ಫಿಫಾ ಹಾಗೂ ವಿವಿಧ ಕ್ಲಬ್‌ನ ನಡುವೆ ಕೋಟ್ಯಾಂತರ ಹಣದ ಹಿನ್ನಲೆಯಲ್ಲಿ ಸಂಘರ್ಷ ಆರಂಭವಾಗಿದ್ದು, ಲಯೋನಲ್ ಮೆಸ್ಸಿ, ಜೇಮ್ಸ್ ರೋಡ್ರಿಗಸ್, ನೇಮಾರ್, ವೇಯ್ನ್ ರೂನಿಯಂತಹ ಸ್ಟಾರ್ ಆಟಗಾರರು ಮುಂದಿನ ವಿಶ್ವಕಪ್‌ನಲ್ಲಿ ಆಡುವರೇ ಎಂಬ ಬಗ್ಗೆ ಅನುಮಾನ ಮೂಡಿದೆ.
ಫಿಫಾ ಹಾಗೂ ಕ್ಲಬ್ ನಡುವೆ ಪ್ರಮುಖ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ಕ್ಲಬ್‌ನಿಂದ ಹೊರ ಬಂದು ತಮ್ಮ ರಾಷ್ಟ್ರೀಯ ತಂಡಕ್ಕೆ ಆಡುವ ಬಗ್ಗೆ ಮಾಡಿಕೊಂಡಿದ್ದ ಒಪ್ಪಂದ ಮುಂದಿನ ತಿಂಗಳಿಗೆ ಮುಕ್ತಾಯಗೊಳ್ಳಲಿದೆ.
ಈ ಒಪ್ಪಂದದಲ್ಲಿ ಫಿಫಾ ಹಾಗೂ ಕ್ಲಬ್ ನಡುವೆ ಹಣಕಾಸಿನ ವಿಚಾರದಲ್ಲಿ ಬಿರುಕು ಮೂಡಿದ್ದು, ವಿಶ್ವ ಫುಟ್ಬಾಲ್ ಭವಿಷ್ಯದಕ್ಕೆ ಮಹತ್ವದ ತಿರುವು ಪಡೆಯುವ ಸಾಧ್ಯತೆಗಳಿವೆ. ಹಾಗಾಗಿ ನೇಮಾರ್, ಮೆಸ್ಸಿ, ರೂನಿಯಂತಹ ಸ್ಟಾರ್ ಆಟಗಾರರಿಗೆ ಇದೇ ಕಡೇಯ ವಿಶ್ವಕಪ್ ಪಂದ್ಯಾವಳಿ ಎಂಬ ಮಾತುಗಳು ಕೇಳಿ ಬರುತ್ತಿವೆ.
2008ರಲ್ಲಿ ಫಿಫಾ ಹಾಗೂ ಯೂರೋಪ್‌ನ ಕ್ಲಬ್ ಸಂಸ್ಥೆಯು ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಆಟಗಾರರನ್ನು ಬಿಡುಗಡೆಗೊಳಿಸುವ ಕುರಿತು ಒಪ್ಪಂದಕ್ಕೆ ಮುಂದಾಗಿದ್ದವು. ಈ ಒಪ್ಪಂದ ಮುಂದುವರಿಯದಿದ್ದರೆ, ಯಾವುದೇ ಕ್ಲಬ್‌ಗಳು ಅಂತಾರಾಷ್ಟ್ರೀಯ ವೇಳಾಪಟ್ಟಿಯ ಸಮಯದಲ್ಲಿ ತಮ್ಮ ಆಟಗಾರರಿಗೆ ಆಡಲು ಅವಕಾಶ ನೀಡುವುದಿಲ್ಲ ಎಂದು ಯೂರೋಪ್ ಕ್ಲಬ್ ಸಂಸ್ಥೆಯ ಪ್ರಮುಖ ಮೂಲಗಳು ಅಭಿಪ್ರಾಯಪಟ್ಟಿವೆ.
ಈಗ ಫಿಫಾ ಹಾಗೂ ಕ್ಲಬ್ ಸಂಸ್ಥೆಗಳ ನಡುವೆ ಪ್ರತಿಷ್ಠೆಯ ತಿಕ್ಕಾಟವಾಗಿದೆ. ಒಂದುವೇಳೆ ಈ ಒಪ್ಪಂದ ಮುಂದುವರಿಯದಿದ್ದರೆ, ವಿಶ್ವಕಪ್ ಹಾಗೂ ಫಿಫಾ ಮೂಲೆಗುಂಪಾಗುವ ಸಾಧ್ಯತೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಬ್ರೆಜಿಲ್, ಅರ್ಜೆಂಟೀನಾ, ಕೆಮರೂನ್‌ನಂತಹ ತಂಡಗಳು ಸೌಹಾರ್ದ್ಯ ಪಂದ್ಯಗಳನ್ನು ಆಡುವ ಸಂದರ್ಭದಲ್ಲಿ ಪ್ರಮುಖ ಆಟಗಾರರು ಭಾಗವಹಿಸದಿದ್ದರೆ, ಆಯಾ ತಂಡಗಳಿಗೆ ತೀವ್ರ ಹಿನ್ನಡೆಯಾಗಲಿದೆ.