

ನವದೆಹಲಿ: ಮಳೆ ಕೊರತೆಯ ವರ್ಷವಾಗಿದ್ದು, ರಾಜ್ಯದ ಹಲವು ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ತಮಿಳುನಾಡಿನ ಬೇಡಿಕೆಯಂತೆ ಕೊರತೆಯಿರುವ 11 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡುಗಡೆ ಮಾಡುವುದು ಕಷ್ಟ ಎಂದು ಕರ್ನಾಟಕ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಆದರೆ, ತಮಿಳುನಾಡು ಸರ್ಕಾರವು ತನಗೆ ಕಾನೂನುಬದ್ಧವಾಗಿ ಸಿಗಬೇಕಾದ ಪ್ರಮಾಣಾನುಗುಣ ನೀರಿನ ಪಾಲು ಹಾಗೂ ಈ ಹಿಂದಿನ ಬಾಕಿ ನೀರನ್ನು ಮಾತ್ರ ಕೇಳುತ್ತಿದ್ದೇವೆ ಎಂದು ವಾದಿಸಿದೆ.
ಹವಾಮಾನ ಮತ್ತು ಜಲಸಂಪನ್ಮೂಲದ ಕೊರತೆಯ ಸಂಪೂರ್ಣ ಹೊರೆಯನ್ನು ಕೆಳಭಾಗದ ರಾಜ್ಯವಾದ ತಮಿಳುನಾಡಿನ ಮೇಲೆ ಹೊರಿಸಲು ಸಾಧ್ಯವಿಲ್ಲ. ಕರ್ನಾಟಕವು ತನ್ನ ನೀರಿನ ಸಂಗ್ರಹ ಮತ್ತು ಒಳಹರಿವನ್ನು ನೀರಾವರಿ ಸೇರಿದಂತೆ ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿರುವಾಗ, ತಮಿಳುನಾಡಿಗೆ ಮಾತ್ರ ಅನ್ಯಾಯ ಮಾಡಬಾರದು ಎಂದು ತಿಳಿಸಿದೆ.
ಅಕ್ಟೋಬರ್ 7ರ ವೇಳೆಗೆ ಬಾಕಿ ಉಳಿದಿರುವ 11 ಟಿಎಂಸಿ ಅಡಿ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಹಾಗೂ ಬಿಳಿಗುಂಡ್ಲುವಿನಲ್ಲಿ ಅಳೆಯುವಂತೆ 10 ದಿನಗಳ ಕಾಲ ಪ್ರತಿದಿನ 1.3 ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಹೊಸ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ವರ್ಷ ರಾಜ್ಯಕ್ಕೆ ಸಾಕಷ್ಟು ಸಂಕಷ್ಟ ಎದುರಾಗಿದ್ದು, ಹಲವು ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ನಾವು ನೀರನ್ನು ಸಂರಕ್ಷಿಸಬೇಕಿದೆ ಎಂದು ತಿಳಿಸಿದರು.
ನವೆಂಬರ್‌ನಲ್ಲಿ ತಮಿಳುನಾಡಿಗೆ ಈಶಾನ್ಯ ಮುಂಗಾರು ಮಳೆ ದೊರೆಯಲಿದ್ದು, ಆಗ ಅಲ್ಲಿನ ಜಲಾಶಯಗಳು ಮತ್ತೆ ತುಂಬಲಿವೆ. ಆದರೆ, ಅದೇ ಮಳೆ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನ ನೀಡುವುದಿಲ್ಲ ಎಂದು ವಾದಿಸಿದರು.
ಪ್ರತಿ ಬರದ ವರ್ಷದಲ್ಲೂ ಇದೇ ಸಮಸ್ಯೆ ಎದುರಾಗುತ್ತಿದೆ, ಅಕ್ಟೋಬರ್ 8ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) 59ನೇ ಸಭೆಯಲ್ಲಿ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ. ಅಕ್ಟೋಬರ್ 9ರಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ 3,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ ಎಂದು ಹೇಳಿದರು.
ತಮಿಳುನಾಡಿನ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಬಾಕಿ ಉಳಿದಿರುವ ನೀರನ್ನು ಕರ್ನಾಟಕ ಬಿಡುಗಡೆ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ತಮಿಳುನಾಡಿನ ಬೆಳೆಗಳಿಗೆ ಹಾನಿಯಾಗಲಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ವರ್ಷ ಮಳೆಯ ಕೊರತೆಯಿಂದ ಎರಡೂ ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿರುವಾಗ ಬಾಕಿ ನೀರನ್ನು ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿತು.
ಸಾಮಾನ್ಯ ವರ್ಷವಾಗಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು” ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಅಭಿಪ್ರಾಯಪಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ರೋಹಟ್ಗಿ, ಮತ್ತೊಂದು ವರ್ಷದವರೆಗೆ ಕಾಯಲು ಸಾಧ್ಯವಿಲ್ಲ. ತಮಿಳುನಾಡಿನ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅವರ ಹಿತದೃಷ್ಟಿಯಿಂದ ಕನಿಷ್ಠ ಮಧ್ಯಂತರ ವ್ಯವಸ್ಥೆಯನ್ನಾದರೂ ಮಾಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.
ಸೆಪ್ಟೆಂಬರ್ 24ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಸಭೆಯಲ್ಲಿ ಬಿಳಿಗುಂಡ್ಲುವಿನಲ್ಲಿ ತಲುಪಬೇಕಿದ್ದ ನೀರಿನ ಪ್ರಮಾಣ 52.935 ಟಿಎಂಸಿ ಅಡಿ ಎಂದು ನಿರ್ಧರಿಸಲಾಗಿತ್ತು. ಆದರೆ, ವಾಸ್ತವವಾಗಿ ಹರಿದು ಬಂದ ನೀರಿನಲ್ಲಿ ಕೊರತೆ ಕಂಡುಬಂದಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ನೀರಿನ ಕೊರತೆಯನ್ನು ಗುರುತಿಸಿದರೂ, ಬಾಕಿ ಪ್ರಮಾಣವನ್ನು ಸರಿದೂಗಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವ ಯಾವುದೇ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿಲ್ಲ. ಬದಲಾಗಿ, ನೀರಿನ ಹರಿವನ್ನು 6,000 ಕ್ಯೂಸೆಕ್‌ನಿಂದ 4,000 ಕ್ಯೂಸೆಕ್‌ಗೆ ಇಳಿಸಿತು. ಸೆಪ್ಟೆಂಬರ್ 24ರಿಂದ ಮುಂದಿನ 15 ದಿನಗಳವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 4,000 ಕ್ಯೂಸೆಕ್ ನೀರು ತಲುಪುವಂತೆ ಜಲಾಶಯಗಳಿಂದ ನೀರು ಬಿಡಲು ಕರ್ನಾಟಕಕ್ಕೆ ಸೂಚಿಸಲಾಯಿತು ಎಂದು ವಿವರಿಸಿತು.
ಆದರೂ, ಕರ್ನಾಟಕ ಸರ್ಕಾರವು ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನಗಳನ್ನು ಪಾಲಿಸಲಿಲ್ಲ ಎಂದು ಆರೋಪಿಸಿದೆ.
ಬರದ ವರ್ಷದಲ್ಲಿ ತಮಿಳುನಾಡಿಗೆ ಸಿಗಬೇಕಾದ ನೀರಿನ ಪಾಲನ್ನು ಪ್ರಮಾಣಾನುಗುಣವಾಗಿ ನಿರ್ಧರಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿ ಎಂಟು ವರ್ಷ ಕಳೆದರೂ, ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವ ಬರ ನಿರ್ವಹಣಾ ಸೂತ್ರವನ್ನು ರೂಪಿಸುವಲ್ಲಿ ವಿಫಲವಾಗಿದೆ ಎಂದು ಆಕ್ಷೇಪಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸೆಪ್ಟೆಂಬರ್ 24ರಿಂದ 15 ದಿನಗಳವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 4,000 ಕ್ಯೂಸೆಕ್ ಹಾಗೂ ಅಕ್ಟೋಬರ್ 9ರಿಂದ 3,000 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ನಿರ್ದೇಶನವು ತಮಿಳುನಾಡಿನ ನೀರಿನ ಕೊರತೆಯನ್ನು ನೀಗಿಸಲು ಸಾಕಾಗುವುದಿಲ್ಲ. ಇದರಿಂದ ಬಾಕಿ ಉಳಿದಿರುವ ಹೆಚ್ಚಿನ ಪ್ರಮಾಣದ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಮಿಳುನಾಡು ಸರ್ಕಾರ ವಾದಿಸಿದೆ.
ಅಕ್ಟೋಬರ್ 8ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲೂ ಬಾಕಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಬದಲಾಗಿ, ಅಕ್ಟೋಬರ್ 9ರಿಂದ ನೀರಿನ ಹರಿವನ್ನು 4,000 ಕ್ಯೂಸೆಕ್‌ನಿಂದ 3,000 ಕ್ಯೂಸೆಕ್‌ಗೆ ಇಳಿಸಲಾಯಿತು ಎಂದು ತಿಳಿಸಿದೆ.
ತಮಿಳುನಾಡು ತನ್ನ ಪಾಲಿನ ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಆಗಸ್ಟ್ 3ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.