ಕೊಲಂಬಿಯಾ-ಐವರಿ ಗೆಲವಿನ ಮಂತ್ರ ಜಪ
2014ರ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಲಂಬಿಯಾ ಮತ್ತು ...
ಬ್ರೆಸಿಲಿಯಾ: 2014ರ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಲಂಬಿಯಾ ಮತ್ತು ಐವರಿ ಕೋಸ್ಟ್ ತಂಡಗಳು ತಮ್ಮ ಗುಂಪಿನಿಂದ ಭರ್ಜರಿ ಆರಂಭ ಪಡೆದಿವೆ. 'ಸಿ' ಗುಂಪಿನಲ್ಲಿ ಸೆಣಸುತ್ತಿರುವ ಈ ಎರಡೂ ತಂಡಗಳು ತಮ್ಮ ಮೊದಲ ಪಂದ್ಯ ಗೆದ್ದುಕೊಂಡು ಮುಂದಿನ ನಾಕೌಟ್ ಸುತ್ತು ಎದುರು ನೋಡುತ್ತಿವೆ.
ಕೊಲಂಬಿಯಾ ಮತ್ತು ಐವರಿ ಕೋಸ್ಟ್ ತಂಡಗಳು ಗುರುವಾರ ಎಸ್ಟಾಡಿಯೊ ನಾಸಿಯೊನೆಲ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿವೆ. ಇದೇ ಮೊದಲ ಬಾರಿಗೆ ಉಭಯರು ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ. ಹಾಗಾಗಿ, ಯಾರ ಮೇಲೆ ಎಷ್ಟು ನಿರೀಕ್ಷೆಯಿದೆ ಮತ್ತು ಯಾರು ಗೆಲ್ಲಬಹುದೆಂದು ಊಹೆ ಮಾಡುವುದು ಕೊಂಚ ಕಷ್ಟದ ಕೆಲಸ.
ತಮ್ಮ ಮೊದಲ ಪಂದ್ಯಗಳ ಸಮರದಲ್ಲಿ ಕೊಲಂಬಿಯಾ ತಂಡ 3-0 ಗೋಲುಗಳಿಂದ ಗ್ರೀಸ್ ತಂಡವನ್ನು ಬಗ್ಗುಬಡಿದರೆ, ಐವರಿ ಕೋಸ್ಟ್ ಆಟಗಾರರು 2-1 ಗೋಲುಗಳಿಂದ ಜಪಾನ್ ವಿರುದ್ಧ ಜಯಭೇರಿ ಬಾರಿಸಿ ಉತ್ತಮ ಆರಂಭ ಪಡೆದಿದ್ದಾರೆ. ಈಗ ಸತತ ಎರಡನೇ ಪಂದ್ಯದಲ್ಲೂ ಗೆಲವಿನ ನಗೆ ಬೀರಿದರೆ, ಪ್ರೀಕ್ವಾರ್ಟರ್ಫೈನಲ್ ಹಾಗಿ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ.