ಬ್ರೆಸಿಲಿಯಾ: 2014ರ ಫಿಫಾ ವಿಶ್ವಕಪ್‌ನಲ್ಲಿ ಜರ್ಮನಿ ವಿರುದ್ಧದ ಸೆಮಿಫೈನಲ್‌ನಲ್ಲಿ ಮರ್ಮಾಘಾತ ಅನುಭವಿಸಿ ತೀರ ಅವಮಾನದಿಂದ ಕಣ್ಣೀರು ಹಾಕುತ್ತಿರುವ ಬ್ರೆಜಿಲ್ ಆಟಗಾರರು ತಮಗಾಗಿರುವ ಮಾನಸಿಕ ನೋವನ್ನು ತಕ್ಕಮಟ್ಟಿಗಾದರೂ ಮರೆಯಲು ಮೂರನೇ ಸ್ಥಾನ ಒಲಿಸಿಕೊಳ್ಳಲೇಬೇಕಾದ ಒತ್ತಡದಲ್ಲಿದ್ದಾರೆ.
ಮತ್ತೊಂದೆಡೆ ಈ ಬಾರಿಯೂ ಸಹ ಚೊಚ್ಚಲ ಪ್ರಶಸ್ತಿ ಗೆದ್ದುಕೊಳ್ಳುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲಾಗದೇ ಹೊರನಡೆದಿರುವ ಹಾಲೆಂಡ್ ಆಟಗಾರರು ಮೂರನೇ ಸ್ಥಾನವನ್ನಾದರೂ ಗಳಿಸಿ ಸಮಾಧಾನದ ನಿಟ್ಟುಸಿರು ಬಿಡುವ ಲೆಕ್ಕಾಚಾರದಲ್ಲಿದ್ದಾರೆ.
ಹಾಗಾಗಿ, ಎಸ್ಟಾಡಿಯೊ ನ್ಯಾಷನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣದಲ್ಲಿ ಭಾನುವಾರ ನಸುಕಿನಲ್ಲಿ ನಡೆಯಲಿರುವ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಎದುರಾಗಲಿರುವ ಬ್ರೆಜಿಲ್ ಮತ್ತು ಹಾಲೆಂಡ್ ಆಟಗಾರರು ಗೆಲವಿಗಾಗಿ ಕಠಿಣ ತಪಸ್ಸು ಆರಂಭಿಸಿದ್ದಾರೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ತಂಡ 7-1 ಗೋಲುಗಳ ಭಾರಿ ಅಂತರದಲ್ಲಿ ಬ್ರೆಜಿಲ್ ತಂಡವನ್ನು ಬಗ್ಗುಬಡಿದಿತ್ತು. ತನ್ನ ನೂರು ವರ್ಷಗಳ ಅಂತಾರಾಷ್ಟ್ರೀಯ ಇತಿಹಾಸದಲ್ಲೇ ಬ್ರೆಜಿಲ್‌ಗೆ ಇದು ದೊಡ್ಡ ಸೋಲು. ಜಾಗತಿಕ ಫುಟ್ಬಾಲ್‌ನಲ್ಲಿ ತನ್ನದೇಯಾದ ಅಸ್ಥಿತ್ವ ಹೊಂದಿರುವ ಬ್ರೆಜಿಲ್‌ಗೆ ಬಂದೊದಗಿರುವ ಈ ರೀತಿಯ ಅಪಮಾನಕಾರಿ ಸೋಲಿನಿಂದಾಗಿ ಇಡೀ ದೇಶ ಕಣ್ಣೀರಲ್ಲಿ ಕೈತೊಳೆಯಬೇಕಾಯಿತು. ತಮ್ಮ ದೇಶದ ಆಟಗಾರರ ಹೀನಾಯ ಸೋಲು ಸಹಿಸಲಾಗದೇ ಅಭಿಮಾನಿಗಳು ಆಕ್ರೋಶಗೊಂಡು ಬಸ್‌ವೊಂದನ್ನು ಬೆಂಕಿ ಹಚ್ಚಿ ಸುಟ್ಟರು. ರಾಷ್ಟ್ರಧ್ವಜ ಹಾಗೂ ತಮ್ಮ ಆಟಗಾರರ ಝೆರ್ಸಿಗಳನ್ನು ಸುಟ್ಟು ಹಾಕಿ ತಮ್ಮ ತೀವ್ರ ಹತಾಶೆ ವ್ಯಕ್ತಪಡಿಸಿದರು. ಇತ್ತ ಆಟಗಾರರೂ ಸಹ ಬಿಕ್ಕಿ ಬಿಕ್ಕಿ ಅತ್ತರು. ಸ್ಟಾರ್ ಆಟಗಾರ ನೇಮಾರ್ ಹಾಗೂ ನಾಯಕ ಥಿಯಾಗೊ ಸಿಲ್ವಾ ಅನುಪಸ್ಥಿತಿಯಿಂದಾಗಿ ಜರ್ಮನಿ ವಿರುದ್ಧ ಬ್ರೆಜಿಲ್‌ಗೆ ಗೆಲವು ಕಷ್ಟ ಎಂಬುದು ಮೊದಲೇ ತಿಳಿದಿತ್ತು. ಗೌರವದ ಸೋಲು ಕಂಡಿದ್ದರೆ ಬಹುಶಃ ಬ್ರೆಜಿಲ್ ಅಭಿಮಾನಿಗಳೂ ಇಷ್ಟೊಂದು ಆಕ್ರೋಶಭರಿತರಾಗುತ್ತಿರಲಿಲ್ಲ. ಆದರೆ, ಸೋಲಿನ ರೀತಿ ಮಾತ್ರ ತವರಿಗೆ ಸಹಿಸಲಾಗಲಿಲ್ಲ.
ಈಗ ಬ್ರೆಜಿಲ್ ಆಟಗಾರರ ಮುಂದಿರುವ ದೊಡ್ಡ ಸವಾಲು ಎಂದರೆ ತವರಿನಲ್ಲೇ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್‌ನಲ್ಲಿ ಕನಿಷ್ಠ ಮೂರನೇ ಸ್ಥಾನವನ್ನಾದರೂ ಪಡೆದು ಕೊಂಚ ಗೌರವ ಕಾಪಾಡಿಕೊಳ್ಳುವುದಾಗಿದೆ. ಸೆಮಿಫೈನಲ್ ಪಂದ್ಯದಿಂದ ಅಮಾನತುಗೊಂಡಿದ್ದ ಥಿಯಾಗೊ ಸಿಲ್ವಾ ಆಗಮನ ಬ್ರೆಜಿಲ್ ಪಾಳಯದಲ್ಲಿ ಕೊಂಚಮಟ್ಟಿಗೆ ನೆಮ್ಮದಿ ತಂದಿದೆ. ಹಾಗೆಂದು ಹಾಲೆಂಡ್ ತಂಡವನ್ನು ಸುಲಭವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬ್ರೆಜಿಲ್‌ಗೆ ಸರಿಸಮನಾದ ಹೋರಾಟ ನೀಡುವ ಶಕ್ತಿ ಅದಕ್ಕಿದೆ. ಮೇಲಾಗಿ, ಹಾಲೆಂಡ್ ಕೂಡ ಎರಡನೇ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಹೊರಬಿದ್ದಿರುವುದು ಅದಕ್ಕೆ ಭಾರಿ ನೋವುಂಟು ಮಾಡಿದೆ. ಏನೇ ಆಗಲಿ ಬ್ರೆಜಿಲ್ ವಿರುದ್ಧವಾದರೂ ಗೆದ್ದು ಗೌರವದ ವಿದಾಯ ಕಾಣುವ ಛಲದಲ್ಲಿ ಹಾಲೆಂಡ್ ಆಟಗಾರರಿದ್ದಾರೆ. ಈ ಪ್ಲೇ ಆಫ್ ಸುತ್ತಿನ ಪಂದ್ಯಕ್ಕಾಗಿ ಗಾಯಾಳು ನೇಮಾರ್ ತಂಡದ ಆಟಗಾರರನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಪಂದ್ಯದಲ್ಲಿ ಅವರು ಆಡುವ ಬಗ್ಗೆ ಇನ್ನೂ ಯಾವುದೂ ಸ್ಪಷ್ಟವಾಗಿಲ್ಲ.
ಒಟ್ಟಾರೆ ಬ್ರೆಜಿಲ್ ಮತ್ತು ಹಾಲೆಂಡ್ ತಂಡಗಳಿಗೆ ಈ ಕದನ ಒಂದು ರೀತಿಯಲ್ಲಿ ಪ್ರತಿಷ್ಠೆಯ ಸವಾಲು ಎಂಬಂತಾಗಿದೆ. ವಿಶ್ವಕಪ್‌ನಲ್ಲಿ ಬ್ರೆಜಿಲ್ ಮತ್ತು ಹಾಲೆಂಡ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ತಲಾ 2 ಗೆಲವಿನೊಂದಿಗೆ ಸಮಗೌರವ ಹೊಂದಿವೆ. ನಾಲ್ಕು ವರ್ಷಗಳ ಹಿಂದೆ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ ವಿಶ್ವಕಪ್‌ನಲ್ಲಿ ಹಾಲೆಂಡ್ ತಂಡ ಅಂತಿಮ ಎಂಟರಘಟ್ಟದ ಸುತ್ತಿನಲ್ಲಿ 2-1 ಗೋಲುಗಳಿಂದ ಬ್ರೆಜಿಲ್ ವಿರುದ್ಧ ಜಯಭೇರಿ ಬಾರಿಸಿತ್ತು. ಒಟ್ಟಾರೆ ಮುಖಾಮುಖಿಯಲ್ಲಿ ಸಹ ಉಭಯ ತಂಡಗಳು 11 ಬಾರಿ ಎದುರಾಗಿದ್ದು ತಲಾ 3ರಲ್ಲಿ ಗೆಲವು ದಾಖಲಿಸಿ ಸಮಸ್ಥಿತಿಯಲ್ಲಿವೆ. ಐದು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ಸಮಯ ನಸುಕಿನ 1.30ಕ್ಕೆ (ಭಾನುವಾರ); ನ್ಯಾಷನಲ್ ಡಿ ಬ್ರೆಸಿಲಿಯಾ ಕ್ರೀಡಾಂಗಣ
ಬ್ರೆಜಿಲ್ ಪ್ರತಿಭೆಗಳು
ಗೋಲ್‌ಕೀಪರ್ : ಜೂಲಿಯೊ ಸೀಜರ್
ರಕ್ಷಣೆ : ಡ್ಯಾನಿ ಆಲ್ವ್ಸ್,
ಡೇವಿಡ್ ಲೂಯಿಸ್,
ಮಾರ್ಸೆಲೊ.
ಸಂಪರ್ಕ : ವಿಲಿಯನ್, ರಾಮಿರೇಸ್,
ಫರ್ನಾಂಡೀನೊ
ಮುನ್ಪಡೆ : ಹಲ್ಕ್, ಫ್ರೆಡ್
ಕೋಚ್ : ಲೂಯಿಜ್ ಫೆಲಿಪ್ ಸ್ಕೊಲಾರಿ
ಹಾಲೆಂಡ್ ಪ್ರತಿಭೆಗಳು
ಗೋಲ್‌ಕೀಪರ್ : ಜಾಸ್ಪರ್ ಸಿಲೆಸೆನ್,
ಟಿಮ್ ಕ್ರೂಲ್
ರಕ್ಷಣೆ : ಬ್ರೂನೊಮಾರ್ಟಿನ್ಸ್
ಜೋಲ್ ವೆಲ್ಟ್
ಮನ್,
ಸ್ಟೆಫಾನ್ ಡಿ ರಿಜ್,
ಸಂಪರ್ಕ : ನಿಗೆಲ್ ಡಿ ಜಾಂಗ್,
ವೆಸ್ಲೆ ಸ್ನೈಡರ್
ಮುನ್ಪಡೆ : ರಾಬಿನ್ ವ್ಯಾನ್
ಪರ್ಸಿ (ನಾಯಕ),
ಆರ್ಜೆನ್ ರಾಬೆನ್,
ಡರ್ಕ್ ಕ್ಯುಟ್
ಕೋಚ್ : ಲೂಯಿಸ್
ವ್ಯಾನ್ ಗಾಲ್