ಜರ್ಮನಿ 1 ಅರ್ಜೆಂಟೈನಾ 0: ಮಾರಿಯೋ ಗೋಟ್ಜೆ 113ನೇ ನಿಮಿಷ
ಜಾಗತಿಕ ಫುಟ್ಬಾಲ್‌ನಲ್ಲಿ ಜರ್ಮನಿ 24 ವರ್ಷಗಳ ನಂತರ ಮತ್ತೊಮ್ಮೆ ತನ್ನ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾಗಿದೆ. ಬ್ರೆಜಿಲ್‌ನ ಐತಿಹಾಸಿಕ ಮಾರಕಾನ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮಣಿಸಿ ಜರ್ಮನಿ ಹೊಸ ಬಾಷ್ಯೆ ಬರೆಯಿತು. ಆ ಮೂಲಕ 4ನೇ ಬಾರಿಗೆ ವಿಶ್ವಕಪ್ ಗರಿ ಮುಡಿಗೇರಿಸಿಕೊಂಡಿತು. ಅದೃಷ್ಟ ಜರ್ಮನಿಯ ಕೈ ಹಿಡಿದರೆ, ಅರ್ಜೆಂಟೀನಾವನ್ನು ದೂರತಳ್ಳಿತು.
ಜರ್ಮನಿ 1 ಅರ್ಜೆಂಟೈನಾ 0: ಮಾರಿಯೋ ಗೋಟ್ಜೆ 113ನೇ ನಿಮಿಷ
ರಿಯೋ ಡಿ ಜನೈರೋ: ಜಾಗತಿಕ ಫುಟ್ಬಾಲ್ ಭೂಪಟದಲ್ಲಿ ಜರ್ಮನಿ ಮತ್ತೊಂದು ಹೊಸ ಬಾಷ್ಯೆ ಬರೆದಿದೆ. ಮುಖ್ಯವಾಗಿ ದಕ್ಷಿಣ ಅಮೆರಿಕದಲ್ಲಿ ವಿಶ್ವಕಪ್ ಎತ್ತಿ ಹಿಡಿದ ಮೊದಲ ಯೂರೋಪಿಯನ್ ತಂಡ ಎಂಬ ಹೆಗ್ಗಳಿಕೆಗೆ ಅದು ಭಾಜನವಾಗಿದೆ.
ರಿಯೋ ಡಿ ಜನೈರೋದಲ್ಲಿನ ಪ್ರತಿಷ್ಠಿತ ಮಾರಕಾನ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ 2014ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜರ್ಮನಿ ಆಟಗಾರರು 1-0 ಗೋಲಿನಿಂದ ಪ್ರಬಲ ಅರ್ಜೆಂಟೀನಾ ತಂಡವನ್ನು ಸದೆಬಡಿದು ಈ ಐತಿಹಾಸಿಕ ಸಾಧನೆ ಮಾಡಿದರು. ಆ ಮೂಲಕ ಜರ್ಮನಿ ಆಟಗಾರರು 24 ವರ್ಷಗಳ ನಂತರ ಮತ್ತೊಮ್ಮೆ ಹಾಗೂ ಒಟ್ಟಾರೆ 4ನೇ ಬಾರಿಗೆ ವಿಶ್ವಕಪ್‌ಗೆ ಮುಕುಟಕ್ಕೆ ಚುಂಬಿಸಿದರು. ಇಟಲಿಯಲ್ಲಿ ನಡೆದ 1990ರ ಟೂರ್ನಿಯಲ್ಲಿ ಜರ್ಮನಿ ತಂಡ ಅರ್ಜೆಂಟೀನಾವನ್ನೇ ಸೋಲಿಸಿ ತನ್ನ ಹಿಂದಿನ ಪ್ರಶಸ್ತಿ ಗೆದ್ದುಕೊಂಡಿತ್ತು.
ಪಂದ್ಯದ ಹೆಚ್ಚುವರಿ ಸಮಯದಲ್ಲಿ (113ನೇ ನಿಮಿಷ) ಬದಲಿ ಆಟಗಾರ ಮಾರಿಯೋ ಗೋಟ್ಜೆ ಆಕರ್ಷಕ ಗೋಲು ಬಾರಿಸುವ ಮೂಲಕ ಜರ್ಮನಿ ಹೊಸ ಇತಿಹಾಸ ರಚಿಸಲು ಕಾರಣರಾದರು. ಮತ್ತೊಬ್ಬ ಬದಲಿ ಆಟಗಾರ ಆ್ಯಂಡ್ರೆ ಶುರಲ್ ಒದಗಿಸಿಕೊಟ್ಟ ಅವಕಾಶದಲ್ಲಿ ಗೋಟ್ಜೆ, ತುಂಬ ಬುದ್ಧಿವಂತಿಕೆಯಿಂದ ಅರ್ಜೆಂಟೀನಾ ಗೋಲ್‌ಕೀಪರ್ ಸೆರ್ಗಿಯೊ ರೊಮೇರೊ ಅವರ ಕಣ್ತಪ್ಪಿಸಿ ಚೆಂಡನ್ನು ಬಲೆಯೊಳಕ್ಕೆ ಸೇರಿಸುವ ಮೂಲಕ ಜರ್ಮನಿ ಪರ ವಿಜಯದ ಗೋಲು ಬಾರಿಸಿದಂತಾಯಿತು. ಗೋಟ್ಜೆ ತಮ್ಮ ತಂಡದ ಪರ ಭಾಗ್ಯದ ಬಾಗಿಲು ತೆರೆ ಯುತ್ತಿದ್ದಂತೆ ಜರ್ಮನಿ ಅಭಿಮಾನಿಗಳು ಹುಚ್ಚೆದ್ದು ಕುಣಿಯಲಾರಂಭಿಸಿದರೆ, ಇತ್ತ ಅರ್ಜೆಂಟೀನಾ ಅಭಿಮಾನಿಗಳು ಗಳಗಳನೆ ಅಳಲಾರಂಭಿಸಿದರು. ಅಂತಿಮ 7 ನಿಮಿಷಗಳಲ್ಲಿ ಅರ್ಜೆಂಟೀನಾ ಗೋಲುಗಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿತಾದರೂ ಯಶಸ್ಸು ದೊರೆಯಲಿಲ್ಲ.
ನಿಗದಿತ ಅವಧಿಯ ಆಟ ಕೊನೆಗೊಳ್ಳಲು ಕೇವಲ 2 ನಿಮಿಷಗಳಿದ್ದಾಗ ಮಿರೋಸ್ಲಾವ್ ಕ್ಲೋಸ್ ಸ್ಥಾನದಲ್ಲಿ ಮೈದಾನ ಪ್ರವೇಶಿಸಿದ ಗೋಟ್ಜೆ ತಂಡ ತಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಜರ್ಮನಿಯ ಚಾನ್ಸಲರ್ ಆ್ಯಂಗೆಲಾ ಮೆರ್ಕೆಲ್ ಉಪಸ್ಥಿತಿ ಆಟಗಾರರಲ್ಲಿ ಒಂದು ರೀತಿಯ ಹೊಸ ಹುಮ್ಮಸ್ಸನ್ನೇ ತುಂಬಿಸಿತ್ತು. ಅದೃಷ್ಟ ಕೂಡ ಜರ್ಮನಿಯನ್ನೇ ಬೆಂಬಲಿಸಿತು.
ಉಭಯರಿಗೆ ನಿಗದಿತ ಅವಧಿಯಲ್ಲಿ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಅರ್ಜೆಂಟೀನಾ ನಾಯಕ ಲಯೋನೆಲ್ ಮೆಸ್ಸಿ ಎರಡು ಬಾರಿ ಹಾಗೂ ರೋಡ್ರಿಗೊ ಪಲಾಸಿಯೊ ಒಮ್ಮೆ ಗೋಲು ಗಳಿಸುವ ಉತ್ತಮ ಅವಕಾಶ ಹೊಂದಿದ್ದರು. ಆದರೆ, ಚೆಂಡು ಕೂದಲೆಳೆ ಅಂತರದಲ್ಲಿ ಗೋಲು ಬಲೆಯಿಂದಾಚೆ ಹೊರಹೋಗುವುದ ರೊಂದಿಗೆ ಭಾರಿ ನಿರಾಶೆ ಅನುಭವಿಸಿದರು.
ಹಾಗೆಯೇ ಜರ್ಮನಿ ಪಾಲಿಗೂ ಮೂರ್ನಾಲ್ಕು ಉತ್ತಮ ಅವಕಾಶಗಳು ದೊರೆತಿದ್ದವು. ಆದರೆ, ಟೋನಿ ಕ್ರೂಸ್, ಮಿರೋಸ್ಲಾವ್ ಕ್ಲೋಸ್ ನಡೆಸಿದ ಪ್ರಯತ್ನಗಳು ವಿಫಲವಾದವು. ಪಂದ್ಯ ಹೆಚ್ಚುವರಿ ಸಮಯಕ್ಕೆ ತಿರುಗಿದಾಗ ಜರ್ಮನಿಯ ಸಂಪರ್ಕ ಆಟಗಾರ ಬ್ಯಾಸ್ಟಿಯನ್ ಶ್ವೇನ್‌ಸ್ಟೈಗರ್ ಚೆಂಡಿಗಾಗಿ ಪೈಪೋಟಿ ನಡೆಸಿದಾಗ ಕಣ್ಣಿನ ಕೆಳಭಾಗಕ್ಕೆ ಪೆಟ್ಟು ಬಿದ್ದು ರಕ್ತ ಬೀಳತೊಡಗಿತು.
ಪಂದ್ಯದಲ್ಲಿ ಜರ್ಮನಿ ಹೆಚ್ಚು ಬಾರಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರೂ ಸಹ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಅರ್ಜೆಂಟೀನಾದ ಮೆಸ್ಸಿ ಬಗ್ಗೆ ತೀರ ಎಚ್ಚರಿಕೆ ವಹಿಸಿದ್ದ ಜರ್ಮನಿ ಕೋಚ್ ಜೋಕಿಮ್ ಲೋ, ನಾಲ್ಕು ರಕ್ಷಣಾ ಆಟಗಾರರು ಮತ್ತು ಐದು ಮಂದಿ ಸಂಪರ್ಕ ಆಟಗಾರರ ಮೂಲಕ ಅವರನ್ನು ಸಂಪೂರ್ಣ ಬಂಧಿಸಿಡುವ ತಂತ್ರ ರೂಪಿಸಿದ್ದರು. ಹಾಗಾಗಿ, ಮೆಸ್ಸಿಗೆ ಗೋಲು ಬಲೆಯ ಸಮೀಪ ಬರಲು ಕಷ್ಟವೇ ಆಗಿತ್ತು. ಆದರೂ, ಕೆಲವೊಮ್ಮೆ ಸಹಆಟಗಾರರಿಗೆ ಗೋಲುಗಳಿಸುವ ಅವಕಾಶ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದರೂ ಸಹ ಸದ್ಭಳಕೆಯಾಗಲಿಲ್ಲ. ಆಕ್ರಮಣಕಾರಿ ಮನೋಭಾವ ಪ್ರದರ್ಶಿಸು ವಲ್ಲಿ ಅರ್ಜೆಂಟೀನಾ, ಜರ್ಮನಿಯನ್ನೇ ಮೀರಿಸಿತು. ಆದರೆ, ಜರ್ಮನಿಯಿಂದ ಚೆಂಡನ್ನು ಕಿತ್ತುಕೊಳ್ಳುವುದು ಮಾತ್ರ ಅರ್ಜೆಂಟೀನಾಗೆ ಸುಲಭವಾಗಿರಲಿಲ್ಲ. ಆದರೂ, ಕಷ್ಟಪಟ್ಟು ಚೆಂಡನ್ನು ಪಡೆದು ಗುರಿಯೆಡೆಗೆ ದಿಟ್ಟ ನಡೆ ತೋರಿದರೂ ಅದೃಷ್ಟ ಸಾಥ್ ನೀಡಲಿಲ್ಲ. ಪಂದ್ಯದ 31ನೇ ನಿಮಿಷದಲ್ಲಿ ಗೋಂಜಾಲೊ ಹಿಗ್ವೆನ್ ಚೆಂಡನ್ನು ಬಲೆಯೊಳಕ್ಕೆ ಬಾರಿಸುತ್ತಿದ್ದಂತೆಯೇ ಅರ್ಜೆಂಟೀನಾ ಆಟಗಾರರ ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಆದರೆ, ರೆಫರಿ ಆಫ್‌ಸೈಡ್ ಎಂದು ಗೋಲು ನಿರಾಕರಿಸಿದಾಗ ಅರ್ಜೆಂಟೀನಾ ಎದೆ ಧಸಕ್ಕೆಂದಿತು.
ಫೈನಲ್ ಪಂದ್ಯದ ನೋಟ
ಜರ್ಮನಿ v/s ಅರ್ಜೆಂಟೀನಾ
10 ಒಟ್ಟು ಒದೆತ 10
7 ಗುರಿಯತ್ತ ಒದೆತ 2
20 ತಪ್ಪುಗಳು 16
60/ ಚೆಂಡಿನ ನಿಯಂತ್ರಣ 40/
5 ಕಾರ್ನರ್ಸ್ 3
2 ರಕ್ಷಿಸಿಕೊಂಡಿದ್ದು 6
3 ಆಫ್ ಸೈಡ್ 2
2 ಹಳದಿ ಕಾರ್ಡ್ 2
4-5-1 ತಂತ್ರಗಾರಿಕೆ 4-4-2
ಒಂದು ದಿನ ಮುನ್ನವೇ ಟ್ವಿಟರ್‌ನಲ್ಲಿ ವಿಶ್ವಕಪ್ ಫೈನಲ್ ಫಲಿತಾಂಶ
ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಆರಂಭವಾಗುವ ಒಂದು ದಿನ ಮುನ್ನವೇ ಟ್ವಿಟರ್ ಬಳಕೆದಾರರೊಬ್ಬರು ಪಂದ್ಯದ ಫಲಿತಾಂಶವನ್ನು ಶೇ.100ರಷ್ಟು ಖಚಿತವಾಗಿ ಪ್ರಕಟಿಸಿರುವುದು ಈಗ ಬೇಳಕಿಗೆ ಬಂದಿದೆ. ನಾಲ್ಕು ' ಟ್ವೀಟ್‌ಗಳಲ್ಲಿ ಪಂದ್ಯದ ಫಲಿತಾಂಶವನ್ನು ಪ್ರಕಟಿಸಿದ್ದು, ಅದರಲ್ಲಿ 'ನಾಳಿನ ಫಲಿತಾಂಶದಲ್ಲಿ ಜರ್ಮನಿಗೆ 1-0 ಅಂತರದಲ್ಲಿ ಗೆಲವು', 'ಜರ್ಮನಿ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಲಿದೆ', 'ಗೋಟ್ಜೆ ಗೋಲು ದಾಖಲಿಸುತ್ತಾರೆ', 'ಈ ಗೋಲು ಹೆಚ್ಚುವರಿ ಸಮಯದ ದ್ವಿತೀಯಾರ್ಧದಲ್ಲಿ ದಾಖಲಾಗುತ್ತದೆ' ಎಂದು ಟ್ವೀಟ್ ಮಾಡಿದ್ದು, ಪಂದ್ಯದ ಫಲಿತಾಂಶ ಅದೇ ರೀತಿ ಹೊರಹೊಮ್ಮಿದೆ.
ಗೋಲುಗಳ ದಾಖಲೆ ಸಮ
ಈ ಬಾರಿ ಟೂರ್ನಿ ಸೇರಿದಂತೆ ಒಟ್ಟು 20 ಬಾರಿ ವಿಶ್ವಕಪ್ ನಡೆದಿದೆ. ಈ ಟೂರ್ನಿ ಒಟ್ಟು 171 ಗೋಲುಗಳು ದಾಖಲಾಗಿರುವುದು ಈ ಹಿಂದಿನ ದಾಖಲೆಯನ್ನು ಸಮಗೊಳಿಸಿದೆ. 1998ರ ವಿಶ್ವಕಪ್‌ನಲ್ಲೂ ಒಟ್ಟು 171 ಗೋಲುಗಳು ದಾಖಲಾಗಿದ್ದವು.
ಎರಡು ವಿಶ್ವಕಪ್‌ನ ಒಟ್ಟಾರೆ ಗೋಲು ಮಾಹಿತಿ
ವರ್ಷ ತಂಡ ಪಂದ್ಯ ಗೋಲು ಸರಾಸರಿ
1998 32 64 171 2.67
2014 32 64 171 2.67
ಚಾಂಪಿಯನ್ ಮೊತ್ತ 210 ಕೋಟಿ
ರನ್ನರ್ ಅಪ್ 150 ಕೋಟಿ
ಗೋಲ್ಡನ್ ಬಾಲ್
ಲಯೋನೆಲ್ ಮೆಸ್ಸಿ
ತಂಡ: ಅರ್ಜೆಂಟೀನಾ
ಸಂಪರ್ಕ ಆಟಗಾರ
ಪಂದ್ಯ 7
ಗೋಲು 4
ಗೋಲಿಗೆ ನೆರವು 1
ಗೋಲ್ಡನ್ ಬೂಟ್
ಜೇಮ್ಸ್ ರೋಡ್ರಿಗಜ್
ತಂಡ: ಕೊಲಂಬಿಯಾ
ಮುನ್ನಡೆ ಆಟಗಾರ
ಪಂದ್ಯ 5
ಗೋಲು 6
ಗೋಲಿಗೆ ನೆರವು 2
ಗೋಲ್ಡನ್ ಗ್ಲೌ
ಮ್ಯಾನ್ಯುಯಲ್ ನೆಯೂರ್
ತಂಡ: ಜರ್ಮನಿ
ಗೋಲ್ ಕೀಪರ್
ಪಂದ್ಯ 7
ಗೋಲುತಡೆ 25
ಕಂಚಿನ ಶೂ
ನೇಮಾರ್
ತಂಡ: ಬ್ರೆಜಿಲ್
ಸ್ಟ್ರೈಕರ್
ಪಂದ್ಯ 6
ಗೋಲು 4
ಗೋಲಿಗೆ ನೆರವು 1
ಉದಯೋನ್ಮುಖ ಆಟಗಾರ
ಪೌಲ್ ಪೊಗ್ಬಾ
ತಂಡ: ಫ್ರಾನ್ಸ್
ಸಂಪರ್ಕ ಆಟಗಾರ
ಪಂದ್ಯ 5
ಗೋಲು 1
ಗೋಲಿಗೆ ನೆರವು 1
ಬೆಳ್ಳಿ ಚೆಂಡು /ಶೂ
ಮುಲ್ಲರ್
ತಂಡ: ಜರ್ಮನಿ
ಸಂಪರ್ಕ ಆಟಗಾರ
ಪಂದ್ಯ 7
ಗೋಲು 5
ಗೋಲಿಗೆ ನೆರವು 3
ಕಂಚಿನ ಚೆಂಡು
ಅರ್ಜೆನ್ ರಾಬೆನ್
ತಂಡ: ಹಾಲೆಂಡ್
ಮುನ್ನಡೆ ಆಟಗಾರ
ಪಂದ್ಯ 6
ಗೋಲು 3
ಗೋಲಿಗೆ ನೆರವು 1
ರಷ್ಯಾ ವಿಶ್ವಕಪ್‌ಗೆ ಹೂಡಿಕೆ
19.5 ಅಮೆರಿಕನ್ ಮಿಲಿಯನ್ ಡಾಲರ್