ಅನ್ನದ ಖಾದ್ಯಗಳಲ್ಲಿ ವಿಭಿನ್ನ ರುಚಿ ಬಯಸುವವರಿಗೆ ಘೀ ರೈಸ್ ಉತ್ತಮ ಆಯ್ಕೆ. ಅಕ್ಕಿಯ ಪ್ರತಿ ಅಗುಳಿಗೂ ತುಪ್ಪದ ಪರಿಮಳ ಹೀರಿಕೊಂಡು, ಏಲಕ್ಕಿ, ಲವಂಗ, ಚಕ್ಕೆ ಸೇರಿದಂತೆ ಸುವಾಸನೆಯ ಮಸಾಲೆಗಳೊಂದಿಗೆ ಸಿದ್ಧವಾಗುವ ಈ ಖಾದ್ಯ ತಿನ್ನಲು ಬಲು ರುಚಿ.
ಅದರಲ್ಲೂ ಹುರಿದ ಗೋಡಂಬಿ ಮತ್ತು ಈರುಳ್ಳಿ ಘೀ ರೈಸ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೆಚ್ಚು ಸಮಯ ಕಳೆಯದೆ ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಈ ರುಚಿಕರವಾದ ಘೀ ರೈಸ್ ಅನ್ನು ತಯಾರಿಸಬಹುದು. ಈ ಘೀ ರೈಸ್ ಪಲಾವ್, ಕುರ್ಮಾ, ಮೊಟ್ಟೆ ಮಸಾಲೆ ಅಥವಾ ಸರಳ ರೈತಾದೊಂದಿಗೆ ಸವಿಯಲು ಉತ್ತಮ ಆಯ್ಕೆ.
ಬೇಕಾಗುವ ಪದಾರ್ಥಗಳು...
ಬಾಸ್ಮತಿ ಅಕ್ಕಿ – 1 ಬಟ್ಟಲು
ತುಪ್ಪ – 3 ಚಮಚ
ಈರುಳ್ಳಿ – 2 (ಉದ್ದಕ್ಕೆ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಗೋಡಂಬಿ – 10ರಿಂದ 12
ಪಲಾವ್ ಎಲೆ – 1
ಚಕ್ಕೆ – 1 ತುಂಡು
ಲವಂಗ – 3
ಏಲಕ್ಕಿ – 2
ಸೋಂಪು – ಅರ್ಧ ಚಮಚ
ಪುದೀನಾ ಸೊಪ್ಪು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷ ನೆನೆಸಿಡಿ. ನಂತರ ನೀರನ್ನು ಸಂಪೂರ್ಣವಾಗಿ ಬಸಿದುಕೊಳ್ಳಿ.
ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಗೋಡಂಬಿ ಹಾಕಿ ಹುರಿದು ತೆಗೆದಿಡಿ.
ಅದೇ ತುಪ್ಪಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಮತ್ತು ಪಲಾವ್ ಎಲೆ ಹಾಕಿ ಹುರಿಯಿರಿ.
ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಇದರಲ್ಲಿ ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
ಈಗ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮೆಲ್ಲಗೆ ಕಲಸಿ. ಅಕ್ಕಿ ಮುರಿಯದಂತೆ 2 ನಿಮಿಷ ಹುರಿಯಿರಿ.
ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪು ಸೇರಿಸಿ ಕುದಿಯಲು ಬಿಡಿ.
ನೀರು ಕುದಿದ ಬಳಿಕ ಉರಿಯನ್ನು ಕಡಿಮೆ ಮಾಡಿ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ 12–15 ನಿಮಿಷ ಬೇಯಿಸಿ. ಅನ್ನ ಬೆಂದ ನಂತರ ಒಲೆಯನ್ನು ಆರಿಸಿ 5 ನಿಮಿಷ ಹಾಗೆಯೇ ಬಿಡಿ.
ಕೊನೆಯಲ್ಲಿ ಹುರಿದ ಗೋಡಂಬಿ ಸೇರಿಸಿ ಮೆಲ್ಲಗೆ ಕಲಸಿ.
ಟಿಪ್ಸ್...
ಉತ್ತಮ ಪರಿಮಳಕ್ಕಾಗಿ ಶುದ್ಧ ತುಪ್ಪ ಬಳಸಿ.
ಈರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿಸಿದರೆ ಘೀ ರೈಸ್‌ಗೆ ವಿಶೇಷ ರುಚಿ ಸಿಗುತ್ತದೆ.
ಅಕ್ಕಿಯನ್ನು ಹೆಚ್ಚು ಕಲಕಬೇಡಿ; ಇಲ್ಲದಿದ್ದರೆ ಅನ್ನ ಮುರಿಯಬಹುದು.
ಇನ್ನಷ್ಟು ಹೋಟೆಲ್ ಶೈಲಿಯ ರುಚಿಗೆ ಸ್ವಲ್ಪ ತೆಂಗಿನ ಹಾಲು ಸೇರಿಸಬಹುದು.