ಕೊಲಂಬಿಯಾಕ್ಕೆ ಅನುಕೂಲ ಮಾಡಿಕೊಟ್ಟ ಜಪಾನ್
ನಟಾಲ್ (ಬ್ರೆಜಿಲ್): ಕಳೆದ 24 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೊಲಂಬಿಯಾ ತಂಡ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಅಂತಿಮ 16ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಕಾರಣ ಶುಕ್ರವಾರ ನಡೆದ ಪಂದ್ಯದಲ್ಲಿ ಜಪಾನ್ ಮತ್ತು ಗ್ರೀಸ್ ತಂಡಗಳು ಗೋಲು ದಾಖಲಿಸದೇ ಡ್ರಾ ಸಾಧಿಸಿದ ಹಿನ್ನೆಲೆಯಲ್ಲಿ ಕೊಲಂಬಿಯಾಕ್ಕೆ ಅನುಕೂಲವಾಗಿ ಪರಿಣಮಿಸಿದೆ. 2 ಬಾರಿ ತಪ್ಪು ಮಾಡಿದ ಗ್ರೀಸ್ ತಂಡದ ನಾಯಕ ಕೋನ್ಸ್ಟಾಟಿನೋಸ್ ಕತ್ಸೌರಾನಿಸ್ ಅವರು ಪಂದ್ಯದ 38ನೇ ನಿಮಿಷದಲ್ಲಿ ಹೊರಬಿದ್ದ ಹಿನ್ನೆಲೆಯಲ್ಲಿ, ಅದು ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು. ಆದರೂ ಜಪಾನ್ಗೆ ಗೋಲು ದಾಖಲಿಲ್ಲ.
ಇದರಿಂದ ಉಭಯ ತಂಡಗಳು 'ಸಿ' ಗುಂಪಿನಲ್ಲಿ ತಲಾ ಒಂದು ಅಂಕ ಗಳಿಸಿಕೊಂಡವು. ಮುಂದಿನ ಹಂತ ಪ್ರವೇಶಿಸುವ ಅವಕಾಶವನ್ನು ಉಳಿಸಿಕೊಂಡಿವೆಯಾದರೂ, ಅಂತಿಮ ಪಂದ್ಯದಲ್ಲಿ ಗೆಲವು ಸಾಧಿಸುವ ಅಗತ್ಯವಿದೆ. ಈಗ ಗ್ರೀಸ್ ತಂಡ, 3 ಅಂಕ ಹೊಂದಿರುವ ಐವರಿ ಕೋಸ್ಟ್ ವಿರುದ್ಧ ಸೆಣಸಲಿದ್ದು, ಜಪಾನ್, 6 ಅಂಕಗಳನ್ನು ಹೊಂದಿರುವ ಕೊಲಂಬಿಯಾ ವಿರುದ್ಧ ಸೆಣಸಲಿದೆ. ಈ ಋತುವಿನಲ್ಲಿ ವೈಫಲ್ಯ ಕಂಡಿರುವ ಮೆಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ ಶಿಂಜಿ ಕಗಾವಾ, ವಿಶ್ವಕಪ್ನಲ್ಲೂ ಜಪಾನ್ ಪರ ವೈಫಲ್ಯ ಮುಂದುವರಿಸಿದ್ದಾರೆ. ಐವರಿ ಕೋಸ್ಟ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಅವರಿಗೆ ಕೋಚ್ ಆಲ್ಬೆರ್ಟೋ ಜಚ್ಚೆರೋನಿ ಬೆಂಚ್ ಕಾಯುವ ಕಾಯಕ ನೀಡಿದ್ದಾರೆ. ಮೊದಲಾರ್ಧ ಪಂದ್ಯದಲ್ಲಿ ಜಪಾನ್ ಉತ್ತಮ ಪ್ರದರ್ಶನ ತೋರಿತು. ಮಿಡ್ಫೀಲ್ಡ್ನಲ್ಲಿ ಕೇಸುಕೆ ಹೋಂಡಾ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಜಪಾನ್ ಜಾಣತನದ ಪ್ರದರ್ಶನ ತೋರಿತ್ತು.
ಪಂದ್ಯ ಆರಂಭವಾಗಿ 5 ನಿಮಿಷಗಳಲ್ಲಿ ಗ್ರೀಸ್ ತಂಡ ಗೋಲು ದಾಖಲಿಸುವ ಅವಕಾಶದಿಂದ ವಂಚಿತವಾಯಿತು. ಗ್ರೀಸ್ನ ಪ್ರಮುಖ ಸ್ಟ್ರೈಕರ್ ಕೊಸ್ಟಾಸ್ ಮಿತ್ರಾಗೋಲೌ ಅವರು ಗಾಯಗೊಂಡಿದ್ದು ತಂಡಕ್ಕೆ ಹೊರೆಯಾಗಿ ಪರಿಣಿಮಿಸಿತು. ನಂತರ ಕೋನ್ಸ್ಟಾಟಿನೋಸ್ ಹೊರಬಿದ್ದಿದ್ದು, ಮತ್ತಷ್ಟು ಅನಾನುಕೂಲವಾಗಿ ಪರಿಣಮಿಸಿತು. ಆದರೆ, 10 ಆಟಗಾರರೊಂದಿಗೇ ಆಡಿದರೂ, ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಯಾವುದೇ ಕಾರಣಕ್ಕೂ ಎದುರಾಳಿ ತಂಡಕ್ಕೆ ಗೋಲು ದಾಖಲಿಸಲು ಅವಕಾಶ ಮಾಡಿಕೊಡಲಿಲ್ಲ.
ದ್ವಿತೀಯಾರ್ಧ ಪಂದ್ಯದ ಒಂದು ಹಂತದಲ್ಲಿ ಗ್ರೀಸ್ ಗೋಲು ದಾಖಲಿಸುವ ಉತ್ತಮ ಅವಕಾಶವನ್ನು ಹೊಂದಿತ್ತು. ಕಾರ್ನರ್ ಕಿಕ್ನಲ್ಲಿ ಥಿಯೋಫಾನಿಸ್ ಗೆಕಾಸ್ ತಲೆಯಿಂದ ಪಾಸ್ ಮಾಡಿದ ಚೆಂಡನ್ನು ಕಾರ್ನರ್ ಬದಿಯಿಂದ ಸೂಕ್ತ ರೀತಿಯಲ್ಲಿ ಗೋಲ್ಪೆಟ್ಟಿಗೆಯಡೆ ಕಳುಹಿಸಿದ್ದರು. ಆದರೆ, ಅದನ್ನು ತಡೆಯುವಲ್ಲಿ ಜಾಣತನ ಮೆರೆದ ಜಪಾನ್ ಸೋಲಿನಿಂದ ಪಾರಾಯಿತು. ನಂತರ ಜಪಾನ್ ಸಹ ಗೋಲು ದಾಖಲಿಸುವ ಅವಕಾಶವನ್ನು ಪಡೆದುಕೊಂಡಿತ್ತು. ಆದರೆ, ಗೋಡೆಯಂತೆ ರಕ್ಷಣೆಗೆ ನಿಂತ ಗ್ರೀಸ್ ಆಟಗಾರರು ಡ್ರಾ ಕಾಣುವಲ್ಲಿ ಯಶಸ್ವಿಯಾದರು.