ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಗೆಲವಿನ ವಿದಾಯಕ್ಕೆ ಇಂಗ್ಲೆಂಡ್ ಬಯಕೆ

ಡಿ ಗುಂಪಿನಲ್ಲಿ ತಾನಾಡಿದ ಮೊದಲೆರಡೂ ಪಂದ್ಯಗಳಲ್ಲಿ ದಯನೀಯ ಸೋಲು ಕಾಣುತ್ತಲೇ ವಿಶ್ವಕಪ್ ...

Mainashree
Updated On : 23 Jun 2014, 8:52 am

ರಿಯೊ ಡಿ ಜನೈರೊ: ಡಿ ಗುಂಪಿನಲ್ಲಿ ತಾನಾಡಿದ ಮೊದಲೆರಡೂ ಪಂದ್ಯಗಳಲ್ಲಿ ದಯನೀಯ ಸೋಲು ಕಾಣುತ್ತಲೇ ವಿಶ್ವಕಪ್ ಪ್ರಶಸ್ತಿಗಾಗಿನ ಪೈಪೋಟಿಯಿಂದ ಹೊರಬಿದ್ದಿರುವ ಇಂಗ್ಲೆಂಡ್ ಆಟಗಾರರು ಈಗ ತನ್ನ ಕೊನೆಯ ಲೀಗ್ ಸಮರದಲ್ಲಿ ಗೌರವಕ್ಕಾಗಿ ಮಾತ್ರ ಹೋರಾಟ ನಡೆಸಬೇಕಿದೆ.
ಇಂಗ್ಲೆಂಡ್ ತಂಡ ಮಂಗಳವಾರ ಬೆಲೊ ಹಾರಿಜಾಂಟ್‌ನ ಎಸ್ಟಾಡಿಯೊ ಮಿನೇರೊದಲ್ಲಿ ನಡೆಯಲಿರುವ ಗುಂಪಿನ ತನ್ನ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಕೋಸ್ಟ ರಿಕಾ ತಂಡವನ್ನು ಎದುರಿಸಲಿದೆ.
ಗ್ರೂಪ್ ಆಫ್ ಡೆತ್ ಎಂದೇ ಹೇಳಲಾಗುವ “t’ ಗುಂಪಿನಲ್ಲಿ ಈ ಬಾರಿ ಇಂಗ್ಲೆಂಡ್ ದೊಡ್ಡ ಕಹಿ ಅನುಭವಿಸಿ ಭಾರಿ ಮುಖಭಂಗ ಅನುಭವಿಸಿದೆ. ಇಟಲಿ ಮತ್ತು ಉರುಗ್ವೆಯಂತಹ ಪ್ರಬಲ ತಂಡಗಳೆದುರು ಉತ್ತಮ ಪ್ರದರ್ಶನ ನೀಡಲಾಗದೇ ಆಘಾತಕಾರಿ ಸೋಲುಂಡಿರುವ ಇಂಗ್ಲೆಂಡ್, ನಾಳೆ ಕೋಸ್ಟ ರಿಕಾ ವಿರುದ್ಧ ಗೆದ್ದು ಸತತ ಮೂರನೇ ಸೋಲಿನಿಂದ ಪಾರಾಗುವುದರ ಜೊತೆಗೆ ವಿಜಯೋತ್ಸವದ ಮೂಲಕ ವಿದಾಯ ಹೇಳುವ ಒತ್ತಡದಲ್ಲಿದೆ.
ಮತ್ತೊಂದೆಡೆ ಕೋಸ್ಟ ರಿಕಾ ತಂಡ ಅಚ್ಚರಿಯ ಫಲಿತಾಂಶ ಒದಗಿಸಿ ಈಗಾಗಲೇ ನಾಕೌಟ್ ಸುತ್ತಿಗೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇಟಲಿ ಮತ್ತು ಉರುಗ್ವೆ ತಂಡಗಳಿಗೆ ಶಾಕ್ ಕೊಟ್ಟಿರುವ ಕೋಸ್ಟ ರಿಕಾ, ಈಗ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲವಿನ ಕೇಕೆ ಹಾಕುವುದರೊಂದಿಗೆ ಗುಂಪಿನಿಂದ ಸೋಲರಿಯದ ತಂಡವಾಗಿ ಮುಂದಡಿ ಇಡುವ ವಿಶ್ವಾಸ ಹೊಂದಿದೆ.
1950ರಲ್ಲಿ ಇದೇ ಅಂಕಣದಲ್ಲಿ ಅಮೆರಿಕ ಎದುರು ಏಕೈಕ ಗೋಲಿನಿಂದ ಅಚ್ಚರಿಯ ಸೋಲನುಭವಿಸಿದ್ದ ಇಂಗ್ಲೆಂಡ್ ಈಗ ಜಯಪಡೆಯುವ ಲೆಕ್ಕಾಚಾರದಲ್ಲಿದೆ. ಇಂಗ್ಲೆಂಡ್ ತಂಡದ ಅನುಭವಿ ಸಂಪರ್ಕ ಆಟಗಾರರಾದ ನಾಯಕ ಸ್ಟೀವನ್ ಗೆರಾರ್ಡ್ ಮತ್ತು ಫ್ರಾಂಕ್ ಲ್ಯಾಂಪರ್ಡ್‌ಗೆ ಬಹುತೇಕ ಇದೇ ಕೊನೆಯ ವಿಶ್ವಕಪ್ ಪಂದ್ಯಾವಳಿಯಾಗಿದೆ. ಇನ್ನು ಈ ತಂಡದ ಸ್ಟಾರ್ ಆಟಗಾರ ವೇಯ್ನ್ ರೂನಿ ಕೂಡ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಆದರೆ, ಕೋಸ್ಟ ರಿಕಾ ತಂಡ ಮುನ್ನುಗ್ಗುತ್ತಿರುವ ರೀತಿ ನೋಡಿದರೆ, ಮತ್ತೊಂದು ಜಯ ದಕ್ಕಿಸಿಕೊಳ್ಳಬಹುದು. ಕೋಚ್ ಜಾರ್ಜ್ ಲೂಯಿಸ್ ಪಿಂಟೊ, ವಿಶ್ವಕಪ್‌ಗಾಗಿ ತಮ್ಮ ಆಟಗಾರರನ್ನು ಅತ್ಯುತ್ತಮವಾಗಿಯೇ ಪಳಗಿಸಿದ್ದಾರೆ. ಹಾಗೆಯೇ, ನಾಯಕ ಬ್ರಯಾನ್ ರ್ಯೂಜ್ ವೈಯಕ್ತಿಕವಾಗಿ ಉತ್ತಮ ಫಾರ್ಮ್‌ನಲ್ಲಿರುವುದರ ಜೊತೆಗೆ ಆಟಗಾರರನ್ನು ಸಮರ್ಥವಾಗಿ ಮುನ್ನಡೆಸುತ್ತಿರುವುದು ಆ ತಂಡದ ದೊಡ್ಡ ಶಕ್ತಿ ಎನಿಸಿದೆ.   
ಫುಟ್ಬಾಲ್ ಅಖಾಡದಲ್ಲಿ ಇಂಗ್ಲೆಂಡ್ ಮತ್ತು ಕೋಸ್ಟ ರಿಕಾ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement