ಗ್ರೀಸ್ ಮುಂದೆ ಐವರಿ
ಫ್ರೊಟೆಲೆಜಾ: ಪ್ರಿಕ್ವಾರ್ಟರ್ಫೈನಲ್ಗೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಐವರಿ ಕೋಸ್ಟ, ಸಿ ಗುಂಪಿನ ಕಡೇಯ ಲೀಗ್ ಪಂದ್ಯದಲ್ಲಿ ಗ್ರೀಸ್ ತಂಡವನ್ನು ಎದುರಿಸಲಿದೆ.
ಮಂಗಳವಾರ ಮಧ್ಯರಾತ್ರಿ ಇಲ್ಲಿನ ಸ್ಟೇಡಿಯಾ ಕಾಸ್ಟ್ಲೆಲಾಲ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಐವರಿ ಕೋಸ್ಟ ತಂಡ ತನಗಿಂತ ಉತ್ತಮ ರ್ಯಾಂಕಿಂಗ್ ಹೊಂದಿರುವ ಗ್ರೀಸ್ ತಂಡವನ್ನು ಎದುರಿಸಲಿದೆ. ಹಾಗಾಗಿ ಐವರಿ ಕೋಸ್ಟ 16ರ ಘಟ್ಟಕ್ಕೆ ಪ್ರವೇಶ ಪಡೆಯುವುದೇ ಎಂಬ ಪ್ರಶ್ನೆ ಮೂಡಿದೆ.
ಈ ಎರಡು ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಆದರೆ ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳ ಪ್ರದರ್ಶನ ನೋಡುವುದಾದರೆ, 12ನೇ ರ್ಯಾಂಕಿಂಗ್ ಪಡೆದಿರುವ ಗ್ರೀಸ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಡ್ರಾ ಹಾಗೂ ಒಂದರಲ್ಲಿ ಸೋಲನುಭವಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದಿದೆಯಲ್ಲದೇ, ಪಂದ್ಯವಾಳಿಯಿಂದ ಹೊರ ಬಿದ್ದಿದೆ.
ಇನ್ನು 23ನೇ ರ್ಯಾಂಕಿಂಗ್ ಪಡೆದಿರುವ ಐವರಿ ಕೋಸ್ಟ ತಂಡದ ಪ್ರದರ್ಶನ ಅಚ್ಚರಿ ಮೂಡಿಸಿದೆ. ಕಾರಣ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲವು ಹಾಗೂ ಒಂದು ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.
ಹಾಗಾಗಿ ಐವರಿ ಕೋಸ್ಟ ತಂಡ ನಾಕೌಟ್ ಹಂತಕ್ಕೆ ಪ್ರವೇಶಿಸಲು ಕನಿಷ್ಠ ಡ್ರಾ ಫಲಿತಾಂಶವನ್ನಾದರೂ ಪಡೆಯಬೇಕಾಗಿದೆ. ಒಂದುವೇಳೆ ಮತ್ತೊಂದು ಸಿ ಗುಂಪಿನ ಪಂದ್ಯದಲ್ಲಿ ಜಪಾನ್, ಕೊಲಂಬಿಯಾ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದರೆ, ಐವರಿ ಕೋಸ್ಟ ತಂಡದ ಹಾದಿ ಸುಗಮವಾಗಲಿದೆ.
ಒಂದೆಡೆ ಗೆಲವು ಕಾಣದೇ ಗಾಯಗೊಂಡ ಹುಲಿಗಳಂತಾಗಿರುವ ಗ್ರೀಸ್ ತಂಡ ಕಡೇಯ ಪಂದ್ಯದಲ್ಲಾದರೂ ಗೆಲವು ದಾಖಲಿಸಲೇಬೇಕೆಂಬ ಛಲ ಹೊಂದಿದ್ದರೆ, ಇತ್ತ ಐವರಿ ಕೋಸ್ಟ ತಂಡ ನಾಕೌಟ್ ಹಂತದ ಕನಸಿನೊಂದಿಗೆ ಕಣಕ್ಕಿಳಿಯುತ್ತಿದೆ. ಹಾಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ನಿರೀಕ್ಷೆ ಇದ್ದು, ಗೆಲವು ಯಾರ ಪಾಲಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.