ 0-0
ಪೆನಾಲ್ಟಿ ಶೂಟೌಟ್
ಅರ್ಜೆಂಟೀನಾ 04
ಲಯೋನೆಲ್ ಮೆಸ್ಸಿ
ಎಜೆಕ್ವೆಲ್ ಗ್ಯಾರೆ
ಸೆರ್ಗಿಯೊ ಅಗ್ವೆರೊ
ಮ್ಯಾಕ್ಸಿ ರೋಡ್ರಿಗ್
ಹಾಲೆಂಡ್ 02
ರಾನ್ ವ್ಲಾರ್
ಆರ್ಜೆನ್ ರಾಬೆನ್
ವೆಸ್ಲೆ ಸ್ನೈಡರ್
ಡರ್ಕ್ ಕ್ಯುಟ್
ಜರ್ಮನಿ ಆಟಗಾರರು ನಮಗಿಂತ ಒಂದು ದಿನ ಹೆಚ್ಚಿನ ವಿಶ್ರಾಂತಿ ಪಡೆದಿದ್ದಾರೆ. ಆದರೆ, ನಮ್ಮ ಕೆಲ ಆಟಗಾರರು ತೀವ್ರವಾಗಿ ಬಳಲಿದ್ದಾರೆ. ಹೀಗಾಗಿ ಫೈನಲ್‌ಗೆ ತಯಾರಿ ನಡೆಸಲು ನಮಗೆ ಒಂದು ದಿನ ಕಡಿಮೆ ಅವಧಿ ಸಿಕ್ಕಿದೆ. ಇದು ಜರ್ಮನಿಗೆ ಅನುಕೂಲವಾಗಿ ಪರಿಣಮಿಸಲಿದೆ.
-ಅಲೆಜಾಂಡ್ರೋ ಸಬೆಲ್ಲಾ, ಅರ್ಜೆಂಟೀನಾ ಕೋಚ್
ಪೆನಾಲ್ಟಿ ಶೂಟೌಟ್‌ನಲ್ಲಿ ತಂಡದ ಇಬ್ಬರು ಆಟಗಾರರು ಮೊದಲ ಅವಕಾಶ ತೆಗೆದುಕೊಳ್ಳಲು ನಿರಾಕರಿಸಿದರು. ಹಾಗಾಗಿ, ಮೊದಲ ಪೆನಾಲ್ಟಿ ಶೂಟೌಟ್ ತೆಗೆದುಕೊಳ್ಳುವಂತೆ ರಾನ್ ವ್ಲಾರ್‌ಗೆ ಸೂಚಿಸಿದೆ. ಏಕೆಂದರೆ, ಅವರ ಮೇಲೆ ನಂಬಿಕೆ ಇತ್ತು. ಆದರೆ, ವ್ಲಾರ್ ವಿಫಲರಾದರು. ಜೊತೆಗೆ ಕೋಸ್ಟ ರಿಕಾ ವಿರುದ್ಧದ ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲವು ತಂದುಕೊಟ್ಟಿದ್ದ ಗೋಲ್ ಕೀಪರ್ ಟಿಮ್ ಕ್ರೂಲ್‌ರನ್ನು ಕಣಕ್ಕಿಳಿಸಲು ಅವಕಾಶವಿರಲಿಲ್ಲ. ಏಕೆಂದರೆ, ಅದಾಗಲೇ ನಾವು ಮೂವರು ಬದಲಿ ಆಟಗಾರರನ್ನು ಬಳಸಿಕೊಂಡಿದ್ದರಿಂದ ಕ್ರೂಲ್‌ಗೆ ಅವಕಾಶ ಇಲ್ಲದಾಯಿತು.
-ಲೂಯಿಸ್ ವ್ಯಾನ್ ಗಾಲ್, ಹಾಲೆಂಡ್ ಕೋಚ್
ಮುಂದಿನ 2018ರ ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚುವರಿ ಸಮಯದ ಆಟದಲ್ಲಿ ನಾಲ್ಕನೇ ಬದಲಿ ಆಟಗಾರನನ್ನು ಆಡಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ವಿಶ್ವ ಫುಟ್ಬಾಲ್ ಒಕ್ಕೂಟ ಹೇಳಿದೆ. ಈ ಬಾರಿಯ 2014ರ ವಿಶ್ವಕಪ್‌ನಲ್ಲಿ ಬದಲಿ ಆಟಗಾರರೇ ಒಟ್ಟು 29 ಗೋಲುಗಳನ್ನು ಗಳಿಸಿರುವುದು ಹೊಸ ದಾಖಲೆಯಾಗಿದೆ. ಈ ಮುನ್ನ ಜರ್ಮನಿಯಲ್ಲಿ ನಡೆದ 2002ರ ವಿಶ್ವಕಪ್‌ನಲ್ಲಿ ಬದಲಿ ಆಟಗಾರರು ಒಟ್ಟು 22 ಗೋಲು ಗಳಿಸಿದ್ದು ದಾಖಲೆ ಎನಿಸಿತ್ತು.