ಬರ್ಲಿನ್: ತಮ್ಮ ದೇಶ ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಭಾರೀ ಹಿಗ್ಗಿನಲ್ಲಿದ್ದ 10 ಸಾವಿರ ಅಭಿಮಾನಿಗಳ ದಂಡು, ಜರ್ಮನಿ ತಂಡವನ್ನು ಮಂಗಳವಾರ ಅದ್ಧೂರಿಯಿಂದ ಬರಮಾಡಿಕೊಂಡಿತು. ಎರಡು ದಶಕಗಳ ನಂತರ ವಿಶ್ವಕಪ್ ಗೆದ್ದುಕೊಂಡು ಬಂದ ತಂಡಕ್ಕೆ ಜರ್ಮನಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬರ್ಲಿನ್ ಬೀದಿಗಳಲ್ಲಿ ಜನರು ಫುಟ್ಬಾಲ್ ತಂಡ ಆಗಮಿಸುವುದನ್ನೇ ಕಾಯ್ದು ಕುಳಿತಿದ್ದರು. ಬರ್ಲಿನ್‌ನ ಟೆಗೆಲ್ ವಿಮಾನ ನಿಲ್ದಾಣದಲ್ಲಿ ತಂಡ ಆಗಮಿಸಿದ್ದೇ ತಡ ಅಭಿಮಾನಿಗಳ ದಂಡಿನ ಜಯಘೋಷಗಳು ಮುಗಿಲು ಮುಟ್ಟಿದ್ದವು. ಬರ್ಲಿನ್‌ನ ಐತಿಹಾಸಕ ಮಹಾದ್ವಾರ ಬ್ರಾಂಡೆನ್ಬರ್ಗ್ ಬಳಿ ಅಭಿಮಾನಿಗಳ ದಂಡು ವಿಶ್ವಕಪ್ ಸಂಭ್ರಮಕ್ಕೆ ಅದ್ಧೂರಿಯಾಗಿ ಸಜ್ಜುಗೊಂಡಿತ್ತು. ಜರ್ಮನಿ ನಾಯಕ ಫಿಲಿಪ್ ಲಾಹ್ಮ್ ಅವರು ವಿಶ್ವಕಪ್ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡೇ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಅಭಿಮಾನಿಗಳ ಸಂಭ್ರಮ ಹೇಳತೀರದಾಗಿತ್ತು. ಕೆಲ ಅಭಿಮಾನಿಗಳು, ತಂಡ ಬರುವ ಹಿಂದಿನ ದಿನ ರಾತ್ರಿಯಿಂದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾತರದಿಂದ ಕಾಯುತ್ತಿದ್ದರು. ಈ ಬಾರಿ ನಾವು ವಿಶ್ವಕಪ್ ಗೆದ್ದಿದ್ದಕ್ಕೆ ದೇವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಜರ್ಮನಿ ಆಟಗಾರರು ಹೇಳಿಕೊಂಡರು. ರಿಯೋ ಡಿ ಜನೈರೋದಲ್ಲಿ ಜರ್ಮನಿ ಆಟಗಾರರು ಹೊರಡಬೇಕಿದ್ದ ವಿಮಾನಿ ಗಂಟೆಗಳ ಕಾಲ ವಿಳಂಬವಾಯಿತು. ಸಾಮಾನುಗಳನ್ನು ಸಾಗುಸುವ ಟ್ರಕ್ಕೊಂದು ವಿಮಾನದ ಭಾಗವೊಂದಕ್ಕೆ ಡಿಕ್ಕಿ ಹೊಡೆದಿದ್ದೇ ವಿಳಂಬಕ್ಕೆ ಕಾರಣವಾಗಿತ್ತು.