ಇಟಲಿ ಆಟಗಾರನನ್ನು ಕಚ್ಚಿದ ಸೂರೆಜ್‌ಗೆ ನಿಷೇಧ ಸಾಧ್ಯತೆ
ಬಲಿಷ್ಠ ಇಟಲಿ ತಂಡವನ್ನು ಬಗ್ಗುಬಡಿದ ಉರುಗ್ವೆ ತಂಡ ನಾಕೌಟ್ ಹಂತ ಪ್ರವೇಶಿಸಿ ತನ್ನ ಗೌರವ ಕಾಪಾಡಿಕೊಂಡಿದೆ ನಿಜ.
ರಿಯೋ ಡಿ ಜನೈರೋ: ಬಲಿಷ್ಠ ಇಟಲಿ ತಂಡವನ್ನು ಬಗ್ಗುಬಡಿದ ಉರುಗ್ವೆ ತಂಡ ನಾಕೌಟ್ ಹಂತ ಪ್ರವೇಶಿಸಿ ತನ್ನ ಗೌರವ ಕಾಪಾಡಿಕೊಂಡಿದೆ ನಿಜ. ಆದರೆ, ಪಂದ್ಯದಲ್ಲಿ ಇಟಲಿ ಆಟಗಾರನನ್ನು ಬಾಯಿಂದ ಕಚ್ಚಿದ ಉರುಗ್ವೆ ತಂಡದ ಪ್ರಮುಖ ಮುನ್ನಡೆ ಆಟಗಾರ ಲೂಯಿಸ್ ಸೂರೆಜ್, ಇಟಲಿಯ ರಕ್ಷಣಾ ವಿಭಾಗದ ಜಾರ್ಜಿಯೋ ಚೀಲ್ಲಿನಿ ಅವರನ್ನು ಕಚ್ಚುವ ಮೂಲಕ ಉರುಗ್ವೆ ದೇಶದ ಮಾನವನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ.ಕೇವಲ 12 ತಿಂಗಳ ಹಿಂದೆ ನಡೆದ ಕಾನ್ಫೆಡರೇಷನ್ ಕಪ್‌ನಲ್ಲೇ ಚಿಲ್ಲಿನಿ ಅವರನ್ನು ಕಚ್ಚಲು ಸೂರೆಜ್ ಯತ್ನಿಸಿದ್ದರಂತೆ. ಈಗ ನಿಜವಾಗಿಯೂ ಕಚ್ಚುವ ಮೂಲಕ ಫಿಫಾ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಇಟಲಿ ಮತ್ತು ಉರುಗ್ವೆ ಪಂದ್ಯ ನಡೆದು ಒಂದು ಗಂಟೆ ನಂತರ ಪ್ರಕರಣದ ಕುರಿತು ತನ್ನ ಶಿಸ್ತು ಸಮಿತಿ ಸೂರೆಜ್ ವಿರುದ್ಧ ವಿಚಾರಣೆ ನಡೆಸಿದೆ ಎಂದು ಫಿಫಾ ತಿಳಿಸಿದೆ.
ಒಂದು ವೇಳೆ ಪ್ರಕರಣದಲ್ಲಿ ಸೂರೆಜ್ ಅಪರಾಧಿ ಎಂದು ಸಾಬೀತಾದರೆ, ಅವರು ಫಿಫಾ ನಿಯಮದ ಪ್ರಕಾರ ಮುಂದಿನ ಎರಡು ಪಂದ್ಯಗಳಿಗೆ ಅಥವಾ ಗರಿಷ್ಟ 24 ತಿಂಗಳವರೆಗೂ ನಿಷೇಧ ಹೇರುವ ಸಾಧ್ಯತೆಗಳಿವೆ.
ಕೊರಿಯಾಗೆ ಹಿಂದಿನ ಸ್ಫೂರ್ತಿಯ ಅಗತ್ಯ
ಸಾವೊ ಪೊಲೊ: ಬಲಿಷ್ಠ ಬೆಲ್ಜಿಯಂ ಎದುರಿಸುತ್ತಿರುವ ದಕ್ಷಿಣ ಕೊರಿಯಾ ತಂಡಕ್ಕೆ 2002ರಲ್ಲಿದ್ದ ಮಾಂತ್ರಿಕ ಸ್ಫೂರ್ತಿ ಪಡೆಯುವ ಆಗತ್ಯವಿದೆ. ಆದರೆ, ಈಗಾಗಲೇ ಅಜೇಯವಾಗಿ ನಾಕೌಟ್ ಹಂತ ತಲುಪಿರುವ ಬೆಲ್ಜಿಯಂ ಅಭ್ಯಾಸ ನಡೆಸಲು ಎದುರು ನೋಡುತ್ತಿದೆ.ರಷ್ಯಾ ವಿರುದ್ಧ ಡ್ರಾ ಸಾಧಿಸಿದ ನಂತರ ಅಲ್ಜೀರಿಯಾ ವಿರುದ್ಧ 4-2 ಗೋಲುಗಳಿಂದ ಸೋಲನುಭವಿಸಿರುವ ಕೊರಿಯಾ ಈ ಪಂದ್ಯಾವಳಿಯಲ್ಲಿ ಹೋರಾಟವನ್ನು ಮುಂದುವರಿಸಬೇಕಾದರೆ, ಜಯ ಕಾಣುವುದು ಅನಿವಾರ್ಯವಾಗಿದೆ.ಆದರೆ, ತನ್ನ ರಕ್ಷಣಾ ವಿಭಾಗದ ಇಬ್ಬರು ಆಟಗಾರರು ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಇದುವರೆಗೂ ತಂಡ ಆಕ್ರಮಣಕಾರಿ ದಾಳಿಯನ್ನು ನಡೆಸಲು ವಿಫಲವಾಗಿದೆ. ಆದರೆ, 2002ರ ಪಂದ್ಯಾವಳಿಯಲ್ಲಿ ತಂಡ ಸೆಮಿಫೈನಲ್ ತಲುಪಿ ಸೋಲನುಭವಿಸಿದಾಗ, ತಂಡದಲ್ಲಿದ್ದ ಹಾಂಗ್ ಮುಂಗ್-ಬೊ ಈಗ ತಂಡದ ಕೋಚ್ ಆಗಿದ್ದು, ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸುವ ಆಶೆಯ ಹೊಂದಿದ್ದಾರೆ.
ಜಯ ಕಾಣದೇ ತವರು ಸೇರಿದ ಆಂಗ್ಲರ ಪಡೆ
ರಿಯೋ ಡಿ ಜನೈರೋ: ಕೊನೆಯ ಪಂದ್ಯದಲ್ಲಾದರೂ ಜಯ ಸಾಧಿಸಿ ಪಂದ್ಯಾವಳಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಬೇಕು ಎಂಬ ಇಂಗ್ಲೆಂಡ್ ತಂಡದ ಹಠ ಕೊನೆಗೂ ಈಡೇರಲೇ ಇಲ್ಲ. ಮಂಗಳವಾರ ನಡೆದ 'ಡಿ' ಗುಂಪಿನಲ್ಲಿ ಈಗಾಗಲೇ ನಾಕೌಟ್ ಹಂತ ತಲುಪಿ ಒತ್ತಡವಿಲ್ಲದ ಪ್ರದರ್ಶನ ನೀಡಿದ ಕೋಸ್ಟರಿಕಾ ವಿರುದ್ಧ ಗೋಲು ದಾಖಲಿಸದೇ ಡ್ರಾ ಸಾಧಿಸಿದ್ದೇ ಅದರ ದೊಡ್ಡ ಸಾಧನೆಯಾಯಿತು. ಇದರೊಂದಿಗೆ ಪಂದ್ಯಾವಳಿಯ ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಪಡೆದ ಇಂಗ್ಲೆಂಡ್ ತವರಿನ ಹಾದಿ ಹಿಡಿಯಿತು. ಬಲಿಷ್ಠ ಇಟಲಿ ಮತ್ತು ಉರುಗ್ವೆ ವಿರುದ್ಧ ಅಚ್ಚರಿಯ ಜಯ ಕಂಡಿದ್ದ ಕೋಸ್ಟರಿಕಾ ಆಟಗಾರರಿಗೆ ಇಂಗ್ಲೆಂಡ್ ವಿರುದ್ಧ ಜಯ ಕಾಣಲು ಸಾಧ್ಯವಾಗಲಿಲ್ಲ. ಆದರೆ, 'ಡಿ' ಗುಂಪಿನಲ್ಲಿ ಸೋಲರಿಯದ ತಂಡ ಎಂಬ ಹೆಗ್ಗಳಿಕೆಗೆ ಕೊಸ್ಟರಿಕಾ ಪಾತ್ರವಾಯಿತು.
ಈಗಾಗಲೇ ಎರಡು ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ಅಭಿಮಾನಿಗಳು ಕೊನೆಯ ಪಂದ್ಯದಲ್ಲಾದರೂ ತಮ್ಮ ಹೀರೋಗಳು ಜಯ ಸಾಧಿಸುತ್ತಾರೆ ಎಂಬ ಆಸೆಯನ್ನು ಹೊಂದಿದ್ದರು. ಆದರೆ, ಫಲಿತಾಂಶ ಅವರಿಗೆ ಸಂಭ್ರಮವನ್ನೂ ತರಲಿಲ್ಲ. ಸಂಪೂರ್ಣ ನಿರಾಸೆಯನ್ನೂ ಉಂಟುಮಾಡಲಿಲ್ಲ.