ವಿಶ್ವಕಪ್ ಫುಟ್ಬಾಲ್ ಚೆಂಡಿನಲ್ಲಿ ಕ್ಯಾಮೆರಾ
ನವದೆಹಲಿ: ಪ್ರಸಕ್ತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಾಂತ್ರಜ್ಞಾನದ ಬಳಕೆ ಅತ್ಯುತ್ತಮವಾಗಿದ್ದು, ಆಟದ ವೇಳೆ ಬಳಸಲಾಗುವ ಚೆಂಡಿನಲ್ಲೂ ಕ್ಯಾಮೆರಾ ಅಳವಡಿಸಲಾಗಿದೆ. ಈ ಮೂಲಕ ಕ್ರೀಡೆಯಲ್ಲಿ ತಂತ್ರಜ್ಞಾನ ಬಳಕೆಗೆ ಹೊಸ ಆಯಾಮ ನೀಡಲಾಗಿದೆ.
ಈ ಬಾರಿ ಬಳಸಲಾಗುವ ಚೆಂಡಿಗೆ ಬ್ರಾಜುಕಾ ಎಂದು ಹೆಸರಿಡಲಾಗಿದೆ. ಇದರಲ್ಲಿ ಒಟ್ಟು ಆರು ಎಚ್ಡಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮೈದಾನದಲ್ಲಿನ ರೋಚಕ ಕ್ಷಣವನ್ನು 360 ಡಿಗ್ರಿ ಆಯಾಮದಿಂದಲು ಸೆರೆ ಹಿಡಿಯುವ ಪ್ರಯತ್ನ ನಡೆಸಲಾಗಿದೆ. ಬ್ರೆಜಿಲಿಯನ್ನರ ಜೀವನ ಶೈಲಿಯನ್ನು ಬ್ರಾಜುಕಾ ಎಂದು ಕರೆಯಲಾಗಿದ್ದು, 2012ರ ಸೆಪ್ಟೆಂಬರ್ನಲ್ಲಿ 10 ಲಕ್ಷ ಫುಟ್ಬಾಲ್ ಅಭಿಮಾನಿಗಳ ಒಪ್ಪಿಗೆ ಮೇರೆಗೆ ಈ ಹೆಸರಿಡಲಾಗಿದೆ. ಈ ಚೆಂಡು 437 ಗ್ರಾಂ ತೂಕವಿದ್ದು, ಶೇ. 0.2ರಷ್ಟು ಮಾತ್ರ ನೀರನ್ನು ಹೀರಲಿದೆ. ಹಾಗಾಗಿ ಅತಿಯಾಗಿ ಮಳೆ ಬಂದಾಗಲು ಚೆಂಡು ತನ್ನ ತೂಕ ಹಾಗೂ ಗಾತ್ರವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಲಿದೆ.
ಬ್ರಾಜುಕಾ ಕ್ರೀಡಾ ಉಡುಗೆಗಳ ಕಂಪನಿಗಳು ತಯಾರಿಸುತ್ತಿರುವ 12ನೇ ಚೆಂಡಾಗಿದೆ. ಕಳೆದ ಬಾರಿ 2010ರಲ್ಲಿ ಬಳಸಲಾಗಿದ್ದ ಜಬುಲನಿ ಚೆಂಡು ಹೆಚ್ಚು ಹಗುರವಾಗಿದ್ದರಿಂದ ಗಾಳಿಯಲ್ಲಿ ಅದರ ಚಲನೆಯನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಈ ಬಾರಿ ಚೆಂಡನ್ನು ಹೆಚ್ಚು ಉನ್ನತ ಮಟ್ಟದಲ್ಲಿ ತಯಾರಿಸಲಾಗಿದ್ದು, ಹೆಚ್ಚು ನಿಖರವಾಗಿ ನಿರ್ಮಿಸಲಾಗಿದೆ.