ಪೋರ್ಚುಗಲ್ಗೆ ಮುಳುವಾದ ಮುಲ್ಲರ್
ಅತ್ಯದ್ಭುತ ಪ್ರದರ್ಶನ ತೋರಿದ ಥಾಮಸ್ ಮುಲ್ಲರ್ ಹ್ಯಾಟ್ರಿಕ್ ಮತ್ತು ಆರಂಭದಿಂದಲೇ ಶಿಸ್ತುಬದ್ಧ ಆಟ ಪ್ರದರ್ಶಿಸಿದ ಜರ್ಮನಿ,
ಸಾಲ್ವಡೋರ್ (ಬ್ರೆಜಿಲ್): ಅತ್ಯದ್ಭುತ ಪ್ರದರ್ಶನ ತೋರಿದ ಥಾಮಸ್ ಮುಲ್ಲರ್ ಹ್ಯಾಟ್ರಿಕ್ ಮತ್ತು ಆರಂಭದಿಂದಲೇ ಶಿಸ್ತುಬದ್ಧ ಆಟ ಪ್ರದರ್ಶಿಸಿದ ಜರ್ಮನಿ, ಮೇಲಿಂದ ಮೇಲೆ ತಪ್ಪು ಮಾಡಿದ ಪೋರ್ಚುಗಲ್ ತಂಡವನ್ನು 4-0 ಗೋಲುಗಳ ಅಂತರದಿಂದ ಪರಾಭವಗೊಳಿಸುವಲ್ಲಿ ಯಶಸ್ವಿಯಾಯಿತು.
ಪೋರ್ಚುಗಲ್ ಆಟಗಾರರು ತಪ್ಪು ಮಾಡುವುದರೊಂದಿಗೆ ಜರ್ಮನಿ ಗೋಲು ಗಳಿಸಲು ರಹದಾರಿಯಾಗಿ ಪರಿಣಮಿಸಿತು. ಜರ್ಮನಿ ಆಟಗಾರ ಮಾರಿಯೋ ಗೊಜೆ ಅವರನ್ನು ಪಂದ್ಯದ 11ನೇ ನಿಮಿಷದಲ್ಲಿ ಪೋರ್ಚುಗಲ್ ಆಟಗಾರ ಜಾಯ್ ಪೆರೇರಾ ಅವರನ್ನು ಉದ್ದೇಶಪೂರ್ವಕವಾಗಿ ಬೀಳಿಸಿದರು. ಈ ಹಿನ್ನೆಲೆಯಲ್ಲಿ ಜರ್ಮನಿಗೆ ಪೆನಾಲ್ಟಿ ಅವಕಾಶ ದೊರಕಿತು. ಅವಕಾಶದಲ್ಲಿ ಥಾಮಸ್ ಮುಲ್ಲರ್ 12ನೇ ನಿಮಿಷದಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.
ನಂತರ 32ನೇ ನಿಮಿಷದಲ್ಲಿ ದೊರಕಿದ ಕಾರ್ನರ್ ಕಿಕ್ನಲ್ಲಿ ಜರ್ಮನಿಯ ಟೋನಿ ಕ್ರೂಸ್ ಪಾಸ್ ಮಾಡಿದ ಚೆಂಡನ್ನು ಹೆಡ್ಡರ್ ಮಾಡುವ ಮೂಲಕ ಗೋಲಾಗಿಸುವಲ್ಲಿ ಮ್ಯಾಟ್ಸ್ ಹ್ಯೂಮೆಲ್ಸ್ ಯಶಸ್ವಿಯಾದರು. ಇದರೊಂದಿಗೆ ಜರ್ಮನಿ ಪಂದ್ಯದಲ್ಲಿ 2-0 ಅಂತರದಿಂದ ಮುನ್ನಡೆ ಪಡೆಯುವ ಮೂಲಕ ಎದುರಾಳಿ ಪೋರ್ಚುಗಲ್ ಆಟಗಾರರನ್ನು ಮತ್ತಷ್ಟು ಒತ್ತಡದಲ್ಲಿ ಸಿಲುಕಿಸಿತು.
ಪೇಪ್ಗೆ ರೆಡ್ ಕಾರ್ಡ್: ಪಂದ್ಯದ 38ನೇ ನಿಮಿಷದಲ್ಲಿ ಅನಗತ್ಯವಾಗಿ ಚೆಂಡನ್ನು ತಲೆಯಿಂದ ಹೊಡೆಯಲು ಮುಂದಾದ ಪೊಘರ್ಚುಗಲ್ನ ಪೇಪ್, ಜರ್ಮನಿ ಆಟಗಾರ ಥಾಮಸ್ ಮುಲ್ಲರ್ ಮುಖಕ್ಕೆ ಕೈ ತಾಗಿಸಿದರು. ಥಾಮಸ್ ಕೊಂಚ ಹೆಚ್ಚಾಗಿಯೇ ಚೀರಿಕೊಂಡರು. ಕಾರಣ ಪೇಪ್ಗೆ ರೆಫರಿ ನೇರವಾಗಿ ರೆಡ್ ಕಾರ್ಡ್ ನೀಡುವ ಮೂಲಕ ತಂಡದಿಂದ ಹೊರಗೆ ಕಳುಹಿಸಲಾಯಿತು. ಇದರಿಂದ ಮೊದಲೇ ಒತ್ತಡದಲ್ಲಿ ಸಿಲುಕಿದ್ದ ಪೋರ್ಚುಗಲ್ಗೆ ಮತ್ತಷ್ಟು ಸಮಸ್ಯೆಯಾಗಿ ಪರಿಣಮಿಸಿತು.
ಕಾಡಿದ ಗಾಯದ ಸಮಸ್ಯೆ: ಪೊರ್ಚುಗೀಸರಿಗೆ ಪಂದ್ಯದ ಗಾಯ ಸಮಸ್ಯೆಯು ಕಾಡಿತು. 27ನೇ ನಿಮಿಷದಲ್ಲಿ ಗಾಯಾಳು ಹ್ಯೂಗೋ ಅಲ್ಮೇಡಾ ಹೊರಗೆ ಹೋದರು. ಅವರ ಬದಲಾಗಿ ಈಡರ್ ಅಂಗಣಕ್ಕಿಳಿದರು. ನಂತರ 63ನೇ ನಿಮಿಷದಲ್ಲಿ ಫ್ಯಾಬಿಯೋ ಅವರು ಗಾಯಗೊಳ್ಳುವ ಮೂಲಕ ಹೊರನಡೆದರು. ಅವರ ಬದಲಾಗಿ ಆ್ಯಂಡ್ರೆ ಅಲ್ಮೇಡಾ ಅಂಗಣಕ್ಕಿಳಿದರು.
ನಂತರ 34ನೇ ನಿಮಿಷದಲ್ಲಿ ಪೋರ್ಚುಗಲ್ ಗೋಲು ಗಳಿಸುವ ದೊರಕಿದ್ದ ಮತ್ತೊಂದು ಅವಕಾಶವನ್ನು ಹಾಳುಮಾಡಿಕೊಂಡಿತು.
ಮೊದಲಾರ್ಧ ಪಂದ್ಯದ ಅಂತ್ಯದಲ್ಲಿ (45ನೇ ನಿಮಿಷ) ದೊರಕಿದ ಅವಕಾಶದಲ್ಲಿ ತಮ್ಮ ಎರಡನೇ ಗೋಲು ದಾಖಲಿಸಿದ ಥಾಮಸ್ ಮುಲ್ಲರ್ ಜರ್ಮನಿಗೆ 3-0 ಅಂತರದ ಮುನ್ನಡೆ ತಂದುಕೊಟ್ಟರು. ಅಲ್ಲಿಗೆ ಪೋರ್ಚುಗಲ್ ತನ್ನ ಗಲ್ಲುವ ಕನಸನ್ನು ಬಿಟ್ಟುಕೊಟ್ಟಿತು. ನಂತರ 78ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಥಾಮಸ್ ಮುಲ್ಲರ್ ಹ್ಯಾಟ್ರಿಕ್ ಪೂರೈಸಿದರು.
ವಿಶ್ವದ ಆಗ್ರ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹೊಂದಿದ್ದರೂ, ಪಂದ್ಯದಲ್ಲಿ ಪೊರ್ಚುಗಲ್ ಒಂದೇ ಒಂದು ಗೋಲು ದಾಖಲಿಸದೇ ಸೋಲಿನ ಕಹಿ ಅನುಭವಿಸಿತು.
2ನೇ ಜಯದ ಕನಸಲ್ಲಿ ಬ್ರೆಜಿಲ್- ಮೆಕ್ಸಿಕೊ
2014ರ ಫೀಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಗುಂಪು ಸೆಣಸಿನ ಮೊದಲ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ಬ್ರೆಜಿಲ್ ಹಾಗೂ ಮೆಕ್ಸಿಕೊ ತಂಡಗಳ ಆಟಗಾರರು ಈಗ ಮತ್ತೊಂದು ಗೆಲವಿನೊಂದಿಗೆ ಅಂತಿಮ 16ರ ಘಟ್ಟದತ್ತ ಮುಖಮಾಡಿ ನಿಲ್ಲುವ ಆಶಾಭಾವನೆ ಹೊಂದಿವೆ.
'ಎ' ಗುಂಪಿನಿಂದ ಸ್ಪರ್ಧೆಗಿಳಿದಿರುವ ಬ್ರೆಜಿಲ್ ಮೊದಲ ಸೆಣಸಿನಲ್ಲಿ ಕ್ರೊವೇಷಿಯಾ ವಿರುದ್ಧ 3-1 ಗೋಲುಗಳಿಂದ ಜಯಗಳಿಸಿದ್ದರೆ, ಮೆಕ್ಸಿಕೊ ತಂಡ ಏಕೈಕ ಗೋಲಿನಿಂದ ಕೆಮರೂನ್ ವಿರುದ್ಧ ಗೆಲವಿನ ನಗೆ ಬೀರಿತ್ತು.
ಜಾಗತಿಕ ಫುಟ್ಬಾಲ್ ರಂಗದಲ್ಲಿ ಬ್ರೆಜಿಲ್ ಮತ್ತು ಮೆಕ್ಸಿಕೊ ಈವರೆಗೆ ಒಟ್ಟಾರೆ 38 ಪಂದ್ಯಗಳಲ್ಲಿ ಪರಸ್ಪರ ಎದುರಾಗಿವೆ. ಈ ಪೈಕಿ ಬ್ರೆಜಿಲ್ ಹೆಚ್ಚು ಪಂದ್ಯಗಳನ್ನು ಗೆದ್ದು ತನ್ನ ಪ್ರಭುತ್ವ ಸ್ಥಾಪಿಸಿದೆ.ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಬ್ರೆಜಿಲ್ ಈವರೆಗೆ ನಡೆದ ಒಟ್ಟು 19 ವಿಶ್ವಕಪ್ಗಳ ಪೈಕಿ 5 ಬಾರಿ ಚಾಂಪಿಯನ್ ಎನಿಸಿದೆ. ಆ ಮೂಲಕ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ಬ್ರೆಜಿಲ್ ಈ ದಾಖಲೆಯನ್ನು ಹಿಗ್ಗಿಸುವ ವಿಶ್ವಾಸದಲ್ಲಿದ್ದಾರೆ. ಮೇಲಾಗಿ ಈ ಬಾರಿ ಪಂದ್ಯಾವಳಿ ತವರಿನಲ್ಲಿಯೇ ನಡೆಯುತ್ತಿರುವುದರಿಂದ ಅವರ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ.
ಬ್ರೆಜಿಲ್ ಮತ್ತು ಮೆಕ್ಸಿಕೊ ಈಗಾಗಲೇ ವಿಶ್ವಕಪ್ನಲ್ಲಿ ಮೂರು ಬಾರಿ ಪರಸ್ಪರ ಸೆಣಸಿವೆ. ಈ ಎಲ್ಲ ಪಂದ್ಯಗಳಲ್ಲೂ ಬ್ರೆಜಿಲ್ ತಂಡ ಮೆಕ್ಸಿಕೊಗೆ ಒಂದೂ ಗೋಲು ಬಿಟ್ಟುಕೊಡದೇ ಜಯ ಕಂಡಿದೆ. ನೇಮಾರ್ ಆತಿಥೇಯ ತಂಡದ ಕೇಂದ್ರ ಬಿಂದು ಆಟಗಾರ. ಅದೇ ರೀತಿ ಮೆಕ್ಸಿಕೊ ಕೂಡ ಕಠಿಣ ಸವಾಲಿಗೆ ಮೈಯೊಡ್ಡಿ ನಿಲ್ಲುವ ಸಾಮರ್ಥ್ಯವಿರುವ, ಸದೃಢ ಆಟಗಾರರನ್ನೇ ಹೊಂದಿದೆ. ಜಾವಿಯರ್ ಹೆರ್ನಾಂಡೆಜ್ ತಂಡದ ದೊಡ್ಡ ಶಕ್ತಿಯಾಗಿದ್ದಾರೆ.
ಡಾರ್ಕ್ ಹಾರ್ಸ್ ಬೆಲ್ಜಿಯಂ ಮೇಲೆ ಕಣ್ಣು
ಬೆಲ್ಜಿಯಂ ಮತ್ತು ಅಲ್ಜೀರಿಯಾ ತಂಡಗಳು ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ಪ್ರಸಕ್ತ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 'ಎಚ್' ಗುಂಪಿನಿಂದ ತಮ್ಮ ಹೋರಾಟಕ್ಕೆ ಚಾಲನೆ ನೀಡಲಿವೆ.
ಪಂದ್ಯಾವಳಿಯಲ್ಲಿ ಡಾರ್ಕ್ ಹಾರ್ಸ್ ಎನಿಸಿರುವ ಬೆಲ್ಜಿಯಂ ತಂಡದ ಬಗ್ಗೆ ಈ ಬಾರಿ ಪ್ರತಿ ಎದುರಾಳಿಯೂ ಹೆಚ್ಚು ಜಾಗೃತೆಯಿಂದಿರಬೇಕಾಗಿದೆ.
ಬೆಲ್ಜಿಯಂ ಮತ್ತು ಅಲ್ಜೀರಿಯಾ ತಂಡಗಳು ಈವರೆಗೆ ಪರಸ್ಪರ ಎರಡು ಬಾರಿ ಮುಖಾಮುಖಿಯಾಗಿವೆ. ಈಗ ಮೂರನೇ ಬಾರಿಗೆ ಸೆಣಸುತ್ತಿದ್ದು, ಅಲ್ಜೀರಿಯಾ ತಂಡ ತನ್ನ ಎದುರಾಳಿ ವಿರುದ್ಧ ಮೊದಲ ಗೆಲವಿನ ನಿರೀಕ್ಷೆಯಲ್ಲಿದೆ. 1986ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು ಬೆಲ್ಜಿಯಂ ತಂಡದ ವಿಶ್ವಕಪ್ನಲ್ಲಿನ ಉತ್ತಮ ಸಾಧನೆಯಾಗಿದೆ. ಅಲ್ಜೀರಿಯಾ ತಂಡ 1982, 1986 ಮತ್ತು 2010ರಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಈಗ ಮೊದಲ ಬಾರಿಗೆ ಅಂತಿಮ ಹದಿನಾರರಘಟ್ಟ ಪ್ರವೇಶಿಸುವ ಆಸೆಯೊಂದಿಗೆ ಅಲ್ಜೀರಿಯಾ ಆಟಗಾರರು ಕಣಕ್ಕಿಳಿದಿದ್ದಾರೆ.
ಕೋಚ್ ಮಾರ್ಕ್ ವಿಲ್ಮೋಸ್ ಗರಡಿಯಲ್ಲಿ ಪಳಗಿರುವ ಬೆಲ್ಜಿಯಂ ತಂಡದಲ್ಲಿ ಎಡೆನ್ ಹಜಾರ್ ಸ್ಟಾರ್ ಆಟಗಾರ. ಮತ್ತೊಂದೆಡೆ ಅಲ್ಜೀರಿಯಾ ಸಹ ಶುಭಾರಂಭದ ನಿರೀಕ್ಷೆಯಲ್ಲಿದೆ. ತರಬೇತುದಾರ ವಾಹಿದ್ ಹಲಿಹೋಜಿಕ್ ತಮ್ಮ ತಂಡವನ್ನು ಉತ್ತಮ ರೀತಿಯಲ್ಲಿಯೇ ತಾಲೀಮಿಗೆ ಒಳಪಡಿಸಿದ್ದಾರೆ. ಮಾಜಿದ್ ಬೌಘೇರಾ ಈ ತಂಡದ ಪ್ರಮುಖ ಆಟಗಾರ.
ರಷ್ಯನ್ನರಿಗೆ ದ. ಕೊರಿಯಾ ಸವಾಲು
ರಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳು ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 'ಎಚ್' ಗುಂಪಿನಿಂದ ಸ್ಪರ್ಧೆಗಿಳಿದಿದ್ದು, ಪರಸ್ಪರ ಮುಖಾಮುಖಿಯೊಂದಿಗೆ ತಮ್ಮ ಹೋರಾಟಕ್ಕೆ ಚಾಲನೆ ನೀಡಲಿವೆ.
ಉಭಯ ತಂಡಗಳು ಈವರೆಗೆ ಪರಸ್ಪರ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, 2013ರಲ್ಲಿ ದುಬೈನಲ್ಲಿ ನಡೆದ ಈ ಪಂದ್ಯವನ್ನು ರಷ್ಯಾ ಗೆದ್ದುಕೊಂಡಿತ್ತು. ಈಗ ಆ ಫಲಿತಾಂಶವನ್ನು ಮತ್ತೆ ಪುನರಾವರ್ತಿಸಲಿರುವ ಯೋಚನೆಯಲ್ಲಿರುವ ರಷ್ಯಾ ತಂಡಕ್ಕೆ ದಕ್ಷಿಣ ಕೊರಿಯಾ ತಂಡ ಯಾವ ರೀತಿ ಸವಾಲು ನಿಲ್ಲಿಸುತ್ತದೆ ಎಂಬುದನ್ನು ನೋಡಬೇಕು. ಕೊರಿಯಾ ಡಿಪಿಆರ್ ನಂತರ ದಕ್ಷಿಣ ಕೊರಿಯಾವು ವಿಶ್ವಕಪ್ನಲ್ಲಿ ರಷ್ಯಾ ತಂಡವನ್ನು ಎದುರಿಸುತ್ತಿರುವ ಮೂರನೇ ಏಷ್ಯನ್ ತಂಡವಾಗಿದೆ. 1966ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು ರಷ್ಯಾ ತಂಡದ ವಿಶ್ವಕಪ್ನಲ್ಲಿನ ಉತ್ತಮ ಸಾಧನೆಯಾಗಿದೆ. ಫಾಬಿಯೊ ಕೆಪೆಲ್ಲೊ ರಷ್ಯಾ ತಂಡದ ಅತ್ಯುತ್ತಮ ಕೋಚ್ ಆಗಿದ್ದಾರೆ. ಮುನ್ಪಡೆ ಆಟಗಾರ ಅಲೆಕ್ಸಾಂಡರ್ ಕೊಕೊರಿನ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ.
ಮತ್ತೊಂದೆಡೆ ದಕ್ಷಿಣ ಕೊರಿಯಾ ಕೂಡ ಉತ್ತಮ ಪ್ರತಿಭೆಗಳನ್ನು ಒಳಗೊಂಡಿದೆ. ಕೋಚ್ ಹಾಂಗ್ ಮ್ಯೂಂಗ್ -ಬೊ ಆಟಗಾರರನ್ನು ಉತ್ತಮ ರೀತಿಯಲ್ಲೇ ಅಣಿಗೊಳಿಸಿದ್ದಾರೆ. 2002ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಕೊರಿಯಾ ತಂಡದ ವಿಶ್ವಕಪ್ನಲ್ಲಿನ ಉತ್ತಮ ಸಾಧನೆಯಾಗಿದೆ.