ಜರ್ಮನಿ ವಿರುದ್ಧ ಸೆಮಿಫೈನಲ್‌ನಲ್ಲಿ ಅನುಭವಿಸಿದ ದಯನೀಯ ಸೋಲಿನಿಂದಾಗಿ ಬ್ರೆಜಿಲ್ ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ ಹುದ್ದೆಯಿಂದ ಕೆಳಗಿಳಿಯುವ ಅಥವಾ ಅವರನ್ನು ಕೆಳಗಿಳಿಸುವ ಬಗ್ಗೆ ಮಾತುಗಳು ಕೇಳಬರಲಾರಂಭಿಸಿವೆ. ಈ ಸೋಲು ಬ್ರೆಜಿಲ್ ಫುಟ್ಬಾಲ್ ಇತಿಹಾಸದಲ್ಲೇ ಕಪ್ಪು ಚುಕ್ಕೆ ಎನಿಸಿದ್ದು, ಸ್ಕೊಲಾರಿ ಕೋಚ್ ಹುದ್ದೆಯಿಂದ ಹೊರನಡೆಯುವುದು ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣವಾಗಿದೆ. 2002ರಲ್ಲಿ ಇದೇ ಬ್ರೆಜಿಲ್ ತಂಡವನ್ನು ಸಮರ್ಥವಾಗಿ ಪಳಗಿಸಿ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿ ಗೆದ್ದುಕೊಳ್ಳಲು ನೆರವಾಗಿದ್ದ ಸ್ಕೊಲಾರಿ, ಈಗಾಗಲೇ ಬ್ರೆಜಿಲ್ ಫುಟ್ಬಾಲ್ ಕಾನ್‌ಫೆಡ್‌ರೇಶನ್ ಅಧ್ಯಕ್ಷ ಜೋಸ್ ಮಾರಿಯಾ ಮಾರಿನ್ ಅವರೊಂದಿಗೆ ಮಾತನಾಡಿದ್ದಾರೆ. 2012ರ ಕೊನೆಯಲ್ಲಿ ಮತ್ತೆ ಬ್ರೆಜಿಲ್ ತಂಡದ ಕೋಚ್ ಆಗಿ 65ರ ಮಾಜಿ ರಕ್ಷಣಾ ಆಟಗಾರ ಸ್ಕೊಲಾರಿ ನೇಮಕಗೊಂಡಿದ್ದರು. ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರಾಗಿರುವ ಅವರು ಜರ್ಮನಿ ವಿರುದ್ಧದ ಅವಮಾನಕಾರಿ ಸೋಲಿನಿಂದಾಗಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.