ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಸೂರೆಜ್‌ಗೆ 4 ತಿಂಗಳ ನಿಷೇಧ

ಇಟಲಿಯ ಆಟಗಾರ ಜಾರ್ಜಿಯೋ ಚೆಲ್ಲೀನಿ ಅವರನ್ನು ಕಚ್ಚಿದ ಉರುಗ್ವೆ ತಂಡದ ಸೂರೆಜ್..

Vishwanath S
Updated On : 27 Jun 2014, 3:52 am

ಇಟಲಿಯ ಆಟಗಾರ ಜಾರ್ಜಿಯೋ ಚೆಲ್ಲೀನಿ ಅವರನ್ನು ಲೀಗ್ ಹಂತದ ಪಂದ್ಯದಲ್ಲಿ ಕಚ್ಚಿದ ಉರುಗ್ವೆ ತಂಡದ ಲೂಯಿಸ್ ಸೂರೆಜ್ ಅವರಿಗೆ ಫಿಫಾ ತಕ್ಕ ಶಾಸ್ತಿಯನ್ನೇ ಮಾಡಿದೆ.
ಸೂರೆಜ್ ಇನ್ನು ಮುಂದೆ ನಾಲ್ಕು ತಿಂಗಳವರೆಗೆ ಯಾವುದೇ ಪಂದ್ಯಗಳನ್ನಾಡದಂತೆ ನಿಷೇಧ ಹೇರಿದೆ. ಅಲ್ಲದೆ, 65,000 ಯೂರೋ ದಂಡವನ್ನೂ ಹೇರಿದೆ. ಹೀಗಾಗಿ ಬರುವ ಅಕ್ಟೋಬರ್‌ವರೆಗೆ ಲಿವರ್‌ಪೂಲ್ ಫುಟ್ಬಾಲ್ ಕ್ಲಬ್ ಪರವೂ ಸೂರೆಜ್ ಆಡುವಂತಿಲ್ಲ.
ತಮ್ಮ ಮೇಲೆ ಹೇರಿರುವ ನಿಷೇಧದ ಕುರಿತು ಸೂರೆಜ್, ಫಿಫಾಕ್ಕೆ ಮೇಲ್ಮನವಿ ಸಲ್ಲಿಸಬಹುದು. ಆದರೆ, ಯಾವುದೇ ಪಂದ್ಯಗಳಲ್ಲಿ ಭಾಗವಹಿಸುವಂತಿಲ್ಲ. ಇದರೊಂದಿಗೆ, ಇಂಗ್ಲೆಂಡ್ ಪ್ರಿಮೀಯರ್ ಲೀಗ್‌ನಲ್ಲಿ ಸೂರೆಜ್ ಒಟ್ಟು 38 ಪಂದ್ಯಗಳಿಂದ ಹೊರಬಿದ್ದಿದ್ದಾರೆ.
'ಸೂರೆಜ್ ಅವರನ್ನು 9 ಅಧಿಕೃತ ಪಂದ್ಯಗಳಿಂದಲೂ ನಿಷೇಧಿಸಲಾಗಿದೆ. ಹೀಗಾಗಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಜೂನ್ 28ರಂದು ಕೊಲಂಬಿಯಾ ವಿರುದ್ಧ ನಡೆಯಲಿರುವ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೂರೆಜ್ ಆಡುವಂತಿಲ್ಲ. ಅಲ್ಲದೆ, ನಿಷೇಧ ಹೇರಿರುವ ನಾಲ್ಕು ತಿಂಗಳ ಅವಧಿಯಲ್ಲಿ ಫುಟ್ಬಾಲ್‌ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವಂತಿಲ್ಲ' ಎಂದು ಫಿಫಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಫಿಫಾ ನೀತಿ ಸಂಹಿತೆಯ 21ನೇ ಕಲಂ ಪ್ರಕಾರ ಯಾವುದೇ ಕ್ರೀಡಾಂಗಣಗಳಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂದು ಫಿಫಾ ಶಿಸ್ತು ಸಮಿತಿಯ ಮುಖ್ಯಸ್ಥ ಕ್ಲೌಡಿಯಾ ಸುಲ್ಸೆರ್ ತಿಳಿಸಿದ್ದಾರೆ.
'ಯಾವುದೇ ಫುಟ್ಬಾಲ್ ಪಂದ್ಯದಲ್ಲಿ ಇಂತಹ ಘಟನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ಕೋಟಿ ಕೋಟಿ ಅಭಿಮಾನಿಗಳು ಕಣ್ಬಿಟ್ಟು ನೋಡುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂತಹ ಘಟನೆ ನಡೆದರೆ ಹೇಗೆ' ಎಂದು ಕ್ಲೌಡಿಯಾ ಪ್ರಶ್ನಿಸಿದ್ದಾರೆ. ಘಟನೆಯ ನಂತರ ಉರುಗ್ವೆ ಟಿವಿಯೊಂದಿಗೆ ಮಾತನಾಡಿದ ಸೂರೆಜ್ ಅವರು, 'ಕ್ರೀಡಾಂಗಣದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ನಾವು ಇಬ್ಬರೂ ಕ್ರೀಡಾಂಗಣದಲ್ಲಿ ಇದ್ದೆವು. ಆತ ತನ್ನ ಭುಜದಿಂದ ನನ್ನ ಎದೆಗೆ ತಿವಿದಾ. ಅಲ್ಲದೆ, ಕಣ್ಣಿಗೆ ಹೊಡೆದಾ' ಎಂದು ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement