ಅರ್ಜೆಂಟೀನಾಗೆ ಇರಾನ್ ಸವಾಲು
ಬೆಲೊ ಹಾರಿಜಾಂಟೆ: ಪ್ರಶಸ್ತಿ ಗೆದ್ದುಕೊಳ್ಳುವ ಹಾಟ್ ಫೇವರಿಟ್‌ಗಳಲ್ಲಿ ಒಂದಾಗಿರುವ ಅರ್ಜೆಂಟೀನಾ ತಂಡ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ. ಇಲ್ಲಿಯೂ ಜಯಗಳಿಸುವ ಮೂಲಕ ಎಫ್ ಗುಂಪಿನಿಂದ ಪ್ರಿಕ್ವಾರ್ಟರ್‌ಫೈನಲ್ ಸುತ್ತಿಗೆ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಗುರಿಯನ್ನು ಅರ್ಜೆಂಟೀನಾ ಹೊಂದಿದೆ.
ಎಸ್ಟಾಡಿಯೊ ಮಿನೆರಾವೊ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರರು ಇರಾನ್ ತಂಡವನ್ನು ಎದುರಿಸಲಿದ್ದಾರೆ. ಆರಂಭಿಕ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿರುವ ಬೋಸ್ನಿಯಾ ಆ್ಯಂಡ್ ಹರ್ಜ್‌ಗೊವಿನಾವನ್ನು 2-1 ಗೋಲುಗಳಿಂದ ಮಣಿಸಿ ಶುಭಾರಂಭ ಮಾಡಿದ್ದ ಅರ್ಜೆಂಟೀನಾ 2ನೇ ಪಂದ್ಯವನ್ನೂ ಗೆದ್ದುಕೊಂಡಲ್ಲಿ ನಾಕೌಟ್ ಸುತ್ತಿಗೆ ಸ್ಥಾನ ಖಚಿತವಾಗುತ್ತದೆ. ತಂಡದ ಕೇಂದ್ರಬಿಂದು ಆಟಗಾರ ಲಯೊನೆಲ್ ಮೆಸ್ಸಿ ಮೇಲೆ ಮತ್ತೊಮ್ಮೆ ನಿರೀಕ್ಷೆ ಹೆಚ್ಚಾಗಿದೆ. ಮತ್ತೊಂದೆಡೆ ಇರಾನ್‌ಗೂ ಇದು 2ನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಅದು ನೈಜೀರಿಯಾ ವಿರುದ್ಧ ಗೋಲುರಹಿತ ಡ್ರಾ ಫಲಿತಾಂಶ ಪಡೆದಿತ್ತು.