ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಡಾರ್ಕ್ ಹಾರ್ಸ್ ಬೆಲ್ಜಿಯಂಗೆ ಅಮೆರಿಕ ಸಡ್ಡು

Mainashree
Updated On : 1 Jul 2014, 11:57 am

ಸಲ್ವಾಡೋರ್: ಈ ಬಾರಿಯ ವಿಶ್ವಕಪ್ ಕಣದಲ್ಲಿ ಡಾರ್ಕ್ ಹಾಸ್ ಆಗಿ ಕಣದಲ್ಲಿ ನಿಂತಿರುವ ಬೆಲ್ಜಿಯಂ ಆಟಗಾರರು ತನ್ನ ಘನತೆಗೆ ತಕ್ಕ ಪ್ರದರ್ಶನವನ್ನೇ ನೀಡುತ್ತಿದ್ದು, ಮತ್ತೊಂದು ಗೆಲವಿನ ಆಶಾಭಾವನೆಯಲ್ಲಿದ್ದಾರೆ.

ಏರೆನಾ ಫಾಂಟೆ ನೋವಾ ಕ್ರೀಡಾಂಗಣದಲ್ಲಿ ಬುಧವಾರ ನಸುಕಿನಲ್ಲಿ ನಡೆಯಲಿರುವ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿರುವ ಬೆಲ್ಜಿಯಂ ರೋಚಕ ಗೆಲವಿನ ನಿರೀಕ್ಷೆಯಲ್ಲಿದ್ದಾರೆ. ಲೀಗ್ ಹಂತದಲ್ಲಿ 'ಎಚ್‌' ಗುಂಪಿನಲ್ಲಿ ಆಡಿದ ಎಲ್ಲ ಮೂರೂ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಅಜೇಯ ತಂಡವಾಗಿ ಬೆಲ್ಜಿಯಂ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.

ಮತ್ತೊಂದೆಡೆ ಅಮೆರಿಕ 'ಜಿ' ಗುಂಪಿನಿಂದ ಎರಡನೇ ತಂಡವಾಗಿ ಹದಿನಾರರಘಟ್ಟಕ್ಕೆ ಪ್ರವೇಶ ಮಾಡಿದ್ದು ಅಚ್ಚರಿ. ಏಕೆಂದರೆ, ಇದೇ ಗುಂಪಿನಲ್ಲಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ತಂಡದ ವಿರುದ್ಧ ಅಮೆರಿಕನ್ನರು ಅದ್ಧುತ ಡ್ರಾ ಫಲಿತಾಂಶ ಪಡೆದಿದ್ದು ನೆರವಾಯಿತು. ಅಂತಿಮವಾಗಿ ಪೋರ್ಚುಗಲ್ ಮತ್ತು ಅಮೆರಿಕ ತಲಾ 4 ಅಂಕಗಳಿಸಿ ಗುಂಪಿನಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದವು. ಕೊನೆಗೆ ಗೋಲು ಸರಾಸರಿಯ ಆಧಾರದ ಮೇಲೆ ಪೋರ್ಚುಗಲ್ ತಂಡವನ್ನು ಮೂರನೇ ಸ್ಥಾನಕ್ಕೆ ನೂಕಿ ಅಮೆರಿಕ ನಾಕೌಟ್ ತಲುಪಿತು.
ಕೋಚ್ ಮಾರ್ಕ್ ವಿಲ್ಮೋಟ್ಸ್ ಗರಡಿಯಲ್ಲಿ ಉತ್ತಮ ರೀತಿಯಲ್ಲಿ ಪಳಗಿರುವ ಬೆಲ್ಜಿಯಂ ತಂಡದಲ್ಲಿ ಗೋಲ್‌ಕೀಪರ್ ಥಿಬೌಟ್ ಕೋರ್ಟೊಯಿಸ್, ರಕ್ಷಣಾ ಆಟಗಾರರಾದ ನಾಯಕ ವಿನ್ಸೆಂಟ್ ಕಂಪನಿ, ಜಾನ್ ವೆರ್ಟಾಂಗೇನ್, ನಿಕೋಲಸ್ ನಿಕೋಲಸ್ ಲೋಂಬರ್ಟ್ಸ್, ಸಂಪರ್ಕ ಆಟಗಾರ ಎಡೆನ್ ಹಜಾರ್ಡ್, ಮುನ್ಪಡೆ ಆಟಗಾರರಾದ ಡ್ರೈಸ್ ಮೆರ್ಟನ್ಸ್, ರೋಮೇಲು ಲುಕಾಕು ಪ್ರಮುಖ ಆಟಗಾರರಾಗಿದ್ದಾರೆ.

ಇನ್ನು ಅಮೆರಿಕ ತಂಡದ ಆಟಗಾರರ ಮೇಲೂ ಕೂಡ ಕೋಚ್ ಜರ್ಗೆನ್ ಕ್ಲಿನ್ಸ್‌ಮನ್‌ರಂತಹ ಉತ್ತಮ ತರಬೇತುದಾರನ ಆಶೀರ್ವಾದವಿದೆ. ನಾಯಕ ಕ್ಲೈಂಟ್ ಡಿಂಪ್ಸೆ ಸಮರ್ಥವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಉಳಿದಂತೆ, ಗೋಲ್‌ಕೀಪರ್ ಟಿಮ್ ಹೊವಾರ್ಡ್, ಮುನ್ನಡೆ ಆಟಗಾರ ಏರಾನ್ ಜಾನ್ಸನ್, ರಕ್ಷಣಾ ಆಟಗಾರರಾದ ಓಮರ್ ಗೋಂಜಾಲೆಜ್, ಜಾನ್ ಬ್ರೂಕ್ಸ್, ಜೆಫ್ ಕೆಮರೂನ್ ಹಾಗೂ ಸಂಪರ್ಕ ಆಟಗಾರ ಕೈಲ್ ಬೆಕರ್‌ಮನ್ ಅಮೆರಿಕ ಶಕ್ತಿಯಾಗಿದ್ದಾರೆ. ಹಾಗಾಗಿ ಎರಡೂ ತಂಡಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ಬೆಲ್ಜಿಯಂ-ಅಮೆರಿಕ
(ಸಮಯ-ಜು.2ರ
ನಸುಕಿನ 1.30ಕ್ಕೆ)
11    ರ್ಯಾಂಕ್    13
ಮುಖಾಮುಖಿ
5    ಪಂದ್ಯ    5
4    ಜಯ    1
1    ಸೋಲು    4
8    ಗೋಲು    5
ಒಟ್ಟು ಗೋಲು    13
ಗುಂಪು ನಡೆ
ಬೆಲ್ಜಿಯಂ
 ಅಲ್ಜೀರಿಯಾ ವಿರುದ್ಧ 2-1 ಜಯ
 ರಷ್ಯಾ ವಿರುದ್ಧ 1-0 ಜಯ
 ದ. ಕೊರಿಯಾ 1-0
ಅಮೆರಿಕ
 ಘಾನಾ ವಿರುದ್ಧ 2-1 ಜಯ
 ಪೋರ್ಚುಗಲ್ ವಿರುದ್ಧ 2-2 ಡ್ರಾ
 ಜರ್ಮನಿ ವಿರುದ್ಧ 0-1 ಸೋಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement