ಹಾಲೆಂಡ್ ಕೈ ಹಿಡಿದ ಅದೃಷ್ಟ
ಕಳೆದ ಬಾರಿ ಫೈನಲ್ನಲ್ಲಿ ನಿರಾಸೆ ಅನುಭವಿಸಿದ್ದ ಹಾಲೆಂಡ್ ತಂಡ ಈ ಬಾರಿ ಪ್ರೀಕ್ವಾರ್ಟರ್ಫೈನಲ್ನಲ್ಲೇ...
ಪೋರ್ಟ್ಲೆಜಾ: ಕಳೆದ ಬಾರಿ ಫೈನಲ್ನಲ್ಲಿ ನಿರಾಸೆ ಅನುಭವಿಸಿದ್ದ ಹಾಲೆಂಡ್ ತಂಡ ಈ ಬಾರಿ ಪ್ರೀಕ್ವಾರ್ಟರ್ಫೈನಲ್ನಲ್ಲೇ ಕಣ್ಣೀರಿಡುವ ಸಂದರ್ಭ ಎದುರಾಗಿತ್ತು. ಕಾರಣ, ಭಾನುವಾರ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದ 88ನೇ ನಿಮಿಷದವರೆಗೂ ಮುನ್ನಡೆ ಕಂಡುಕೊಂಡಿತ್ತು ಮೆಕ್ಸಿಕೊ. ಆದರೆ, ಅಂತ್ಯದಲ್ಲಿ ಹಾಲೆಂಡ್ ಅದೃಷ್ಟ ಚೆನ್ನಾಗಿತ್ತು. ಕಾರಣ 2-1 ಗೋಲುಗಳ ಅಂತರದಿಂದ ಗೆಲ್ಲುವ ಮೂಲಕ ಕ್ವಾರ್ಟರ್ಫೈನಲ್ ಪ್ರವೇಶಿಸಿತು.
88ನೇ ನಿಮಿಷದಲ್ಲಿ ವೆಸ್ಲೀ ಸ್ನೀಡರ್ ಮತ್ತು ಹೆಚ್ಚುವರಿ ಸಮಯದಲ್ಲಿ (90ನೇ ನಿಮಿಷ) ದೊರಕಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿಯಾದ ಕ್ಲಾಸ್-ಜಾನ್ ಹಂಟೆಲ್ಲಾರ್ ಗೋಲು ದಾಖಲಿಸುವ ಮೂಲಕ ಹಾಲೆಂಡ್ ಕೊನೆ ಕ್ಷಣದಲ್ಲಿ ಅದೃಷ್ಟದ ಜಯ ದಾಖಲಿಸಿತು. ಆದರೆ, ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೆಕ್ಸಿಕೊ ಕಣ್ಣೀರಿಡುತ್ತಾ ತವರಿನ ಹಾದಿ ಹಿಡಿಯಿತು.
ಪಂದ್ಯದ 48ನೇ ನಿಮಿಷದಲ್ಲಿ ಡಾಸ್ ಸ್ಯಾಂಟೋಸ್ ಅವರು ಗೋಲು ದಾಖಲಿಸುವ ಮೂಲಕ ಮೆಕ್ಸಿಕೊ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. 10ನೇ ನಂಬರ್ ಜರ್ಸಿ ಧರಿಸಿದ್ದ ಸ್ಯಾಂಟೋಸ್ ಅವರು ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಲು ದಾಖಲಿಸಿದರು.
ಆದರೆ, ಪಂದ್ಯದ 88ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಹಾಲೆಂಡ್ನ ವೆಸ್ಲೀ ಸ್ನೀಡರ್ ಪಂದ್ಯ 1-1 ಗೋಲುಗಳಿಂದ ಸಮಬಲಗೊಳ್ಳುವಂತೆ ನೋಡಿಕೊಂಡರು.
ನಂತರ ಹೆಚ್ಚುವರಿ ಸಮಯದಲ್ಲಿ ಮೆಕ್ಸಿಕೊದ ರಾಫೆಲ್ ಮಾರ್ಕಿಜ್ ಅವರು ಹಾಲೆಂಡ್ನ ಅರ್ಜೆನ್ ರಾಬೆನ್ ಅವರನ್ನು ಬೀಳಿಸುವ ಮೂಲಕ ಮಾಡಿದ ತಪ್ಪಿನಿಂದ ಹಾಲೆಂಡ್ ಹೆಚ್ಚುವರಿ ಸಮಯದಲ್ಲಿ ಪೆನಾಲ್ಟಿ ಅವಕಾಶ ಪಡೆಯಿತು. ಇದು ಮೆಕ್ಸಿಕೊಗೆ ಮುಳುವಾಗಿ ಪರಿಣಮಿಸಿತು.
ಮೊದಲ ಮೆಕ್ಸಿಕೊ ಪರ ಹೀರೋ ಎನಿಸಿದ್ದ ಸ್ಯಾಂಟೋಸ್ 25 ಮೀಟರ್ ದೂರದಿಂದ ತಮ್ಮ ತಂತ್ರಗಾರಿಕೆಯ ಮೂಲಕ ಚೆಂಡನ್ನು ಗೋಲುಪೆಟ್ಟಿಗೆ ಸೇರುವಂತೆ ಮಾಡಿ, ಹಾಲೆಂಡ್ನ ಗೋಲ್ಕೀಪರ್ ಜಾಸ್ಪರ್ ಸಿಲ್ಲಿಸೆನ್ ಅವರ ಕಣ್ತಪ್ಪಿಸುವಲ್ಲಿ ಯಶಸ್ವಿಯಾದರು.
ಮೊದಲಾರ್ಧ ಪಂದ್ಯದಲ್ಲೂ ಸ್ಯಾಂಟೋಸ್ ಗೋಲು ದಾಖಲಿಸುವ ಅವಕಾಶವನ್ನು ಹೊಂದಿದ್ದರು. ಆದರೆ, ಅದನ್ನು ತಡೆಯುವಲ್ಲಿ ಜಾಸ್ಪರ್ ಸಿಲ್ಲಿಸೆನ್ ಜಾಗರೂಕತೆ ವಹಿಸಿದ್ದರು.
ಪಂದ್ಯದಲ್ಲಿ ಬಲಿಷ್ಠವೆನಿಸಿದ್ದ ಹಾಲಿ ರನ್ನರ್ ಅಪ್ ಹಾಲೆಂಡ್ ತಂಡದ ವಿರುದ್ಧ ಮೆಕ್ಸಿಕೊ ಮೊದಲಾರ್ಧ ಪಂದ್ಯದಲ್ಲಿ ಹೆಚ್ಚಿನ ಸಮಯ ಚೆಂಡಿನ ಮೇಲೆ ಪಾರಮ್ಯ ಮೆರೆಯಿತು. ಆದರೆ, ಯಾವುದೇ ಸಮಯದಲ್ಲಿ ಅದಕ್ಕೆ ಗೋಲು ದಾಖಲಿಸಲು ಹಾಲೆಂಡ್ ಆಟಗಾರರು ಅವಕಾಶ ನೀಡಲಿಲ್ಲ. ಆದರೆ, ಮೊದಲಾರ್ಧದ ಅಂತ್ಯದಲ್ಲಿ ಅರ್ಜೆನ್ ರಾಬೆನ್ ಮತ್ತು ರಾಬಿನ್ ವ್ಯಾನ್ ಪರ್ಸೀ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೆಕ್ಸಿಕೊಗೆ ಅಪಾಯಕಾರಿ ಎನಿಸಿದರು.
ಸಂಪೂರ್ಣವಾಗಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ್ದ ವಾತಾವರಣದಲ್ಲಿ ಆಟಗಾರರು ಮೈಚಳಿಬಿಟ್ಟು ಆಡಲು ಅಷ್ಟೊಂದು ಸೊಗಸಾಗಿರಲಿಲ್ಲ. ಉಭಯ ತಂಡಗಳು ಪೆನಾಲ್ಟಿ ಪಡೆಯಲು ಮನವಿ ಮಾಡಿದವು. 22ನೇ ನಿಮಿಷದಲ್ಲಿ ಹಾಲೆಂಡ್ನ ರಾನ್ ಲಾರ್ ಮತ್ತು ಸ್ಟೆಫಾನ್ ಡಿ ರಿಜ್ ಅವರು ತಮಗೆ ಅಡ್ಡಿ ಉಂಟುಮಾಡಿದ ಹಿನ್ನೆಲೆಯಲ್ಲಿ, ಮೆಕ್ಸಿಕೊದ ಹೆಕ್ಟರ್ ಹೆರೆರಾ ಅವರು ಪೆನಾಲ್ಟಿ ನೀಡುವಂತೆ ಮನವಿ ಮಾಡಿದರು. ನಂತರ, 45ನೇ ನಿಮಿಷದಲ್ಲಿ ಮೆಕ್ಸಿಕೊದ ರಾಫೀಲ್ ಮಾರ್ಕಿಜ್ ಮತ್ತು ಹೆಕ್ಟರ್ ಮೊರೆನ್ ಅವರ ಎಡವಟ್ಟಿನಿಂದ ಬಿದ್ದ ಹಿನ್ನೆಲೆಯಲ್ಲಿ ಹಾಲೆಂಡ್ನ ಅರ್ಜೆನ್ ರಾಬೆನ್ ಅವರು ಪೆನಾಲ್ಟಿ ನೀಡುವಂತೆ ರೆಫ್ರಿ ಕೇಳಿಕೊಂಡರು. ಆದರೆ, ಪೆನಾಲ್ಟಿ ನೀಡಲಾಗಲಿಲ್ಲ.