ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಪೋರ್ಚುಗಲ್‌ಗೆ ರೊನಾಲ್ಡೊ ಫಿಟ್ನೆಸ್ ಚಿಂತೆ

Vishwanath S
Updated On : 22 Jun 2014, 12:02 pm

ಮಾನೌಸ್: ಪ್ರಶಸ್ತಿಗಾಗಿ ತೀವ್ರ ಪೈಪೋಟಿಯಲ್ಲಿ ನಿಲ್ಲುವಷ್ಟು ಅಗಾಧ ಸಾಮರ್ಥ್ಯ ಹೊಂದಿರುವ ಪೋರ್ಚುಗಲ್ ಆಟಗಾರರ ಮುಂದೆ ಈಗ ಮತ್ತೊಂದು ಅಗ್ನಿಪರೀಕ್ಷೆ ಕಾದಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಜಿ ಗುಂಪಿನಿಂದ ಸೆಣಸಾಟಕ್ಕೆ ಇಳಿದಿರುವ ಪೋರ್ಚುಗಲ್ ತಂಡ ಮೊದಲ ಪಂದ್ಯದಲ್ಲೇ ದೊಡ್ಡ ಕಹಿ ಉಂಡಿದೆ. ಪ್ರಬಲ ಜರ್ಮನಿ ವಿರುದ್ಧ ಹೋರಾಟ ನಡೆಸಿದ್ದ ಪೋರ್ಚುಗಲ್ 0-4 ಗೋಲುಗಳ ಭಾರಿ ಅಂತರದಲ್ಲಿ ಅವಮಾನಕಾರಿ ಸೋಲನುಭವಿಸುವುದರೊಂದಿಗೆ ಭಾರಿ ಒತ್ತಡದಲ್ಲಿ ಸಿಲುಕಿದೆ.
ಇಂತಹ ಪರಿಸ್ಥಿತಿಯಲ್ಲಿ ಈಗ ಎರಡನೇ ಪಂದ್ಯದಲ್ಲಿ ಹೋರಾಟಕ್ಕಿಳಿಯಬೇಕಾಗಿದೆ. ಎರೆನಾ ಅಮಾಜೋನಿಯಾದಲ್ಲಿ ಸೋಮವಾರ ಬೆಳಗ್ಗೆ ನಡೆಯಲಿರುವ ಪಂದ್ಯದಲ್ಲಿ ಪೋರ್ಚುಗಲ್ ತಂಡಕ್ಕೆ ಅಮೆರಿಕನ್ನರು ಸವಾಲು ಒಡ್ಡಲಿದ್ದಾರೆ.
ಅಮೆರಿಕದ ವಿರುದ್ಧ ಪೋರ್ಚುಗಲ್ ಗೆಲ್ಲುವ ನೆಚ್ಚಿನ ತಂಡವೇನೋ ಹೌದು. ಆದರೆ, ಅದಕ್ಕಿರುವ ದೊಡ್ಡ ಚಿಂತೆ ಎಂದರೆ ತನ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ಅವರ ಫಿಟ್ನೆಸ್ ಬಗ್ಗೆ.
ವಿಶ್ವದ ವರ್ಷದ ಶ್ರೇಷ್ಠ ಆಟಗಾರ ರೊನಾಲ್ಡೊ ಮಂಡಿ ನೋವಿನಿಂದ ಚೇತರಿಸಿಕೊಂಡಿದ್ದರೂ ತಂಡದ ಸಹ ಆಟಗಾರರೊಂದಿಗೆ ಹೆಚ್ಚು ಸಮಯ ಅಭ್ಯಾಸ ನಡೆಸಲು ವಿಫಲರಾಗಿದ್ದಾರೆ. ನೋವಿನ ಮೇಲೆ ಐಸ್ ಪ್ಯಾಕ್ ಇಟ್ಟುಕೊಂಡು ಸುಧಾರಿಸಿಕೊಳ್ಳುತ್ತ ಕುಳಿತಿರುವ ರೊನಾಲ್ಡೊ, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಆಡುತ್ತಾರೋ-ಇಲ್ಲವೋ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.
ರೊನಾಲ್ಡೊ ಹೊರತಾಗಿ ಮತ್ತೊಬ್ಬ ಸ್ಟಾರ್ ಆಟಗಾರ ಪೇಪೆ ಕೂಡ ಅಮೆರಿಕ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿರುವುದು ಪೋರ್ಚುಗಲ್ ಪಾಲಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಜರ್ಮನಿ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಆಟಗಾರ ಥಾಮಸ್ ಮುಲ್ಲರ್‌ಗೆ ತಲೆಯಿಂದ ಗುದ್ದಿ ಕೆಂಪು ಕಾರ್ಡ್ ಪಡೆದು ಹೊರಗುಳಿದಿರುವ ಪೇಪೆ ಪೋರ್ಚುಗಲ್ ತಂಡದ ಎರಡನೇ ಪಂದ್ಯದಿಂದ ಹೊರಗುಳಿಯಬೇಕಾಗಿದೆ.
ಒಂದು ವೇಳೆ ಈ ಪಂದ್ಯವನ್ನೂ ಸೋತರೆ ಪೋರ್ಚುಗಲ್ ಆಟಗಾರರು ಗುಂಪು ಸೆಣಸಿನಲ್ಲಿಯೇ ತಮ್ಮ ಹೋರಾಟಕ್ಕೆ ಇತಿಶ್ರೀ ಹಾಡಬೇಕಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಪೋರ್ಚುಗಲ್ ಪಡೆಯನ್ನು ಆಟಗಾರರ ಆತ್ಮವಿಶ್ವಾಸವೇ ಮೇಲೆತ್ತಬೇಕು. ಜೊತೆಗೆ ಅದೃಷ್ಟವೂ ಬೆಂಬಲವಾಗಿ ನಿಂತರೆ, ಅಮೆರಿಕದ ವಿರುದ್ಧ ಗೆದ್ದು ನಾಕೌಟ್ ಸುತ್ತಿನ ಆಸೆ ಜೀವಂತವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮತ್ತೊಂದೆಡೆ ಅಮೆರಿಕ ತನ್ನ ಮೊದಲ ಸುತ್ತಿನಲ್ಲಿ ಘಾನಾ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿ ಶುಭಾರಂಭ ಮಾಡಿದೆ. ಪೋರ್ಚುಗಲ್ ವಿರುದ್ಧವೂ ಜಯಗಳಿಸಿದಲ್ಲಿ ಪ್ರಿಕ್ವಾರ್ಟರ್‌ಫೈನಲ್ ತಲುಪುವುದು ಬಹುತೇಕ ಖಚಿತ. ಹಾಗಾಗಿ, ಗೆಲುವೊಂದೇ ಗುರಿಯಾಗಿರಿಸಿಕೊಂಡು ಪೋರ್ಚುಗಲ್‌ಗೆ ಕಠಿಣ ಸವಾಲು ಒಡ್ಡಲು ಅಮೆರಿಕನ್ನರು ಮುಂದಾಗಿದ್ದಾರೆ.
ಪೋರ್ಚುಗಲ್ ಮತ್ತು ಅಮೆರಿಕ ಈವರೆಗೆ ಒಟ್ಟಾರೆ 5 ಬಾರಿ ಮುಖಾಮುಖಿಯಾಗಿದ್ದು, ತಲಾ 2ರಲ್ಲಿ ಗೆಲವು ದಾಖಲಿಸಿ ಸಮಗೌರವ ಸಾಧಿಸಿವೆ. ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಸೆಣಸಿದ್ದು, 2002ರಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ 3-2 ಗೋಲುಗಳಿಂದ ಪೋರ್ಚುಗಲ್ ವಿರುದ್ಧ ಜಯ ದಾಖಲಿಸಿತ್ತು.
ಪೋರ್ಚುಗಲ್-ಅಮೆರಿಕ (ಗುಂಪು-ಜಿ)
ಪಂದ್ಯ ಆರಂಭ:
ನಾಳೆ ರಾತ್ರಿ 03.30
4-ರ್ಯಾಂಕ್-13
5-ಪಂದ್ಯ-2
2-ಜಯ-2
1-ಡ್ರಾ-12-ಸೋಲು-2
5-ಗೋಲುಪರ-5
ಒಟ್ಟು ಗೋಲು-10

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement