ಕೈಗೆ ಬಂದ ತುತ್ತು ಸವಿಯುವ ಭಾಗ್ಯ ಬ್ರೆಜಿಲ್ಗಿಲ್ಲ
ಬ್ರೆಜಿಲ್ ತಂಡದ ಆಟಗಾರರಿಗೆ ಕೈಗೆ ಬಂದ..
ಫೋರ್ಟಾಲೆಜಾ: ಬ್ರೆಜಿಲ್ ತಂಡದ ಆಟಗಾರರಿಗೆ ಕೈಗೆ ಬಂದ ತುತ್ತನ್ನು ಸವಿಯುವ ಭಾಗ್ಯ ಇಲ್ಲ. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲವು ದಾಖಲಿಸಿ ಹದಿನಾರರಘಟ್ಟದತ್ತ ಮುಖಮಾಡಿ ನಿಲ್ಲುವ ಅತ್ಯುತ್ತಮ ಅವಕಾಶವನ್ನು ವ್ಯರ್ಥಗೊಳಿಸಿಕೊಂಡಿದೆ.
ಎಸ್ಟಾಡಿಯೊ ಕಾಸ್ಟೆಲಾವೊ ಕ್ರೀಡಾಂಗಣದಲ್ಲಿ ಬುಧವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಬ್ರೆಜಿಲ್ ತಂಡ ಎದುರಾಳಿ ಮೆಕ್ಸಿಕೊ ವಿರುದ್ಧ ಗೋಲುರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಬೇಕಾಯಿತು. ಆದರೆ ಉಭಯ ತಂಡಗಳ ನಡುವಿನ ಕದನ ಮಾತ್ರ ಹಲವು ರೋಚಕತೆಗಳಿಗೆ ಸಾಕ್ಷಿಯಾಯಿತು.
ಈ ಪಂದ್ಯದಲ್ಲಿ ಮೆಕ್ಸಿಕೊ ತಂಡದ ಗೋಲ್ಕೀಪರ್ ಗಿಲೆರ್ಮೊ ಓಚೊವಾ ಹೀರೊ ಎನಿಸಿದರು. ಬ್ರೆಜಿಲ್ ಆಟಗಾರರು ಬಹುತೇಕ ಗೋಲು ದಾಖಲಿಸಿಯೇಬಿಟ್ಟರು ಎಂಬ ಎರಡು ಸನ್ನಿವೇಶಗಳನ್ನು ಗಿಲೊರ್ಮೊ ಹಾಳುಗೆಡವಿದರು.
ಪಂದ್ಯದ 26ನೇ ನಿಮಿಷದಲ್ಲಿ ಪಂದ್ಯದ ಕೇಂದ್ರಬಿಂದು ಆಟಗಾರ ನೇಮಾರ್ ಚೆಂಡವನ್ನು ಹೆಡ್ ಮಾಡುವ ಮೂಲಕ ಗುರಿಯೊಳಕ್ಕೆ ಸೇರಿಸುವುದು ಬಹುತೇಕ ಖಚಿತ ಎಂಬಂತಾಗಿತ್ತು. ಆದರೆ, ಗೋಲಿ ಗಿಲೆರ್ಮೊ ಓಚೌವಾ ಮಾತ್ರ ಅವರ ಪ್ರಯತ್ನವನ್ನು ವಿಫಲಗೊಳಿಸಿ ತವರು ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದರು.
ಅದೇ ರೀತಿ ಉತ್ತರಾರ್ಧದಲ್ಲಿ ಪಂದ್ಯದ 87ನೇ ನಿಮಿಷ ಕೂಡ ಬ್ರೆಜಿಲ್ಗೆ ಗೋಲುಗಳಿಸುವ ಉತ್ತಮ ಅವಕಾಶ ಒದಗಿಬಂದಿತ್ತು. ಈ ಬಾರಿ ಥಿಯಾಗೊ ಸಿಲ್ವಾ ಅವರು ಹೆಡ್ ಮಾಡುವ ಮೂಲಕ ಚೆಂಡನ್ನು ಗುರಿ ಸೇರುವ ಹಾದಿಯಲ್ಲಿದ್ದರು. ಆದರೆ, 28ರ ಗಿಲೆರ್ಮೊ ಅಚ್ಚರಿಯ ರೀತಿಯಲ್ಲಿ ಅದನ್ನು ತಡೆಯುವ ಮೂಲಕ ಎದುರಾಳಿ ಪಾಲಿಗೆ ಧಕ್ಕಬಹುದಾಗಿದ್ದ ಮತ್ತೊಂದು ಉತ್ತಮ ಅವಕಾಶವನ್ನು ಹಾಳುಗೆಡವಿದರು.
ಪಂದ್ಯದಲ್ಲಿ ಬ್ರೆಜಿಲ್ ಆಟಗಾರರು 53ರಷ್ಟು ಹಿಡಿತ ಸಾಧಿಸಿದ್ದರು. ಆದರೆ ಅದೃಷ್ಟವೆಂಬುದು ಬೆನ್ನಿಗಿಲ್ಲದ ಪರಿಣಾಮ, ಆತಿಥೇಯರು ಎಷ್ಟೇ ಹೋರಾನಡೆಸಿದರೂ ಸಹ ಪ್ರಯೋಜನವಾಗಲಿಲ್ಲ.
ಇನ್ನೊಂದೆಡೆ ಎದುರಾಳಿಯ ಎರಡು ಉತ್ತಮ ಅವಕಾಶಗಳನ್ನು ವಿಫಲಗೊಳಿಸಿ ನಾಕೌಟ್ ಸುತ್ತಿನ ಆಸೆ ಹೆಚ್ಚಿಸಿಕೊಂಡ ಮೆಕ್ಸಿಕೊ ಆಟಗಾರರು ಬ್ರೆಜಿಲ್ ಎದುರು ಕಠಿಣ ಸವಾಲುಗಳನ್ನೇ ನಿಲ್ಲಿಸಿದ್ದರು.
ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಕ್ರೊವೇಷಿಯಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿದ್ದ ಐದು ಬಾರಿಯ ಚಾಂಪಿಯನ್ ಬೆಜಿಲ್ ಎರಡನೇ ಪಂದ್ಯದಲ್ಲಿ ಮಾತ್ರ ಮೆಕ್ಸಿಕೊ ಜೊತೆ ತಲಾ 1 ಅಂಕದ ಹಂಚಿಕೆಗಷ್ಟೇ ತೃಪ್ತಿ ಹೊಂದಬೇಕಾಯಿತು.
ಮತ್ತೊಂದೆಡೆ ಮೆಕ್ಸಿಕೊ ಕೂಡ ತನ್ನ ಮೊದಲ ಪಂದ್ಯದಲ್ಲಿ ಕೆಮರೂನ್ ವಿರುದ್ಧ ಏಕೈಕ ಗೋಲಿನಿಂದ ಗೆದ್ದು ಶುಭಾರಂಭ ಮಾಡಿತ್ತು. ಈಗ ಎರಡನೇ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಉತ್ತಮ ಹೋರಾಟ ನಡೆಸಿದರೂ ಸಹ ಗೆಲವು ದಕ್ಕಿಸಿಕೊಳ್ಳಲಾಗಲಿಲ್ಲ. ಆದರೂ ಪ್ರಬಲ ಬ್ರೆಜಿಲ್ಗೆ ಕಠಿಣ ಸವಾಲು ಒಡ್ಡಿದ ತೃಪ್ತಿಗೆ ಒಳಗಾಯಿತು.
ಮೊದಲ ಅವಧಿಯಲ್ಲಿ ಬ್ರೆಜಿಲ್ ಆಟಗಾರರು ಪೂರ್ಣ ಪ್ರಾಬಲ್ಯ ಮೆರೆದಿದ್ದರು. ಮಾರ್ಸೆಲೊ, ಆಸ್ಕರ್ ಮತ್ತು ನೇಮಾರ್ ಮೂಲಕ ಎಡಬದಿಯಿಂದ ತೀಕ್ಷ್ಣ ದಾಳಿ ನಡೆಸಿ ಮೆಕ್ಸಿಕೊದ ರಕ್ಷಣಾ ಆಟಗಾರರ ಮೇಲೆ ತೀವ್ರ ಒತ್ತಡ ಹೇರುವ ಪ್ರಯತ್ನ ಮಾಡಿದರು. ಆದರೆ, ಗೋಲ್ಕೀಪರ್ ಮಾತ್ರ ಬ್ರೆಜಿಲ್ ಆಸೆಯನ್ನು ಚಿವುಟಿ ಹಾಕಿದರು.
ಬ್ರೆಜಿಲ್ಗೆ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೈನಲ್ ಪಂದ್ಯ ವೀಕ್ಷಿಸಲು ಆಗಮಿಸಲಿದ್ದಾರಂತೆ. ಜುಲೈ 13 ರಂದು ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ನೋಡಲು, ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ ಅವರು ಪುಟಿನ್ ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, 2018ರಲ್ಲಿ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವಹಿಸಿಕೊಳ್ಳುತ್ತಿರುವ ರಷ್ಯಾಕ್ಕೆ ತಮ್ಮ ದೇಶದಲ್ಲಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಲು ಮೂಲಭೂತ ಸೌಕರ್ಯಗಳ ಬಗ್ಗೆ ಅರಿಯಲು ಈ ಭೇಟಿ ನೆರವಾಗಲಿದೆ.