ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಕೋಸ್ಟಗೆ ಪೆನಾಲ್ಟಿ ; ಗ್ರೀಸ್‌ಗೆ ನಾಕೌಟ್ ಭಾಗ್ಯ

ಅದೃಷ್ಟವಂತ ಗ್ರೀಸ್ ತಂಡ ವಿಶ್ವಕಪ್...

Vishwanath S
Updated On : 26 Jun 2014, 1:49 am

ಫೋರ್ಟ್‌ಲೆಜಾ: ಅದೃಷ್ಟವಂತ ಗ್ರೀಸ್ ತಂಡ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ 'ಸಿ' ಗುಂಪಿನಿಂದ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಆದರೆ, ನತದೃಷ್ಟ ತಂಡವೆನಿಸಿದ ಐವರಿ ಕೋಸ್ಟ ನಾಕೌಟ್ ಸುತ್ತು ತಲುಪುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಹಾಳುಮಾಡಿಕೊಂಡು ಸ್ಪರ್ಧೆಯಿಂದ ಹೊರನಡೆಯುವಂತಾಗಿದೆ.
ಎಸ್ಟಾಡಿಯೊ ಕಾಸ್ಟೆಲಿಯೊದಲ್ಲಿ ಬುಧವಾರ ಬೆಳಗ್ಗೆ ನಡೆದ 'ಸಿ' ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗ್ರೀಸ್ ಆಟಗಾರರು 2-1 ಗೋಲುಗಳಿಂದ ಐವರಿ ಕೋಸ್ಟ ತಂಡವನ್ನು ಪರಾಭವಗೊಳಿಸಿದರು.
ಪಂದ್ಯದ ಕೊನೆಯ ಘಟ್ಟದಲ್ಲಿ ಗಾಯದ ಹೆಚ್ಚುವರಿ ಸಮಯದ ಆಟದಲ್ಲಿ (90೤3ನೇ ನಿಮಿಷ) ಅದೃಷ್ಟದ ರೂಪದಲ್ಲಿ ಒದಗಿಬಂದ ಪೆನಾಲ್ಟಿ ಅವಕಾಶ, ಗ್ರೀಸ್ ತಂಡಕ್ಕೆ ನಾಕೌಟ್ ಸುತ್ತು ಹತ್ತಲು ಮೆಟ್ಟಿಲು ಸಿಕ್ಕಂತಾಯಿತು. ಗೋಲು ಆವರಣದ ಬಳಿ ಐವರಿ ಕೋಸ್ಟ ತಂಡದ ಬದಲಿ ಆಟಗಾರ ಜಿಯೊವಾನಿ ಸಿಯೊ ಅವರು ಗ್ರೀಸ್‌ನ ಜಾರ್ಜಿಯಸ್ ಸಾಮರಸ್ ಅವರನ್ನು ನೆಲಕ್ಕೆ ಬೀಳಿಸಿದರು. ಆಗ ರೆಫರಿ, ಗ್ರೀಸ್ ತಂಡಕ್ಕೆ ಪೆನಾಲ್ಟಿ ಅವಕಾಶ ನೀಡಿದರು. ಈ ಅವಕಾಶವನ್ನು ತೆಗೆದುಕೊಂಡ ಸಾಮರಸ್, ಐವರಿ ಕೋಸ್ಟ ಗೋಲ್‌ಕೀಪರ್ ಬೌಬಾಕರ್ ಬ್ಯಾರಿ ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸುತ್ತಿದ್ದಂತೆಯೇ ಗ್ರೀಸ್ ಆಟಗಾರರು ನಾಕೌಟ್ ಸುತ್ತು ತಲುಪಿದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದರು.
ಮತ್ತೊಂದೆಡೆ ಈ ಪಂದ್ಯದಲ್ಲಿ ಕನಿಷ್ಟ ಡ್ರಾ ಫಲಿತಾಂಶ ಪಡೆದಿದ್ದರೂ ಸಹ ಐವರಿ ಕೋಸ್ಟ ಆಟಗಾರರು ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಲಿದ್ದರು. ಆದರೆ, ಅಂತಿಮ ಘಟ್ಟದಲ್ಲಿ ಎದುರಾಳಿಗೆ ಪೆನಾಲ್ಟಿ ಅವಕಾಶ ನೀಡಿದ ಪರಿಣಾಮ ಕೈಯಲ್ಲಿದ್ದ ಅತ್ಯುತ್ತಮ ಅವಕಾಶವನ್ನು ಹಾಳುಮಾಡಿಕೊಂಡಿತು.
ಪಂದ್ಯದ ನಂತರ ಪ್ರತಿಕ್ರಿಯಿಸಿದ ಗ್ರೀಸ್ ತಂಡದ ಗೆಲವಿನ ರೂವಾರಿ ಜಾರ್ಜಿಯಸ್ ಸಾಮರಸ್, ನಮ್ಮ ಮೇಲೆ ಹೆಚ್ಚಿನ ಒತ್ತಡವಿತ್ತು. ಪಂದ್ಯ ಗೆದ್ದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದ್ದ ನಮ್ಮ ತಂಡ, ಈ ಹೋರಾಟಕ್ಕೆ ಹೆಚ್ಚು ಶಕ್ತಿಯುತಗೊಂಡಿತ್ತು. ಈ ಗೆಲವನ್ನು ಆರ್ಥಿಕ ಸಂಘರ್ಷದಿಂದ ಬಳಲುತ್ತಿರುವ ನಮ್ಮ ದೇಶದ ಜನತೆಗೆ ಅರ್ಪಿಸುತ್ತೇನೆ ಎಂದು ಭಾವೋದ್ವೇಗದಿಂದ ನುಡಿದರು.
ಮತ್ತೆ ಜನರ ಸಂತೋಷ ಮರಳಿ ಮರುವ ವಿಶ್ವಾಸ ನಮ್ಮಲ್ಲಿತ್ತು. ನಾವೊಂದು ತಂಡವಾಗಿ ಹೋರಾಟ ಮಾಡಿ ಜನರ ಖುಷಿ ಮರಳಿ ತರುವ ಪ್ರಯತ್ನ ಮಾಡಿದ್ದೇವೆ ಎಂದೂ ಸಾಮರಸ್ ಹೇಳಿದರು.
ಗ್ರೀಸ್ ಮತ್ತು ಐವರಿ ಕೋಸ್ಟ ನಡುವಿನ ಪಂದ್ಯ ಹೆಚ್ಚು ರೋಚಕತೆಯಿಂದ ಆರಂಭವಾಯಿತು. ಮೊದಲ ಅವಧಿಯ ಆಟ ಮುಗಿಯಲು ಕೇವಲ ಮೂರು ನಿಮಿಷಗಳಿದ್ದಾಗ ಆ್ಯಂಡ್ರೇಸ್ ಸಾಮರೀಸ್ ಅವರು ಗೋಲು ಗಳಿಸಿ ಗ್ರೀಸ್ ತಂಡಕ್ಕೆ ವಿರಾಮದ ವೇಳೆ 1-0 ಮುನ್ನಡೆ ತಂದುಕೊಟ್ಟರು. ಆದರೆ, ಉತ್ತರಾರ್ಧದ ಆಟದಲ್ಲಿ ಚುರುಕಿನ ಕಾಲ್ಚಳಕ ತೋರಿದ ಐವರಿ ಕೋಸ್ಟ, ಗ್ರೀಸ್ ಆಟಗಾರರ ಮೇಲೆ ತಿರುಗಿಬಿದ್ದಿತು. ದಾಳಿಗೆ ಪ್ರತಿದಾಳಿ ನಡೆಸುವ ಮೂಲಕ ಅವಕಾಶಗಳನ್ನು ಕಂಡುಕೊಂಡ ಐವರಿ ಕೋಸ್ಟ ಆಟಗಾರರು ಕೊನೆಗೂ ಗೋಲು ಬಾರಿಸಿ ಎದುರಾಳಿ ಜತೆ ಸಮಗೌರವ ಸಾಧಿಸಿಯೇ ಬಿಟ್ಟರು. ಪಂದ್ಯದ 74ನೇ ನಿಮಿಷದಲ್ಲಿ ಸಹ ಆಟಗಾರರು ನೀಡಿದ ಪಾಸ್‌ನಲ್ಲಿ ವಿಲ್‌ಫ್ರೆಡ್ ಬೋನಿ ಆಕರ್ಷಕ ಗೋಲು ಬಾರಿಸುವುದರೊಂದಿಗೆ ಪಂದ್ಯ ಮತ್ತಷ್ಟು ರೋಚಕತೆ ಪಡೆಯುವಂತೆ ಮಾಡಿದರು.
ಅಂತಿಮವಾಗಿ ಪಂದ್ಯ ಡ್ರಾಗೊಂಡು ಇನ್ನೇನು ಐವರಿ ಕೋಸ್ಟ ಆಟಗಾರರು ನಾಕೌಟ್ ಸುತ್ತಿಗೆ ಅರ್ಹತೆ ಪಡೆದುಕೊಂಡೇ ಬಿಟ್ಟರು ಎನ್ನುವಷ್ಟರಲ್ಲಿ ದೌರ್ಭಾಗ್ಯ ಬೆನ್ನಿಗೆ ಬಿದ್ದು, ಅವರ ಆಸೆಯನ್ನೇ ನುಚ್ಚುನೂರು ಮಾಡಿತು.

ಗೋಲು ವಿವರ
ಗ್ರೀಸ್-2
ಆ್ಯಂಡ್ರೇಸ್ ಸಾಮರೀಸ್
 42ನೇ ನಿಮಿಷ
ಜಾರ್ಜಿಯಸ್ ಸಾಮರಸ್
90ನೇ ನಿಮಿಷ (ಪೆನಾಲ್ಟಿ)

ಐವರಿ ಕೋಸ್ಟ-1
ವಿಲ್‌ಫ್ರೆಡ್ ಬೋನಿ
74ನೇ ನಿಮಿಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement