ಗಮನ ಸೆಳೆಯದ ನೈಜೀರಿಯಾ- ಇರಾನ್ ಸೆಣಸು
ಅಹ್ಲಾದಕರ ವಾತಾವರಣ, ಸುಂದರವಾದ ಕ್ರೀಡಾಂಗಣ...
ಕರಿತಿಬಾ (ಬ್ರೆಜಿಲ್): ಅಹ್ಲಾದಕರ ವಾತಾವರಣ, ಸುಂದರವಾದ ಕ್ರೀಡಾಂಗಣ, ಮನಸೊರೆಗೊಳ್ಳುವ ನಗರದಲ್ಲೂ ಮಂಗಳವಾರ ನಡೆದ ವಿಶ್ವಕಪ್ ಪಂದ್ಯ ಪ್ರೇಕ್ಷಕರಿಗೆ ಬೇಸರ ಮೂಡಿಟಸಿತ್ತು. ಕಾರಣ, ಈ ಪಂದ್ಯದಲ್ಲಿ ಭಾಗವಹಿಸಿದ್ದ ನೈಜೀರಿಯಾ ಮತ್ತು ಇರಾನ್ ತಂಡಗಳು ಯಾವುದೇ ಗೋಲು ದಾಖಲಿಸದೆ ಪಂದ್ಯ ಡ್ರಾದಲ್ಲಿ ಅಂತ್ಯಗೊಳಿಸಿದವು.
ಈ ಪಂದ್ಯಕ್ಕೂ ಮುನ್ನ ಈ ಕ್ರೀಡಾಂಗಣದಲ್ಲಿ ನಡೆದ 12 ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲನ್ನಾದರೂ ದಾಖಲಿಸುವಲ್ಲಿ ತಂಡಗಳು ಯಶಸ್ವಿಯಾಗಿದ್ದವು. 'ಎಫ್ ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಆಫ್ರಿಕಾ ಚಾಂಪಿಯನ್ ನೈಜೀರಿಯಾ ತಂಡ 0-0 ಗೋಲುಗಳಿಂದ ಡ್ರಾ ಸಾಧಿಸುವ ಮೂಲಕ, 2014ರ ವಿಶ್ವಕಪ್‌ನಲ್ಲಿ ಮೊದಲ ಡ್ರಾ ಪಂದ್ಯ ಅಂತ್ಯಗೊಂಡಿತು.ಅರೆನಾ ಡಾ ಬೈಕ್ಸಡಾ ನೆರೆದಿದ್ದ 39,081 ಅಭಿಮಾನಿಗಳು ಮೂಲೆ ಮೂಲೆಯಿಂದ ಆಟಗಾರರನ್ನು ಗೇಲಿ ಮಾಡಿದರು. ಆದರೆ, ಆಟಗಾರರಿಂದ ಮಾತ್ರ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ, ಗೋಲು ದಾಖಲಿಸದಿದ್ದರೂ ಬಲಿಷ್ಠ ನೈಜಿರಿಯಾ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದ ಇರಾನ್ ತಂಡ ಹುಮ್ಮಸ್ಸಿನಿಂದ ಬೀಗಿತು.
'ಇಡೀ ವಿಶ್ವದಾದ್ಯಂತ ಇರಾನ್ ತಂಡ ಗೌರವ ಪಡೆಯಿತು. ಅಪಹಾಸ್ಯ ಮಾಡುವುದು ಮಖ್ಯವಲ್ಲ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ನಾವು ಒಂದು ಅಂಕ ಗಳಿಸಿಕೊಂಡಿದ್ದು ಮುಖ್ಯವಾದದ್ದು' ಎಂದು ಇರಾನ್ ತಂಡದ ಕೋಚ್ ಕಾರ್ಲಸ್ ಖ್ಯೂರೋಜ್ ಪಂದ್ಯದ ನಂತರ ತಿಳಿಸಿದರು. ಪಂದ್ಯದಲ್ಲಿ 93 ಬಾರಿ ಚೆಂಡನ್ನು ಪಾಸ್ ಮಾಡಿದ ನೈಜೀರಿಯಾ ಮಿಡ್‌ಫೀಲ್ಡರ್ ಜಾನ್ ಒಬಿ ಮಿಕೆಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 32ನೇ ನಿಮಿಷದಲ್ಲಿ ದೊರಕಿದ ಫ್ರೀ ಕಿಕ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಅವರು ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ಪುಳಕ ಮೂಡುವಂತೆ ಮಾಡಿದ್ದರು. ಆದರೆ, ಆ ಸಮಯದಲ್ಲಿ ಗೋಲು ದಾಖಲಿಸುವಲ್ಲಿ ನೈಜೀರಿಯಾ ಆಟಗಾರರು ವಿಫಲವಾದರು. 'ಇಲ್ಲಿಗೆ ಎಲ್ಲವೂ ಮುಕ್ತಾಯವಾಗಿಲ್ಲ. ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೆಲ ಪಂದ್ಯಗಳನ್ನು ವಿವರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಲಿ ಚಾಂಪಿಯನ್ ಸ್ಪೇನ್ ಮತ್ತು ಹಾಲೆಂಡ್ ನಡುವೆ ನಡೆದ ಪಂದ್ಯವೇ ಇದಕ್ಕೆ ಉತ್ತಮ ಉದಾಹರಣೆ' ಎಂದು ನೈಜೀರಿಯಾ ಕೋಚ್ ಪಂದ್ಯದಲ್ಲಿ ಸೋತ ನಂತರ ಸಮರ್ಥನೆ ಮಾಡಿಕೊಂಡಿದ್ದಾರೆ.
ಪಂದ್ಯದಲ್ಲಿ ಗೋಲು ದಾಖಲಿಸಲು ಸಿಕ್ಕ ಅವಕಾಶವನ್ನು ಉಭಯ ತಂಡಗಳು ಉಪಯೋಗಪಡಿಸಿಕೊಳ್ಳಲಿಲ್ಲ. ಮೊದಲಾರ್ಧ ಪಂದ್ಯದಲ್ಲಿ ನೈಜಿರಿಯಾ ಹೆಚ್ಚಿನ ಅಕಾಶಗಳನ್ನು ಪಡೆದುಕೊಂಡಿತ್ತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಇರಾನ್ ತಂಡ ಉತ್ತಮ ಪ್ರದರ್ಶನ ತೋರಿತು.
ಇದರೊಂದಿಗೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಂಕ ಗಳಿಸಿದ ಮೊದಲ ಏಷ್ಯಾ ಫುಟ್ಬಾಲ್ ಕನ್ಫೆಡರೇಷನ್ ತಂಡ ಎಂಬ ಹೆಗ್ಗಳಿಕೆಗೆ ಇರಾನ್ ಪಾತ್ರವಾಯಿತು.