ಮೆಸ್ಸಿ ಎದುರು ಸುಸ್ತಾಗುವುದೇ ಸ್ವಿಸ್?
ಲೀಗ್ ಹಂತದಲ್ಲಿ ಲಯೋನೆಲ್ ಮೆಸ್ಸಿ ಗಳಿಸಿದ ಗೋಲಿನ ನೆರವಿನೊಂದಿಗೆ ಪ್ರಿ ಕ್ವಾರ್ಟರ್ಫೈನಲ್ ಪ್...
ಸಾವೊ ಪೊಲೊ: ಲೀಗ್ ಹಂತದಲ್ಲಿ ಲಯೋನೆಲ್ ಮೆಸ್ಸಿ ಗಳಿಸಿದ ಗೋಲಿನ ನೆರವಿನೊಂದಿಗೆ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದ ಅರ್ಜೆಂಟೀನಾ ತಂಡ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಸ್ವಿಜರ್ಲೆಂಡ್ ಅನ್ನು ಎದುರಿಸಲಿದೆ.
ಹೀಗಾಗಿ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಪೈಪೋಟಿ ನೀಡುತ್ತಿರುವ ಮೆಸ್ಸಿ ಬಗ್ಗೆ, ಸ್ವಿಜರ್ಲೆಂಡ್ ತಂಡದ ಆಟಗಾರರಲ್ಲಿ ಆತಂಕ ಶುರುವಾಗಿದೆ.
ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅರ್ಜೆಂಟೀನಾ ಗಳಿಸಿರುವ ಆರು ಗೋಲುಗಳಲ್ಲಿ ಮೆಸ್ಸಿ ಅವರೇ ನಾಲ್ಕು ಗೋಲು ದಾಖಲಿಸಿದ್ದಾರೆ. ಅವರ ಅದ್ಭುತ ಪ್ರದರ್ಶನದೊಂದಿಗೆ ಅರ್ಜೆಂಟೀನಾ ಎಫ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಆದರೆ, ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ 7 ಗೋಲು ದಾಖಲಿಸಿರುವ ಸ್ವಿಜರ್ಲೆಂಡ್ ತಂಡ, ಅರ್ಜೆಂಟೀನಾಕ್ಕೆ ಪಂದ್ಯಾವಳಿಯಲ್ಲಿ ಇದುವರೆಗೂ ಎದುರಾಗದ ಕಠಿಣ ತಂಡವೆನಿಸಿದೆ. ಗುಂಪು ಹಂತದಲ್ಲಿ ಅದು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಒಂದು ಪಂದ್ಯದಲ್ಲಿ ಸೋಲನುಭವಿಸಿತ್ತು. 'ಈ ಪಂದ್ಯದಲ್ಲಿ ನಾವು ಯಾವುದೇ ತಪ್ಪು ಮಾಡುವುದಿಲ್ಲ. ಹಾಗೇನಾದರೂ ಒಂದು ವೇಳೆ ತಪ್ಪು ಮಾಡಿದರೆ, ಪಂದ್ಯಾವಳಿಯಿಂದ ಹೊರಬೀಳುತ್ತೇವೆ ಎಂಬ ಅರಿವು ನಮಗಿದೆ. ವಿಶ್ವಚಾಂಪಿಯನ್ನರಾಗುವುದಕ್ಕಿಂತ ಸುಂದರವಾದದ್ದು ಈ ಜಗತ್ತಿನಲ್ಲಿ ಮತ್ತೊಂದಿಲ್ಲ' ಎಂದು ತಮ್ಮ ತಂಡಕ್ಕೆ ನಾಯಕ ಮೆಸ್ಸಿ ಎಚ್ಚರಿಕೆ ನೀಡಿದ್ದಾರೆ. ಅರ್ಜೆಂಟೀನಾದ 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಬ್ರೆಜಿಲ್ನಲ್ಲಿದ್ದಾರೆ. ಸ್ವಿಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅವರೆಲ್ಲ ಆಗಮಿಸುವ ಸಾಧ್ಯತೆಗಳಿವೆ. ಆದರೆ, ಮ್ಯಾಂಚೆಸ್ಟರ್ ಸಿಟಿ ಮುನ್ನಡೆ ಆಟಗಾರ ಸೆರ್ಜಿಯೋ ಆಗುರೋ ಅವರು ಗಾಯಗೊಂಡಿರುವುದು ಅರ್ಜೆಂಟೀನಾ ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ. ಮೆಸ್ಸಿ ಮತ್ತು ಕೋಚ್ ಅಲೆಜಾಂಡ್ರೋ ಸಾಬೆಲ್ಲಾ ಅವರ ಅನುಭವ ತಂಡಕ್ಕೆ ನೆರವಾಗಲಿದೆ. ಆದರೆ, ಸ್ವಿಸ್ ವಿರುದ್ಧ ಮೆಸ್ಸಿ ಪಡೆ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ನೀಡುವ ಅಗತ್ಯವಿದೆ. 'ಲೀಗ್ ಹಂತದಲ್ಲಿ ನಾವು 9 ಅಂಕಗಳನ್ನು ಗಳಿಸಿಕೊಂಡಿದ್ದೇವೆ. ಆದರೆ, ಸದಾ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ' ಎಂದು ಕೋಚ್ ಸಾಬೆಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಸ್ವಿಜರ್ಲೆಂಡ ಸಹ ತನ್ನದೇ ಆದ ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ. ತಂಡದ ಕೋಚ್ ಒಟ್ಮಾರ್ ಹಿಜ್ಫೆಲ್ಡ್ ಅವರು ತಮ್ಮ ನಿವೃತ್ತಿಗೂ ಮುನ್ನ ತಮ್ಮ ಗರಡಿಯಲ್ಲಿ ಪಳಗಿದ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಬೇಕು ಎಂಬ ಕನಸು ಕಾಣುತ್ತಿದ್ದಾರೆ.
ಅರ್ಜೆಂಟೀನಾ-ಸ್ವಿಜರ್ಲೆಂಡ್
(ಸಮಯ- 9.30 ಗಂಟೆ)
5 ರ್ಯಾಂಕ್ 6
ಮುಖಾಮುಖಿ
6 ಪಂದ್ಯ 6
4 ಜಯ 0
2 ಡ್ರಾ 2
14 ಗೋಲು 3
ಒಟ್ಟು ಗೋಲು- 17
ಗುಂಪಿನ ನಡೆ
ಅರ್ಜೆಂಟೀನಾ
ಬೊಸ್ನಿಯಾ ವಿರುದ್ಧ 2-1 ಜಯ
ಇರಾನ್ ವಿರುದ್ಧ 1-0 ಗೆಲವು
ನೈಜೀರಿಯಾ ವಿರುದ್ಧ 3-2 ಜಯ
ಸ್ವಿಜರ್ಲೆಂಡ್
ಈಕ್ವೆಡಾರ್ ವಿರುದ್ಧ 2-1 ಗೆಲವು
ಫ್ರಾನ್ಸ್ ವಿರುದ್ಧ 2-5 ಸೋಲು
ಹೋಂಡುರಾಸ್ ವಿರುದ್ಧ 3-0 ಜಯ