ಜಯಕ್ಕಾಗಿ ಜರ್ಮನಿ ಜಪ
ತನ್ನ ಮೊದಲ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ 4-0 ಅಂತರದಿಂದ ಜಯ ಕಂಡಿರುವ ಜರ್ಮನಿ...
ಪೊರ್ಟೊ ಸೆಗುರೋ (ಬ್ರೆಜಿಲ್): ತನ್ನ ಮೊದಲ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ 4-0 ಅಂತರದಿಂದ ಜಯ ಕಂಡಿರುವ ಜರ್ಮನಿ ತಂಡ ಶನಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಘಾನ ವಿರುದ್ಧ ಸೆಣಸಲಿದೆ. ಆದರೆ, 2010ರ ಪಂದ್ಯಾವಳಿಯಲ್ಲಿ ಆದ ಫಲಿತಾಂಶ ಮರುಕಳಿಸದಿರುವಂತೆ ಅದು ದೇವರಲ್ಲಿ ಮೊರೆ ಇಟ್ಟಿದೆ.
ಕಾರಣ, ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿದ್ದ ಜರ್ಮನಿ, 2ನೇ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ 1-0ದಿಂದ ಸೋಲನುಭವಿಸಿತ್ತು. ಈ ಬಾರಿ ಮೊದಲ ಪಂದ್ಯದಲ್ಲಿ ಅದೇ ರೀತಿಯ ಫಲಿತಾಂಶ ಕಂಡಿರುವ ಜರ್ಮನಿ, ಘಾನಾ ವಿರುದ್ಧ ಯಾವುದೇ ಕಾರಣಕ್ಕೂ ಸೋಲನುಭವಿಸಬಾರದು ಎಂಬ ಹಠದಲ್ಲಿದೆ. ಆದರೆ, 2010ರಲ್ಲಿ 3ನೇ ಪಂದ್ಯದಲ್ಲಿ ಘಾನಾ ವಿರುದ್ಧವೇ 1-0ದಿಂದ ಗೆದ್ದು ನಾಕೌಟ್‌ಗೇರಿತ್ತು. '4 ವರ್ಷಗಳ ಹಿಂದೆ ನಡೆದ 2ನೇ ಪಂದ್ಯ ನಮಗೆ ಈಗ ಎಚ್ಚರಿಕೆಯ ಗಂಟೆಯಾಗಿದೆ. ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಂತಿಮವಾಗಿ ಸೋಲನುಭವಿಸಿದ್ದೇವು. ಹೀಗಾಗಿ ಈ ಪಂದ್ಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದು ಜರ್ಮನಿ ಮೆರ್ಟೆಸಾಕರ್ ತಿಳಿಸಿದ್ದಾರೆ. ಇನ್ನು ಘಾನಾ ತನ್ನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿದ್ದು, ಈಗ ಗೆಲವಿನ ಅನಿವಾರ್ಯದಲ್ಲಿದೆ. ಹೀಗಾಗಿ ಜರ್ಮನಿಗೆ ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆಗಳಿವೆ.