ಜಾಗತಿಕ ಫುಟ್ಬಾಲ್ ಉತ್ಸವ ವರ್ಣರಂಜಿತ ತೆರೆ ಕಂಡಿದೆ. ಬ್ರೆಜಿಲ್‌ನ ರಿಯೋ ಡಿ ಜನೈರೋದ ಮಾರಕಾನ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ವಿಶ್ವಕಪ್ ಫುಟ್ಬಾಲ್ ಮೇಳಕ್ಕೆ ಭವ್ಯ ತೆರೆ ಎಳೆಯಲಾಯಿತು. ಕೊಲಂಬಿಯಾದ ಖ್ಯಾತ ಪಾಪ್ ಗಾಯಕಿ ಶಕೀರಾ, ಬ್ರೆಜಿಲ್‌ನ ಗಾಯಕರಾದ ಐವೆಟೆ ಸ್ಯಾಂಗಾಲೊ, ಕರ್ಲಿನ್‌ಹೋಸ್ ಬ್ರೌನ್, ಮೆಕ್ಸಿಕೊದ ಗಿಟಾರು ವಾದಕ ಸಾಂಟಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಕೀರಾ ವಿಶ್ವಕಪ್‌ನ ಲಾ...ಲಾ...ಲಾ... ಗೀತೆ ಹಾಡಿ ಅಭಿಮಾನಿಗಳ ಮನ ತಣಿಸಿದರು. ಶಕೀರಾರ ಕಂಠದಿಂದ ಹರಿದುಬಂದ ಗಾನ ಸುಧೆ ಮುಕ್ತಾಯ ಸಮಾರಂಭಕ್ಕೆ ಮೆರಗು ತಂದಿತು. ಬ್ರೆಜಿಲ್‌ನ ಸಾಂಪ್ರದಾಯಿಕ ನೃತ್ಯ 'ಸಾಂಬಾ ಡ್ಯಾನ್ಸ್' ಅನ್ನು ಕಲಾವಿದರು ಪ್ರದರ್ಶಿಸಿದರು. ಯಶಸ್ವಿಯಾಗಿ ಟೂರ್ನಿ ನಡೆಸಿಕೊಟ್ಟ ಬ್ರೆಜಿಲ್ ಹೆಮ್ಮೆಯೊಂದಿಗೆ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿತು.
ವಿಜಯೋತ್ಸವ
ಬರ್ಲಿನ್: ಬ್ರೆಜಿಲ್‌ನಲ್ಲಿ ಜರ್ಮನಿ ತಂಡ ವಿಶ್ವಕಪ್ ಗೆಲವು ದಾಖಲಿಸುತ್ತಿದ್ದಂತೆ ಬರ್ಲಿನ್‌ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾತ್ರಿಯೆಲ್ಲಾ ಅಭಿಮಾನಿಗಳು ನೃತ್ಯ, ಪಟಾಕಿಯೊಂದಿಗೆ ಸಂಭ್ರಮದ ಅಲೆಯಲ್ಲಿ ತೇಲಿದರು.
ಜರ್ಮನಿ ತಂಡ 1-0 ಅಂತರದ ಗೆಲವು ದಾಖಲಿಸುತ್ತಿದಂತೆ ಪಟಾಕಿಗಳ ಅಬ್ಬರ ಆರಂಭವಾಯಿತು. ಸುಮಾರು 2.50 ಲಕ್ಷ ಅಭಿಮಾನಿಗಳು ರಾಜಧಾನಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಎಲ್ಲಾ ಅಭಿಮಾನಿಗಳು ರಸ್ತೆಗಿಳಿದು ರಾಷ್ಟ್ರಧ್ವಜವನ್ನು ಹಾರಿಸುತ್ತಾ, ಹಾಡುತ್ತ, ಕುಣಿಯುತ್ತಾ ತಮ್ಮ ಸಂತೋಷಕ್ಕೆ ಕಡಿವಾಣ ಹಾಕದೇ ಆನಂದಿಸಿದರು.
ವಿಶ್ವ ಚಾಂಪಿಯನ್ನರು
ವರ್ಷ ಚಾಂಪಿಯನ್ನರು ರನ್ನರ್ ಅಪ್ ಫಲಿತಾಂಶ
1930 ಉರುಗ್ವೆ ಅರ್ಜೆಂಟೀನಾ 2-1
1934 ಇಟಲಿ ಚಿಕೊಸ್ಲೊವಾಕಿಯಾ 2-1
1938 ಇಟಲಿ ಹಂಗೇರಿ 4-2
1950 ಉರುಗ್ವೆ ಬ್ರೆಜಿಲ್ 2-1
1954 ಪಶ್ಚಿಮ ಜರ್ಮನಿ ಹಂಗರಿ 3-2
1958 ಬ್ರೆಜಿಲ್ ಸ್ವೀಡನ್ 5-2
1962 ಬ್ರೆಜಿಲ್ ಚಿಕೊಸ್ಲೊವಾಕಿಯಾ 3-1
1966 ಇಂಗ್ಲೆಂಡ್ ಪಶ್ಚಿಮ ಜರ್ಮನಿ 4-2
1970 ಬ್ರೆಜಿಲ್ ಇಟಲಿ 4-1
1974 ಪಶ್ಚಿಮ ಜರ್ಮನಿ ಹಾಲೆಂಡ್ 2-1
1978 ಅರ್ಜೆಂಟೀನಾ ಹಾಲೆಂಡ್ 3-1
1982 ಇಟಲಿ ಪಶ್ಚಿಮ ಜರ್ಮನಿ 3-1
1986 ಅರ್ಜೆಂಟೀನಾ ಪಶ್ಚಿಮ ಜರ್ಮನಿ 3-2
1990 ಪಶ್ಚಿಮ ಜರ್ಮನಿ ಅರ್ಜೆಂಟೀನಾ 1-0
1994 ಬ್ರೆಜಿಲ್ ಇಟಲಿ 3-2
1998 ಫ್ರಾನ್ಸ್ ಬ್ರೆಜಿಲ್ 3-0
2002 ಬ್ರೆಜಿಲ್ ಜರ್ಮನಿ 2-0
2006 ಇಟಲಿ ಫ್ರಾನ್ಸ್ 5-3
2010 ಸ್ಪೇನ್ ಹಾಲೆಂಡ್ 1-0
2014 ಜರ್ಮನಿ ಅರ್ಜೆಂಟೀನಾ 1-0
ದುಃಖ ಸಾಗರದಲ್ಲಿ ಅರ್ಜೆಂಟೀನಾ
ಬ್ಯೂನಸ್ ಐರಿಸಿ: ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ತಮ್ಮ ತಂಡ ಸೋತ ನಂತರ ಅರ್ಜೆಂಟೀನಾ ಅಭಿಮಾನಿಗಳು ಕಣ್ಣೀರು, ನೃತ್ಯ ಹಾಗೂ ಹಿಂಸಾತ್ಮಕ ಭಾವನೆ ವ್ಯಕ್ತಪಡಿಸಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಜೆಂಟೀನಾ ತಂಡ ಸೋಲನುಭವಿಸುತ್ತಿದ್ದಂತೆ ಅಭಿಮಾನಿಗಳಲ್ಲಿ ಕೆಲವರು ಟ್ರಾಫಿಕ್ ಸಿಗ್ನಲ್ ಕಂಬ ಹಾಗೂ ಬಸ್‌ಗಳ ಮೇಲೆ ಹತ್ತಿ ಡ್ರಮ್ ಬಾರಿಸುತ್ತಾ ನೃತ್ಯ ಮಾಡಿದರೆ, ಮತ್ತೆ ಕೆಲವು ಬೇಸರದಿಂದ ಕಣ್ಣಿರ ಕೋಡಿ ಹರಿಸಿದರು. ಇನ್ನು ಕೆಲ ಕಿಡಿಗೇಡಿಗಲು ಜನರನ್ನು ನಿಯಂತ್ರಿಸಲು ನೇಮಿಸಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಪೊಲೀಸರು ರಬ್ಬರ್ ಬುಲೆಟ್, ಅಶ್ರುವಾಯು ಜಲ ಫಿರಂಗಿಯನ್ನು ಪ್ರಯೋಗಿಸಬೇಕಾಯಿತು.