ರಿಯೊ ಡಿ ಜನೈರೊ: 24 ವರ್ಷಗಳ ನಂತರ ಫಿಫಾ ವಿಶ್ವಕಪ್ ಗೆಲ್ಲುವ ಮೂಲಕ ಜರ್ಮನಿ ವಿಶ್ವ ಫುಟ್ಬಾಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಿನ್ನೆ ರಾತ್ರಿ ರೋಚಕವಾಗಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೇಂಟೀನಾ ವಿರುದ್ಧ 1-0ಗೋಲುಗಳಿಂದ ಜರ್ಮಿನಿ ಜಯ ಗಳಿಸಿತು. ಇದರೊಂದಿಗೆ ದಕ್ಷಿಣ ಅಮೆರಿಕ ಖಂಡದಲ್ಲಿ ಪ್ರಶಸ್ತಿ ಗೆದ್ದ ಮೊದಲ ಐರೋಪ್ಯ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಈ ಹಿಂದೆ 1990ರಲ್ಲೂ ಅರ್ಜೇಂಟೀನಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿ 1-0 ಗೋಲುಗಳಿಂದ ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಜರ್ಮನಿ ಮತ್ತೆ ಆದೇ ರೀತಿಯ ಗೆಲುವು ದಾಖಲಿಸಿದೆ. ಜರ್ಮನಿ ಆಟಗಾರ ಗೋಟ್ಜೆ 113 ನಿಮಿಷದಲ್ಲಿ ಗಳಿಸಿದ ಒಂದು ಗೋಲು ಜರ್ಮನಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿದೆ.
ನಿಗದಿತ ಸಮಯದಲ್ಲಿ ಗೋಲು ದಾಖಲಿಸುವಲ್ಲಿ ಎರಡೂ ತಂಡಗಳು ವಿಫಲವಾದವು.ಜರ್ಮನಿ ಹಾಗೂ ಅರ್ಜೆಂಟೀನಾಕ್ಕೆ ತಲಾ ಮೂರು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕಿದ್ದವು. ಆದರೆ ತಪ್ಪಿನ ಹೊಡೆತಗಳಿಂದಾಗಿ ಗೋಲು ಗಳಿಸುವಲ್ಲಿ ಅವು ವಿಫಲವಾದವು.
ಅರ್ಜೆಂಟೀನಾ ತಂಡದ ಪರ ಲಿಯೊನೆಲ್ ಮೆಸ್ಸಿ ಉತ್ತಮವಾಗಿಯೇ ಆಡಿದರು. ಆದರೆ ಜರ್ಮನಿಯ ಡಿಫೆನ್ಸ್ ವಿಭಾಗ ಅರ್ಜೆಂಟೀನಾ ನಾಯಕನಿಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಇದರೊಂದಿಗೆ 28 ವರ್ಷಗಳ ನಂತರ ಪ್ರಶಸ್ತಿ ಗೆಲ್ಲಬೇಕೆಂಬ ಅರ್ಜೆಂಟೀನಾದ ಕನಸು ನನಸಾಗಲೇ ಇಲ್ಲ. ಫೈನಲ್ ವಿಜಿಲ್ ಮೊಳಗುತ್ತಿದ್ದಂತೆ ಜರ್ಮನಿ ಆಟಗಾರರು ಸಂಭ್ರಮದ ಅಲೆಯಲ್ಲಿ ತೇಲಿದರೆ, ಮೆಸ್ಸಿ ಪಡೆ ಕಣ್ಣೀರಿಟ್ಟು ಅಂಗಣದಿಂದ ಹೊರ ನಡೆಯಿತು.
ಚಾಂಪಿಯನ್ ತಂಡ ಜರ್ಮನಿ 210 ಕೋಟಿ ರೂ. ನಗದು ಬಹುಮಾನ ಪಡೆದರೆ, ರನ್ನರ್ ಅಪ್ ಅರ್ಜೆಂಟೀನಾ 150 ಕೋಟಿ ರೂ. ತನ್ನದಾಗಿಸಿಕೊಂಡಿತು. ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 171 ಗೋಲುಗಳು ದಾಖಲಾದವು. ಇದರೊಂದಿಗೆ 1998ರ ವಿಶ್ವಕಪ್ ಗರಿಷ್ಠ ಗೋಲುಗಳಿಕೆಯ ದಾಖಲೆ ಸಮಬಲಗೊಂಡಿತು.