ಕ್ಯುಬಾ: ಮುನ್ಪಡೆ ಆಟಗಾರ ಜಾಕ್ಸನ್ ಮಾರ್ಟಿನೆಜ್ ದಾಖಲಿಸಿದ ಎರಡು ಸೊಗಸಾದ ಗೋಲುಗಳ ನೆರವಿನಿಂದ ಕೊಲಂಬಿಯಾ ತಂಡ 'ಸಿ' ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ತಂಡದ ಸವಾಲನ್ನು 4-1 ಗೋಲುಗಳಿಂದ ಸುಲಭವಾಗಿ ಹೊಡೆದುರುಳಿಸಿದೆ.
ಈ ಗೆಲವಿನೊಂದಿಗೆ ಕೊಲಂಬಿಯಾ ಆಟಗಾರರು ಗುಂಪಿನಲ್ಲಿ ತಾವಾಡಿದ ಎಲ್ಲ ಮೂರು ಲೀಗ್ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಸೋಲರಿಯದ ತಂಡವಾಗಿ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಪ್ರಿಕ್ವಾರ್ಟರ್ಫೈನಲ್ ಪ್ರವೇಶ ಪಡೆದರು.
ಮೊದಲ ಅವಧಿಯಲ್ಲಿ ಕೊಲಂಬಿಯಾ ಮುಂದೆ ಕಠಿಣ ಸವಾಲುಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದ ಜಪಾನ್ ಆಟಗಾರರು ಉತ್ತರಾರ್ಧದಲ್ಲಿ ಮಾತ್ರ ಎದುರಾಳಿಯ ದಾಳಿಗೆ ಸಿಲುಕಿ ತತ್ತರಿಸಿದರು. ಪ್ರಾರಂಭದಲ್ಲಿಯೇ ಜುವಾನ್ ಕ್ಯುಡ್ರಾಡೊ 17ನೇ ನಿಮಿಷದಲ್ಲಿ ಗೋಲು ಗಳಿಸಿ ಕೊಲಂಬಿಯಾಗೆ 1-0 ಮುನ್ನಡೆ ದೊರಕಿಸಿಕೊಟ್ಟರು. ಆದರೆ, ಮೊದಲ ಅವಧಿಯ ಮುಕ್ತಾಯದ ಹೆಚ್ಚುವರಿ ಸಮಯದ ಆಟದಲ್ಲಿ ಜಪಾನ್ ಪರ ಶಿಂಜಿ ಓಕಾಝಾಕಿ ಗೋಲು ಬಾರಿಸಿ ಪಂದ್ಯದ ಕುತೂಹಲ ಹೆಚ್ಚಿಸಿದರು. ಆದರೆ, ಎರಡನೇ ಅವಧಿಯ ಆಟದಲ್ಲಿ ಕೊಲಂಬಿಯಾ ಆಟಗಾರರು ಪಂದ್ಯದ ಮೇಲೆ ಪೂರ್ಣ ತಮ್ಮ ಹಿಡಿತ ಸಾಧಿಸಿದರು. ಜಾಕ್ಸನ್ ಮಾರ್ಟಿನೆಜ್ ಎರಡು ಅದ್ಭುತ ಗೋಲುಗಳನ್ನು ಬಾರಿಸಿದರೆ, ಜೇಮ್ಸ್ ರೋಡ್ರಿಗ್ ಮತ್ತೊಂದು ಗೋಲು ಬಾರಿಸಿ ಕೊಲಂಬಿಯಾದ ಗೆಲವಿನ ಅಂತರವನ್ನು 4-1ಕ್ಕೆ ಹೆಚ್ಚಿಸಿದರು.
ಈ ಟೂರ್ನಿಯಲ್ಲಿ ಜಪಾನ್ ಕೇವಲ ಒಂದು ಡ್ರಾ ಪಂದ್ಯದೊಂದಿಗೆ 1 ಅಂಕ ಪಡೆಯಲಷ್ಟೇ ಶಕ್ತವಾಗಿ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡಿತು. ಆ ಮೂಲಕ ಏಷ್ಯನ್ ಚಾಂಪಿಯನ್ಸ್ ತಂಡದ ವಿಶ್ವಕಪ್ ಹೋರಾಟ ಗುಂಪು ಸೆಣಸಿನಲ್ಲಿಯೇ ಅಂತ್ಯಗೊಂಡಂತಾಯಿತು. ಹಾಗೆ ನೋಡಿದರೆ ಜಪಾನ್ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು. ಪ್ರತಿಶತ 56ರಷ್ಟು ಸಮಯ ಚೆಂಡನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಜಪಾನ್ಗೆ ಅದೃಷ್ಟ ಸಾಥ್ ನೀಡಲಿಲ್ಲ.
ಗೋಲು ವಿವರ
ಕೊಲಂಬಿಯಾ-4
ಜುವಾನ್ ಕ್ಯುಡ್ರಾಡೊ
17ನೇ ನಿಮಿಷ
ಜಾಕ್ಸನ್ ಮಾರ್ಟಿನೆಜ್
55ನೇ,
82ನೇ ನಿಮಿಷ
ಜೇಮ್ಸ್ ರೋಡ್ರಿಗ್
90ನೇ ನಿಮಿಷ
ಜಪಾನ್-1
ಶಿಂಜಿ ಓಕಾಝಾಕಿ- 451ನೇ ನಿಮಿಷ
ವಿಶ್ವದಾಖಲೆ ಬರೆದ ಗೋಲಿ ಫರೀದ್
ಕೊಲಂಬಿಯಾದ ಗೋಲ್ಕೀಪರ್ ಫರೀದ್ ಮೊಂಡ್ರಾಗನ್ ಅವರು ವಿಶ್ವಕಪ್ ಫುಟ್ಬಾಲ್ ಫೈನಲ್ಸ್ ಆಡಿದ ವಿಶ್ವದ ಅತಿ ಹಿರಿಯ ಆಟಗಾರ ದಾಖಲೆಗೆ ಭಾಜನರಾಗಿದ್ದಾರೆ. ಜಪಾನ್ ವಿರುದ್ಧದ ಕೊಲಂಬಿಯಾದ 'ಸಿ' ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಅವರು ಈ ದಾಖಲೆ ನಿರ್ಮಿಸಿದರು. ಅವರು 43 ವರ್ಷ ಮತ್ತು ಮೂರು ದಿನಗಳು ತುಂಬಿದ ವಯಸ್ಸಿನಲ್ಲಿ ವಿಶ್ವಕಪ್ ಪುಟ್ಬಾಲ್ನಲ್ಲಿ ತಮ್ಮ ಸೇವೆ ಸಲ್ಲಿಸಿದರು. ಆಟ ಮುಗಿಯಲು ಕೇವಲ 6 ನಿಮಿಷಗಳಿದ್ದಾಗ ಡೇವಿಡ್ ಆಸ್ಪಿನಾ ಜಾಗದಲ್ಲಿ ಗೋಲ್ಕೀಪಿಂಗ್ ನಿರ್ವಹಿಸಲು ಬದಲಿ ಆಟಗಾರರಾಗಿ ಫರೀದ್ ಮೈದಾನ ಪ್ರವೇಶಿಸಿದರು. ಈ ಸಾಧನೆಯೊಂದಿಗೆ ಅವರು ಈ ಮುನ್ನ ಈ ದಾಖಲೆ ಹೊಂದಿದ್ದ ಕೆಮರೂನ್ನ ಮಾಜಿ ಮುನ್ಪಡೆ ಆಟಗಾರ ರೋಜರ್ ಮಿಲ್ಲಾ ಅವರನ್ನು ಹಿಂದಿಕ್ಕಿದರು. ರೋಜರ್ ಮಿಲ್ಲಾ ಅವರು 1994ರ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ಸ್ನಲ್ಲಿ ಆಡಿದಾಗ ಅವರಿಗೆ 42 ವರ್ಷ 39 ದಿನ ತುಂಬಿತ್ತು. ಅಲ್ಲದೇ, ಇದೇ ಟೂರ್ನಿಯಲ್ಲಿ ಅವರು ರಷ್ಯಾ ವಿರುದ್ಧ ಗೋಲು ದಾಖಲಿಸಿದ್ದರು. ಆ ಮೂಲಕ ಈಗಲೂ ಅವರು ವಿಶ್ವಕಪ್ನಲ್ಲಿ ಗೋಲು ದಾಖಲಿಸಿರುವ ಅತಿ ಹಿರಿಯ ಆಟಗಾರ ಎಂಬ ವಿಶ್ವದಾಖಲೆಯನ್ನು ಹೊಂದಿದ್ದಾರೆ.