ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಜರ್ಮನಿ, ಪೋರ್ಚುಗಲ್ ಹಾಟ್ ಫೇವರಿಟ್

ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ 'ಬಿ' ಗುಂಪಿನಷ್ಟೇ ಗಮನ ಸೆಳೆಯುತ್ತಿರುವುದು 'ಜಿ' ಗುಂಪು. ಮೂರು ಬಾರಿ ಚಾಂಪಿಯನ್ ಜರ್ಮನಿ, ಪೊರ್ಚುಗಲ್, ಘಾನಾ ಹಾಗೂ ಅಮೆರಿಕ ಈ ಗುಂಪಿನಲ್ಲಿವೆ.

Rashmi Kasaragodu
Updated On : 12 Jun 2014, 11:59 am

ಜಿ ಗುಂಪು

ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ 'ಬಿ' ಗುಂಪಿನಷ್ಟೇ ಗಮನ ಸೆಳೆಯುತ್ತಿರುವುದು 'ಜಿ' ಗುಂಪು.  ಮೂರು ಬಾರಿ ಚಾಂಪಿಯನ್ ಜರ್ಮನಿ, ಪೊರ್ಚುಗಲ್, ಘಾನಾ ಹಾಗೂ ಅಮೆರಿಕ ಈ ಗುಂಪಿನಲ್ಲಿವೆ. ಇಲ್ಲಿ ಜರ್ಮನಿ ಮತ್ತು ಪೊರ್ಚುಗಲ್ ತಂಡಗಳು ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆಯುವ ಫೇವರಿಟ್ ತಂಡಗಳು. ಆದರೆ, ನಾಲ್ಕು ಬಾರಿ ಆಫ್ರಿಕಾ ಕಪ್ ನೇಷನ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದಿರುವ ಘಾನಾ ಹಾಗೂ ಅಮೆರಿಕ ತಂಡಗಳೂ ತೀವ್ರ ಪೈಪೋಟಿಯನ್ನೊಡ್ಡುತ್ತಿವೆ. ಏಳು ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿರುವ ಜರ್ಮನಿ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಅಲ್ಲದೆ, ಸ್ಥಿರ ಪ್ರದರ್ಶನ ನೀಡುತ್ತಿರುವ ವಿಶ್ವದ ಶ್ರೇಷ್ಠ ತಂಡಗಳಲ್ಲೊಂದಾಗಿದೆ. ಇನ್ನು ವಿಶ್ವ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನ ಹೊಂದಿರುವ ಪೊರ್ಚುಗಲ್ ಸಹ ನಾಕೌಟ್ ಹಂತಕ್ಕೆ ಪ್ರವೇಶಿಸಲು ಎದುರು ನೋಡುತ್ತಿದೆ. 2010ರ ಆವೃತ್ತಿಯಲ್ಲಿ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದ ಘಾನಾ ಸಹ ಗೆಲ್ಲುವ ಭರವಸೆ ಹೊಂದಿದೆ. ಅರ್ಹತಾ ಸುತ್ತಿನಲ್ಲಿ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿರುವ ಘಾನಾ ಉತ್ತಮ ಫಾರ್ಮ್ ಹೊಂದಿದ ತಂಡವೆನಿಸಿದೆ. ಆದರೆ, ಅಮೆರಿಕ ಮಾತ್ರ ಯೂರೋಪಿಯನ್ ರಾಷ್ಟ್ರಗಳ ಸವಾಲನ್ನು ದಾಟಿ ಹೋಗುವ ಹಾದಿಯ ಹುಡುಕಾಟ ನಡೆಸಿದೆ. 1930ರ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಅಮೆರಿಕ ಆಗ ಅತ್ಯುತ್ತಮ ಪ್ರದರ್ಶನ ನೀಡಿತ್ತು. ನಂತರ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಆವೃತ್ತಿಯಲ್ಲಿ ಮುಂದಿನ ಹಂತ ಪ್ರವೇಶಿಸಲು ಅದು ಎದುರು ನೋಡುತ್ತಿದೆ.




ಅಮೆರಿಕ
ಕೋಚ್: ಜರ್ಗನ್ ಕ್ಲಿನ್ಸ್ಮ್ಯಾನ್
ಸ್ಟಾರ್ ಆಟಗಾರ: ಕ್ಲೈಂಟ್ ಡೆಂಪ್ಸೇ
ಶ್ರೇಷ್ಠ ಪ್ರದರ್ಶನ: 1930ರಲ್ಲಿ 3ನೇ ಸ್ಥಾನ.
ಅರ್ಹತಾ ಸುತ್ತಿನ ಆರಂಭದಲ್ಲಿ ಕ್ಲಿನ್ಸ್ಮನ್ ತಂಡ ಗೋಲು ಗಳಿಸಲು ತೊಂದರೆ ಅನುಭವಿಸಿತ್ತು. ಆದರೆ, ಸ್ಪರ್ಧಾತ್ಮಕ ಹೋರಾಟ ನಡೆಸಿದ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ವಿಶ್ವಕಪ್ನಲ್ಲಿ ಯೂರೋಪಿಯನ್ ತಂಡಗಳು ಅಮೆರಿಕಕ್ಕೆ ದೊಡ್ಡ ಸವಾಲು ನೀಡುವ ಸಾಧ್ಯತೆಗಳಿವೆ. ಕಾರಣ, ಜರ್ಮನಿ ಮತ್ತು ಪೋರ್ಚುಗಲ್ನಂತಹ ತಂಡಗಳನ್ನು ಎದುರಿಸುವುದು ಅಮೆರಿಕಕ್ಕೆ ಸುಲಭದ ಮಾತಲ್ಲ. ತಂಡದ ಅತ್ಯುತ್ತಮ ಆಟಗಾರ ಲಂಡನ್ ಡೋನೊವಾನ್ ಅನುಪಸ್ಥಿತಿ ತಂಡವನ್ನು ಕಾಡಬಹುದು.



ಜರ್ಮನಿ
ಕೋಚ್: ಜೋಚಿಮ್ ಲೋ
ಸ್ಟಾರ್ ಆಟಗಾರ: ಮಿಸೂಟ್ ಓಜಿಲ್
ಶ್ರೇಷ್ಠ ಪ್ರದರ್ಶನ: 1954, 1974, 1990 ಫೈನಲ್ ಪ್ರವೇಶ.
ದಕ್ಷಿಣ ಅಮೆರಿಕದಿಂದ ಪ್ರಶಸ್ತಿ ಗೆದ್ದು ಬರುವಲ್ಲಿ ಯೂರೋಪಿಯನ್ನರ ಉನ್ನತ ಭರವಸೆ ಎಂದರೆ ಜರ್ಮನಿ.-ಅದಕ್ಕೆ ತಕ್ಕಂತೆ ಅಗ್ರಮಟ್ಟದ ಅನುಭವಿ ಆಟಗಾರರನ್ನು ಅದು ಹೊಂದಿದೆ. ಮೆಸುಟ್ ಓಜಿಲ್, ಥಾಮಸ್ ಮುಲ್ಲರ್, ಬಾಸ್ಟಿಯನ್ ಚಿವೇನೆಸ್ಟಿಗೇರ್ ಹಾಗೂ ಸಮಿ ಖೆದಿರಾ ಅವರು ವಿಶ್ವಕಪ್ನಲ್ಲಿ ತಮ್ಮ ತಂಡವನ್ನು ಅಂತಿಮ ಸುತ್ತಿಗೆ ತೆಗೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿದ್ದಾರೆ.


ಘಾನಾ
ಕೋಚ್: ಜೇಮ್ಸ್ ಕ್ವೇಸಿ ಅಪ್ಪೈಹ
ಸ್ಟಾರ್ ಆಟಗಾರ: ಅಸಾಮೋಹ ಗ್ಯಾನ್
ಶ್ರೇಷ್ಠ ಪ್ರದರ್ಶನ: 2010ರಲ್ಲಿ ಕ್ವಾರ್ಟರ್ಫೈನಲ್
ಘಾನಾ ತಂಡ ಆಫ್ರಿಕಾ ಫುಟ್ಬಾಲ್ನ ಉತ್ತಮ ತಂಡವೆನಿಸಿದೆ. ಆದರೆ, ಕಳೆದ ವಿಶ್ವಕಪ್ನಲ್ಲಿ ವಿವಾದದಿಂದ ಹೊರಬಿದ್ದು ಆಘಾತಗೊಂಡಿದ್ದು, ಇತಿಹಾಸ ನಿರ್ಮಿಸದಂತೆ ಆ ತಂಡವನ್ನು ತಡೆದಿತ್ತು. ಅರ್ಹತಾ ಸುತ್ತಿನಲ್ಲಿ ನಾಯಕ ಗ್ಯಾನ್ ತಂಡದ ಪರ ಅತಿ ಹೆಚ್ಚು ಗೋಲು ದಾಖಲಿಸಿದ್ದಾರೆ. ಆದರೆ, ಗಾಯಗೊಂಡಿರುವ ಮಿಡ್ಫೀಲ್ಡರ್ ಮೈಕೆಲ್ ಎಸೀನ್ ಪ್ರಮುಖ ಆಟಗಾರ ಎನಿಸಿದ್ದಾರೆ. ಅನುಭವಿಗಳಾದ ಕೆವಿನ್- ಪ್ರಿನ್ಸ್ ಬೊಟೆಂಗ್, ಸುಲ್ಲೇ ಮುಂತರಿ ಹಾಗೂ ಆ್ಯಂಡ್ರೆ ಆಯೆವ್ ಅವರು ತಂಡಕ್ಕೆ ಆಸರೆಯಾಗಲಿದ್ದಾರೆ.




ಪೋರ್ಚುಗಲ್:
ಕೋಚ್: ಪೊಲೊ ಬೆಂಟೋ
ಸ್ಟಾರ್ ಆಟಗಾರ: ಕ್ರಿಸ್ಟಿಯಾನೊ ರೊನಾಲ್ಡೊ
ಶೇಷ್ಠ ಪ್ರದರ್ಶನ: 1996ರಲ್ಲಿ 3ನೇ ಸ್ಥಾನ.
ಪೊರ್ಚುಗಲ್ ತಂಡ ಕ್ರಿಸ್ಟಿಯಾನೊ ರೊನಾಲ್ಡೊ ಮೇಲೆ ಹೆಚ್ಚಿನ ಅವಲಂಬನೆಯಾಗಿದೆ. ರಿಯಲ್ ಮ್ಯಾಡ್ರಿಡ್ನ ಪೆಪೆ ಮತ್ತು ಜಾವೋ ಮೌಂಟಿನೋ ಅವರೊಂದಿಗೆ ನಾಕೌಟ್ ಹಂತ ತಲುಪುವ ಭರವಸೆಯನ್ನು ಪೊರ್ಚುಗಲ್ ಹೊಂದಿದೆ. ಮತ್ತೊಬ್ಬ ಬಲಿಷ್ಠ ಸ್ಟ್ರೈಕರ್ ಇಲ್ಲದಿರುವುದು ರೊನಾಲ್ಡೊ ಮೇಲೆ ಹೊರೆ ಹೆಚ್ಚಿಸಿದೆ. ಅಲ್ಲದೆ, ರಿಯಲ್ ಮ್ಯಾಡ್ರಿಡ್ನಲ್ಲಿ ನೀಡುವ ಪ್ರದರ್ಶನವನ್ನೇ ರೊನಾಲ್ಡೊ ವಿಶ್ವಕಪ್ನಲ್ಲಿ ತೋರುವರೇ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement