ಐವರಿಗೆ ಕೊಲಂಬಿಯಾ ಸೋಲಿನ ಬರೆ
ಆರಂಭದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಅಷ್ಟಾಗಿ ಸಫಲತೆ...
ಬ್ರೆಸಿಲ್ಲಾ: ಆರಂಭದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಅಷ್ಟಾಗಿ ಸಫಲತೆ ಕಾಣದಿದ್ದರೂ, ಉತ್ತರಾರ್ಧದ ಆಟದಲ್ಲಿ ಮಾತ್ರ ತಮ್ಮ ಶಕ್ತಿ ಮೀರಿ ಹೋರಾಡಿದ ಕೊಲಂಬಿಯಾ ಆಟಗಾರರು ಮತ್ತೊಂದು ಅದ್ಧೂರಿ ಗೆಲವಿನೊಂದಿಗೆ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್ ಸುತ್ತು ತಲುಪುವುದು ಬಹುತೇಕ ಖಚಿತವಾಗಿದೆ.
ೆಎಸ್ಟಾಡಿಯೊ ನಾಸಿಯೊನಾಲ್ ಡಿ ಬ್ರೆಸಿಲ್ಲಾದಲ್ಲಿ ಗುರುವಾರ ನಡೆದ 'ಸಿ' ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ ತಂಡ 2-1 ಗೋಲುಗಳಿಂದ ಐವರಿ ಕೋಸ್ಟ್ ತಂಡವನ್ನು ಪರಾಭವಗೊಳಿಸಿದರು.
ಮೊದಲ ಪಂದ್ಯದಲ್ಲಿ ಗ್ರೀಸ್ ಪಡೆಯನ್ನು ಮಣಿಸಿ ಶುಭಾರಂಭ ಮಾಡಿದ್ದ ಕೊಲಂಬಿಯಾ, ಈಗ ಸತತ ಎರಡನೇ ಗೆಲವಿನೊಂದಿಗೆ ಮುಂದಿನ ಸುತ್ತಿಗೆ ಸ್ಥಾನ ಖಚಿತಪಡಿಸಿಕೊಳ್ಳುವುದು ಕಷ್ಟವಾಗಿಲ್ಲ.
ಪಂದ್ಯ ರೋಚಕ ಪೈಪೋಟಿಯೊಂದಿಗೆಯೇ ಆರಂಭವಾಯಿತು. ಮೊದಲ ಅವಧಿಯ ಆಟದಲ್ಲಿ ಕೊಲಂಬಿಯಾ ಆಟಗಾರರಿಗೆ ಗೋಲು ಗಳಿಸುವ ಕೆಲ ಉತ್ತಮ ಅವಕಾಶಗಳು ಲಭಿಸಿದ್ದವು. ಆದರೆ, ಐವರಿ ಕೋಸ್ಟ್ ತಂಡದ ಪ್ರಬಲ ರಕ್ಷಣಾ ವಿಭಾಗ ಅದಕ್ಕೆ ಅವಕಾಶ ನೀಡಲಿಲ್ಲ. ಹಾಗೆಯೇ ಐವರಿ ಕೋಸ್ಟ್ ಸಹ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿ ಕೆಲ ಅವಕಾಶಗಳನ್ನು ಪಡೆದುಕೊಂಡಿತ್ತು. ಆದರೆ ಗುರಿ ಸೇರುವ ಹಾದಿಯಲ್ಲಿ ವೈಫಲ್ಯ ಅನುಭವಿಸಿ ನಿರಾಸೆಗೊಂಡಿತು.
ಇನ್ನು ಉತ್ತರಾರ್ಧದ ಆಟದಲ್ಲಿ ಮಾತ್ರ ಹೆಚ್ಚು ರೋಚಕತೆ ಸೃಷ್ಟಿಯಾಯಿತು. ಕೇವಲ 9 ನಿಮಿಷಗಳ ಅಂತರದಲ್ಲಿ ಮೂರು ಗೋಲು ಸಂಪಾದನೆಯಾಗಿ ಪಂದ್ಯದ ಕಾವು ಹೆಚ್ಚಿಸಿತು. ಮೊದಲಿಗೆ ಜೇಮ್ಸ್ ರೋಡ್ರಿಗ್ (64ನೇ ನಿಮಿಷ) ಮತ್ತು ಜುವಾನ್ ಕಿಂಟೆರೊ (70ನೇ ನಿಮಿಷ) ಕೇವಲ 6 ನಿಮಿಷಗಳ ಅಂತರದಲ್ಲಿ ಕ್ರಮವಾಗಿ ಗೋಲು ಬಾರಿಸಿ ಕೊಲಂಬಿಯಾ ತಂಡಕ್ಕೆ 2-0 ಗೋಲುಗಳ ಮಹತ್ವದ ಮುನ್ನಡೆ ತಂದುಕೊಟ್ಟರು. ಆದರೆ, ಐವರಿ ಕೋಸ್ಟ್ ಪರ ಗೆರ್ವಿನೊ 73ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಮ್ಮ ತಂಡದ ಹಿನ್ನಡೆ ಅಂತರವನ್ನು 1-2ಕ್ಕೆ ತಗ್ಗಿಸಿದರು. ಮುಂದಿನ 17 ನಿಮಿಷಗಳಲ್ಲಿ ಉಭಯರ ಮಧ್ಯೆ ಮತ್ತೆ ತೀವ್ರ ಪೈಪೋಟಿ ಮುಂದುವರೆದರೂ ಗೋಲು ದಕ್ಕಿಸಿಕೊಳ್ಳಲಾಗಲಿಲ್ಲ.
ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಜಯಭೇರಿ ಬಾರಿಸಿದ್ದ ಐವರಿ ಕೋಸ್ಟ್ ಇಲ್ಲಿ ಮಾತ್ರ ನಿರಾಸೆ ಅನುಭವಿಸಿತು. ತಂಡದ ಸ್ಟಾರ್ ಆಟಗಾರ ಡೀಡಿಯರ್ ಡ್ರೋಗ್ಬಾ ಅವರು ಪಂದ್ಯದ 59ನೇ ನಿಮಿಷದಲ್ಲಿ ವಿಲ್‌ಫ್ರೆಡ್ ಬೋನಿ ಬದಲು ಮೊದಲ ಬಾರಿಗೆ ಅಂಗಣಕ್ಕೆ ಧುಮುಕಿದರು. ಆದರೆ, ಅವರಿಂದಲೂ ಸಹ ಐವರಿ ಕೋಸ್ಟ್ ತಂಡವನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.